ಪುಟ:ಹಳ್ಳಿಯ ಚಿತ್ರಗಳು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು

೭೧

ಅದನ್ನು ತಂದುಕೊಡಿರಪ್ಪ”, ಎಂದು ಕೇಳಿಕೊಂಡಳು. ಈಜು ಬರುತ್ತಿದ್ದ ೪-೫ ಜನ ಯುವಕ ಧಾಂಡಿಗರು "ಆಗುವುದಿಲ್ಲ, ಅಲ್ಲಿ ಮೊಸಳೆ ಇದೆ. ಎಂಟಾಣೆಯ ತಟ್ಟೆಗಾಗಿ ನಮ್ಮ ಪ್ರಾಣವನ್ನು ಬಿಡುವುದಕ್ಕೆ ಆಗುವುದಿಲ್ಲ. ಹೋದರೆ ಹೋಯಿತು" ಎಂದುಬಿಟ್ಟರು. ವಿಧವೆಯು "ನಿಮಗೆ ಹೇಗೊತ್ತಾಗುತ್ತಪ್ಪ, ಗಂಡ ಸತ್ತ ಮುಂಡೆಯ ಕಷ್ಟ. ಇದು ಹೋದರೆ ಮನೆಯಲ್ಲಿ ಅತ್ತಿಗೆ ಪರಕೆ ಸೇವೆ ಮಾಡ್ತಾಳೆ. ನಿಮ್ಮ ಕಾಲಿಗೆ ಬೀಳ್ತೇನೆ. ನಿಮ್ಮ ಮಕ್ಕಳ ಪುಣ್ಯ; ಯಾರಾದರೂ ಈಜಿ ಹೋಗಿ ತಂದುಕೊಡಿ" ಎಂದು ಹಲ್ಲುಗಿರಿದು ಬೇಡಿದಳು. ಆ ಧಾಂಡಿಗರಾರೂ ಅವಳ ಬೇಡಿಕೆಯನ್ನು ಸಲಿಸಲಿಲ್ಲ. ನೀರಿನಿಂದ ಮೇಲಕ್ಕೆ ಬಂದು "ಗೋವಿಂದೇತಿ ಸದಾ ಧ್ಯಾನಂ ಗೋವಿಂದೇತಿ ಸದಾ ಜಪಂ” ಎಂದು ಗಟ್ಟಿಯಾಗಿ ಹೇಳುತ್ತಾ ಮೈಗೆ ನಾಮವನ್ನು ಬಳಿಯಲು ಪ್ರಾರಂಭಿಸಿದರು. ವಿಧವೆಯು ಒಂದೇ ಸಮನಾಗಿ “ಅಯ್ಯೋ ಏನು ಮಾಡಲಿ. ಮನೆಗೆ ಹೋದರೆ ಅತ್ತಿಗೆಯು ತಲೆ ಒಡೆಯುತ್ತಾಳಲ್ಲಾ” ಎಂದು ಅಳುತ್ತಿದ್ದಳು. ಅವಳ ರೋದನವನ್ನು ನೋಡಿ ಜೋಡಿದಾರರ ಮನಸ್ಸು ಕರಗಿಹೋಯಿತು. ಅವರಿಗೆ ವಯಸ್ಸು ೬೦. ದೇಹ ಆನೆಯ ದೇಹದಂತಿದೆ. ಎಲ್ಲಾ ನಿಶ್ಚಯ. ಆದರೆ ಮನಸ್ಸಿಗೆ ದೊಡ್ಡದು ಯಾವುದಿದೆ. ಅವರು ಪಂಚೆಯನ್ನು ಬಿಚ್ಚಿ, ಸೊಂಟಕ್ಕೆ ಒಂದು ಚೌಕವನ್ನು ಕಟ್ಟಿಕೊಂಡು, ತಾವು ಬಾಲ್ಯದಲ್ಲಿ ಈಜಿದ ಮಟ್ಟಿ ಕಲ್ಲು ಮಡುವಿಗೆ ಈಜಿ ಹೋಗಿ, ಆ ಪಾತ್ರೆಯನ್ನು ತಂದು ಹೆಂಗಸಿಗೆ ಕೊಟ್ಟರು.

ನಾಮವನ್ನು ಬಳಿದುಕೊಂಡು “ಗೋವಿಂದೇತಿ ಸದಾ ಸ್ನಾನ”ವನ್ನು ಜಪಿಸುತ್ತಿದ್ದ ಧಾಂಡಿಗರು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟರು.

೧೦. ಜೋಡಿದಾರರು ಕುದುರೆಯಿಂದ ಬಿದ್ದುದು

ಯಾವುದಾದರೂ ವಿನೋದವು ನಡೆದರೆ ನಗುವುದನ್ನು ನಾನು ನೋಡಿದ್ದೇನೆ. ಆದರೆ ಇತರರಿಗೆ ಕಷ್ಟ ಬಂದಾಗ ಕೂಡ ಒಂದೊಂದು ಸಲ ನಗು ಬಂದುಬಿಡುತ್ತೆ. ಹಾಗೆಂದ ಮಾತ್ರಕ್ಕೆ ಅವರ ಕಷ್ಟಗಳನ್ನು ಕಂಡು ನಾವು