ಪುಟ:ಕವಿಯ ಸೋಲು.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು


ನೀನು ನೋಡಿರುವುದುಂಟೆ
ಅವರ ರೂಪು ಬೆಡಗನು
ಇಂಧ ಚೆಲುವು ಅವರಲುಂಟೆ
ಕಿವಿಯೊಳುಸಿರು ಕೇಳ್ವೆನು.”

ಎಂದು ನುಡಿದು ದೇವಯಾನಿ
ಕಚನ ಕರವ ಹಿಡಿಯಲು
ಬಿಡಿಸಿಕೊಂಡು ಸರಿದು ದೂರ
ಮೆಲ್ಲನಿಂತು ನುಡಿದನು.

"ಓದು ಕಲಿವ ಹುಡುಗ ನಾನು
ರಂಭೆ ಗಿಂಭೆ ತಿಳಿಯೆನು;
ಚೆಲುವು ಗಿಲುವು ಎಂದರೇನೊ
ಗುರುವು ತಿಳಿಸಲಿಲ್ಲವು."

"ಆರು ಬಂದು ತಿಳಿಸಲೇಕೆ
ಕಣ್ಗೆ ಚೆಲುವು ರೂಪನು
ವರುಷ ವರುಷ ತುಂಬಿ ಬರಲು
ತನಗೆತಾನೆ ತಿಳಿವುದು.

ದಿನಕೆ ದಿನಕೆ ತಿಳಿವು ತುಂಬಿ
ಮೀನಗಣ್ಣು ಚಲಿವುದು,
ಚೆಲುವು ಬಲೆಯ ಕಣ್ಣಿನಲ್ಲಿ
ಸಿಕ್ಕಿ ಚಲಿಸದಿರುವುದು.

೨೮