ಪುಟ:ಕವಿಯ ಸೋಲು.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

ಹಿರಿಯರಲಿ ಗೌರವವು ದೈವದಲ್ಲಿ ನಂಬಿಕೆಯು
ಹೆಸರಿಲ್ಲದಾಗುತಿಹವು ;
ದೊರೆಯೆಂಬ ಗುರುವೆಂಬ ಪೂಜ್ಯಭಾವಗಳೆಲ್ಲ
ಉಸಿರಿಡದೆ ಮೆತ್ತಗಿಹವು.

ಕಿರಿಯರಿಗೆ ಹಿರಿಯರಿಗೆ ನಾಡಲ್ಲಿ ಆರಿಗುಂ
ನಿಯಮಗಳ ಸಹನೆಯಿಲ್ಲ;
ಸರಪಳಿಯ ಕಿತ್ತೆಸೆದ ಮದ್ಯಾನಗಳ ಗುಂಪು
ನಯನೀತಿ ಗಣನೆಯಿಲ್ಲ.

ಎಲ್ಲರುಂ ಅರಿವಿಲ್ಲದೆಳಮಕ್ಕಳಂದದಲಿ
ಉರಿಯೊಡನೆ ಕುಣಿಯುತಿಹರು ;
ಎಲ್ಲಿಯುರಿ ಹತ್ತುವುದೊ ಹಡಗಲ್ಲಿ ಮಗುಚುವುದೊ
ಪರಿಹರಿಸಿ ಕಾವರಾರು ?

ಹುಚ್ಚು ಹೊಳೆಯನು ನೋಡಿ ವಿಷವಾಹಿನಿಯ ನೋಡಿ
ಬೆರಗುವಟ್ಟಿರುವೆನಯ್ಯ ;
ಎಚ್ಚರಿಕೆ ಕೊಡಲಿಂದು ಆವ ಬೆಳಕದು ಬಂದು
ಪೊರೆಯುವುದೊ ಕಾಣೆನಯ್ಯ.




೩೮