ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಟಾಣಿ

ವಿಕಿಸೋರ್ಸ್ದಿಂದ

ಬಟಾಣಿ

ಫ್ಯಾಬೇಸೀ ಕುಟುಂಬಕ್ಕೆ ಪ್ಯಾಪಿಲಿಯೊನೇಸೀ ಉಪಕುಟುಂಬಕ್ಕೆ ಸೇರಿದ ಜನಪ್ರಿಯ ತರಕಾರಿ ಸಸ್ಯ (ಪೀ) ಬಟಗಡಲೆ ಪರ್ಯಾಯ ನಾಮ. ಪೈಸಮ್ ಸೇಟಿವಮ್ ಇದರ ವೈಜ್ಞಾನಿಕ ಹೆಸರು.

ಇದು ಏಕವಾರ್ಷಿಕ. ರೋಮರಹಿತ ಬಳ್ಳಿ. ಇದರಲ್ಲಿ ಕುಳ್ಳು, ಅರೆಕುಳ್ಳು ಹಾಗೂ ಉದ್ದನೆಯ ಬಗೆಗಳಿದ್ದು ಇವುಗಳ ಎತ್ತರ 30ರಿಂದ 150ಸೆಂಮೀ. ವರೆಗೆ ವ್ಯತ್ಯಾಸವಾಗುತ್ತದೆ. ಕಾಂಡ ದುರ್ಬಲವಾಗಿದೆಯಾದ್ದರಿಂದ ಇದು ಲತಾ ತಂತುಗಳ (ಟೆಂಡ್ರಿಲ್ಸ್) ಸಹಾಯದಿಂದ ಇತರ ಆಸರೆಗಳನ್ನು ಆಧರಿಸಿ ಬೆಳೆಯುತ್ತದೆ. ಎಲೆಗಳು ಏಕಪಿಚ್ಛಕ ಸಂಯುಕ್ತ ಮಾದರಿಯವು, ಪ್ರತಿ ಎಲೆಯಲ್ಲಿ 1-3ಜೊತೆ ಪತ್ರಕಗಳುಂಟು (ಲೀಫ್ಲೆಟ್ಸ್). ಎಲೆಗಳ ತುದಿ ಕವಲೊಡೆದು ಲತಾತಂತುಗಳಾಗಿ ಮಾರ್ಪಟ್ಟಿದೆ. ಎಲೆಗಳ ಬುಡಭಾಗದಲ್ಲಿ ತೊಟ್ಟಿನ ಎರಡೂ ಪಾಶ್ರ್ವಗಳಲ್ಲಿ ಪತ್ರಕಗಳಿಗಿಂತ ದೊಡ್ಡಗಾತ್ರದ, ಎಲೆಗಳಂತೆಯೇ ಕಾಣುವ ಅಂಡಾಕಾರದ ವೃಂತ ಪತ್ರಗಳುಂಟು. ಪತ್ರಕಗಳ ಹಾಗೂ ವೃಂತಪತ್ರಗಳ ಅಂಚು ನಯವಾಗಿರಬಹುದು ಇಲ್ಲವೆ ದಂತಿತವಾಗಿರಬಹುದು. ಹೂಗಳು ಒಂಟೊಂಟಿಯಾಗಿ ಅಥವಾ 2-3 ಹೂಗಳುಳ್ಳ ಮಂಜರಿಗಳಲ್ಲಿ ಎಲೆಗಳ ಕಕ್ಷಗಳಲ್ಲಿ ಅರಳುವುವು. ಪ್ರತಿ ಹೂವಿನಲ್ಲಿ 5 ಭಾಗಗಳ ಪುಷ್ಪಪತ್ರಸಮೂಹ, 5 ದಳಗಳು. 10 ಕೇಸರಗಳಲ್ಲಿ ಹಾಗೂ ಏಕಕಾರ್ಪೆಲಿನ ಅಂಡಾಶಯ ಉಂಟು. ದಳಗಳ ಪೈಕಿ ಒಂದು ಪತಾಕೆ, 2 ಪಕ್ಷದಳಗಳು ಹಾಗೂ ದೋಣಿಯಂತೆ ರಚಿತವಾಗಿರುವ 2 ನೌತಲದಳಗಳು ಇವೆ. ಕೇಸರಗಳ ಪೈಕಿ ಒಂದು ಒಂಟಿಯಾಗಿಯೂ ಉಳಿದ ಒಂಬತ್ತು ಕೊಳವೆಯಂತೆ ಕೂಡಿಕೊಂಡೂ ಇವೆ. ಕಾಯಿ ಚಪ್ಪಟೆಯಾಗಿರಬಹುದು ಅಥವಾ ಉಬ್ಬಿಕೊಂಡಿರಬಹುದು. ಪ್ರತಿಕಾಯಿಯಲ್ಲಿ 2-10 ಗುಂಡನೆಯ ಬೀಜಗಳುಂಟು (ಕಾಳುಗಳು). ಬಟಾಣಿಯ ಕೆಲವು ಬಗೆಗಳಲ್ಲಿ ಕಾಳುಗಳ ಹೊರಮೈ ನಯವಾಗಿದೆಯಾದರೆ ಇನ್ನು ಕೆಲವಲ್ಲಿ ಸುಕ್ಕುಗಟ್ಟಿರುವುದು. ಅಂತೆಯೇ ಬಣ್ಣದಲ್ಲಿ ಸಹ ವ್ಯತ್ಯಾಸವುಂಟು-ಕೆಲವು ಹಸುರಾಗಿದ್ದರೆ ಇನ್ನು ಕೆಲವು ಕಂದು, ಮತ್ತೆ ಕೆಲವು ಹಳದಿ ಇತ್ಯಾದಿ. ಹಲವು ಬಗೆಯ ಬಟಾಣಿಗಳಲ್ಲಿ ಕಾಯಿಯ ಸಿಪ್ಪೆಯ ಒಳಭಾಗದಲ್ಲಿ ತೆಳುವಾದ ಪೊರೆ (ಪಾರ್ಚಮೆಂಟ್) ಇದೆ. ಆದರೆ ಇನ್ನು ಕೆಲವು ಬಗೆಗಳಲ್ಲಿ ಇಂಥ ಪೊರೆಯಿಲ್ಲ. ಉದಾಹರಣೆಗೆ ಮ್ಯಾಕ್ರೊಕಾರ್ಪಾನ್ ಬಗೆ. ಇದರ ಕಾಯಿಯನ್ನು ಇಡಿಯಾಗಿ ತರಕಾರಿಯಾಗಿ ಬಳಸಬಹುದಾಗಿದ್ದು ಇದಕ್ಕೆ ಸಕ್ಕರೆ ಬಟಾಣಿ (ಶುಗರ್ ಪೀ) ಎಂದೇ ಹೆಸರು ಕೊಡಲಾಗಿದೆ. ಪೊರೆ ಇರುವಂಥ ಬಗೆಗಳ ಕಾಯಿಗಳನ್ನು ಇಡಿಯಾಗಿ ತಿನ್ನಲಾಗುವುದಿಲ್ಲ. ಇವುಗಳ ಕಾಳುಗಳನ್ನು ಮಾತ್ರ ಬಿಡಿಸಿ ತಿನ್ನುವುದಿದೆ.

ಬಟಾಣಿ ತುಂಬ ಪ್ರಾಚೀನಕಾಲದಿಂದಲೂ ಪರಿಚಿತವಿರುವ ತರಕಾರಿ, ತಾಮ್ರಯುಗದ ವೇಳೆಗೆ ಯೂರೊಪಿನಲ್ಲಿ ಇದರ ಕೃಷಿ ಇತ್ತು ಎಂಬುದಕ್ಕೆ ಪುರಾವೆಗಳಿವೆ. ನೈಋತ್ಯ ಏಷ್ಯದಲ್ಲಿ ಇದರ ಕೃಷಿ ಮೊತ್ತಮೊದಲಿಗೆ ಆರಂಭವಾಯಿತೆನ್ನಲಾಗಿದೆ. ಕಪ್ಪು ಸಮುದ್ರದ ಮೂಲಕ ಗ್ರೀಸನ್ನು ತಲುಪಿದ ಇದು ಲ್ಯಾಟಿನ್ ಹಾಗೂ ಜರ್ಮನ್ ಪ್ರದೇಶಗಳಿಗೆ ಹರಡಿ ಹಿಮಾಲಯ, ಟಿಬೆಟ್ಟುಗಳ ಮೂಲಕ ಭಾರತ ಚೀನಗಳಿಗೆ ಕಾಲಿಟ್ಟಿತೆನ್ನಲಾಗಿದೆ. ಜೊತೆಗೆ ಇದು ಇಥಿಯೋಪಿಯ ಹಾಗೂ ಮಧ್ಯ ಆಫ್ರಿಕಗಳ ಬೆಟ್ಟಪ್ರದೇಶಗಳಲ್ಲೂ ವ್ಯವಸಾಯಕ್ಕೆ ಒಳಗಾಯಿತು.

ಸಸ್ಯಶಾಸ್ತ್ರೀಯ ರೀತ್ಯ ಬಟಾಣಿ ಪೈಸಮ್ ಜಾತಿಯ ಸೇಟಿವಮ್ ಪ್ರಭೇದಕ್ಕೆ ಸೇರಿದೆಯೆಂದು ಮೇಲೆ ಹೇಳಿವೆ. ಆದರೂ ಹಲವಾರು ಸಸ್ಯವಿಜ್ಞಾನಿಗಳ ಪ್ರಕಾರ ಇದರಲ್ಲಿ ಎರಡು ಪ್ರಭೇದಗಳಿವೆ: ಪೈ. ಸೇಟಿವಮ್ ಹಾಗೂ ಪೈ. ಆರ್ವೆನ್ಸ್. ಇವುಗಳ ನಡುವೆ ಹಲವಾರು ವ್ಯತ್ಯಾಸಗಳಂಟು: ಮೊದಲನೆಯದು ತೋಟದ ಬಟಾಣಿ (ಗಾರ್ಡನ್ ಪೀ). ಇದು ಹೆಚ್ಚು ಧೃಡವಾಗಿ ಬೆಳೆಯುವಂಥದು. ಆದರೆ ಪಿಡುಗುಗಳಿಗೆ ಬಲು ಬೇಗ ತುತ್ತಾಗುತ್ತದೆ. ಇದರ ಹೂಗಳು ಬಿಳಿ ಬಣ್ಣದವು, ಕಾಯಿಗಳು ದೊಡ್ಡ ಗಾತ್ರದವೂ. ಬೀಜಗಳು ಗುಂಡಗೂ ನಯವಾದವೂ ಹೆಚ್ಚು ಸಕ್ಕರೆಯುಳ್ಳವೂ ಆಗಿವೆ. ಇದನ್ನು ಹಸಿಕಾಳುಗಳಿಗಾಗಿ ಇಲ್ಲವೆ ಹಸುರುಕಾಯಿಗಳಿಗಾಗಿ ಬೆಳಸಲಾಗುತ್ತದೆ. ಇದನ್ನು ಮ್ಯಾಕ್ರೊಕಾರ್ಪಾನ್ (ಕಾಯಿಯ ಒಳಭಾಗದಲ್ಲಿ ಪೊರೆಯುಳ್ಳ ಬಗೆ) ಮತ್ತು ಹ್ಯೂಮೈಲ್ (ಪೊರೆರಹಿತ ಬಗೆ) ಎಂಬ ಎರಡು ಬಗೆಗಳಾಗಿ ವಿಂಗಡಿಸಲಾಗಿದೆ.

ಪೈ. ಆರ್ವೆನ್ಸ್ ಎಂಬುದು ಹೊಲದ ಬಟಾಣಿ (ಫೀಲ್ಡ್ ಪೀ); ಇದರ ಬೆಳೆವಣಿಗೆ ಸದೃಢವಲ್ಲ. ಆದರೆ ರೋಗರುಜಿನಗಳಿಗೆ ಇದು ಬೇಗ ಬಲಿಯಾಗದು. ಇದರ ಹೂಗಳು ಊದಾಬಣ್ಣದವು. ಕಾಯಿಗಳು ಗಾತ್ರದಲ್ಲಿ ಸಣ್ಣವೂ ಬೀಜಗಳು ಕೊಂಚ ಚಪ್ಪಟೆಯಾದವೂ ಆಗಿವೆ. ಬೀಜಗಳ ಮೇಲ್ಮೈ ಸುಕ್ಕುಸುಕ್ಕಾಗಿದೆ. ಈ ಬಗೆಯ ಬೀಜಗಳನ್ನು ಒಣಗಿಸಿ ಉಪಯೋಗಿಸುವುದೇ ಹೆಚ್ಚು ವಾಡಿಕೆ.

ಆದರೆ ಇವೆರಡು ಪ್ರಭೇದಗಳ ನಡುವಣ ವ್ಯತ್ಯಾಸ ನಿಖರವಾಗಿಲ್ಲ. ಅಲ್ಲದೆ ಇವು ಸಹಜವಾಗಿಯೇ ಸಂಕರಗೊಳ್ಳಬಲ್ಲವಾಗಿದ್ದು ಅನೇಕ ವೇಳೆ ಎರಡರ ಗುಣಲಕ್ಷಣಗಳನ್ನು ತೋರುವ ಮಧ್ಯವರ್ತಿ ಬಗೆಗಳೂ ಕಾಣಿಸಿಕೊಳ್ಳುವುದುಂಟು. ಇದರಿಂದಾಗಿ ಇವು ಸೇಟಿವಮ್ ಎಂಬ ಒಂದೇ ಪ್ರಭೇದದ ಎರಡು ಉಪಪ್ರಭೇದಗಳು ಮಾತ್ರ ಎಂದು ಕೆಲವರು ಅಭಿಪ್ರಾಯ ಪಡುವರು. ಪೈ. ಸೇಟಿವಮ್ ಹಾಗೂ ಪೈ. ಸೇಟಿವಮ್ ಅರ್ವೆನ್ಸ್ ಎಂಬುವೇ ಈ ಎರಡು ಉಪ ಪ್ರಭೇದಗಳು.

ಬಟಾಣಿ ಬೇಸಾಯದ ರೂಪದಲ್ಲಿ ಮಾತ್ರ ಪರಿಚಿತವಿದೆ. ಇದರ ಕಾಡು ಬಗೆಗೆಳು ಇದುವರೆಗೆ ಸಿಕ್ಕಿಲ್ಲ. ರಷ್ಯದ ಜಾರ್ಜಿಯ ಪ್ರಾಂತ್ಯದ ಉಪ ಆಲ್ಪೈನ್ ಪ್ರದೇಶದಲ್ಲಿ ಆರ್ವೆನ್ಸ್ ಪ್ರಭೇದವನ್ನು ಹೋಲುವ ಕಾಡುಬಗೆಗಳೂ ಯೂರೋಪಿನಿಂದ ಮಧ್ಯ ಏಷ್ಯ ಹಾಗೂ ಇಥಿಯೋಪಿಯಗಳವರೆಗೆ ಹರಡಿದ ವಿಸ್ತಾರವಾದ ಕ್ಷೇತ್ರದಲ್ಲಿ ಎಲೇಟಿಯಸ್ ಎಂಬ ಕಾಡು ಬಗೆಗಳೂ ಕಾಣ ದೊರೆಯುವುವು. ಇಂಥ ಕಾಡುಬಗೆಗಳ ನಡುವೆ ಸಂಕರ ನಡೆದು ಬಹುಶಃ ನಾಲ್ಕು ವಿಭಿನ್ನ ಪ್ರದೇಶಗಳಲ್ಲಿ ಈಗಿನ ಬೇಸಾಯದ ತಳಿಗಳ ಉಗಮಿಸಿವೆ ಎಂದು ನಂಬಲಾಗಿದೆ. ಬಟಾಣಿಯ ಉಗಮಸ್ಥಾನಗಳ ಪೈಕಿ ಮೆಡಿಟರೇನಿಯನ್ ಪ್ರದೇಶ ಹಾಗೂ ವಾಯವ್ಯ ಇಂಡಿಯ ಮತ್ತು ಆಫ್ಘಾನಿಸ್ತಾನಗಳು ಬಲುಮುಖ್ಯ ಎನಿಸಿವೆ.

ಬಟಾಣಿಯಲ್ಲಿ ಹಲವಾರು ವೈವಿಧ್ಯಮಯ ಬಗೆಗಳುಂಟು. ಇವೆಲ್ಲವೂ ಮಾನವ ತನ್ನ ವಿಭಿನ್ನ ಬಳಕೆಗಳಿಗಾಗಿ ತಳಿಸಂಕರದ ಮೂಲಕ ರೂಪಿಸಿಕೊಂಡಂಥವು. ಇಂಥ ಅನೇಕ ಬಗೆಗಳನ್ನು ಇಂಗ್ಲೆಂಡ್, ಯೂರೋಪ್ ಮತ್ತು ಅಮೆರಿಕಗಳಲ್ಲಿ ಕಾಣಬಹುದು. ಅನಂತರ ಸುಕ್ಕುಕಾಳುಗಳನ್ನು ಪಡೆದ ಬಲಿಯಲು ಹೆಚ್ಚು ವೇಳೆ ತೆಗೆದುಕೊಳ್ಳುವಂಥ ತಳಿಗಳು ರೂಪಿತಗೊಂಡವು. ದೃಢವಾದ ಬೆಳೆವಣಿಗೆ, ದೊಡ್ಡಗಾತ್ರದ ಕಾಯಿ, ಅಧಿಕ ಇಳುವರಿ, ಉತ್ತಮ ಗುಣ, ರೋಗನಿರೋಧ ಸಾಮಥ್ರ್ಯ ಮುಂತಾದ ಗುಣ ಲಕ್ಷಣಗಳನ್ನು ಪಡೆದ ತಳಿಗಳನ್ನು ರೂಪಿಸುವುದೇ ಬಟಾಣಿಯನ್ನು ಕುರಿತ ತಳಿ ಸಂಕರಕಾರ್ಯಗಳ ಪ್ರಧಾನ ಉದ್ದೇಶ.

ಭಾರತದಲ್ಲಿ ವ್ಯವಸಾಯದಲ್ಲಿರುವ ಬಟಾಣಿಯ ಬಗೆಗಳ ಪೈಕಿ ಮುಖ್ಯವಾದವು ಎಂದರೆ; ಅಸ್ಸಾಮ್-ಡಾರ್ಜಿಲಿಂಗ್, ದೇಸಿ ; ಬಿಹಾರ-ದೇಸಿ, ಟೆಲಿಫೋನ್, ಬಿಆರ್-2 ಬಿಆರ್-12, ಎನ್‍ಪಿ-29, ಮಧ್ಯಪ್ರದೇಶ-ಇಂದೋರ್ ರಿಂಕಲ್ಡ್, ದೇಸಿ, ಖಾಪರ್‍ಖೇಡ ; ತಮಿಳುನಾಡು-ಡ್ಯೂಕ್ ಆಫ್ ಆಲ್ಬನಿ, ಅರ್ಲಿ ಜಯಂಟ್ ಮಾರೊಫ್ಯಾಟ್, ಪಿಯರ್‍ಲೆಸ್, ಮಹಾರಾಷ್ಟ್ರ-ಪೂನ ಲೋಕಲ್, ವಾಯಿ, ದೇಸಿ ; ಕರ್ನಾಟಕ-ಬೆಂಗಳೂರು ಲೋಕಲ್, ಟೆಲಿಫೋನ್, ಅಲಾಸ್ಕ, ಬ್ರಿಡ್ಜರ್, ಬೋನವಿಲ್, ಕೇಪ್ ; ಪಂಜಾಬ್, ಹರಿಯಾಣ ಹಾಗೂ ಹಿಮಾಚಲ ಪ್ರದೇಶ-ದೇಸಿ ಬೌನ, ದೋ ಫಟ್ಟ ಅರ್ಲಿ ಜಯಂಟ್, ಲಿಟಲ್ ಮಾರ್ವೆಲ್ ಪಿ-8, ಪಿ-35 ಸಿಮ್ಲ, ಕಾಲಿನಾಗಿರಿ: ಉತ್ತರ ಪ್ರದೇಶ-ಅಮೆರಿಕನ್ ವಂಡರ್, ಬ್ಲೂ ಬಾಂಟಮ್, ಬರ್ಹಿಯ, ದಾಬ್ಲ, ಅರ್ಲಿಬ್ಯಾಡ್ಜರ್, ಕಲ್ಯಾಣಪುರ ಹ್ವೈಟ್, ಲಿಂಕನ್, ಥಾಮಸ್ ಲ್ಯಾಕ್ಸಟನ್, ಟೆಲಿಫೋನ್, ಎನ್‍ಪಿ-29 ; ಪಶ್ಚಿಮ ಬಂಗಾಳ-ಆಲ್ಡರ್‍ಮ್ಯಾನ್, ಮ್ಯಾರೊಫ್ಯಾಟ್, ದೇಸಿ ಮುಂತಾದವು.

ಬೇಸಾಯ: ಪ್ರಪಂಚದ ಉಪೋಷ್ಣವಲಯಗಳಲ್ಲೂ ಉಷ್ಣವಲಯಗಳ ಬೆಟ್ಟಸೀಮೆಗಳಲ್ಲೂ ಬಟಾಣಿಯನ್ನು ತೋಟದ ಇಲ್ಲವೆ ಹೊಲದ ಬೆಳೆಯಾಗಿ ಬೇಸಾಯ ಮಾಡಲಾಗುತ್ತದೆ. ಬಟಾಣಿಯ ಬೆಳೆಗೆ ಪ್ರಸಿದ್ಧವಾದ ರಾಷ್ಟ್ರಗಳೆಂದರೆ ರಷ್ಯ, ಚೀನ, ಭಾರತ ಅಮೆರಿಕ, ಸಂಯುಕ್ತ ಸಂಸ್ಥಾನ, ಇಥಿಯೋಪಿಯ ಹಾಗೂ ಕಾಂಗೊ.

ಭಾರತದಲ್ಲಿ ಇದರ ಕೃಷಿಯಿರುವುದು ಹೆಚ್ಚಾಗಿ ಉತ್ತರ ಪ್ರದೇಶದಲ್ಲಿ (ಒಟ್ಟು ವಿಸ್ತೀರ್ಣದ 44.3% ಹಾಗೂ ಒಟ್ಟು ಇಳುವರಿಯ 45.9%). ಅನಂತರ ಬಿಹಾರ, ಪಂಜಾಬ್ ಹರಿಯಾಣ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ರಾಜಾಸ್ತಾನ, ದೆಹಲಿ ಮತ್ತು ಗುಜರಾತ್ ರಾಜ್ಯಗಳು ಬರುತ್ತದೆ. ಕರ್ನಾಟಕದಲ್ಲಿ ಬೆಂಗಳೂರು, ಕೋಲಾರ, ಬೆಳಗಾಂವಿ ಜಿಲ್ಲೆಗಳು ಇದರ ಬೇಸಾಯಕ್ಕೆ ಪ್ರಸಿದ್ಧ.

ಬಟಾಣಿ ಪ್ರಮುಖವಾಗಿ ಉಪೋಷ್ಣವಲಯದ ಬೆಳೆ. ಆದ್ದರಿಂದ ಇದರ ಬೇಸಾಯಕ್ಕೆ 7º-24ºಅ ಉಷ್ಣತೆಯ ಪ್ರದೇಶಗಳೇ ಉತ್ತಮ. ಭಾರತದ ಉತ್ತರದ ರಾಜ್ಯಗಳ ಮೈದಾನ ಪ್ರದೇಶಗಳಲ್ಲಿ ಇದನ್ನು ಹಿಂಗಾರಿ (ರಬಿ) ಬೆಳೆಯಾಗಿಯೂ ಉನ್ನತ ಪ್ರದೇಶಗಳಲ್ಲಿ ಮುಂಗಾರಿ (ಖರೀಫ್) ಬೆಳೆಯಾಗಿಯೂ ಕೃಷಿಮಾಡಲಾಗುತ್ತದೆ. ದಕ್ಷಿಣದಲ್ಲಿ ಮೈದಾನಗಳಲ್ಲಿ ಅಕ್ಟೋಬರ್ ಡಿಸೆಂಬರ್ ತಿಂಗಳುಗಳೂ, ಬೆಟ್ಟಸೀಮೆಗಳಲ್ಲಿ ಮಾರ್ಚ್-ಮೇ ತಿಂಗಳುಗಳೂ ಇದರ ಕೃಷಿಯ ಸಮಯಗಳು.

ಬಟಾಣಿಗೆ ಗೋಡು ಇಲ್ಲವೆ ಜೇಡ ಮಿಶ್ರಿತಗೋಡು ಭೂಮಿ ಉತ್ತಮ. ಇದು ಜಾಗವನ್ನು ಸಹಿಸದು. ಮಣ್ಣಿನ ಪಿಎಚ್ 5.5ರಿಂದ 7.5 ಇದ್ದರೆ ಒಳ್ಳೆಯದು. ಬೇರಾವುದೇ ಬೆಳೆಗೆ ಅಗತ್ಯವಿರುವಂತೆ ಬಟಾಣಿ ಕೃಷಿಗೂ ಮಣ್ಣನ್ನು ಚೆನ್ನಾಗಿ ಉಳುಮೆ ಮಾಡಲಾಗುತ್ತದೆ. ತೋಟದ ಬಟಾಣಿಗೆ ಇಂಥ ಉಳುಮೆ ಹೆಚ್ಚು ಅಗತ್ಯ. ಅನಂತರ ಹೆಕ್ಟೇರಿಗೆ 20-25ಗಾಡಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಹಾಕಲಾಗುತ್ತದೆ. ಆಗಿಂದಾಗ್ಗೆ ನೈಟ್ರೊಜನ್, ರಂಜಕ ಹಾಗೂ ಪೊಟ್ಯಾಸಿಯಮ್‍ಗಳನ್ನೂ ಹಾಕುವುದರಿಂದ ಒಳ್ಳೆ ಇಳುವರಿ ದೊರೆಯುತ್ತದೆ. ಹೆಕ್ಟೇರಿಗೆ 65ಕೆಜಿ ನೈಟ್ರೊಜನ್, 20ಕೆಜಿ ರಂಜಕ ಹಾಗೂ 40ಕೆಜಿ ಪೊಟ್ಯಾಷ್ ಬೇಕಾಗುತ್ತದೆ.

ಹೊಲದ ಬಟಾಣಿಯನ್ನು ಶುದ್ಧಬೆಳೆಯಾಗಿ ಇಲ್ಲವೆ ಗೋಧಿ ಬಾರ್ಲಿ ಸಾಸುವೆ ಮುಂತಾದವುಗಳ ಜೊತೆಗೆ ಮಿಶ್ರ ಬೆಳೆಯಾಗಿ ಬೇಸಾಯ ಮಾಡುವುದಿದೆ. ಬಿತ್ತನೆ ಮಾಡುವ ಕ್ರಮ ಹೊಲದ ಬಟಾಣಿಯಾದರೆ ಚೆಲ್ಲುವರಿ ವಿಧಾನದಿಂದ ತೋಟದ ಬಟಾಣಿಯಾದರೆ ಸಾಲುವರಿ ವಿಧಾನದಿಂದ.

ಬಿತ್ತನೆ ಮಾಡಿದ 45 ದಿವಸಗಳ ತರುವಾಯ ಹೂ ಅರಳುವುವು. ಅನಂತರ ಎರಡು ವಾರಗಳಲ್ಲಿ ಕಾಯಿ ಕುಯ್ಲಿಗೆ ಬರುತ್ತದೆ.

ತಳಿಗಳನ್ನು ಅನುಸರಿಸಿ ಇಳುವರಿ ಹೆಕ್ಟೇರಿಗೆ 3000-4000ಕೆಜಿ ಇದೆ.

ರೋಗರುಜಿನಗಳು : ಬಟಾಣಿಗೆ ಹೇನು, ಮೂತಿಹುಳು ಮುಂತಾಬ ಕೀಟ ಪಿಡುಗುಗಳೂ ವಿಲ್ಟ್, ಮಿಲಡ್ಯೂ ಮುಂತಾದ ಶಿಲೀಂಧ್ರರೋಗಗಳೂ ತಗಲುವುವು. ಡಿಡಿಟಿ ಹಾಗೂ ಗಂಧಕಗಳ ಬಳಕೆಯಿಂದ ಇವನ್ನು ತಡೆಯಬಹುದು.

ಉಪಯೋಗ : ಬಟಾಣಿಯ ಕಾಯಿಗಳನ್ನು ಇಡಿಯಾಗಿ ತರಕಾರಿಯಾಗಿ ಬಳಸುವುದಲ್ಲದೆ ಕಾಳುಗಳನ್ನು ಬಿಡಿಸಿ ಹಸಿಯಾಗಿ, ಇಲ್ಲವೆ ಒಣಗಿಸಿ ಉಪಯೋಗಿಸುವುದಿದೆ. ಕಾಳುಗಳನ್ನು ಡಬ್ಬಿಗಳಲ್ಲಿ ಶೇಖರಿಸಿಟ್ಟು, ಬಳಸುವುದೂ ಉಂಟು. ಭಾರತದಲ್ಲಿ ಬೇರೆ ರೂಪದಲ್ಲಿ ಇದನ್ನು ಬಳಸುವುದಿದೆ. ಬಟಾಣಿಗಿಡ, ಸೊಪ್ಪು, ಸಿಪ್ಪೆಗಳು ದನಗಳಿಗೆ ಉತ್ತಮ ಮೇವು. ಕಾಯಿ ಕುಯ್ದು ಉಳಿವ ಬಟಾಣಿಗಿಡ ಹಸಿಗೊಬ್ಬರವಾಗಿಯೂ ಉಪಯುಕ್ತ. (ಡಿ.ಎಮ್.)