ಪುಟ:Mysore-University-Encyclopaedia-Vol-1-Part-1.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಾಂತಾಡಳಿತ ನಡೆಸುತ್ತಿದ್ದ. ನೆರೆರಾಜ್ಯವಾಗಿದ್ದ ವಿದರ್ಭದ ದೊರೆ ದಂಡೆತ್ತಿ ಬಂದಾಗ ಅವನನ್ನು ಸೋಲಿಸಿದ. ತಂದೆಯ ಮರಣಾನಂತರ ಸಿಂಹಾಸನಕ್ಕೆ ಬಂದ. ಇವನ ವಿಷಯವಾಗಿ ಹೆಚ್ಚು ವಿವರಗಳು ತಿಳಿದುಬಂದಿಲ್ಲ. ಕಾಳಿದಾಸನ ಮಾಳವಿಕಾಗ್ನಿಮಿತ್ರ ನಾಟಕದ ಕಥಾನಾಯಕ ಇವನೇ. (ಎ.ಎಂ.) ಅಗ್ನಿವಿಮೆ : ಪ್ರಪಂಚದಾದ್ಯಂತ ಚಾಲ್ತಿಯಲ್ಲಿರುವ ಈ ವಿಮೆ 17ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಆರಂಭವಾಯಿತು. ಜೀವವಿಮೆ, ಕಳ್ಳತನದ ವಿರುದ್ಧ ಮಾಡುವ ವಿಮೆ ಮುಂತಾದ ವಿಮೆಗಳಂತೆಯೇ ಅಕಸ್ಮಾತ್ತಾಗಿ ಒದಗುವ ಬೆಂಕಿಯ ಅನಾಹುತದಿಂದೊದಗಬಹುದಾದ ಚರ ಹಾಗೂ ಸ್ಥಿರಸ್ವತ್ತುಗಳ ನಷ್ಟವನ್ನು ತುಂಬಲು ಮಾಡಿಕೊಳ್ಳುವ ವಿಮೆಯ ಬಗೆಯಿದು (ಫೈರ್‍ಇನ್ಷೂರೆನ್ಸ್). ಈ ಪಾಲಿಸಿಯಲ್ಲಿ ಅದರ ವ್ಯಾಪ್ತಿಗೆ ಬರುವ ಸ್ವತ್ತಿನ ಬೆಲೆ ನಮೂದನೆಯಾಗದಿರಬಹುದು. ಇದಕ್ಕೆ ಬದಲಾಗಿ ಸ್ವತ್ತು ಬೆಂಕಿಯ ಅನಾಹುತಕ್ಕೊಳಗಾದಾಗ ಇಂತಿಷ್ಟು ಪರಿಹಾರಧನವನ್ನು ಕೊಡಬೇಕೆಂಬುದರ ಬಗ್ಗೆ ಮೊದಲೇ ಅದರಲ್ಲಿ ನಮೂದಿಸಿರಲೂಬಹುದು. ಕೆಲವು ಸಂದರ್ಭಗಳಲ್ಲಿ ಸ್ವತ್ತಿನ ಪರಿಮಾಣ, ಜಾಗ ಹಾಗೂ ಮೌಲ್ಯ ವ್ಯತ್ಯಾಸ ಹೊಂದುವುದಾಗಿದ್ದು, ಅಂಥ ಸ್ವತ್ತುಗಳ ಮೇಲಿನ ಅಗ್ನಿ ವಿಮಾಪಾಲಿಸಿ ಅನಿಶ್ಚಿತ ಅನಿರ್ದಿಷ್ಟ (ಫ್ಲೋಟಿಂಗ್) ವರ್ಗಕ್ಕೆ ಸೇರುತ್ತದೆ. ಅಗ್ನಿವಿಮೆ ಮಾಡಿದ ಸ್ವತ್ತಿನ ಪರಿಪೂರ್ಣ ವರ್ಣನೆಯನ್ನು ಕರಾರಿನಲ್ಲಿ ಬರೆಯಬೇಕಲ್ಲದೆ ಅದರ ಒಡೆತನದ ಬಗ್ಗೆ ವಿಮೆ ಮಾಡಿಸುವವನು ಬರೆವಣಿಗೆಯಲ್ಲಿ ಹೇಳಿಕೆಯನ್ನು ಕೊಡಬೇಕು. ಅಗ್ನಿವಿಮೆ ಕರಾರಿನಲ್ಲಿ ಅಡಕವಾಗಿರುವ ಕರಾರುಗಳನ್ನೆಲ್ಲ ವಿಮೆ ಮಾಡಿಸುವವರು, ವಿಮೆ ಮಾಡುವವರು ನಿಷ್ಠೆಯಿಂದ ಪಾಲಿಸಬೇಕು. ವಿಮಾಸಂಸ್ಥೆ ಒಪ್ಪಿಗೆಯ ಪತ್ರವನ್ನು (ರಿಸ್ಕ್ ನೋಟ್) ವಿಮೆ ಮಾಡಿಸಿದವನಿಗೆ ತಲುಪಿಸಿದ ಕ್ಷಣದಿಂದ ವಿಮಾ ಸಂಸ್ಥೆಯ ಹೊಣೆ (ರಿಸ್ಕ್) ಆರಂಭವಾಗುವುದಾದರೂ ಸಾಮಾನ್ಯವಾಗಿ ವಿಮೆಯ ಕಂತಿನ (ಪ್ರೀಮಿಯಂ) ಹಣ ಕೊಟ್ಟ ಬಳಿಕವೇ ಅದು ಜಾರಿಗೆ ಬರುತ್ತದೆ. ಸಾಮಾನ್ಯವಾಗಿ ಅಗ್ನಿವಿಮೆಯ ಅಪಾಯ ಹೊಣೆಯ ಅವಧಿ ಒಂದು ವರ್ಷ. ಈ ಅವಧಿಯನ್ನು ಮತ್ತೆ ನವೀಕರಿಸಬಹುದು. ಅಗ್ನಿವಿಮೆ ಮಾಡಿದ ಸ್ವತ್ತು ಕಳವು ಮುಂತಾದ ಇತರ ರೀತಿಯಲ್ಲಿ ಕಳೆದು ಹೋದರೆ ವಿಮಾಸಂಸ್ಥೆಗೆ ಪರಿಹಾರ ಧನವನ್ನು ಕೊಡುವ ಹೊಣೆ ಇಲ್ಲ. ಅಂಥ ಸ್ವತ್ತು ಬೆಂಕಿಯಿಂದಾಗಲಿ ಬೆಂಕಿ ಹೊತ್ತಿದಾಗ ಅದನ್ನು ಆರಿಸುವಾಗಾಗಲಿ ಸುಡುವ ಸ್ಥಳದಿಂದ ಬೇರೆಡೆಗೆ ಸಾಗಿಸುವಾಗಾಗಲಿ ನಾಶವಾದಾಗ ಮಾತ್ರ ಹಾಗೂ ಅದನ್ನು ವಿಮಾದಾರನು ಸಿದ್ಧಪಡಿಸಿದ ಮೇಲೆ ಪರಿಹಾರಧನವನ್ನು ಕೊಡಲಾಗುವುದು. ವಿಪರೀತ ಬಿಸಿಲು, ಯುದ್ಧ, ನಾಗರಿಕ ಆಂದೋಲನಗಳಿಂದ ವಿಮೆ ಮಾಡಿದ ಸ್ವತ್ತಿಗೆ ಉಂಟಾಗುವ ನಷ್ಟಕ್ಕೆ ಪರಿಹಾರ ತೆರಲು ವಿಮಾ ಸಂಸ್ಥೆ ಬದ್ಧವಿಲ್ಲ ಎಂಬ ಫರತ್ತು ಅಗ್ನಿವಿಮೆ ಪಾಲಿಸಿಯಲ್ಲಿ ಇರುತ್ತದೆ. ಪಾಲಿಸಿಯನ್ನು ಅವಧಿ ಮುಗಿಯುವ ಮೊದಲೇ ರದ್ದುಪಡಿಸುವ ಷರತ್ತನ್ನು ಅದರಲ್ಲಿ ಸೇರಿಸಬಹುದು. ವಿಮೆ ಮಾಡಿಸುವವನು ಅಪ್ರಾಮಾಣಿಕ ಮಾಹಿತಿ ಕೊಟ್ಟಿದ್ದರೆ ಅಥವಾ ಪಾಲಿಸಿಯ ವಿಶೇಷ ಜವಾಬ್ದಾರಿಯನ್ನು (ವಾರಂಟಿ) ಪಾಲಿಸದಿದ್ದರೆ ಪಾಲಿಸಿ ರದ್ದಾಗಬಹುದಲ್ಲದೆ, ವಿಮಾಸಂಸ್ಥೆಯ ಹೊಣೆ ತಪ್ಪಬಹುದು. ಅಗ್ನಿವಿಮೆಯ ಒಪ್ಪಂದ ಇತರ ಒಪ್ಪಂದಗಳಂತೆ ಉಭಯ ಪಕ್ಷದವರಿಗೂ ಅನ್ವಯಿಸುತ್ತದೆ. ವಿಮಾಸಂಸ್ಥೆ ಅಗ್ನಿಯಿಂದ ಸಂಭವಿಸಿದಷ್ಟು ಮಾತ್ರ ಪರಿಹಾರ ಧನವನ್ನು ತೆರಲು ಬದ್ಧವಾಗಿದೆ. ಹಣ ಕೊಡುವ ಬದಲು ಧಕ್ಕೆ ಹೊಂದಿದ ಸ್ವತ್ತನ್ನು ಅದು ಮೊದಲಿದ್ದಂತೆಯೇ ಸರಿಪಡಿಸಿಕೊಡಬಹುದು. ಏನೇ ಆಗಲಿ ಪಾಲಿಸಿದಾರನು ಬೆಂಕಿ ಅನಾಹುತದಿಂದ ಹೆಚ್ಚು ನಷ್ಟ ಉಂಟಾಗದಂತೆ ನೋಡಿಕೊಳ್ಳಬೇಕು. ಭಾರತದಲ್ಲಿ ವಿಮೆಯ ವ್ಯವಹಾರ 1950ರವರೆಗೂ ಖಾಸಗಿಯಾಗಿಯೇ ನಡೆಯುತ್ತಿದ್ದು ಅನಂತರ ಸರ್ಕಾರದ ವಶಕ್ಕೆ ಬಂದಮೇಲೆ ಭಾರತದ ಲೈಫ್ ಇನ್‍ಷೂರೆನ್ಸ್ ಕಾರ್ಪೊರೇಷನ್ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈಗ (ಸರ್ಕಾರೀ ಸ್ವಾಮ್ಯದ ಕೆಲವು ವಿಮಾಕಂಪನಿಗಳು) ಅಗ್ನಿವಿಮೆಯ ಹೊಣೆಯನ್ನೂ ಹೊತ್ತಿವೆ. ಅಗ್ನಿವಿಮೆಯ ಸೌಲಭ್ಯವನ್ನು ಅನೇಕ ಇತರ ಖಾಸಗೀ ವಿಮಾಸಂಸ್ಥೆಗಳೂ ನಡೆಸುತ್ತಿವೆ. (ಎನ್.ಎಸ್.ಎಂ.) ಅಗ್ನಿಶಾಮಕದಳ : ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಅದರೊಡನೆ ಹೋರಾಡಿ ಅದನ್ನು ಆರಿಸುವುದಕ್ಕೆಂದೇ ವಿಶೇಷವಾಗಿ ರಚನೆಯಾಗಿರುವ ಸಿಬ್ಬಂದಿಗೆ ಈ ಹೆಸರಿದೆ. ಸಾಮಾನ್ಯವಾಗಿ ಇಂಥ ದಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿದ್ದು ತನ್ನ ಸೇವೆಯನ್ನು ಪಟ್ಟಣಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ವಿಸ್ತರಿಸುತ್ತದೆ. ಆಕಸ್ಮಿಕದಿಂದ ಉಂಟಾದ ಬೆಂಕಿಯನ್ನು ಆರಿಸುವುದು ಮಾತ್ರವಲ್ಲದೆ ಇತರೆಡೆಗಳಿಗೆ ಹರಡದಂತೆಯೂ ಈ ದಳ ನೋಡಿಕೊಳ್ಳುತ್ತದೆ. ಈ ದಳದ ನೆರವಿನಿಂದಾಗಿ ಬೆಂಕಿ ಅಪಘಾತದಿಂದ ಉಂಟಾಗುವ ಪ್ರಾಣಹಾನಿ, ಆಸ್ತಿಪಾಸ್ತಿಗಳ ನಷ್ಟ ಕಡಿಮೆಯಾಗಲವಕಾಶವಿದೆ. ಬೆಂಕಿಯನ್ನಾರಿಸಲು ಮುಖ್ಯವಾಗಿ ಬಳಸುವ ವಸ್ತುವೆಂದರೆ ನೀರು. ದೊಡ್ಡ ದೊಡ್ಡ ಅಗ್ನಿಆಕಸ್ಮಿಕಗಳನ್ನು ಹತೋಟಿಗೆ ತರಲು ತಣ್ಣೀರನ್ನು ಅಧಿಕ ಪ್ರಮಾಣದಲ್ಲಿ ಬಳಸಬೇಕಾಗುತ್ತದೆ. ನೀರಿನ ಸತತಧಾರೆಯಿಂದ ಮಾತ್ರ ಇಂಥ ಅಗ್ನಿಪ್ರಮಾದಗಳನ್ನು ತಡೆಯಲು ಸಾಧ್ಯ. ಅಧಿಕ ಒತ್ತಡದಲ್ಲಿ ಮತ್ತು ಹೆಚ್ಚು ಪ್ರಮಾಣದಲ್ಲಿ ನೀರನ್ನು ಬೆಂಕಿಯ ಮೇಲೆ ಎರಚಲು ನವೀನ ರೀತಿಯ ನೀರೆತ್ತುವ ಯಂತ್ರಗಳನ್ನು ಅಗ್ನಿಶಾಮಕದಳದವರು ಬಳಸುತ್ತಾರೆ. ಬೆಂಕಿಯ ಅಪಘಾತ ಒದಗಿದ ಸ್ಥಳದ ಬಳಿ ಬಾವಿಯಾಗಲೀ ಕೆರೆಯಾಗಲೀ ಇದ್ದರೆ ಬೆಂಕಿಯನ್ನಾರಿಸುವ ಕಾರ್ಯ ಸುಲಭವಾಗುತ್ತದೆ. ಅಪಘಾತ ಸ್ಥಳದಲ್ಲಿ ನೀರಿನ ಸೌಕರ್ಯವಿಲ್ಲದಿದ್ದರೆ ಬೆಂಕಿಯನ್ನಾರಿಸುವುದು ಕಷ್ಟ. ಇಂಥ ಸನ್ನಿವೇಶಗಳಲ್ಲಿ ಆಧುನಿಕ ರೀತಿಯಲ್ಲಿ ತಯಾರಿಸಲಾಗಿರುವ ಬೆಂಕಿ ಆರಿಸುವ ಸಾಧನಗಳನ್ನು (ಫೈರ್ ಎಕ್ಸ್‍ಟಿಂಗ್ವಿಷರ್ಸ್) ಉಪಯೋಗಿಸಲಾಗುತ್ತದೆ. ಈ ಸಾಧನದಲ್ಲಿ ಇಂಗಾಲಾಮ್ಲ ಅನಿಲವನ್ನು ಉತ್ಪಾದಿಸಿ ಅದನ್ನು ಬೆಂಕಿ ಎಡೆಗೆ ಎರಚುವುದರಿಂದ ಬೆಂಕಿಯನ್ನು ಶಮನ ಮಾಡಬಹುದು. ಈ ತರದ ಆರಿಸುವ ಸಾಧನವನ್ನು ಸಾಮಾನ್ಯವಾಗಿ ಕಾರ್ಖಾನೆ, ಚಿತ್ರಮಂದಿರ, ಗ್ರಂಥಾಲಯ, ಪ್ರಯೋಗಾಲಯ, ವಸ್ತುಸಂಗ್ರಹಾಲಯ ಮುಂತಾದೆಡೆಗಳಲ್ಲಿ ಇಟ್ಟಿರುತ್ತಾರೆ. ಗ್ಯಾಸೊಲಿನ್, ಆಲ್ಕೊಹಾಲ್, ಎಣ್ಣೆ, ಬಣ್ಣ ಮತ್ತು ವಿದ್ಯುಚ್ಛಕ್ತಿಯಿಂದುಂಟಾದ ಬೆಂಕಿಯನ್ನು ಆರಿಸಲು ಇಂಥ ಉಪಕರಣವನ್ನುಪಯೋಗಿಸುತ್ತಾರೆ. ಇದಲ್ಲದೆ ಕೆಲವು ರಾಸಾಯನಿಕ ಮಾರ್ಜಕಗಳನ್ನು ನೀರಿಗೆ ಬೆರೆಸಿ, ಕಾಡುಗಿಚ್ಚು ಮತ್ತು ಇತರ ಸಾಮಾನ್ಯ ಬೆಂಕಿ ಆಕಸ್ಮಿಕಗಳನ್ನು ಆರಿಸುತ್ತಾರೆ. ದ್ರವರೂಪದ ಕಾರ್ಬನ್ ಟೆಟ್ಟ್ರಾಕ್ಲೋರೈಡ್ ಸಹ ಬಳಕೆಯಲ್ಲಿದೆ. ಅಗ್ನಿಶಾಮಕದಳದವರು ಉಪಯೋಗಿಸುವ ಮುಖ್ಯವಸ್ತುಗಳಲ್ಲಿ ದಪ್ಪನೆಯ ಹಗ್ಗ, ಬಲೆ, ಮರದ ಹಾಗೂ ನೂಲೇಣಿ, ದಪ್ಪ ಬಟ್ಟೆಯಿಂದ ಮಾಡಿರುವ ಕೊಳವೆಗಳು ಸೇರಿವೆ. ಜೊತೆಗೆ ನೀರೆತ್ತುವ ಯಂತ್ರಗಳು, ಶೋಧನಾ ದೀಪದ ಸಾಮಗ್ರಿಗಳು, ರಕ್ಷಣಾ ವಾಹನಗಳು, ನೀರಿನ ದೊಡ್ಡ ತೊಟ್ಟಿಗಳು, ರಕ್ಷಣಾ ಆಯುಧಗಳು ಮತ್ತು ಆಸ್ಪತ್ರೆ ಗಾಡಿ (ಆ್ಯಂಬುಲೆನ್ಸ್ ವ್ಯಾನ್)-ಇವುಗಳು ಇರುತ್ತವೆ. ತಾವು ಅಗ್ನಿಶಾಮಕದಳದವರೆಂಬು ದನ್ನು ಸೂಚಿಸಲು ಸಾಮಾನ್ಯವಾಗಿ ತಮ್ಮ ವಾಹನ ಇತ್ಯಾದಿಗಳಿಗೆ ಕೆಂಪುಬಣ್ಣವನ್ನು ಬಳಿದಿರುತ್ತಾರೆ. ಬೆಂಕಿ ಅಪಘಾತದ ಕರೆ ಬಂದರೆ, ಸದಾಸಿದ್ಧರಾಗಿರುವ ಈ ದಳದವರು ತಮ್ಮ ಅಗ್ನಿಶಾಮಕ ಯಂತ್ರಗಳನ್ನು ಮತ್ತು ಇತರ ಸಾಧನಗಳನ್ನು ತಮ್ಮದೇ ಆದ ವಿಶೇಷ ರೀತಿಯ ವಾಹನಗಳಲ್ಲಿರಿಸಿಕೊಂಡು ಆ ಸ್ಥಳಕ್ಕೆ ಧಾವಿಸುತ್ತಾರೆ. ದಾರಿಯಲ್ಲಿ ಹೋಗುವಾಗ ರಸ್ತೆಯಲ್ಲಿ ಸಂಚರಿಸುವ ಎಲ್ಲ ಜನ ಮತ್ತು ಇತರ ಎಲ್ಲ ವಾಹನಗಳೂ ಅವರ ವಾಹನಕ್ಕೆ ಮೊದಲು ಅವಕಾಶ ಮಾಡಿಕೊಟ್ಟು ಆದ್ಯತೆ ನೀಡಬೇಕು. ತಮ್ಮ ವಾಹನ ಆಗಮಿಸುತ್ತಿರುವುದನ್ನು ಸೂಚಿಸಲು ದಳದವರು ಒಂದು ಗಂಟೆಯನ್ನು ಎಡೆಬಿಡದೆ ಬಾರಿಸುತ್ತ ಹೋಗುತ್ತಾರೆ. ಇದಲ್ಲದೆ ವಾಹನದ ಮೇಲೆ ಸತತವಾಗಿ ಹತ್ತಿ ಆರುವ ಪ್ರಕಾಶಮಾನವಾದ ಕೆಂಪು ಅಥವಾ ನೀಲಿಬಣ್ಣದ ದೀಪವಿರುತ್ತದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬೃಹತ್ ಕಾರ್ಖಾನೆಗಳಲ್ಲಿ ಉಂಟಾಗುವ ಬೆಂಕಿಯನ್ನಾರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿಶಾಮಕ ಯಂತ್ರಗಳನ್ನು ಬಳಸಿ ಹೆಚ್ಚುಕಾಲ ಹೋರಾಡಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಕ್ಕಪಕ್ಕದ ಪಟ್ಟಣಗಳ ಅಗ್ನಿಶಾಮಕದಳದವರ ನೆರವು ಸಿಕ್ಕಿದಲ್ಲಿ ಅಗ್ನಿಶಮನಕಾರ್ಯ ತ್ವರಿತಗೊಳ್ಳುತ್ತದೆ. ಕೆಲವು ದೊಡ್ಡ ದೊಡ್ಡ ಕಾರ್ಖಾನೆಗಳು ತಮ್ಮದೇ ಆದ ಅಗ್ನಿಶಾಮಕ ಯಂತ್ರಗಳನ್ನು ಹೊಂದಿರುತ್ತವೆ. ಬೆಂಕಿ ಅಪಘಾತ ಸಂಭವಿಸಿದಾಗ ಗೊಂದಲಕ್ಕವಕಾಶ ಮಾಡಿಕೊಡದೆ ಶಾಂತ ರೀತಿಯಿಂದ ಶಮನಕಾರ್ಯದಲ್ಲಿ ಸಹಕರಿಸಿದಲ್ಲಿ ಕಾರ್ಯ ಸುಗಮವಾಗುತ್ತದೆ ಎಂಬುದೇ ಅಗ್ನಿಶಾಮಕದಳದವರು ಸಾರ್ವಜನಿಕರಿಗೆ ನೀಡುವ ಸಂದೇಶ. (ಎಸ್.ಆರ್.ಪಿ.) ಅಗ್ನಿಶಿಲಾಛಿದ್ರಗಳು : ಅಗ್ನಿಪರ್ವತಗಳ ಸ್ಫೋಟನ ಕಾಲದಲ್ಲಿ ಅಧಿಕ ಶಾಖ ಮತ್ತು ಒತ್ತಡದಿಂದ ಹೊರಕ್ಕೆ ಎಸೆಯಲ್ಪಡುವ ಶಿಲೆಗಳ ಚೂರುಗಳು. ಗಾತ್ರಗಳಿಗನುಸಾರವಾಗಿ ಅಗ್ನಿಪರ್ವತದ ಬಾಯಿಂದ ಗಗನದತ್ತ ಬಹು ಎತ್ತರಕ್ಕೆ ಹೋಗಿ ಶಿಲಾವರ್ಷದಂತೆ ಮತ್ತೆ ಭೂಮಿಯ ಮೇಲೆ ಬೀಳುತ್ತವೆ. ಈ ಚೂರುಗಳಲ್ಲಿ ವಿವಿಧ ಶಿಲೆಗಳು, ಶಿಲಾರಸದ ಭಾಗಗಳು, ಹಾಗೂ ಶಿಲೆಗಳ ಸಣ್ಣ ಕಣ, ಬೂದಿ ಇತ್ಯಾದಿ ಸೇರಿರುತ್ತವೆ. ಇವೇ ಅಗ್ನಿಶಿಲಾಛಿದ್ರಗಳು (ಪೈರೊಕ್ಲ್ಯಾಸ್ಟಿಕ್ ರಾಕ್ಸ್). ಅಗ್ನಿಶಿಲಾಛಿದ್ರಗಳು ಹೊರಕ್ಕೆ ಎಸೆಯಲ್ಪಟ್ಟಾಗ ಅವು ಶಿಲಾರಸದೊಡನೆ ಸೇರಿ ಗಟ್ಟಿಯಾಗಬಹುದು ಅಥವಾ ಹಾಗೆಯೇ ಉಳಿಯಬಹುದು. ಕಣಗಳ ಗಾತ್ರಗಳನ್ನನುಸರಿಸಿ ಇವುಗಳನ್ನು ಸ್ಥೂಲವಾಗಿ ಮೂರು ಭಾಗವಾಗಿ ವಿಂಗಡಿಸಬಹುದು: