ಬೇಲೂರಿನ ಶಿಲಾಬಾಲಿಕೆಯರು
- ಪರಿಚಯ:ಹಾಸನದಿಂದ 38 ಕಿ.ಮೀ ದೂರದಲ್ಲಿರುವ ಯಗಚಿ ನದಿಯ ದಡದಲ್ಲಿರುವ ಬೇಲೂರು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಬೇಲೂರು ಹೊಯ್ಸಳರ ಹಿಂದಿನ ರಾಜಧಾನಿಯಾಗಿತ್ತು. ಮತ್ತು ಇತಿಹಾಸದಲ್ಲಿ ವಿವಿಧ ಹಂತಗಳಲ್ಲಿ ವೇಲಾಪುರ, ವಲೂರ್ ಮತ್ತು ಬೆಲಾಹೂರ್ ಎಂದು ಉಲ್ಲೇಖಿಸಿದ್ದಾರೆ. ಈ ಪಟ್ಟಣವು ಅಲ್ಲಿರುವ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಹೊಯ್ಸಳರ ಕಾಲದ ಶಿಲ್ಪಕಲೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಚೋಳರ ವಿರುದ್ಧ 1116 ರಲ್ಲಿ ತನ್ನ ವಿಜಯವನ್ನು ಗುರುತಿಸಲು, ವಿಜಯ ನಾರಾಯಣ (ಈಗ ಚೆನ್ನಕೇಶವ) ಎಂದು ಕರೆಯಲ್ಪಡುವ ಪ್ರಸಿದ್ಧ ದೇವಾಲಯವನ್ನು ನಿರ್ಮಿಸಿದನು. ಹೊಯ್ಸಳ ರಾಜ ವಿಷ್ಣುವರ್ಧನ ಕಟ್ಟಿದ ಈ ದೇವಾಲಯವು ಪೂಜ್ಯವೂ ಪ್ರಸಿದ್ಧವೂ ಆಯಿತು. ವಾಸ್ತುಶಿಲ್ಪಿ ಜಕಣಾಚಾರಿ ಇದನ್ನು ನಿರ್ಮಿಸಿದನೆಂದು ಪ್ರಸಿದ್ಧಿಯಾಗಿದೆ.
- ಚೆನ್ನಕೇಶವ ದೇವಾಲಯವು ಕಲ್ಲಿನ ಕಲೆಯ ಉನ್ನತ ಗುಣಮಟ್ಟದ ಶಿಲ್ಪಕಲೆಯ ಕೆಲಸಕ್ಕೆ ಉತ್ತಮ ಉದಾಹರಣೆಯಾಗಿದೆ. ನೃತ್ಯ, ಬೇಟೆಯಾಡುವುದು, ಮರಗಳ ದೇವಾಲಯ ಅಲಂಕೃತ ಕಂಭಗಳ ಮೇಲಂಚಿನ ಆಧಾರಗಳ(ಕ್ಯಾನೊಪಿಸ್) ಅಡಿಯಲ್ಲಿ 80 ಕ್ಕಿಂತಲೂ ಹೆಚ್ಚು ಮದನಿಕಾ ವಿವಿಧ ಭಂಗಿಗಲಲ್ಲಿ ನಿಂತಿರುವ ಶಿಲ್ಪಗಳು ಇವೆ. ನವರಂಗದ ಅತ್ಯದ್ಭುತವಾದ ಕೆತ್ತಿದ ಸಾಲು ಸಾಲು ಕೆತ್ತನೆಗಳ (ಕಾಲಮ್ಗಳ) ಮೇಲೆ 4 ಮದನಿಕಾ ವಿಗ್ರಹಗಳು (ಸೊಗಸಾದ ನೃತ್ಯಶೈಲಿಯ ಪ್ರದರ್ಶನದ) ಹೊಯ್ಸಳ ಕೆಲಸದ ಅನನ್ಯ ಸೃಷ್ಟಿಗಳಾಗಿವೆ[೧]
ಬೇಲೂರಿನ ಶಿಲಾಬಾಲಿಕೆಯರು
[ಸಂಪಾದಿಸಿ]ಶ್ರವಣಕೆ ಸಿಲುಕದ ಲಲಿತಾ
ರವ ಸುಖವಂ ರಸನೆಗೊದನವದನ್ನತ ದ್ರವಮಂ
ಎವೆಯಿಕ್ಕದ ನಯನಗಳಿಂ
ಸವಿವುದು ನೀವೆಂಬ ಮಾಯಗಾತಿಯರಿವರಾರ್
★
ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀ೦
ನ್ನತ್ಯಲಾಸ್ಯದಿನಾರನೋಲಿಸುತಿರುವೆ
ಮಾಧುರ್ಯ ಮಂಜೂಷೆ ಮಧುರತರ ಮೌನದಿಂ
ದಾರ ಚರಿತೆಗಳ ಶುಕಿಗುಸಿರುತಿರುವೆ |
ಮುಗ್ಧ ಮೋಹನವದನೆ ಮುಕುರದೊಳ್ ನೋಡಿ ನೀ
ನಾರ ನೆನೆದಿಂದು ನಸುನಗುತಲಿರುವೆ
ಪ್ರಣಯಪ್ರರೋಹೆ ನೀ೦ ಪ್ರಿಯತರಾಕೃತಿಯಿಂದೆ
ರುಷೆನಿಂತಾರೊಳಭಿನಯಿಸುತಿರುವೆ
ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ
ದೇವ ದೇವನ ಸೇವೆಗೈ ತರ್ಪ ಸಾಧುಕುಲಮಂ
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ?
★
ಇನ್ನೆವರನೊಲಿದು ಬಾರದ ನಿಮ್ಮ ಮನದಿನಿಯ
ನಿನ್ನು ಬಹನೆಂದು ನೀ೦ ತಿಳಿವುದೆಂತು
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿ ಯಾ
ವಿಷಮ ಸಮಯದಿ ನಿಮಗೆ ದೊರೆವುದೆಂತು?
ನಿಮ್ಮ ವದನದ್ಯುತಿಗೆ ಮರುಳಾಗಿ ಸೋಲದನ
ರಸಜೀವಿಯನ್ನು ತಾದರಿಪುದೆಂತು
ನಿಮ್ಮ ನೂಪುರರವಕೆ ಬೆರಗಾಗಿ ನಿಲ್ಲದನ
ಭಾವಜ್ಞನೆಂದು ನೀ೦ ಬಗೆವುದೆಂತು ?
ರೂಪವಿಲ್ಲದನೇನೊ ನಿಮ್ಮಿನಿಯನಲ್ಲದಿರೆ ತಾಂ
ರೂಪವಿಭವದಿನಿ,ಲೈ ತಂದು ಮೆರೆಯೆ ನಿಮ್ಮ
ಲಾಸ ಲಾವಣ್ಯಗಳ ಧರೆಯಿಂದೆ ಸಾರ್ವುವೆನುತೆ
ಮರೆಯಿಂದ ಕಂಡು ನಿಮ್ಮೊಲಪಿಂದೆ ನಲಿವನೇನೋ
★
ಶ್ರುತಗಾನಮಭಿರಾಮವಾದೊಡಶ್ರುತಗಾನ
ಮಭಿರಾಮ ತರವೆನುತೆ ರಸಿಕರೊಸೆವರ್
ರಾಮಣೀಯಕ ಕುಲಮೆ ನಿಮ್ಮೆದೆಯ ನುಡಿ ಕಿವಿಯ
ನಾನದೊಡಮೆಮ್ಮೆದೆಯ ಸೇರಲರಿಗುಂ
ಅದರಿಂದಮಿ ನಿಮ್ಮಭಿಮತಂಗಳನರಿತು
ಜಾಣರೆನಿಬರೊ ನಿಮ್ಮ ಪೊಗಳಿ ನಲಿವರ್
ವರ್ಷಶತಕಗಳಿ೦ದೆ ಕುಂದದಿಹ ಲಾವಣ್ಯ
ದಂತರಂಗವನಿಂತು ಬಗೆವೆನೀಗಳ್
★
ಬಿದಿಯ ಕರಚಾತುರಿಯೊಳನಿತಿನಿತು ಸುಳಿದು ಸರಿವ
ಮನುಜ ಮಾನಸದೊಳತಿ ಚಿತ್ರದಿಂ ಚರಿಸಿ ಮೆರೆವ
ಭುವನ ಜೀವನ ಸಸ್ಯಕಮೃತಬಿಂದುಗಳನೆರೆವ
ಪರತತ್ಯ ಮಾಧುರಿಯನಿನಿಸು ನೀ೦ ತೋರ್ಪಿರಲ್ತೆ
ಆನಂದ ನಿಧಿಯಾ ಪರಾತ್ಪರನೆನಲ್ ಜಗದೊ
೪ಾನಂದವೀವರಂ ಕಳೆಯಬಹುದೇ
ಪ್ರೇಮಮಯ ಮೂರ್ತಿಯಾಪರದೇವನೆನುತಿರಲ್
ಪ್ರೇಮಾಂಕುರಂಗಳಂ ಮುರಿಯಲಹುದೇಂ
ಸೌಂದರ್ಯ ಸರ್ವಸ್ವ ನಿಧಿಯಾತನೆನುತಿರಲ್
ಸುಂದರಾಕಾರರೊಳ್ ಮುಳಿಯಲಹುದೇಂ
ಜೀವನಾಧಾರನವನೆನುತೆ ಪೊಗಳುತ್ತಿರಲ್
★
ಜೀವನೋಲೆಯರಂ ಪಳಿಯಲಹುದೇ೦
ಜಗದುದಯ ಕಾರಣನ ಮೈ ಮೆಗಳನರಿತು ನೆನೆದು
ಜಗದ ಯಾತ್ರೆಯ ನಡೆವ ಜನಕೆ ನಿಮ್ಮಂದದಿಂದಂ
ಸೊಗಮಿನಿಸು ತೋರಿ ಸಂಸ್ಕೃತಿ ಪಥಂ ಸುಗಮವೆನಿಸಲ್
ಅದುವೆ ದೇವಂಗೆ ನೀಮೆಸಗುವಾ ಸೇವೆಯಲ್ತೆ!
★
ವಿಶ್ವ ತಂತ್ರ ರಹಸ್ಯ ಬೋಧನೋತ್ಸಾಹಮಿದು
ವಿಶ್ವ ಶಿಲ್ಪಿಯ ಸಭೆಯೊಳುಚಿತಮೆನಿಕುಂ
ವಿಗತ ಸೌಮನಸರುಂ ವಿಪರೀತ ಚರಿತರುಂ
ವಿಮುಖತೆಯನಾನಲದರಿಂದ ನಿಮಗೇ೦
ಮೊಳಗುಗೆಲೆ ಸರಳೆಯರೆ ನಿಮ್ಮ ಮೃದು ಪದವನನು
ಕರಿಸ ನಾದಿತ್ರಗಳ ಸೂಕ್ಷ್ಮದಿಂದೆ
ನೆಳಲನಿತ್ತೀ ಲತಾವಳಿ ನಿಮ್ಮ ನಾದರಿಸು
ಗೆಂದಿಗುಂ ತಂಬೆಲರ ಸುರಭಿಯಿ೦ದೆ ||
★
ನಗುತ ನಲಿಯುತ ಮೆರೆದು ಹಾವಭಾವಗಳನೆಸೆದು
ಮಂಜು ಜಲ್ಪವ ತೋರಿ ಮುಗ್ಗ ವೀಕ್ಷಣವ ಬೀರಿ
ಕಠಿನರಾಗದೆ ಕಾಲದೌ ಷ್ಟದಿಂ ಕುಂದುವಡದೆ
ಶುಷ್ಕ ಹೃದಯರ್ಗೆ ನೀಂ ಸೌಹೃದನ ನೀಡುತಿಹುದೌ ||
ಅವ್ಯಕ್ತ ನಿನದದಿ೦ದಕಲಂಕಿತಾಂಗದಿಂ
ದನ್ಯೂನ ತರುಣತೆಯಿನಮಿತಯಶದಿಂ
ಚಿರಕಾಲಮೆಸೆವುದೇ ಚಿತ್ರವೇಧನಿಯರಿರ
ಕುದಿವ ಲೋಕಕೆ ಮುದದ ತಣಿವ ಬೀರಿ
ಸೌಂದರ್ಯವೇ ವಿಶ್ವತಮಾ ಪರತತ್ವ.
ಭಾಸವೇ ಸೌ೦ದರ್ಯಮೆನುತ ಸಾರಿ
ನಿಮಗೆ ಜನ್ಮವನಿತ್ತ ಚಿತ್ರ ಚತುರರ ಚಿತ್ತ
ದೇಕಾಗ್ರ ಭಕ್ತಿ ದೀಪಿಕೆಯ ಬೆಳಗಿ
★
ಪೊಳೆಯಿರೌ ಸರಸ ಜೀವನಮಂತ್ರ ಗುರುಗಳೆನಿಸಿ
ಪಳಿಯಿರೌ ಮಧುರಭಾವವ ಪಳಿನ ವಿಕೃತಮತಿಯಂ
ಕಳೆಯಿರೌ ರಸಕಲಾ ವಿಮುಖತೆಯ ಜನದ ಮನದಿಂ
ಬೆಳೆಯಿರೌ ಪ್ರೇಮ ಧರ್ಮೊದ್ಭರಣ ವಿಧಿಯೊಳೆಂದುಂ
--♣♣♣೦♣♣♣--
- ಕವಿ:ಡಿ. ವಿ. ಗುಂಡಪ್ಪ
ನೋಡಿ
[ಸಂಪಾದಿಸಿ]- ಬೇಲೂರು -ಕನ್ನಡ ವಿಕಿ
- ಭಾವಗೀತೆಗಳು
- Chennakeshava Temple, Belur
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ