ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಮಾಜಿಕ ಒಪ್ಪಂದ ಸಿದ್ಧಾಂತ

ವಿಕಿಸೋರ್ಸ್ದಿಂದ

ಸಾಮಾಜಿಕ ಒಪ್ಪಂದ ಸಿದ್ಧಾಂತ

ರಾಜ್ಯದ ಅಸ್ತಿತ್ವ ನಿರೂಪಣಾ ಸಿದ್ಧಾಂತ. ಈ ಸಿದ್ಧಾಂತಕ್ಕೆ ಇರುವ ಐತಿಹಾಸಿಕ ಹಿನ್ನೆಲೆಯನ್ನು ಕೆಲವು ರಾಜ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ. ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವೆ ಆದ ಆಡಳಿತ ಸಂಬಂಧ ಒಪ್ಪಂದವೇ ಇದಕ್ಕೆ ಮೂಲವೆಂದು ಕೆಲವರ ಅಭಿಪ್ರಾಯ. ಪ್ಲೇಟೊವಿಗಿಂತ ಹಿಂದೆ ಇದ್ದ ಗ್ರೀಕ್ ತತ್ತ್ವಜ್ಞಾನಿ ಗಳ ಗುಂಪಿನ ಸೋಫಿಸ್ಟರಲ್ಲಿ ಈ ಒಪ್ಪಂದ ಸಿದ್ಧಾಂತ ಪ್ರಥಮವಾಗಿ ಕಾಣಬಂದಿತೆಂದು ಹೇಳಲಾಗಿದೆ. ಯಾವುದೇ ನಿರ್ದಿಷ್ಟವಾದ ರಾಜಕೀಯ ನಿಯಂತ್ರಣವಿಲ್ಲದಿದ್ದ ಕಾಲದಲ್ಲಿ ಜನರು ತಾವಾಗಿಯೇ ಮಾಡಿಕೊಂಡ ಒಪ್ಪಂದದ ಪರಿಣಾಮವಾಗಿ ರಾಜ್ಯ ಸೃಷ್ಟಿಯಾಯಿತೆಂದು ಹೇಳಿಕೆ. ಈ ಸೃಷ್ಟಿ ಸಾಮಾಜಿಕ ಸ್ವರೂಪದ್ದೆಂದು ಕೆಲವರು ಭಾವಿಸಿದರೆ ರಾಜಕೀಯ ಸ್ವರೂಪದ್ದೆಂದೇ ಕೆಲವರು ಭಾವಿಸುವುದು. ಈ ಸಿದ್ಧಾಂತದಂತೆ ಮಾನವ ತಾನು ಅನುಭವಿಸುತ್ತಿದ್ದ ಸ್ವಾಭಾವಿಕ ಹಕ್ಕು ಬಾಧ್ಯತೆಗಳಲ್ಲಿ ಕೆಲವನ್ನು ಸಮಾಜದ ಪ್ರಯೋಜನಾರ್ಥ ಬಿಟ್ಟುಕೊಡುವುದು. ಹೀಗೆ ತಾನು ಬಿಟ್ಟುಕೊಟ್ಟ ಸ್ವಾಭಾವಿಕ ಹಕ್ಕುಬಾಧ್ಯತೆಗಳಿಗೆ ಪ್ರತಿಯಾಗಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಿಂದ ರಕ್ಷಣೆ ಪಡೆಯುವಂತಾದುದು.

11ನೆಯ ಶತಮಾನದಲ್ಲಿ ಪೋಪ್‍ಗಳ ಮತ್ತು ದೊರೆಗಳ ಮಧ್ಯೆ ನಡೆದ ಹಗರಣದಿಂದ ಹಿಡಿದು 18ನೆಯ ಶತಮಾನದ ಫ್ರಾನ್ಸಿನ ಕ್ರಾಂತಿಕಾಲದವರೆಗೆ ಈ ಸಿದ್ಧಾಂತದ ಐತಿಹಾಸಿಕ ಬೆಳೆವಣಿಗೆಯನ್ನು ಗುರುತಿಸಬಹುದು. 16-18ನೆಯ ಶತಮಾನದ ತನಕ ಈ ಸಿದ್ಧಾಂತ ಸರ್ವವ್ಯಾಪಿಯಾಗಿ ಅನೇಕ ಜನಾಂಗಗಳ ರಾಜಕೀಯ ಜೀವನ ರೂಪುಗೊಳ್ಳಲು ಸಹಾಯವೆಸಗಿತು. ಪೌರ್ವಾತ್ಯ ಇತಿಹಾಸದಲ್ಲಿಯೂ ಈ ಸಿದ್ಧಾಂತದ ಬಗ್ಗೆ ನಿದರ್ಶನಗಳು ದೊರೆಯುತ್ತವೆ. ಮಹಾಭಾರತದ ಶಾಂತಿಪರ್ವದಲ್ಲಿ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಈ ಸಿದ್ಧಾಂತವನ್ನು ಗುರುತಿಸಬಹುದು. ಪ್ಲೇಟೊವಿಗೆ ಮುಂಚೆ ಜೀವಿಸಿದ್ದ ಗ್ರೀಕ್ ತತ್ತ್ವಜ್ಞಾನಿಗಳ ಒಂದು ಗುಂಪಿನಲ್ಲಿ ಈ ಸಿದ್ಧಾಂತದ ಪ್ರತಿಪಾದನೆ ಇತ್ತು. ಆದರೆ ಪ್ಲೇಟೊ ಆಗಲಿ, ಅರಿಸ್ಟಾಟಲ್ ಆಗಲಿ ಇದನ್ನು ಪುಷ್ಠೀಕರಿಸಲಿಲ್ಲ. ಕ್ರೈಸ್ತಧರ್ಮದ ಉದಯವಾದ ಮೇಲೆ ಶತಮಾನಗಳ ತನಕ ಧಾರ್ಮಿಕ ಆಧಾರದ ಮೇಲೆ ರಾಜಕೀಯ ಭಾವನೆಗಳು ಬೆಳೆಯಲಾರಂಭಿಸಿದವು. ಭಗವಂತ ಮತ್ತು ಜನರು ಅಥವಾ ರಾಜ ಮತ್ತು ಪ್ರಜೆಗಳ ಮಧ್ಯೆ ಆದ ಒಪ್ಪಂದ ಅಥವಾ ಸಮ್ಮತಿಗಳ ಸೂಚನೆಗಳು ಬೈಬಲ್ಲಿನಲ್ಲಿ ಕಾಣಬರುತ್ತವೆ. ಸಾಮಾಜಿಕ ಒಪ್ಪಂದ ಸಿದ್ಧಾಂತಕ್ಕೆ ಧಾರ್ಮಿಕ ನೆಲೆಯೂ ಇದ್ದು ಮಧ್ಯಯುಗದಲ್ಲಿ ಅದು ಫಲಕಾರಿಯಾಗಿತ್ತೆಂದು ತಿಳಿದುಬರುವುದು. ಯುರೋಪಿನಲ್ಲಿ ಆ ಕಾಲದ ಸ್ಥಿತಿಗತಿಯ ವಾತಾವರಣಕ್ಕೆ ಈ ಸಿದ್ಧಾಂತ ಹೊಂದಿಕೊಂಡಿತ್ತು. ಆ ಕಾಲದಲ್ಲಿ ರಾಜರು ಸ್ವೀಕರಿಸುತ್ತಿದ್ದ ಪ್ರಮಾಣ ವಚನಗಳಲ್ಲಿ ಒಪ್ಪಂದದ ಸಂಕೇತ ಸ್ಪಷ್ಟವಾಗಿಯೇ ಇದ್ದಿತು. ಒಳ್ಳೆ ಆಡಳಿತ ನೀಡಲು ರಾಜರು ವಾಗ್ದಾನ ಮಾಡುತ್ತಿದ್ದರು. ರಾಜ ತಾನು ಮಾಡಿಕೊಂಡ ಒಪ್ಪಂದವನ್ನು ಅತಿಕ್ರಮಿಸಿದಲ್ಲಿ ಪ್ರಜೆಗಳು ಅವನಿಗೆ ವಿಧೇಯರಾಗಿರುವ ನೀತಿಯನ್ನು ಕೈಬಿಡುತ್ತಿದ್ದರು - ಎಂಬ ಹೇಳಿಕೆಯಿದೆ. ಇದರಿಂದ ಒಪ್ಪಂದದ ಸ್ವರೂಪ ಅರ್ಥವಾಗುತ್ತದೆ.

ಕೌಟಿಲ್ಯ ತನ್ನ ಅರ್ಥಶಾಸ್ತ್ರ ದಲ್ಲಿ ಮನು ಮತ್ತು ಜನತೆಯೊಡನೆ ಆದ ಒಪ್ಪಂದವನ್ನು ಉಲ್ಲೇಖಿಸಿದ್ದಾನೆ. ಬಲಾಢ್ಯರು ದುರ್ಬಲರನ್ನು ನುಂಗಿ ಅನಾಯಕತ್ವ ಉಂಟುಮಾಡುವ ಸ್ಥಿತಿಯನ್ನು ತಪ್ಪಿಸಲು ಜನರು ಮನುವನ್ನು ರಾಜನನ್ನಾಗಿ ಆರಿಸಿ ತಮ್ಮ ಆದಾಯದಲ್ಲಿ ಒಂದು ಪಾಲನ್ನು ಒಪ್ಪಿಸುತ್ತಿದ್ದರು. ರಾಜ ತನ್ನ ಪ್ರಜೆಗಳ ಕ್ಷೇಮ ಮತ್ತು ರಕ್ಷಣೆಯ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸುತ್ತಿದ್ದನೆನ್ನಲಾಗಿದೆ. ರೋಮನ್ ಕಾನೂನು ಸಮಾಜ ಒಪ್ಪಂದ ಸಿದ್ಧಾಂತದ ಭಾವನೆ ಜೀವಂತವಾಗಿ ಉಳಿಯಲು ಪೋಷಣೆ ನೀಡಿತು. ರಾಜಕೀಯ ಅಧಿಕಾರಕ್ಕೆಲ್ಲ ಈ ಸಿದ್ಧಾಂತದಂತೆ ಜನರೇ ಮೂಲ. ರೋಮ್ ದೊರೆ ಜನರಿಂದ ಪಡೆದ ಅಧಿಕಾರವನ್ನು ಚಲಾಯಿಸುತ್ತಿದ್ದ. ದೊರೆಯ ಇಚ್ಛೆಯೇ ಕಾನೂನು ಎನ್ನುತ್ತಿದ್ದರು. ಏಕೆಂದರೆ ಜನರೇ ದೊರೆಗೆ ಸರ್ವೋಚ್ಛ ಅಧಿಕಾರಗಳನ್ನು ಒಪ್ಪಿಸಿರುತ್ತಿದ್ದರು.

11ನೆಯ ಶತಮಾನದಿಂದ ಪ್ರಭಾವ ಬೀರುತ್ತಾ ಬಂದ ಈ ಸಿದ್ಧಾಂತ 16ನೆಯ ಶತಮಾನದ ವೇಳೆಗೆ ಬಹುತೇಕ ಸಾರ್ವತ್ರಿಕ ಮನ್ನಣೆಯನ್ನು ಗಳಿಸಿತ್ತೆಂದು ಹೇಳಬಹುದು. ಕ್ರಮೇಣ ಈ ಸಿದ್ಧಾಂತದ ಪ್ರತಿಪಾದಕರು ಹೆಚ್ಚುತ್ತ ಬಂದರು. ಈ ಪೈಕಿ ಹಾಬ್ಸ್, ಲಾಕ್ ಮತ್ತು ರೂಸೋ ಪ್ರಮುಖರು.

16ನೆಯ ಶತಮಾನದಲ್ಲಿ ಹಾಗೂ 17ನೆಯ ಶತಮಾನದ ಆದಿಭಾಗ ದಲ್ಲಿ, ಧಾರ್ಮಿಕ ಆಂದೋಳನ ಸಮಯದಲ್ಲಿ ಈ ಸಿದ್ಧಾಂತ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಕತ್ತಿಯಂತಿದ್ದು ರಕ್ಷಣೆಯ ಅಸ್ತ್ರವಾಯಿತು. ಏಕೆಂದರೆ ಬಹುಸಂಖ್ಯಾತರ ಧರ್ಮವನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಆಡಳಿತದ ಅಧಿಕಾರವನ್ನು ಅವರು ಪ್ರತಿಭಟಿಸುತ್ತಿದ್ದರು. ಆಗ್ಗೆ ಈ ಸಿದ್ಧಾಂತ ಅವರ ನೆರವಿಗೆ ಸಿದ್ಧವಾಗಿ ನಿಂತಿತು. ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡುವ ಸಾಧನವೂ ಆಯಿತು.

ದೈವಿಕ ಸಿದ್ಧಾಂತದ ಫಲವಾಗಿ ಜನರಿಗೆ ವ್ಯಕ್ತಿ ಸ್ವಾತಂತ್ರ್ಯವಾಗಲಿ, ರಾಜಕೀಯ ಸ್ಥಾನಮಾನಗಳಾಗಲಿ ಸಿಗಲಿಲ್ಲ; ಬದಲಾಗಿ ನಿರಂಕುಶಾಧಿಕಾರ ಬಳಕೆಗೆ ಬಂದು ಜನರು ದಬ್ಬಾಳಿಕೆಗೆ ಗುರಿಯಾದುದರಿಂದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಕಲ್ಪನೆಯಾಯಿತೆಂಬುದೂ ಗಮನೀಯ ವಿಚಾರ. ಈ ಸಿದ್ಧಾಂತದ ಪ್ರಕಾರವೇ ಇಸ್ರೇಲಿನ ಜನಪ್ರಮುಖರಿಗೂ ಡೇವಿಡ್ ದೊರೆಗೂ ಆದ ಒಪ್ಪಂದದ ಪ್ರಕಾರ ಡೇವಿಡ್ ರಾಜ್ಯಾಧಿಕಾರವನ್ನು ವಹಿಸಿಕೊಂಡನೆಂದು ತಿಳಿದುಬರುವುದು. ಫ್ರಾನ್ಸಿನ ಮಹಾಕ್ರಾಂತಿಯ ಸಮಯದಲ್ಲಿ ಈ ಸಿದ್ಧಾಂತದ ಕಿಡಿಗಳು ಹಾರಿದ್ದವೆಂಬುದು ಸರ್ವವಿದಿತ. ಅಮೆರಿಕದ ಸ್ವಾತಂತ್ರ್ಯ ಹೋರಾಟದಲ್ಲೂ ಈ ಸಿದ್ಧಾಂತ ಪ್ರಭಾವ ಬೀರಿತ್ತು. ಅಮೆರಿಕದ ಮಹಾವ್ಯಕ್ತಿಗಳೆನಿಸಿದ್ದ ಜೆಫರ್‍ಸನ್, ಮ್ಯಾಡಿಸನ್ ಮುಂತಾದವರು ಆ ಕಾಲದಲ್ಲಿ ಇದನ್ನು ಬಳಸಿಕೊಂಡಿದ್ದರು. 19ನೆಯ ಶತಮಾನದ ಸಮಯಕ್ಕೆ ಈ ಸಿದ್ಧಾಂತ ಅಳಿಯಿತು.

ರಾಜಕೀಯ ತತ್ತ್ವವೇತ್ತರಲ್ಲಿ ಈ ಸಿದ್ಧಾಂತ ಕುರಿತು ಭಿನ್ನಾಭಿಪ್ರಾಯ ಗಳು ಕಂಡುಬರುತ್ತವೆ. ಇವು ವಿವರಗಳಿಂದಲೇ ಹೊರತು, ತಾತ್ತ್ವಿಕವಾಗಿ ಅಲ್ಲ. ಇದರಿಂದ ಅನುಕೂಲವೆಷ್ಟೋ ಪ್ರತಿಕೂಲವೂ ಅಷ್ಟೇ ಎಂದು ಅಭಿಪ್ರಾಯಪಡುವವರಿದ್ದರು. ಈ ಸಿದ್ಧಾಂತದಲ್ಲಿ ಹೆಚ್ಚು ಅಪಾಯ ಸಂಭವನೀಯವೆಂದೂ ವ್ಯಕ್ತಿಯ ಸ್ವೇಚ್ಛಾ ಪ್ರವೃತ್ತಿ ಸೃಷ್ಟಿಯಾಗುತ್ತದೆಂದೂ ಒಂದು ಅಭಿಮತ. ಕ್ರಾಂತಿಯ ಅಪಾಯವನ್ನೂ ಇದರಲ್ಲಿ ಗುರುತಿಸುತ್ತಾರೆ. ಹಾಗೆಯೇ ಈ ಸಿದ್ಧಾಂತದ ಸುಲಕ್ಷಣಗಳನ್ನು ಕಾಣುವವರೂ ಇದ್ದಾರೆ. ಜನತೆಯ ಒಪ್ಪಿಗೆಯೇ ರಾಜ್ಯದ ನಿಜವಾದ ಹಾಗೂ ಸ್ಥಿರವಾದ ಅಸ್ತಿಭಾರವಾಗಿ ಅನೇಕ ರಾಜ್ಯಗಳ ಅಸ್ತಿತ್ವವನ್ನು ರೂಪಿಸಿದೆ; ಧಾರ್ಮಿಕ ಹಿಡಿತದಿಂದ ಪಾರುಮಾಡಿ ಈ ಸಿದ್ಧಾಂತ ಸ್ವಾತಂತ್ರ್ಯವನ್ನು ರಕ್ಷಿಸಿದೆ; ಇಷ್ಟೇ ಅಲ್ಲ, ಈ ಸಿದ್ಧಾಂತ ವಿಶ್ವಾಸವಷ್ಟೇ ಹೊರತು ಬಲೋದ್ಭಂಧನವಲ್ಲ ಹಾಗೂ ರಾಜ್ಯದ ಮೂಲವನ್ನೂ ಬಲಪಡಿಸಿದೆ. ರಾಜಕೀಯ ಸಮಾಜದ ಅಡಿಗಲ್ಲಿಗೆ, ಕೇವಲ ಶಕ್ತಿಯೊಂದೇ ಅಲ್ಲ ಸ್ವಭಾವ ಸಿದ್ಧವಾದ ಹಕ್ಕುಬಾಧ್ಯತೆಯೇ ಅಂದರೆ ಸಾಮಾಜಿಕ ನ್ಯಾಯವೇ ಆಸರೆಯೆಂಬುದನ್ನು ಈ ಸಿದ್ಧಾಂತ ತೋರಿಸಿಕೊಟ್ಟಿದೆ ಎಂದು ಕೆಲವರು ಪ್ರತಿಪಾದಿಸಿದ್ದಾರೆ. (ಎಮ್.ವಿ.ಕೆ.)