ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

6 ಬಸವೋತ್ತರ ಕಾಲೀನ ಶರಣರ ವಚನಗಳ ಐದು ಸಂಪುಟಗಳು ಮತ್ತು ಒಂದು ವಚನ ಪರಿಭಾಷಾಕೋಶ - ಹೀಗೆ ಹದಿನೈದು ಸಂಪುಟಗಳು ಬೆಳಕುಕಾಣುತ್ತಲಿವೆ. ಇವುಗಳಲ್ಲಿ ಮೊದಲಿನ ಐದು ಸಂಪುಟಗಳು (ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧರಾಮ, ಶಿವಶರಣೆಯರು) ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗಿದ್ದವು. ಆ ಬಳಿಕ ಲಭ್ಯವಾದ ನೂರಾರು ಹೊಸ ವಚನಗಳನ್ನು ಸೇರಿಸಿ, ಈ ಐದೂ ಸಂಪುಟಗಳಿಗೆ ಸಮಗ್ರರೂಪ ಕೊಟ್ಟಿದ್ದೇವೆ ಮತ್ತು ಪರಿಷ್ಕರಿಸಿದ್ದೇವೆ.

ಬಸವ ಸಮಕಾಲೀನ ಮಿಕ್ಕ ಶರಣರ ನಾಲ್ಕು ಸಂಪುಟಗಳ ಕೆಲಸ ಈವರೆಗೆ ಸಮರ್ಪಕವಾಗಿ ನಡೆದಿರಲಿಲ್ಲ. ಈ ಶರಣರ ಸಂಖ್ಯೆ, ಇವರ ವಚನಸಂಖ್ಯೆ ಅಸ್ಪಷ್ಟವಾಗಿಯೇ ಉಳಿದಿದ್ದಿತು. ವಚನಗಳೂ ಅಲ್ಲಿಷ್ಟು, ಇಲ್ಲಿಷ್ಟು ಪ್ರಕಟವಾಗಿದ್ದವು. ಒಂದಿಷ್ಟು ಆಪ್ರಕಟಿತ ಸ್ಥಿತಿಯಲ್ಲಿಯೇ ಉಳಿದುಬಿಟ್ಟಿದ್ದವು. ಇವೆಲ್ಲವುಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಈ ನಾಲ್ಕೂ ಸಂಪುಟಗಳಿಗೆ ಸಮಗ್ರ ರೂಪ ಕೊಟ್ಟಿದ್ದೇವೆ. ಒಟ್ಟಿನಲ್ಲಿ ಬಸವಯುಗದ ಈ ಎಲ್ಲ ಒಂಬತ್ತು ಸಂಪುಟಗಳಿಗೆ ಸುಮಾರು ಸಾವಿರದಷ್ಟು ಹೊಸ ವಚನಗಳನ್ನು ಸೇರಿಸಿದ್ದೇವೆ.

ಬಸವೋತ್ತರ ಕಾಲೀನ ಶರಣರ ಸಂಪುಟಗಳ ಕೆಲಸ ಇನ್ನೂ ಅಲಕ್ಷಿತವಾಗಿದ್ದಿತು. ಈವರೆಗೆ ತಿಳಿದುಬಂದಿದ್ದ ವಚನಕಾರರ ಹೊಸ ವಚನಗಳನ್ನು ಶೋಧಿಸುವುದರೊಂದಿಗೆ, ಅನೇಕ ಹೊಸ ವಚನಕಾರರನ್ನೂ ಬೆಳಕಿಗೆ ತಂದಿದ್ದೇವೆ. ಇದರಿಂದಾಗಿ ಬಸವೋತ್ತರಯುಗದ ಶರಣರನ್ನೂ ಅವರ ವಚನಗಳ ವ್ಯಾಪ್ತಿಯನ್ನೂ ಜನತೆಯ ಮುಂದಿಟ್ಟ ಪ್ರಥಮ ಕೀರ್ತಿ ಈ ಐದು ಸಂಪುಟಗಳಿಗೆ ಸಲ್ಲುತ್ತದೆ. ಹೀಗೆ ಬಸವಯುಗ, ಬಸವೋತ್ತರಯುಗಗಳ ವಚನಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ಕೊರತೆಗಳನ್ನು ತುಂಬಿಕೊಡುವ ಒಂದು ಪರಿಪೂರ್ಣ ಯೋಜನೆ ಇದಾಗಿದೆ. ಮೊದಲ ಬಾರಿಗೆ ೧೯ನೆಯ ಶತಮಾನದವರೆಗಿನ ಎಲ್ಲ ಶರಣರ ಎಲ್ಲ ವಚನಗಳನ್ನು ಒಂದೆಡೆ ಸಂಗ್ರಹಿಸಿ, ಒಂದು ಕ್ರಮಕ್ಕೆ ಅಳವಡಿಸಿ, ಸಂಪುಟ ಶ್ರೇಣಿಯಲ್ಲಿ ಹೊರತಂದ ದೊಡ್ಡಪ್ರಯತ್ನ ಇಲ್ಲಿದೆ.

ವಚನಸಾಹಿತ್ಯದ ಪರಿಷ್ಕರಣಕಾರ ತುಂಬ ಜಟಿಲವಾದುದು. ೧. ಎಲ್ಲ ಶರಣರ ಎಲ್ಲ ವಚನಗಳನ್ನು ಎಲ್ಲ ಪ್ರಾಚೀನ ಆಕರಗಳಿಂದ ಸಂಗ್ರಹಿಸುವುದು, ೨. ಪ್ರಕ್ಷಿಪ್ತವಾಗಿರ ಬಹುದಾದ ವಚನಕಾರರನ್ನು, ವಚನಗಳನ್ನು ಕೈಬಿಡುವುದು, ೩. ನಿಜವಚನಗಳ ಪಾಠವನ್ನು ಪರಿಷ್ಕರಿಸುವುದು - ಇದು ಈ ಯೋಜನೆಯ ಉದ್ದೇಶವಾಗಿದೆ. ಈ ಉದ್ದೇಶ ಸಾಧನೆಗಾಗಿ ಎಲ್ಲ ಪ್ರಾಚೀನ ಆಕರಗಳಿಂದ ಅಂದರೆ ಸುಮಾರು ೧೦೮ ಆಕರಗಳಿಂದ ಎಲ್ಲ ವಚನಗಳನ್ನು ಸಂಗ್ರಹಿಸಿ, ಪ್ರತಿಯೊಂದು ವಚನದ ಕೆಳಗೆ ಅದರ ಎಲ್ಲ ಆಕರಗಳನ್ನು ನಮೂದಿಸಿದ 'ವಚನ ಬ್ಯಾಂಕ'ನ್ನು ಅಸ್ತಿತ್ವಕ್ಕೆ ತರಲಾಯಿತು. ಒಂದು ವಚನಕ್ಕೆ ಇರುವ ವಿವಿಧ ಪಾಠಾಂತರ, ರೂಪಾಂತರಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು, ಮುದ್ರಿಕೆಯ ವ್ಯತ್ಯಾಸವನ್ನು ಗಮನಿಸಲು, ಒಬ್ಬ ವಚನಕಾರನ ಒಟ್ಟು ವಚನಗಳ ಸಂಖ್ಯೆಯನ್ನು ನಿರ್ಧರಿಸಲು, ಕೊನೆಯದಾಗಿ ವಚನದ ನಿಜಪಾಠವನ್ನು ನಿರ್ಣಯಿಸಲು ಈ ಬ್ಯಾಂಕ್ ತುಂಬ ನೆರವಾಯಿತು.