ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗೌರ್ಮೆಂಟ್ ಬ್ರಾಹ್ಮಣ

ಆ ಪುಡಿಗಾಸನ್ನು ಆಯ್ದು ಕೊಳ್ಳುತ್ತಿದ್ದರು. ಚಿಕ್ಕವರಾದ ನಾವು ಅವರ ನಿಯಮಗಳನ್ನು ಮುರಿದು, ನಮ್ಮ ಹಿರಿಯರಿಗಿಂತ ಮುಂದೆ ಹೋಗಿ ತೂರಿದ ಹಣ ನೆಲಕ್ಕೆ ಬೀಳುವುದಕ್ಕಿಂತ ಮುಂಚಿತವಾಗಿಯೇ ಹಿಡಿಯಲು ಪ್ರಯತ್ನಿಸಿ ಸೋಲುತ್ತಿದ್ದೆವು. ಕಾಸು ನೆಲಕ್ಕೆ ಬಿದ್ದಾಗ ಅವರು ದಾಟುವ ಮುನ್ನವೇ ಅವರ ಕಾಲಲ್ಲಿ ಹೋಗಿ ಆ ನಾಣ್ಯವನ್ನು ಎತ್ತಿಕೊಳ್ಳುತ್ತಿದ್ದೆವು.

ಸತ್ತವರ ಮನೆಗೆ ಸಂಬಂಧಪಟ್ಟವರಲ್ಲವೇ ಅವರು? ಅವರ ಮುಖ ತುಂಬ ಗಂಭೀರವಾಗಿರುತ್ತಿತ್ತು. ಅವರಿಗೆ ನಮ್ಮನ್ನು ಬೆದರಿಸಲು ಸ್ವಾತಂತ್ರ್ಯವಿರಲಿಲ್ಲವೆಂದು ತೋರುತ್ತದೆ. ಹಾಗಾಗಿ ನಾವೇ ಎಷ್ಟೋ ಬಾರಿ ಅವರ ಗಂಟು ಮುಖಕ್ಕೆ ಹೆದರಿ ಹಿಂದಕ್ಕೆ ಸರಿಯುತ್ತಿದ್ದೆವು. ಸಿಗದ ನಾಣ್ಯಕ್ಕೆ ಕೈ ಮುಗುಚುತ್ತಿದ್ದೆವು. ಅವರ ಕೆಂಗಣ್ಣು ಕಂಡಾಗ ದೇಶಾವರಿ ನಗೆ ಬೀರಿ, ಲಜ್ಜೆ ತುಂಬಿ ನೀರಾಗುತ್ತಿದ್ದೆವು. ಅವರ ಕಾಲಡಿಯಲ್ಲಿ ಹೋಗಿ ಅವರಿಗೆ ತೊಡಕಾಲು ಬಿದ್ದಾಗ ಅವರು ನೆಲಕ್ಕೆ ಬೀಳುವ ಸಂದರ್ಭ. ಆಗ ಅವರ ಗಾಂಭೀರ್ಯ ಅಲ್ಲಿಂದ ಓಡಿ ಹೋಗುತ್ತಿತ್ತು. ಕೆಲ ಸಲ ನಮ್ಮನ್ನು ಕಾಯುವುದಕ್ಕಾಗಿಯೇ ಕೋಲು ಹಿಡಿದ ಆಳುಗಳನ್ನು ನಿಲ್ಲಿಸುತ್ತಿದ್ದರು. ನಮಗೆ ಅದು ಸ್ಪರ್ಧೆಯ ಕ್ರೀಡಾಂಗಣವಾಗಿತ್ತು. ಆ ನಾಣ್ಯಕ್ಕಾಗಿ ನಮ್ಮ ನಮ್ಮಲ್ಲಿಯೇ ಕಚ್ಚಾಟಗಳಾಗುತ್ತಿದ್ದವು. ಈ ಕಚ್ಚಾಟ ಮೂಗು, ಕಣ್ಣು, ಬಾಯಿ, ಹಲ್ಲುಗಳಲ್ಲಿಯೇ ಸೀಮಿತವಾಗಿರುತ್ತಿತ್ತು. ಕೆಲವು ಬಾರಿ ಹೋರಿ ಕಾಲಿನಿಂದ ನೆಲ ಕೆದರಿದ ಹಾಗೆ ಹೆಣದ ಸವಾರಿಯೊಂದಿಗೆ ಮುಂದುವರೆಯುತ್ತ ಸಂಗ್ರಹವಾಗುತ್ತ ಹೋಗುತ್ತಿತ್ತು. ಸವಾರಿದಾರರೆಲ್ಲ ಮುಂದಕ್ಕೆ ಹೋದಾಗ ಹಿಂದೆ ಉಳಿದ ನಾವು ನಮ್ಮಲ್ಲಿಯೇ ಜಗಳ ಕುಸ್ತಿಗೆ ನಿಲ್ಲುತ್ತಿದ್ದೇವು. ನಮ್ಮ ಹಿಂದಿನಿಂದ ಹಣ ಆಯ್ದುಕೊಂಡು ಬರುವ ನಮ್ಮ ಹಿರಿಯರು ನಮ್ಮನ್ನು ದೂರೀಕರಿಸುತ್ತಿದ್ದರು. ಆಯ್ದ ಹಣದಲ್ಲಿ ಕೆಲವಷ್ಟು ಕದ್ದು ಚೊಣ್ಣದ ಕಳ್ಳ ಜೇಬಿನಲ್ಲಿ ಎಂದರೆ ಮಡಿಸಿ ಹೊಲಿದ ಚೊಣ್ಣದ ನಡಪಟ್ಟಿ ಅಥವಾ ಕೆಳಗಿನ ಭಾಗದಲ್ಲಿ ಮಡಿಸಿ ಹೊಲಿದ ಅರಿವೆಗೆ ನಾಣ್ಯ ಹೋಗುವಷ್ಟೇ ಚಿಕ್ಕದೊಂದು ರಂಧ್ರ ಮಾಡಿ ಅದರಲ್ಲಿ ತುರುಕಿಬಿಡುತ್ತಿದ್ದೆವು ಮತ್ತು ಸಿಕ್ಕಿದ್ದು ಇಷ್ಟೇ ಎಂದು ಸುಳ್ಳು ಹೇಳಿ ಅಜ್ಜಿಯ ಎದುರು ಖಾಲಿ ಕೈ ಅಲ್ಲಾಡಿಸುತ್ತಿದ್ದೆವು. ಕದ್ದ ಹಣದಿಂದ ಸಂತೆಯಲ್ಲಿ ಬಾಯಿ ಚಪಲವನ್ನು ತೀರಿಸಿಕೊಳ್ಳುತ್ತಿದ್ದವು.

ಹೆಣದ ಮೇಲೆ ಅವರು ಹಾರಿಸುವ ಪುಡಿಕಾಸೆಂದರೆ, ಐದು ಪೈಸೆಯ ನಾಣ್ಯವೇ ಕೊನೆಯದ್ದಾಗಿರುತ್ತಿತ್ತು, ತೂತಿನ ದುಡ್ಡು, ಒಂದು ಪೈಸೆ, ಎರಡು ಪೈಸೆ ಹೆಚ್ಚಿರುತ್ತಿದ್ದವು. ಹೆಚ್ಚು ಶ್ರೀಮಂತರಿದ್ದರೆ ಹತ್ತು ಪೈಸೆಯ ನಾಣ್ಯ ಕೊನೆಯದಾಗಿರುತ್ತಿತ್ತು. ನಾಣ್ಯದ ಮೌಲ್ಯ ಹೆಚ್ಚಿದ ಹಾಗೆ ಅವುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದರು. ಹೆಚ್ಚಿನ ಮೌಲ್ಯದ ನಾಣ್ಯ ಸಿಕ್ಕಾಗ ನಮಗಾಗುವ ಸಂತೋಷಕ್ಕೆ ಎಣೆಯೇ ಇರುತ್ತಿರಲಿಲ್ಲ. ಅದಕ್ಕಾಗಿಯೇ ಹೆಚ್ಚಿನ ಜಗಳಗಳೂ ಕೂಡ.