ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xiv


'ಸಂಶೋಧನೆಯೂ ಸೃಜನಾತ್ಮಕವಾದುದು' ಎಂಬ ವಾದ ಇಂಥವರಿಗೆ ಅರಗಿಸಿಕೊಳ್ಳಲಾಗದ ಮಾತು. ಇಂಥ ಸಂದರ್ಭದಲ್ಲಿ ಆತ್ಮಕಥೆ ಸೃಜನಾತ್ಮಕವಾದುದು' 'ಅದು ಸಾಹಿತ್ಯ ಕೃತಿ' ಎಂದು ವಾದಿಸುವುದಕ್ಕಾಗಿ ನಾನು ಇದನ್ನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಆದರೆ ನಾನಂದುಕೊಳ್ಳುವುದು. ಸಾಹಿತ್ಯದ ಕಾರ್ಯಗಳನ್ನು ನಿರ್ವಹಿಸುವ ಕೃತಿಗಳೆಲ್ಲ ಸಾಹಿತ್ಯ ಕೃತಿಗಳೇ ಆಗಿರುತ್ತವೆ ಎನ್ನುವುದನ್ನು ಮನಗಾಣಬೇಕಿದೆ. 'ಸಾಹಿತ್ಯ ಎಂದರೆ ಯಾವುದು ಎನ್ನುವುದನ್ನು ವ್ಯಕ್ತಿಗತ ಆಲೋಚನಾ ಕ್ರಮ ಮೊದಲು ವ್ಯಾಖ್ಯಾನ ಮಾಡುತ್ತದೆ. ಆನಂತರ ಸಾಹಿತ್ಯ ಕೃತಿ ಯಾವುದು? ಅಥವಾ ಇದು ಸಾಹಿತ್ಯ ಕೃತಿ ಹೌದು-ಅಲ್ಲ ಎನ್ನುವುದನ್ನು ನಿರ್ಧರಿಸುತ್ತದೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಹಲವು ಆಲೋಚನ ಕ್ರಮಗಳಿವೆ. ನಾವಿದ್ದಂತೆ ನಮ್ಮ ಆಲೋಚನಾ ಕ್ರಮ. ನಮ್ಮ ಸಾಹಿತ್ಯ, ನಮ್ಮ ಸಾಹಿತ್ಯ ಕೃತಿ ಎಲ್ಲವೂ. ಹೀಗಾಗಿ ಇಲ್ಲಿ ಸಮಷ್ಟ್ರೀಯ ಪರಿಕಲ್ಪನೆಯನ್ನು ತಿದ್ದುವ ತೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ತಿನ್ನುವುದಕ್ಕೆ ಹೊರಟರೆ ಅಲ್ಲಿ ನಮ್ಮ ಬುದ್ದಿ ಮತ್ತೆಯನ್ನು ಪ್ರದರ್ಶನಕ್ಕಿಟ್ಟಂತಾಗುತ್ತದೆ.

ಪ್ರಸ್ತುತ ಕೃತಿ ಹೊರತರುವ ಮುನ್ನ ಓದುಗರಲ್ಲಿ ಎಂಥ ಮನೋಭಾವ ರೂಪಗೊಳ್ಳಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಕೃತಿಗೆ ರೂಪವನ್ನು ಕೊಡಲಾಗಿತ್ತೋ ಪರಿಣಾಮದಲ್ಲಿ ಅದಕ್ಕೂ ಮಿಗಿಲಾಗಿ ಅದು ಪ್ರಭಾವ ಬೀರಿದೆ ಎನ್ನುವುದನ್ನು ಅದಕ್ಕೆ ಬಂದ ಪ್ರತಿಕ್ರಿಯೆಗಳೇ ದಾಖಲಿಸುತ್ತವೆ. (ಓದುಗರ ಅವಗಾಹನೆಗಾಗಿ ಕೆಲವು ಪತ್ರ-ವಿಮರ್ಶೆಗಳ ಆಯ್ಕೆ ಭಾಗಗಳನ್ನು ಕೊನೆಗೆ ಕೊಡಲಾಗಿದೆ.) ಒಂದು ಕೃತಿಗೆ ಇದಕ್ಕಿಂತಲೂ ಬೃಹತ್ತಾದ ಮಹತ್ವಾಕಾಂಕ್ಷೆ ಇರಲಾರದ್ದೆಂದು ಭಾವಿಸಿದ್ದೇನೆ.

ಈ ಕೃತಿಯ ಕೆಲ ಭಾಗಗಳು ಬೆಂಗಾಳಿ, ಓರಿಯಾ, ಮರಾಠಿ ಭಾಷೆಗಳಿಗೆ ಅನುವಾದಗೊಂಡರೆ ತಮಿಳಿನಲ್ಲಿ ಈ ಕೃತಿ ಅನುವಾದಗೊಂಡು ಧಾರವಾಹಿಯಾಗಿ ಪ್ರಕಟಗೊಂಡದ್ದಲ್ಲದೆ ಕೃತಿಯಾಗಿ ಹೊರಬಂದಿದೆ. ಇಂಗ್ಲೀಷ್‌ನಲ್ಲಿಯೂ ಇದರ ಕೆಲ ಭಾಗಗಳು ಅನುವಾದಗೊಂಡು ಪ್ರಕಟವಾಗಿದ್ದು ಈಗ ಪೂರ್ಣ ಕೃತಿಯೇ ಇಂಗ್ಲಿಷ್‌ನಲ್ಲಿ ಬರುತ್ತಿರುವುದು ಕೃತಿಯ ಅಂತರ್‌ ಸತ್ಯವನ್ನು ಹೇಳುತ್ತದೆ ಎಂದು ಭಾವಿಸಿದ್ದೇನೆ.

ಈ ಕೃತಿಯನ್ನು ಓದಿ ನಿಷ್ಟುರವಾದ ಅಭಿಪ್ರಾಯಗಳನ್ನು ಕೊಟ್ಟ ಹಾಗೂ ಅದರ ಸತ್ಯದ ಕುರಿತು ವಿಮರ್ಶಿಸಿದ ಮತ್ತು ಈ ಕೃತಿಯ ಅಂಶಿಕ ಹಾಗೂ ಪೂರ್ಣ ಅನುವಾದದೊಂದಿಗೆ ಭಿನ್ನ ಭಾಷೆಗಳಲ್ಲಿ ಪ್ರಕಟಿಸಲು ಸಹಕರಿಸಿದ ಎಲ್ಲ ಸ್ನೇಹಿತರಿಗೂ, ಹಿತೈಷಿಗಳಿಗೂ ತುಂಬು ಮನದಿಂದ ಸ್ಮರಿಸುವೆ.

- ಅರವಿಂದ ಮಾಲಗತ್ತಿ