ಉದ್ಯೋಗಪರ್ವ: ೦೨. ಎರಡನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಉದ್ಯೋಗಪರ್ವ: ಎರಡನೆಯ ಸಂಧಿ[ಸಂಪಾದಿಸಿ]

ಸೂ: ಬಂದು ಕಂಡನು ಸಂಜಯನು ಯಮ

ನಂದನನಲ್ಲಿಂದ ಮರಳಿದು

ಬಂದು ಕೌರವ ನೃಪತಿಗರುಹಿದನವರ ಮಾತುಗಳ [೧][೨]

ಎಲೆ ಪರೀಕ್ಷಿತ ತನಯ ಕೇಳು

ಮ್ಮುಳಿಸಿದನು ಯಮಸೂನು ಮುರರಿಪು

ಫಲುಗುಣಗೆ ಮೈಗೊಡುವನೋ ಕೌರವರಿಗೊಳಗಹನೊ

ತಿಳಿಯದಿರಲೆನುತಿರಲು ಬಲಗ

ಣ್ನಲುಗಿತದಿರೊಳಲು ಕೈಯ್ಯ ಗುಡಿಯಲಿ

ಸುಳಿದನೊಬ್ಬನು ಬಹಳ ಮಾರ್ಗಶ್ರಮದ ಭಾರದಲಿ ೧


ಇದಿರುಗೊಳ್ಳೇರರಸ ಕಟ್ಟಿಸು

ಮುದದಿ ಗುಡಿಯನು ರಣದೊಳಹಿತರ

ಸದದೆ ಹೋಗಿನ್ನೇನು ಸರಿಯೇ ಸುರರು ಗಿರರುಗಳು

ಪದವನರಿಸಿದರಾಳಿಗೊಂಡನು

ಸದಮಲ ಶೃತಿ ತತಿಯನೆಂಬ

ಗ್ಗದ ಮಹಾ ಪರದೈವ ಬಿಜಯಂಗೈವುತಿದೆಯೆಂದ ೨


ಕಥೆಯೆ ನಿನ್ನೊಡಹುಟ್ಟಿದನ ಸಾ

ರಥಿತನವ ಕೈಕೊಂಡನಿನ್ನೀ

ಪೃಥಿವಿ ನಿನ್ನಯ ರಾಣಿವಾಸವು ಚಿಂತೆ ಬೇಡಿದಕೆ

ವ್ಯತಿಥವಾಯಿತು ವೈರಿಬಲ ಸಂ

ಪ್ರತಿಥ ಸಾಹಸನಾದೆ ನೀನೆನೆ

ತಿಥಿಲ ಸಂಶನಂಗಚಿತ್ತವನಿತ್ತನಾತಂಗೆ ೩


ಉಕ್ಕಿ ವಿಸಟಂಬರಿವ ಹರುಷದ

ತೆಕ್ಕೆಯಲಿ ಕೈಗೂಡುವ ನೃಪತಿಗ

ಳಿಕ್ಕಲಿಸೆ ಹೊರವಂಟನರಸನು ಸಕಲದಳ ಸಹಿತ

ಮಿಜ್ಜು ಬರೆ ಬರೆ ಕೃಷ್ಣನನು ಕ್ಂ

ಡೊಕ್ಕನೊಡಲನು ಚರಣದಲಿ

ಕಕ್ಕಜನಿದೇನೆನುತ ನೆಗಹಿದನೆಂದು ಧರ್ಮಜನ ೪


ಪರಕೆ ಪರತರ ವಸ್ತುವನು ಗೋ

ಚರಿಸಿದೆವಲೈ ಮುನಿಜನಂಗಳ

ವರಸಮಾಧಿಗೆ ಸಮಯವಿಲ್ಲದ ದೇವ ನಮಗೊಲಿದೈ

ಕರುಣಿ ಬಿಜಯಂಗೈದೆಯೆನೆಮುರ

ಹರನು ನಗುತಿಂತೆಂದ ನಾನೀ

ನರನ ಸಾರಥಿಯಲ್ಲದೆಲ್ಲಿಯ ವಸ್ತು ತಾನೆಂದ ೫


ಬಯಲಿಗೆಮ್ಮನೆ ನಾಚಿಸದೆ ಪಾ

ಳೆಯಕೆ ನಡೆಯೆಂದಸುರರಿಪು ಸೇ

ನೆಯನು ಕೈವೀಸಿದನು ಬಂದನು ರಾಜಮಂದಿರಕೆ

ನಿಯತವಿತ್ತಲು ಕೇಳು ಜನಮೇ

ಜಯ ಮಹೀಪತಿ ಧರ್ಮಸುತನೋ

ಲೆಯ ಹದವನರಿದಂತೆ ಶಲ್ಯ ನೃಪ ಹೊರವಂಟ ೬


ಮೇಳವಿಸಿ ಹೊರವಂಟನಗಣಿತ

ದಾಳು ಕುದುರೆಯ ಕೂಡಿಬರುತಿರೆ

ಕೇಳಿದನು ಕುರುರಾಯ ಮಾದ್ರಾಧಿಪನ ಬರವ

ಆಳೊಳಗ್ಗಳವಟ್ಟ ಶಲ್ಯ ನೃ

ಪಾಲಕನ ತಿರುಹಿದೊಡೆ ಗೆಲುವುದು

ಕಾಳಗವು ನಮಗೆಂದು ನಿಶ್ಚೈಸಿದನು ಮಂತ್ರದಲಿ ೭


ಎಂದಖಿಳ ವಸ್ತುಗಳ ಜೋಡಿಸಿ

ಮುಂದೆ ಪಾಳೆಯ ಬಿಡುವ ಟಾವಿನೊ

ಳಿಂದ ಮಿಗೆ ಮಾಡಿದನು ಗುಡಿ ಗೂಡಾರ ಚೌಕಿಗೆಯ

ಒಂದು ಯೋಜನದಗಲದಲಿ ಹಯ

ವೃಂದ ಗಜಶಾಲೆಗಳ ಪರುಠವ

ದಿಂದ ರಚಿಸಿದ ಕೂಳು ಬಾಣವನಖ್ಹಿಳ ಮೋಹರಕೆ ೮


ಬಂದು ಬಿಡುವನ್ನೆನಿಬರ ಮುನ್ನಿನ

ಮಂದಿರಕೆ ಹೊಗುವಂತೆ ಶಲ್ಯನ

ಮಂದಿ ಸಂತೋಷದ ಸಮುದ್ರದಿ ಮೂಡಿ ಮುಳಗಾಡಿ

ಮುಂದೆ ನಡೆಯಲು ಮತ್ತೆ ಮುನ್ನಿನ

ಚಂದದಿಂಮನೆಮನೆಗಳನು ಸುಖ

ದಿಂದಿರಲು ರಚಿಸಿದನು ಕುರುಪತಿ ಪಯಣ ಪಯಣದಲಿ ೯


ಆರು ನಯದಲಿ ನಿಮ್ಮಖ್ಹಿಳ ದಳ

ಭಾರವನು ಸಲೆ ತಡೆದವನು ಕುರು

ವೀರನೋ ಯಮನಂದನನೋ ಮಿಗಿಲಾಗಿ ಮೆಚ್ಚಿದನು

ಆರು ಮಾಡಲಿಯವರು ಬಂದರೆ

ಹಾರಲೇಕೆನ್ನೋಡಲ ತೆರುವೆನು

ವೀರ ಮೈದೋರಲಿಯೆನುತ ಹೊಯಿಸಿದನು ಡಂಗುರವ ೧೦


ನಗುತ ಕೌರವರಾಯನಿವರೋ

ಲಗಕೆ ಬರಲಿದಿರೆದ್ದು ಮುದದಲಿ

ತೆಗೆದು ಬಿಗಿಯಪ್ಪಿದನು ಕುಶಲವನೈಯ್ದೆ ಬೆಸಗೊಂಡ

ಮಗನೆ ನೀನೀ ರಚಿಸಿದಾತನು

ಬಗೆ ದಣಿಯೆ ಬೇಡುವುದು ತಾ ಹಂ

ಗಿಗನು ನಿನಗೆನೆ ಆವ ಬಿನ್ನಹ ಮರಳಿ ನೀವೆಂದ ೧೧


ಎನಗೆ ಬೆಂಬಲವಾಗಿ ಕುಂತೀ

ತನಯರನು ಬಿಡಿ ಮರಳಿ ನೀವ್ ಹ

ಸ್ತಿನಪುರಿಗೆ ತನಗಿತ್ತ ವರವೆನೇ ಶಲ್ಯ ಮನವಳುಕಿ

ತನಯ ಕೈಕೊಂಡೆನು ಯುಧಿಷ್ಟಿರ

ಜನಪನಳಿಯನು ನೀನು ಲೋಗನೆ

ಯೆನಗೆ ನೀವಿತ್ತಂಡ ಸರಿ ನಿಮ್ಮತ್ತ ಬಹೆನೆಂದ ೧೨


ಅಗಲಿದೆನು ಹಲಕಾಲದೈವರ

ಮೊಗವನೀಕ್ಷಿಸಿ ಮರಳುವೆನು ಬಂ

ಧುಗಳ ದರುಶನ ಫಲವಾ ಸಂಸಾರ ತರುವಿಂಗೆ

ಮಗನೆ ಸೇನೆಯ ಕೊಂಡು ವಾರಣ

ನಗರಿಗೈವುದೆಂದು ಭೂಪನ

ಮಗುಳಿಚಿದನಾ ಶಲ್ಯ ಬಂದನು ಪಾಂಡವರ ಹೊರೆಗೆ ೧೩


ಇದಿರುಗೊಂಡರು ಕಾಣಿಕೆಯನಿ

ಕ್ಕಿದರು ತೆಗೆದಪ್ಪಿದರು ಹಲ ಕಾ

ಲದಲಿ ಹೂಳಿದ ಹರುಷವನು ಕೈಗೊಳಗು ಮಾಡಿದರು

ಮುದದಲ್ಲೆಲ್ಲವರ ಕುಶಲವನು ಕೇ

ಳಿದನು ದುರಿಯೋಧನನಿಗೆ ಸಿಲುಕಿದ

ಹದನನೆಲ್ಲವ ಹೇಳಿದನು ನಿರ್ವಿಣ್ಣ ಮನನಾಗಿ ೧೪


ಆದರೇನಲೆ ಕಂದ ತಪ್ಪದು

ಮೇದಿನಿಯ ಸಿರಿ ನಿನಗೆ ಸತ್ಯವ

ಕಾದು ಹದಿಮೂರಬುದ ನವೆದಿರಿ ಮುಂದೆ ಲೇಸಹುದು

ಕಾದು ವೃತ್ರಾಸುರನ ಮುರಿದಪ

ವಾದದಲಿ ಸಿರಿ ಹೋಗಿ ದು:ಖಿತನಾದ

ನಿಂದ್ರನು ಮತ್ತೆ ಬದುಕಿದ ಶಚಿಯ ದೆಸೆಯಿಂದ ೧೫


ನಹುಷನನು ಕಡೆನೂಕಿ ಋಶಿಗಳ

ಮಹಿಮೆಯಲಿ ಸಾರಾಜ್ಯದಲಿ ಸ

ನ್ನಿಹಿತನಾದನು ಮತ್ತೆ ದಿವಿಜರ ರಾಯನೊಳಗಾಗಿ

ಅಹಿತರವಗಡಿಸಿದೊಡೆ ಕುಸಿದನು

ಬಹಳ ಲೇಸನು ಬಳಿಕ ಕಂಡನು

ಮಹಿ ನಿನಗೆ ಬೆಸಕೈದು ಬದುಕುವಿರೆಂದನಾ ಶಲ್ಯ ೧೬


ಆದೊಡಾ ಕರ್ಣಂಗೆ ಸಾರಥಿ

ಯಾದಿರಾದೊಡೆ ಸಮರ ಮುಖದಲಿ

ವಾದ ತೇಜೋವಧೆಯ ಮಾಡುವುದವನನವಗಡಿಸಿ

ಕಾದಿ ಕೊಡುವುದು ನಾವು ಗೆಲುವವೊ

ಲಾದರಿಸುವುದು ನಮ್ಮನೆಂದಾ

ಮೇದಿನೀಪತಿ ಶಲ್ಯನನು ಸತ್ಕರಿಸಿ ಕಳುಹಿದನು ೧೭


ಬೀಳುಗೊಂಡನು ಶಲ್ಯನಿತ್ತಲು

ಹೇಳುವರೆ ಮತಿ ಮುರಿಯೆ ನೋಟಕ

ರಾಲಿ ಝೊಮ್ಮಿಡೆ ಕಾದುವರೆ ಮನೆ ಮೂರು ಕವಲಾಗೆ

ಹಾಳಿಗೆಯ ಹೊಗರಲಗಿಸುರಿಯ ಚಲಿಗ್

ಡಾಳ ನಭದಲಿ ಝಗಝಗಿಸೆ ಹೇ

ರಾಳದೊಡ್ಡವಣಿಯಲಿ ಬರುತಿರ್ದುದಾ ನೃಪವ್ರಾತ ೧೮


ದೆಸೆಗಳೆಂಟರ ಮೂಲೆ ಬಿರಿಯಲು

ಪಸರಿಸಿತುಹಳೆ ಬೊಮ್ಮಗಹುದೇ

ಹೊಸ ವಿಧಾತ್ರನ ಸೃಷ್ಟಿಯದು ಹೆಸರೇನು ಹೊಗಳುವರೆ

ಕುಸಿಯನೇ ಕೂರುಮನು ಭಾರಕೆ

ಸಸಿಯನೇ ನಾಗೇಂದ್ರನಾವೆಗ

ಳುಸುರು ಹದುಳವೆ ನೋಡೆನಲು ಬಂದುದು ನೃಪವ್ರಾಹ ೧೯


ಚೋಳ ಪಾಂಡ್ಯರು ಕೇರಳರು ಶಿ

ಶುಪಾಲ ನಂದನ ದೃಷ್ಟಕೇತು ಕ

ರಾಳ ಮಾಗಧ ಚೀನ ಭೋರ ಕರ್ಪರಾದಿಗಳು

ಮೇಲೆ ಮೇಲೈತಂದು ಭೀಮಂ

ಘಾಳು ತೋರಿದರಿತ್ತ ಕುರು ಭೂ

ಪಾಲಕನ ಕೂಡಿದರು ಭಗದತ್ತಾದಿ ಭೂಭುಜರು ೨೦


ದ್ರುಪದ ರಾಜ ಪುರೋಹಿತನು ಕುರು

ನೃಪನನಿತ್ತಲು ಬಂದು ಕಂಡನು

ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ

ಕೃಪಣತನದಲಿ ಕೌರವನು ಗುರು

ಕೃಪನ ಭೀಷ್ಮನ ಮತವನೊಲ್ಲದೆ

ಚಪಳ ಕರ್ಣನ ಕೂಡಿ ನಿಶ್ಚೈಸಿದನ ಕಾಳಗವ ೨೧


ನೆನೆದ ಮತವನು ತನ್ನ ತಂದೆಯ

ಮನದ ಮಚ್ಚದೊಳೊರೆದು ಕರ್ಣನ

ನೆನಹಿನಲಿ ಪುಟವಿಟ್ಟು ಶಕುನಿಯ ನೀತಿಯಲಿ ನಿಗುಚಿ

ಅನುಜ ಮತದಲಿ ವಿಸ್ತರಿಸಿ ಮೈ

ದುನನ ನುಡಿಯಲಿ ಬಣ್ಣವಿಟ್ಟನು

ಜನಪನಪಕೀರ್ತ್ಯಂಗನೆಗೆ ತೊಡಿಸಿದನು ಭೂಷಣವ ೨೨


ಹರುಷದಲಿ ಸಂಜಯನಾಗಳೆ

ಕರಿಸಿ ಕುರುಪೈ ಬುದ್ಧಿಗಲಿಸಿದ

ನರಿನೃಪರ ಪಾಳಯಕೆ ಹೋಹುದು ನುಡಿವುದುರವಣಿಸಿ

ಧರೆಯ ಬೇಡಿಸಿ ಕಳುಹಿದರಿ ಸಂ

ಗರದೊಳಸಿ ಧಾರೆಯಲಿ ಕೊಡುವೆವು

ಬರಿದೆ ಕೊಟ್ಟೊಡಧರ್ಮವೆಂಬುದು ಧರ್ಮಪುತ್ರಂಗೆ ೨೩


ಬೀಳುಕೊಂಡನು ಮಮ್ತ್ರಿ ಪಯಣದ

ಮೇಲೆ ಪಯಣವನೆಯ್ದಿ ಪಾಂಡು ನೃ

ಪಾಲಕರ ಪಾಳೆಯಕೆ ಬಂದನು ರಾಯಗರುಇಸಲು

ಕೇಳಿ ಬೀಡಾರವನು ಬೀಯವ

ಹೇಳಿಸಿದನಾ ಮರುದಿವಸದೊ

ಡ್ಡೋಲಗವ ರಚಿಸಿದನು ಕುಂತೀಸುತನು ಠೀವಿಯಲಿ ೨೪


ಹರಿ ವಿರಾಟ ಕೈಕೆಯ

ರಿರವು ಬಲವಂಕದಲಿ ಆಮದ

ಲಿರೆ ವೃಕೋದರ ಫಲುಗುಣಾದಿಗಳಖಿಳ ಮಂತ್ರಿಗಳು

ತರುಣಿಯರು ಪರಿಮಳದ ಜಂಗಮ

ಭರಣಿಯರು ಮನುಮಾಥ ವಿರಿಂಚನ

ತರುಣಿಯರು ಕುಳ್ಳಿರ್ದರಸನ ಹಿಂದೆ ಮೋಹರಿಸಿ ೨೫


ಕರಣಿಕರು ಮಾಂತ್ರಿಕರು ವೈದ್ಯರು

ಸರಸ ಕವಿಗಳು ತಾರ್ಕಿಕರು ವರ

ಭರತ ನಿಪುಣರು ಗಾಯಕರು ಪಾಠಕರು ವಾಗ್ಮಿಗಳು

ಕರಿತುರಗ ಶಿಕ್ಷಕರು ಲಕ್ಷಣ

ಪರಿಣತರು ಕೋವಿದರು ಸಾವಂ

ತರರು ಪರಿಹಾಸಕರು ವೈತಾಳಿಕರು ರಂಜಿಸಿತು ೨೬


ಮಾವುತರು ಚಿತ್ರಕರು ಮಲ್ಲರು

ರಾವುತರು ಶಿಲ್ಪಿಗರು ಮಾಯಾ

ಕೋವಿದರು ಕರ್ಣಾಂಘ್ರಿವಿಕಳರು ಮೂಕ ವಾಮನರು

ದ್ರಾವಕರು ಜೂಜಾಳಗಳು ವರ

ದಾವಣಿಯರು ವಿದೇಶಿಗಳು ಮೃಗ

ಜೀವಿಗಳು ಶಾಕುನಿಕರೆಸೆದರು ರಾಜಸಭೆಯೊಳಗೆ ೨೭


ಸಾಲಮಕುಟದ ರಶ್ಮಿಯ

ದಾಳಗೊಂಡುದು ತಮವನಿನ್ನಾಲ

ಮೇಲುಪೋಗಿನ ಕಿತ್ತ್ತ ಖದ್ಗಕೆ ಪ್ರಭೆಯ ಹಂಗೇಕೆ

ಮೇಲೆ ಕೈದೀವಿಗೆಗಳಧಿಕ

ಜ್ವಾಲೆಯದು ಪುನರುಕ್ತವೆನೆ ಭೂ

ಪಾಲನೋಲಗವೆಸೆದುದಿಂದ್ರನ ಸಭೆಗೆ ವೆಗ್ಗಳಿಸಿ ೨೮


ಕಡಕಡೆಗೆ ಫಡ ಮಾಣು ಮಾಣೆಂ

ದುಲಿಯೆ ಕಂಚುಕಿ ನಿಕರವಂಗೈ

ತಳದ ಬಾಯಲಿ ರಾಯರಿರ್ದರು ಮಣಿದ ಮಕುಟದಲಿ

ನಳಿನನಾಥನು ನಗುತ ಪರ ಮಂ

ಡಲದ ಶಿಷ್ಟನು ಬರಲಿಯೆನೆ ಬಾ

ಗಿಲಲಿ ಕೈದುವ ಕೊಂಡೊ ಹೊಗಿಸಿದರಂದು ಸಂಜಯನ ೨೯


ಬಂದು ಕಾಣಿಕೆಗೊಟ್ಟು ಹರುಷದ

ಲಂದು ಮೈಯಿಕ್ಕಿದನು ಭಯದಲಿ

ನಿಂದು ನೋಡಿದನೆಡಬಲದ ಮಹಾಮಹೀಶ್ವರರ

ಸಂದ ಯಮನೋ ನಿರುತಿಯೋ ಪೌ

ರಂದರನೋ ಪಾವಕನೊ ವರುಣನೊ

ಮಂದಿಯಿದು ಮಾನಸಗೆ ಮಾಮಾಯೆನುತ ಬೆರಗಾದ ೩೦


ಸುಳಿದ್ದಲೆಯ ಕೆಮ್ಮೀಸೆಗಲ ಮಿಗೆ

ಬೆಳೆದ ಮುಡುಹುಗಳೊಡ್ಡಿದುರದು

ಚ್ಚಳಿತ ರೋಮದ ನೊಸಲ ಡೋರಿಯ ತಲೆಯ ಕಲಿಮುಖದ

ಬಲಿದ ಹುಬ್ಬಿನ ತೋರ ತೋಳಿನ

ಹೊಳೆವಡಾಯುಧ ಮೊಗದ ಹೊಗರಿನ

ಕಲಿಮನದ ಕದನ ಪ್ರಚಂಡರ ಕಂಡು ಬೆರಗಾದ ೩೧


ಹಳುವದಲಿ ಹನ್ನೆರಡು ವರುಷವು

ತೊಳಲಿದರುಸಿರಿ ಹೋಗಿ ನಿಮಿಷಕೆ

ನೆಲದ ರಾಯರು ನೆರೆದು ಜೀಯೆನುತಿದೆ ಮಹಾದೇವ

ನಳಿನನಾಭನ ಕರುಣದಳತೆಗ

ನಿಲುಕದಿಹುದೇನುಂಟು ಮುರರಿಪು

ಮುನಿದೊಡಾವನ ಮುರಿಯನೆಂದನು ತನ್ನ ಮನದೊಳಗೆ ೩೨


ಇಳುಹಿದನು ಮಹಿಯಲಿ ಮಹೀಪತಿ

ಕಳುಹಿದುಡುಗೊರೆಗಳನು ಭೂಪತಿ

ತಿಲಕ ಧರ್ಮಜನೊಪ್ಪ್ಪುಗೊಂಡನು ನೃಪನ ಪಾವುಡವ

ಒಲವು ಬೊಪ್ಪನಲುಂಟಲಾ ಮ

ಕ್ಕಳನು ಮರೆಯನು ಲೇಸು ಸಂಜಯ

ತಿಳುಹು ತಾತನ ಕುಶಲವನು ಗಾಂಧಾರಿ ದೇವಿಯರ ೩೩


ಗುರು ಪಿತಾಮಹ ಗೌತಮರ ಸ

ಚ್ಚರಣಕಮಲಂಗಳಿಗೆ ಕುಶಲವೆ

ಗುರುಸುತನು ಸುಕ್ಷೇಮಿಯೇ ಕುರುರಾಯನಿರವೆಂತು

ಕುರುಪತಿಯ ಸೋದರರು ಮಕ್ಕಳು

ಸರಸಿಜಾನನೆ ಭಾನುಮತಿ ಮಿ

ಕ್ಕರಸಿಯರು ಕರ್ಣಾದಿಗಳು ನಿರ್ವೃತರೆ ಹೇಳೆಂದ ೩೪


ಸುಖಿಗಳನಿಬರು ಜೀಯ ನಿಮ್ಮಯ

ನಿಖಿಳ ಭಾಂಧವರನು ಸಹೋದರ

ಸಖ ಸುತಾದಿಗಳನು ಪುರೋಹಿತ ಪೌರ ಪುರಜನದ

ಮಖ ಸಮುದ್ಭವೆ ಮೊದಲು ಪಂಕಜ

ಮುಖಿಯರನು ಬೆಸಗೊಂಡು ಕಳುಹಿದ

ಖಿಳ ಕುರುನಂದನರು ಭೀಷ್ಮ ದ್ರೋಣ ಕೃಪರೆಂದ ೩೫


ಮುನ್ನ ಭೀಷ್ಮ ದ್ರೋಣ ಗರುತಮ

ರುನ್ನತದ ಕಾರುಣ್ಯದಲಿ ಸಂ

ಪನ್ನ ಸಾಹಸಗರಾದೆವಾಚರಿಸಿದೆವು ಧರ್ಮವನು

ಇನ್ನು ಧೃತರಾಷ್ಟ್ರಾವನೀಶನು

ತನ್ನ ಮಕ್ಕಳ ಬಾಂಧವ ಪ್ರತಿ

ಪನ್ನತೆಯ ನೆರೆ ಕಾಬನೆಂದನು ಧರ್ಮಸುತನು ನಗುತ ೩೬


ಏನು ಬಂದಿಹ ಹದನು ನಿಮ್ಮವ

ರೇನೇಂದರು ಕುರುಕುಲೇಶ್ವರ

ನೇನಕ್ಕಟ ಭುದ್ಧಿಕಲಿಸಿದನವರ ಮಾತುಗಳ

ಏನುವನು ನೀನುಳುಹದಿರು ವಿನ

ಯಾನುಗತವಾಗಿರಲಿ ಮೇಣ್ ಶೌ

ರ್ಯಾನುಗತವಾಗಿರಲಿ ಬಿನ್ನವಿಸೆಂದನಸುರಾರಿ ೩೭


ನಾಡ ಬೇಡುವರೆಮ್ಮೊಡನೆ ಹೊ

ಯ್ದಾಡುವುದು ಸಂಪ್ರತಿಗೆ ಚಿತ್ತವ

ಮಾಡಲಾಗುದು ಸಂಧಿ ವೀರ ಕ್ಷತ್ರಿಯರ ಮತವೆ

ಬೇಡುವರೆ ಪಾರ್ಥಿವರು ತಾವದ

ನಾಡಬಾರದು ತಮ್ಮ ಜನನವ

ನೋಡಿ ನುಡಿವರು ಪಾಂಡುಸುತರಲ್ಲೆಂದು ಹೇಳೆಂದ ೩೮


ಮೊದಲಮ್ಮಳ ಬ್ರಹ್ಮಚರ್ಯವು

ಮದುವೆಯಾದುದು ಬಳಿಕ ವನವಾ

ಸದಲಿ ವಾನಪ್ರಸ್ಥವೆಂದಾಶ್ರಮನಲವಡಿಸಿ

ತುದಿಗೆ ತಾ ಸನ್ಯಾಸವನು ಮಾ

ಡಿದನು ಮಗ್ಳಳುಪಿದೊಡೆ ರಾಜ್ಯದ

ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ ೩೯


ತಳಿತ ಜವ್ವನದುಬ್ಬುಗಳ ಕಳ

ವಳಿಗರ್ಜುನ ಭೀಮರೆಂಬವ

ರೊಳಗೆ ವೈರವ ಬಿತ್ತಿ ಬೆಳಸ್ವ ಕೃಷ್ಣ ಹಗೆ ತಮಗೆ

ಉಳಿದ ದ್ರುಪದ ವಿರಾಟರೆಂಬೀ

ಹುಳುಗಳವರಂತೋರೆಗೆಡೆದರು

ತಿಳಿಯೆ ತನೇ ಕಡೆಗೆ ಕೆಡದಿರನೆಂದು ಹೇಳೆಂದ ೪೦


ಸಾಕು ಕೌರವ ನಾಯ ಮಾತನ

ದೇಕೆ ಚಿತ್ತೈಸುವಿರಿ ದೂತನ

ನೂಕು ನೂಕು ಕುಠಾರ ದುರ್ಯೋಧನನೊಡೆ ಹೊಯಿದು

ಶಾಕಿನಿಯರನು ರಕುತ ವಾರಿಯೊ

ಳೋಕುಳಿಯನಾಡಿಸುವೆ ನಿಲು ತಡ

ವೇಕೆನುತ ಘುಢುಘುಡಿಸಿ ಕಿಡಿಕಿಡಿಯಾದನಾ ಭೀಮ ೪೧


ಬೆಸಸುವುದು ಹಿಂದಾದ ಜೂಜಿನೊ

ಳೆಸೆವ ಜಾಡ್ಯವೆ ಸಾಕು ಧರ್ಮದ

ದೆಸೆಗೆ ನೀನಿನ್ನುತ್ತದಾಯಿ ಸುಯೋಧನನ ಕುಲವ

ದೆಸೆದೆಸಯ ದೈವಂಗಳಿಗೆ ಹೆಸ

ರಿಸುವರೆಮ್ಮನು

ಕಳುಹೆನುತ ಗರ್ಜಿಸಿದರಂದಭಿಮನು ಸಾತ್ಯಕಿ ಭೀಮ ನಂದನರು ೪೨


ಕದಡಿತಾಯಾಸ್ಥಾನ ಕಲ್ಪಾಂ

ತದ ಮಹಸಿಡಿಲಂತೆ ವೀರರು

ಕೆದರಿ ತಮತಮಗೆದ್ದುನುಡಿದರು ಕೆಂಡೆಯವ ಜಡಿದು

ಉದಿರಹೊಯ್ವೆವು ಹಲುಗಳನು ಕಿ

ಬ್ಬದಿಯಲುಗಿದೆವು ಕರುಳನಹಿತರ

ತಿಥಿಯ ಸುಲಿವೆವು ಬೆಸಸು ನೇಮವನೆಂದರತಿ ರಥರು ೪೩


ಆತನಿಂದೇನಹುದು ಹೊಲ್ಲೆಹ

ವಾತನಿಂದೇನಹುದು ಲೇಸುಗ

ಳಾತನಿಮ್ಡೆ ಬರಲಿ ಹಿಂದಣ ಕಾನನಾಯಸದ

ಯಾತನೆಯ ಸೈರಿಸಿದ ನಮಗಿ

ನ್ನಾತ ನುಡಿದೊಡೆ ಹಾನಿಯೇ ನೀವ್

ಕಾತರಿಸದಿರಿಯೆಂದು ಸಂತೈಸಿದನು ಯಮಸೂನು ೪೪


ಕಳುಹಿದನು ಬೀಡಾರಕವನಿಪ

ತಿಲಕನಾ ಸಂಜಯನಲ್ಲಿಂ

ಬಳಿಕ ಮರುದಿನ ಕೃಷ್ಣ ಪಾರ್ಥರು ಸಂಜಯನ ಕರೆಸಿ

ಬಲುಹು ಮೆಲುಹಿನ ನುಡಿಗಳಿಂದವೆ

ತಿಳುಹಿದರು ಬಳಿಕಿತಲೋಲಗ

ದೊಳಗೆ ದೂತನ ಕರೆಸಿ ಬೀಳ್ಕೊಟ್ಟನು ಯುಧಿಷ್ಟಿರನು ೪೫


ಜನಕನನು ಗಾಂಧಾರಿ ದುರಿಯೋ

ಧನನವರೊಡಹುಟ್ಟಿದರನಂ

ಗನೆಯರನು ದುಸ್ಸಳೆಯ ಸೈಂಧವ ಕರ್ಣ ಶಕುನಿಗಳ

ವಿನುತ ಬಾಹ್ಲಿಕ ಶಲ್ಯ ಭಗದ

ತ್ತನ ನದೀಸುತ ಗುರು ಕೃಪರ ಗುರು

ತನುಜರನು ವಂದಿಸಿದರುಚಿತದಲೆಂದು ಹೇಳೆಂದ ೪೬


ವರ ಪುರೋಹಿತರನು ಸುಸಾವಂ

ತರನು ವೈದ್ಯರ ವಿದುರನನು ಮ

ತ್ತರಮನೆಯ ವಿಶ್ವಾಸಿಗಳನೋಲಗದ ಗಣಿಕೆಯರ

ಕರಿ ಹಯಾಧ್ಯಕ್ಷರನು ಪಡಿಹಾ

ರರನು ಬಾಹತ್ತರ ನಿಯೋಗದ

ಪರಿಜನರ ಕುಶಲವನು ಕೇಳಿದನೆಂದು ಹೇಳೆಂದ ೪೭


ಹೊನ್ನಿನಲಿ ಮಧುರೋಕ್ತಿಯಲಿ ವಿವಿ

ಧಾನ್ನವುಡುಗೊರೆಗಳಲಿ ದೂತನ

ಮನ್ನಿಸಿದವನೀಶನುಚಿತದಲವನ ಬೀಳ್ಕೊಟ್ಟು

ಪನ್ನಗನ ಸಿರಿಮಂಚದಾತನು

ಬೆನ್ನಲಿರಳಿ ಪಾಂಡುತನಯರಿ

ಗಿನ್ನು ಮಂಗಳವೆನುತ ಸಂಜಯ ಬಂದನಿಭಪುರಿಗೆ ೪೮

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧)
  2. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೨) -- ೭- ೧೧ -೨೦೨೦-

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.