ಪುಟ:Mysore-University-Encyclopaedia-Vol-1-Part-1.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುತ್ತುತ್ತಿರುವ ದಂಡದ ಆಧಾರವಾಗಿರುವ ಧಾರಕಗಳಲ್ಲಿ ಸಾಮಾನ್ಯವಾಗಿ ತೈಲವೇ ಮೃದುಚಾಲಕವಾಗಿರುತ್ತದೆ. ಕೆಲವೊಮ್ಮೆ ಗ್ರೀಸ್, ನೀರು ಮುಂತಾದುವುಗಳನ್ನು ಉಪಯೋಗಿಸಲಾಗುತ್ತದೆ. ಅಚ್ಚಿನ ಸುತ್ತುವಿಕೆಯ ವಿವಿಧ ಘಟ್ಟಗಳಲ್ಲಿ ತೈಲದ ಹಾಳೆ ಹಾಗೂ ದಂಡ ಮತ್ತು ಅಚ್ಚುಗಳ ನಡುವಣ ಸಂದುಗಳು ಹೇಗಿರುತ್ತವೆನ್ನುವುದನ್ನು ಚಿತ್ರ 3 ರಲ್ಲಿ ತೋರಿಸಿದೆ. ಅಚ್ಚು ಕೆಲಸ ಮಾಡದಿರುವಾಗ ಅದರ ಭಾರದಿಂದ ತೈಲ ಪಕ್ಕಕ್ಕೆ ಸರಿದು ಅಚ್ಚು ಮತ್ತು ಧಾರಕಗಳ ನಡುವೆ ಒಂದು ಬಿಂದುವಿನಲ್ಲಿ (ಚಿತ್ರ (ಅ), ಕ್ಷ-ಬಿಂದು) ಸಂಪರ್ಕ ವೇರ್ಪಡುತ್ತದೆ. ಅಚ್ಚು ತನ್ನ ಚಲನೆಯನ್ನು ಪ್ರಾರಂಭಿಸಿದಾಗ ಬಲಕ್ಕೆ ಉರುಳಿ ಒಂದು ಬಿಂದುವಿನಲ್ಲಿ (ಚಿತ್ರ (ಆ), ಕ್ಷ-ಬಿಂದು) ಸಂಪರ್ಕವೇರ್ಪಡು ತ್ತದೆ. ತೈಲ ಒಂದು ಬೆಣೆಯ ರೂಪದಲ್ಲಿರುತ್ತದೆ. ವೇಗ ಹೆಚ್ಚಾದಂತೆ ಅಚ್ಚು ಒಂದು ಪಂಪಿನಂತೆ ಕೆಲಸ ಮಾಡಿ ತೈಲದ ಒತ್ತಡವನ್ನು ಹೆಚ್ಚಿಸುತ್ತದೆ. ಈ ಒತ್ತಡದಿಂದ ಅಚ್ಚು ಮೇಲಕ್ಕೆತ್ತಲ್ಪಟ್ಟು ತೈಲದಲ್ಲಿ ತೇಲುತ್ತದೆ. ಕನಿಷ್ಠ ಸಂದನ್ನು ಚಿತ್ರ (ಇ) ಶ-ಬಿಂದುವಿನಲ್ಲಿ ಕಾಣ ಬಹುದು. ಇಲ್ಲಿ ತೈಲ ಒಂದು ತೆಳು ಹಾಳೆಯ ರೂಪದಲ್ಲಿದ್ದು ಅಚ್ಚು ಮತ್ತು ಧಾರಕಗಳನ್ನು ಬೇರ್ಪಡಿಸುತ್ತದೆ. ಅಚ್ಚಿನ ಧಾರಕದ ದಕ್ಷತೆ ಅಚ್ಚು ಮತ್ತು ಧಾರಕಗಳನ್ನು ಪ್ರತ್ಯೇಕಿಸಿಡುವ ತೈಲದ ಶಕ್ತಿಯನ್ನು ಅವಲಂಬಿಸಿದೆ. ತೈಲದ ಅಧಿಕ ಬಳಕೆ ಅಪಾಯಕಾರಿ. ಹೆಚ್ಚು ವೇಗದಲ್ಲಿ ಸುತ್ತುವಾಗ ತೈಲ ಅಧಿಕವಾದರೆ ಅದು ತಡೆಯಲ್ಪಟ್ಟು, ಘರ್ಷಣೆಯುಂಟಾಗಿ ಶಾಖ ಉತ್ಪತ್ತಿಯಾಗುತ್ತದೆ. ಕಡಿಮೆ ಪ್ರಮಾಣದ ತೈಲದ ಬಳಕೆ ಸಹ ಅಪಾಯಕಾರಿ. ಹೆಚ್ಚು ವೇಗದಲ್ಲಿ ಸುತ್ತುವಾಗ ತೈಲ ಕಡಿಮೆಯಾದರೆ ಅಚ್ಚು ಮತ್ತು ಧಾರಕಗಳ ನಡುವೆ ಸಂಪರ್ಕವೇರ್ಪಟ್ಟು, ಘರ್ಷಣೆಯಿಂದ ಶಾಖೋತ್ಪತ್ತಿ ಯಾಗುತ್ತದೆ. ಆದ್ದರಿಂದ ಕ್ಲುಪ್ತ ಪ್ರಮಾಣದಲ್ಲಿ ತೈಲವನ್ನು ಬಳಸುವುದು ಆವಶ್ಯಕ. ಪ್ರಾರಂಭದಲ್ಲಿ ಘರ್ಷಣೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದನ್ನು ಎದುರಿಸಲು ಶಕ್ತಿ ವ್ಯಯವಾಗುತ್ತದೆ. ಆದ್ದರಿಂದ ಆಗಾಗ್ಗೆ ನಿಲ್ಲಿಸಿ ಚಲಿಸಬೇಕಾದ ಯಂತ್ರಗಳಿಗೆ ಅಚ್ಚಿನ ಧಾರಕವನ್ನು ಉಪಯೋಗಿಸಲಾಗುವುದಿಲ್ಲ. ಪಾದಪೀಠಧಾರಕ (ಫುಟ್‍ಸ್ಟೆಪ್ ಬೇರಿಂಗ್): ಪಾದಪೀಠ ಎರಕಹೊಯ್ದ ಒಂದು ಘಟಕವಾಗಿದ್ದು ಅದರಲ್ಲಿ ಮೇಲಿಂದ ಕೆಳಕ್ಕೆ ಒಂದು ಕುರುಡು ರಂಧ್ರವನ್ನು ಕೊರೆದಿರಲಾಗುತ್ತದೆ. ಈ ರಂಧ್ರಕ್ಕೆ ತೊಡಿಸಿರುವ ಒಂದು ಬ್ಯಾಬಿಟ್ ಲೋಹ ಕವಚದ ಒಳಭಾಗದಲ್ಲಿ ಸುತ್ತುವ ದಂಡ ಧಾರಕದ ಒಳಗಡೆಯೇ ಕೊನೆಗೊಳ್ಳುತ್ತದೆ. ಪಾದಪೀಠದ ಸಂಪರ್ಕಭಾಗ ಸವೆದುಹೋಗದಂತೆ ದಂಡದ ತುದಿಯ ಕೆಳಗೆ ಗನ್ ಲೋಹದ ಒಂದು ಬಿಲ್ಲೆಯನ್ನು ಜೋಡಿಸಿರುತ್ತಾರೆ. ತಿರುಪುಗಳಿಂದ ಬಂಧಿಸಲು ಅನುಕೂಲವಾಗುವಂತೆ ಕೆಳಭಾಗವನ್ನು ವಿಸ್ತರಿಸಲಾಗಿರುತ್ತದೆ. ಈ ಧಾರಕವನ್ನು ಲಂಬದಂಡಗಳಿಗೆ (ವರ್ಟಿಕಲ್ ಷಾಫ್ಟ್ಸ್) ಮಾತ್ರ ಉಪಯೋಗಿಸ ಲಾಗುತ್ತದೆ. (ನೋಡಿ- ಧಾರಕ) (ಎಚ್.ವಿ.ಸಿ.) ಅಚ್ಚಿನ ಹಲಗೆ : ಅಚ್ಚು ಮೊಳೆ ಜೋಡಣೆಯಿಂದ ಮುದ್ರಣ (ಲೆಟರ್ ಪ್ರೆಸ್ ಪ್ರಿಂಟಿಂಗ್) ಮಾಡುವಾಗ ಅನೇಕ ವೇಳೆ, ಅದರಲ್ಲೂ ವರ್ತಮಾನ ಪತ್ರಿಕೆ ಮುದ್ರಣ ಮಾಡುವಾಗ ಅಚ್ಚು ಮೊಳೆಗಳ ಫಲಕದಿಂದ (ಟೈಪ್ ಫಾರಂ) ಸ್ಟೀರಿಯೋ ಟೈಪ್ ಎಂಬ ಸೀಸದ ಪ್ರತಿಫಲಕವನ್ನು ತಯಾರುಮಾಡಬೇಕಾಗುತ್ತದೆ. ಇದೇ ಅಚ್ಚಿನ ಹಲಗೆ ಅಥವಾ ಮುದ್ರಣದ ತಗಡು. ಆಗ ಪೇಪಿಯರ್ ಮ್ಯಾಷೆ ಎಂಬ ದಪ್ಪ ಮತ್ತು ಮೃದುವಾಗಿರುವ ರುಬ್ಬಿದ ಕಾಗದವನ್ನು ಅಚ್ಚುಮೊಳೆಗಳ ಫಲಕದ ಮೇಲಿಟ್ಟು ಜೋರಾಗಿ ಒತ್ತಿದರೆ ಮುದ್ರಣವಾಗಬೇಕಾದ್ದೆಲ್ಲ ಈ ಕಾಗದದಲ್ಲಿ ಮೂಡುತ್ತದೆ. ಇದನ್ನು ಒಂದು ಎರಕಹೊಯ್ಯುವ ಯಂತ್ರೋಪಕರಣದಲ್ಲಿಟ್ಟು (ಕ್ಯಾಸ್ಟಿಂಗ್ ಬಾಕ್ಸ್) ಅದರ ಮೇಲೆ ಕರಗಿಸಿದ ಸೀಸವನ್ನು ಎರಕ ಹೊಯ್ದರೆ ತೆಳುವಾದ ಸೀಸದ ಮುದ್ರಣ ಫಲಕ ದೊರೆಯುತ್ತದೆ. (ಡಿ.ಎಸ್.ಜಿ.) ಅಚ್ಚು : ರಸ್ತೆ ವಾಹನ ಅಥವಾ ರೈಲುಬಂಡಿಯ ಒಂದು ಜೊತೆ ಚಕ್ರಗಳನ್ನು ಕೂಡಿಸುವ ಮರದ ಅಥವಾ ಲೋಹದ ತೊಲೆ ಅಥವಾ ಸರಳಿಗೆ ಅಚ್ಚು (ಆ್ಯಕ್ಸ್‍ಲ್) ಎನ್ನುತ್ತಾರೆ. ಇದರ ಮೂಲಕ ಬಂಡಿಯ ತೂಕ ಚಕ್ರಕ್ಕೆ ಒಯ್ಯಲ್ಪಡುತ್ತದೆಯಲ್ಲದೆ ಚಕ್ರಗಳೂ ಒಂದೇ ಅಂತರದಲ್ಲಿ ನಿಂತಿರುತ್ತವೆ. ಅಚ್ಚು ಸ್ಥಿರವಾಗಿದ್ದು ಅದರ ತುದಿಗಳಲ್ಲಿ ಚಕ್ರ ಸುತ್ತುತ್ತಿರಬಹುದು ಅಥವಾ ಚಕ್ರಗಳು ಅಚ್ಚಿಗೇ ಬಂಧಿಸಲ್ಪಟ್ಟು ಇಡೀ ಅಚ್ಚೇ ಧಾರಕದ (ಬೇರಿಂಗ್ಸ್) ಮೇಲೆ ತಿರುಗಬಹುದು. ರಸ್ತೆ ಬಂಡಿಗಳಲ್ಲಿ ನಡುವಿನ ಸ್ಥಿರ ಭಾಗವನ್ನು ಇರಚು ಎಂದೂ ತುದಿಗಳನ್ನು ಅಚ್ಚು ಎಂದೂ ಕರೆಯುತ್ತಾರೆ. ಚಕ್ರ ಆಚೆಗೆ ಹೊರಳದಂತೆ ತಡೆಯಲು ಕಡಾಣಿಗಳಿರುತ್ತವೆ. ರೈಲು ಎಂಜಿನ್ನು, ಬಂಡಿ ಮತ್ತು ಕ್ರೇನು ಇಂಥವುಗಳಲ್ಲಿ ಅಚ್ಚು ಬೇರಿಂಗುಗಳೊಳಗೆ ಸುತ್ತುತ್ತಿದ್ದು, ಬೇರಿಂಗಿನೊಳಗಿನ ಅಚ್ಚಿನ ಅಷ್ಟು ಭಾಗವನ್ನು ಜರ್ನಲ್ ಎಂದು ಕರೆಯಲಾಗುತ್ತದೆ. ರೈಲು ಎಂಜಿನ್ನಿನಲ್ಲಿ ಅಚ್ಚನ್ನು ತಿರುಗಿಸುವ ಕೂಡುಸರಳಿಗೆ ಹೊರಭಾಗದಲ್ಲಿ ಜಾಗವಿರಬೇಕಾದ್ದರಿಂದ ಬೇರಿಂಗುಗಳು ಚಕ್ರಗಳ ನಡುವೆ ಇರುತ್ತವೆ; ಆದರೆ ಬಂಡಿಗಳಲ್ಲಿ ಬೇರಿಂಗುಗಳು ಚಕ್ರಗಳ ಹೊರಗಡೆ ಇರುತ್ತವೆ. ಅಚ್ಚು ಎಂಜಿನ್ನಿನಿಂದ ತಿರುಗಿಸಲ್ಪಡುವ ಸನ್ನಿವೇಶದಲ್ಲಿ ರೈಲು ಎಂಜಿನ್ನಿನಲ್ಲಿನಂತೆ ಸೀದಾ ಕೂಡುಸರಳಿನಿಂದ ಆಗಬಹುದು ಅಥವಾ ಮೋಟಾರು ಗಾಡಿಗಳಂತೆ ಹಲ್ಲು ಚಕ್ರಗಳ ಸರಣಿಯ (ಗಿಯರ್ ಮಾಲೆ) ಮೂಲಕವಿರಬಹುದು. ಮೋಟಾರ್ ಬಂಡಿಯ ಅಚ್ಚುಗಳಲ್ಲಿ ಮುಂಚೆ ಎರಡು ರೀತಿಯವಿರುತ್ತಿದ್ದುವು. 1. ಎಂಜಿನ್ನಿನಿಂದ ಚಾಲಿತವಾದ ಹಿಂಬದಿಯ ಅಚ್ಚು; ಇದು ನಡುವೆ ಡಿಫರೆನ್ಷಿಯಲ್ ಗಿಯರ್ ಉಳ್ಳ ಎರಡು ಭಾಗಗಳಾಗಿದ್ದು ಒಂದೊಂದೂ ಒಂದೊಂದು ಕೊಳವೆಯ ಅಥವಾ ಬೆಂಬಲಿಗ ಅಚ್ಚಿನ ಒಳಗೆ ಇರುವುದು. 2. ಮುಂಬದಿಯ ಅಚ್ಚು: ಸ್ಥಿರವಾದ ಸರಳಾಗಿದ್ದು ಅದರ ತುದಿಗಳಲ್ಲಿ ತುಂಡು ಅಚ್ಚುಗಳು ತಿರುಗಾಣಿಯಾಗಿರುತ್ತಿದ್ದುವು. ಈಚೀಚೆಗೆ ತಯಾರಕರು ಈ ಮುಂಬದಿಯ ಸರಳು ಅಚ್ಚನ್ನು ಕೈಬಿಟ್ಟು ಅದರ ಬದಲು ಮುಂದಿನ ಎರಡು ಚಕ್ರಗಳನ್ನು ಬಂಡಿಯ ಚೌಕಟ್ಟಿಗೇ ಪ್ರತ್ಯೇಕವಾಗಿ ಕೂಡಿಸುವ ಏರ್ಪಾಡು ಮಾಡಿರುತ್ತಾರೆ. ಮೋಟಾರಿನ ಮತ್ತು ಇತರ ಇಂಥ ಅಚ್ಚುಗಳಿಗೆ ಸಾದಾ ಬೇರಿಂಗುಗಳ ಬದಲು ಬಾಲ್ ಮತ್ತು ರೋಲರ್ ಬೇರಿಂಗುಗಳು ಉಪಯೋಗಿಸಲ್ಪಡುತ್ತಿದ್ದರೆ, ರೈಲುಬಂಡಿಗಳಲ್ಲಿ ರೋಲರ್ ಬೇರಿಂಗುಗಳನ್ನು ಕೆಲವು ಕಡೆ ಬಳಸಿದ್ದರೂ ಹೆಚ್ಚಾಗಿ ಸಾದಾ ಅಕ್ಷಪುಟವೇ (ಆ್ಯಕ್ಸ್‍ಲ್ ಬಾಕ್ಸ್) ಇನ್ನೂ ಬಳಕೆಯಲ್ಲಿದೆ. ಇಲ್ಲಿ ಅಚ್ಚಿನ ಮೇಲರ್ಧಕ್ಕೆ ಮಾತ್ರ ಬೇರಿಂಗ್ ತಳದ ಆವಶ್ಯಕತೆಯಿದ್ದು ಕೆಳ ಅರ್ಧಕ್ಕೆ ಬರಿಯ ರಕ್ಷಕ ಕೋಶವಿರುತ್ತದೆ. ಬೇರಿಂಗ್ ತಳ ಸಾಮಾನ್ಯವಾಗಿ ಫಿರಂಗಿ ಲೋಹದ್ದಿದ್ದು ಅದಕ್ಕೆ ಬಿಳಿ ಮಿಶ್ರಲೋಹದ ಕವಚ ಎರಕವಾಗಿರುತ್ತದೆ. ಗ್ರೀಸ್ ಅಥವಾ ಎಣ್ಣೆಯ ಮೃದು ಚಾಲಕ ಇಲ್ಲಿ ಧಾರಾಳವಾಗಿ ಸರಬರಾಜಾಗುವಂತೆ ರಚನೆಯಿರಬೇಕು. ರೈಲುಬಂಡಿಯ ಅಚ್ಚು ಏನಾದರೂ ಮುರಿದುಹೋದರೆ ಆಗುವ ಅಗಾಧ ಅಪಾಯ ದೃಷ್ಟಿಯಿಂದ ಅತ್ಯುತ್ತಮ ದರ್ಜೆಯ ಹಾಗೂ ಅದರ ವಿಶಿಷ್ಟ ಗುಣಗಳಿಗಾಗಿ ತೀವ್ರ ಪರೀಕ್ಷೆಗೊಳಗಾದ ಮಿಶ್ರ ಉಕ್ಕಿನಿಂದಲೇ ಇದನ್ನು ಮಾಡಲಾಗುತ್ತದೆ. ರೈಲುಗಾಡಿಗಳಿಗೆ ಅಗತ್ಯವಾದ ಅಚ್ಚುಗಳ ಅಪಾರ ಸಂಖ್ಯೆಯ ಗಣನೆಯಿಂದಾಗಿ, ಅವುಗಳ ಎರಡೂ ಕಡೆಯ ಜರ್ನಲುಗಳನ್ನು ಒಂದೇ ಸಮನಾಗಿ ಏಕಕಾಲದಲ್ಲಿ ಸುತ್ತಿಸುವುದಕ್ಕೆ ವಿಶೇಷ ರಚನೆಯ ಲೇತ್‍ಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ ಗಡಸು ಮಾಡಿದ ಉಕ್ಕಿನ ಸುತ್ತು ಕವಚವನ್ನು ವಿಶೇಷ ಬಲಪ್ರಯೋಗದಿಂದ ತಿರುಗುವ ಜರ್ನಲುಗಳಿಗೆ ಒತ್ತಿ ಬಿಗಿಯುವುದರಿಂದ, ಉಜ್ಜಿ ಮೆರಗುಕೊಟ್ಟ ಮತ್ತು ಹೆಚ್ಚು ಸವೆತ ನಿರೋಧಿಯಾದ ಮೇಲ್ಮೈ ಇರುವಂತೆ ಮಾಡಲಾಗುತ್ತದೆ. (ಕೆ.ವಿ.ಎಸ್.) ಅಚ್ಚು, ಎರಕದ : ಕರಗಿದ ಪದಾರ್ಥವನ್ನು (ಲೋಹ, ಪಾಕ ಇತ್ಯಾದಿ) ಎರಕ ಹೊಯ್ದ ಬೇಕಾದ ಆಕೃತಿಗಳನ್ನು ಸಿದ್ಧಮಾಡಲು ಉಪಯೋಗಿಸುವ ಮೂಲಮಾತೃಕೆ ಗಳಿಗೆ ಈ ಹೆಸರಿದೆ. ಅದನ್ನು ತಯಾರಿಸುವ ವಿಧಾನವನ್ನು ಮುಂದಿನ ಚಿತ್ರಗಳ ಸಹಾಯದಿಂದ ತಿಳಿದುಕೊಳ್ಳಬಹುದು. ನಮಗೆ ಬೇಕಾದ ಎರಕದ ಮಾದರಿಯನ್ನು (ಚಿತ್ರ 1) ಒಂದು ಮಣೆಯ ಮೇಲೆ, ತಲ ಮತ್ತು ಮುಚ್ಚಳವಿಲ್ಲದ ಒಂದು ಪೆಟ್ಟಿಗೆಯಲ್ಲಿಟ್ಟು ಸುತ್ತಲೂ ಅಚ್ಚಿನ ಮರಳನ್ನು ಘಟ್ಟಿಸಲಾಗಿದೆ. ಘಟ್ಟಿಸುವ ಕೆಲಸವನ್ನು ಕೈಯಿಂದ ಇಲ್ಲವೆ ಘಟ್ಟಿಸುವ ಯಂತ್ರಗಳಿಂದ ಮಾಡಬಹುದು (ಚಿತ್ರ 2). ಮಾದರಿ ಮತ್ತು ಘಟ್ಟಿಸಿದ ಮರಳಿನ ಸಮೇತ ಈ ಪೆಟ್ಟಿಗೆಯನ್ನು ತಿರುಗಿಸಿ ಇದರ ಮೇಲೆ ಇನ್ನೊಂದು ತಳ ಮತ್ತು ಮುಚ್ಚಳವಿಲ್ಲದ ಪೆಟ್ಟಿಗೆಯನ್ನಿಟ್ಟು (ಮೇಲಿನ ಪೆಟ್ಟಿಗೆ) ಅದರಲ್ಲೂ ಅಚ್ಚಿನ ಮರಳನ್ನು ಘಟ್ಟಿಸಲಾಗಿದೆ. ಮೇಲಿನ ಪೆಟ್ಟಿಗೆಯ ಮರಳಿನಲ್ಲಿ ಇಳಿಕೊಳವಿ ಮತ್ತು ಏರುಕೊಳವಿ ಎಂಬ ನಳಿಕೆಗಳನ್ನು ಬಿಡಲಾಗಿದೆ (ಚಿತ್ರ 3). ಕರಗಿದ ಲೋಹ ಇಳಿ ಕೊಳವೆಯಿಂದ ಅಚ್ಚಿನೊಳಗಿಳಿದು ಏರುಕೊಳವಿಯಿಂದ ಮೇಲಕ್ಕೆ ಬರುತ್ತದೆ. ಅಲ್ಲದೆ ಲೋಹ ಆರಿ ಕುಗ್ಗುತ್ತಿರುವಾಗ, ಏರುಕೊಳವಿಯಲ್ಲಿನ ದಾಸ್ತಾನು ಉಪಯೋಗಕ್ಕೆ ಬರುತ್ತದೆ. ಈಗ ಮೇಲಿನ ಪೆಟ್ಟಿಗೆಯನ್ನು ಜೋಪಾನವಾಗಿ ತೆಗೆದಿಟ್ಟು, ಕೆಳಗಿನ ಪೆಟ್ಟಿಗೆಯ ಮೇಲ್ಭಾಗದಲ್ಲಿರುವ ಮಾದರಿಯನ್ನು ಜೋಪಾನವಾಗಿ ಹೊರತೆಗೆಯಬೇಕು. ಅನಂತರ ಮೇಲಿನ ಪೆಟ್ಟಿಗೆಯನ್ನು ಕೆಳಗಿನ ಪೆಟ್ಟಿಗೆಯ ಮೇಲೆ ಇಡಬೇಕು.