ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೦ / ಕುಕ್ಕಿಲ ಸಂಪುಟ

ವಾಗಿ ನಾವು ವಿವೇಚಿಸಿದ ಅದರ ಅರ್ಥವು ಸಂಗ್ರಹವಾಗಿ ತಿಳಿಯುವಂತೆ ಅನ್ವಯಾನು ಸಾರವಾಗಿ ಅದನ್ನು ಅನುವಾದಿಸುತ್ತೇನೆ:

“ಇಲ್ಲಿ ಯಾವ ತಾಳವೂ ಗೋಚರವಾಗುವುದಿಲ್ಲ; ಇಲ್ಲಿ (ಶ್ರುತಿ ವಾದ್ಯದ ಹಾಗೂ) ವಂಶವಾದ್ಯದ ಮಧುರಸ್ವರ ಮೇಳವೇನೂ ಇಲ್ಲ; ಇಲ್ಲಿ ವೀಣೆಯ ಸ್ವರವೂ ಇಲ್ಲ- ಎಂದೆನಿಸುವ ರಾಗಾಲಾಪವನ್ನು ಮಾಡಿ,”

ಪ್ರಸ್ತುತ ಪದ್ಯದ ಇನ್ನುಳಿದ ಭಾಗದ ಅರ್ಥದಲ್ಲಿ ಕ್ಲಿಷ್ಟತೆಯೇನೂ ಇಲ್ಲದಿದ್ದರೂ, 'ಸಾಳಗದ ದೇಸಿಯ ಗೀತ' ಎಂಬುದರ ಸ್ವರೂಪವೇನು ಎಂದು ತಿಳಿಯುವುದು ಪ್ರಕೃತೋಪಯುಕ್ತವಾಗಿದೆ.

ನಮ್ಮ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ 'ಮಾರ್ಗೀ' 'ದೇಶೀ' ಎಂಬ ಭೇದವಾಚಕ ಶಬ್ದಗಳು ಅಲ್ಲಲ್ಲಿ ಬರುತ್ತವೆ. ಅನಾದಿ ಪರಂಪರೆಯಿಂದ ಬಂದ ಘನವಾದ ಪದ್ಧತಿಗೆ 'ಮಾರ್ಗ'ವೆಂದೂ ದೇಶಭಾಷಾಭೇದಗಳಿಂದ ಜನಿಸಿದ ಜನಪ್ರಿಯ ಪದ್ಧತಿಗೆ 'ದೇಶೀ' ಎಂದೂ ಹೆಸರಾಗಿದೆ. ('ದೇಶೀ' ಎಂಬ ಶಬ್ದಕ್ಕೆ ಯಾವುದೊಂದು 'ಪ್ರದೇಶದ ಭಾಷೆ' ಎಂಬುದೇ ಮೂಲಾರ್ಥ, ಪ್ರಾಕೃತ ಭಾಷೆಗಳೊಳಗೊಂದಕ್ಕೆ ಪ್ರತ್ಯೇಕವಾಗಿ 'ದೇಶೀ' ಎಂಬ ಹೆಸರಿತ್ತು. ಕೆಲವು ಸಂಗೀತ ಗ್ರಂಥಗಳಲ್ಲಿ ಈ ಎರಡು ಗೀತ ಪದ್ಧತಿಗಳನ್ನು ಅನುಕ್ರಮ ವಾಗಿ 'ಗಾಂಧರ್ವ' ಮತ್ತು 'ಗಾನ' ಎಂಬ ಹೆಸರುಗಳಿಂದಲೂ ನಿರ್ದೇಶಿಸಲಾಗಿದೆ. ಗೋವಿಂದ ದೀಕ್ಷಿತನ 'ಸಂಗೀತ ಸುಧೆ'ಯ ಪ್ರಬಂಧಾಧ್ಯಾಯದಲ್ಲಿ :

ಉಕ್ತಂ ಚ ಗೀತಂ ದ್ವಿವಿಧಂ, ವದಂತಿ ಗಾಂಧರ್ವ ಮಾದ್ಯಂ ಕಿಲ ಗಾನಮನ್ಯತ್ |
ಗಾಂಧರ್ವ ಮುಖ್ಯ: ಕಿಲ ಗೀಯಮಾನಂ, ಶ್ರೇಯಃ ಪದಂ ಲಕ್ಷಣಮತ್ರ

ವೇದ್ಯಮ್ ǁ

ಸಿದ್ಧ೦ ತಥಾನಾದಿ ಪರಂಪರಾಭಿಃ ಅಶಕ್ಯಮಹ್ಯಾಧುನಿಕೈರಶೇಷ್ಯ: |
ಗಾಂಧರ್ವಮೇತತ್ ಕಥಿತಂಪುರಾತ್; 'ಗಾನಂದಾನೀಂ ಪ್ರತಿಪಾದಯಾಮಃ ǁ
ದೇಶೀಯ ರಾಗಾದಿ ಚ ಲಕ್ಷ್ಮಯುಕ್ತಂ ವಾಗ್ಗೇಯಕಾರಪ್ರಮುಖೇರಿತಂ ಚ |
ತಜ್ಞಾನ ಸಾಮಾನ್ಯ ಮಿತೀರಯಂತಿ ಶ್ರೇಯಸ್ಕರಂ ಮೋದಕರಂ ಜನಾನಾಮ್ ǁ

ಇದರ ತಾತ್ಪರ್ಯ: “ಗೀತ (ಹಾಡುವಿಕೆ) ಎರಡು ವಿಧ. ಒಂದನ್ನು 'ಗಾಂಧರ್ವ' ವೆಂದೂ, ಇನ್ನೊಂದನ್ನು 'ಗಾನ'ವೆಂದೂ ಕರೆಯುತ್ತಾರೆ. ಗಾಂಧರ್ವವು ಅನಾದಿ ಪರಂಪರೆ ಯಿಂದ ಸಿದ್ಧವಾದುದು; ಗಾಂಧರ್ವ ಮುಖ್ಯರಿಂದ (ತಜ್ಞರಾದ ಗಾಯಕ ಶ್ರೇಷ್ಠರಿಂದ) ಹಾಡಲ್ಪಡುವಂತಹುದು; ಅದನ್ನು ಹಾಡುವುದು ಆಧುನಿಕ ಗಾಯಕರೆಲ್ಲರಿಗೆ ಅಶಕ್ಯ. ಆದರೂ ಅದರ ಲಕ್ಷಣವನ್ನು ತಿಳಿದುಕೊಳ್ಳುವುದು ಶ್ರೇಯಃಸಾಧನವಾದುದರಿಂದ, ಅದನ್ನು ಮೊದಲಾಗಿ ಹೇಳಿದೆ. ಈಗ 'ಗಾನ'ವೆಂಬುದನ್ನು ನಿರೂಪಿಸುತ್ತೇನೆ : ದೇಶೀಯ ರಾಗ ಇತ್ಯಾದಿ ಲಕ್ಷಣಗಳಿಂದ ಕೂಡಿದ್ದು, ಸಮರ್ಥರಾದ 'ವಾಗ್ಗೇಯಕಾರ' (ಸಂಗೀತ ಕೃತಿಕಾರ)ರಿಂದ ರಚಿತವಾದುದು ಸಾಮಾನ್ಯವಾಗಿ ಹಾಡುವ 'ಗಾನ'; ಇದು ಜನಪ್ರಿಯವೂ ಶ್ರೇಯಸ್ಕರವೂ ಆಗಿದೆ.”

ಜನಪ್ರಿಯವಾದ ಈ ಗಾನದಲ್ಲಿ ಉಪಯುಕ್ತವಾಗುವ ನಾನಾ ದೇಶೀ ಗೀತಗಳೊಳಗೆ 'ಸಾಲಗಸೂಡ'ವೆಂಬುದು ಒಂದು ವರ್ಗ. ತುಳಾಜಿ ಮಹಾರಾಜನ 'ಸಂಗೀತ ಸಾರಾಮೃತ' ದಲ್ಲಿ ಹೀಗಿದೆ:

ಅಥ ಸಾಲಗ ಸೂಡಾಖ್ಯಂ ಗೀತವಾದೌ ನಿರೂಪ್ಯತೇ|
ಸೂಡ ಶಬ್ಲೊತ್ರ ದೇಶೀಯೋ ಗೀತಾಲ್ಯರ್ಥ ಪ್ರಕೀರ್ತಿತಃ ||