ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣಪತಿ ಶಾಸ್ತ್ರಿ

ವಿಕಿಸೋರ್ಸ್ದಿಂದ

ಗಣಪತಿಶಾಸ್ತ್ರಿ, ಟಿ. : 1860-1926. ಭಾಸನ ನಾಟಕಗಳನ್ನು ಸಂಸ್ಕೃತ ಜಗತ್ತಿಗೆ ಪ್ರಪ್ರಥಮವಾಗಿ ಅರ್ಪಿಸಿದ ಮತ್ತು ಸಂಸ್ಕೃತದ ಮತ್ತೊಂದು ಅಮರಕೃತಿ ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ವಿದ್ವತ್ಪುರ್ಣ ವ್ಯಾಖ್ಯಾನ ಬರೆದ ಕೀರ್ತಿಗೆ ಭಾಜನರಾದ ದೊಡ್ಡ ವಿದ್ವಾಂಸರು. ಹದಿನಾರನೆಯ ಶತಮಾನದ ಪ್ರಸಿದ್ಧ ಸಂಸ್ಕೃತ ಪಂಡಿತ ಅಪ್ಪಯ್ಯ ದೀಕ್ಷಿತರ ವಂಶದಲ್ಲಿ ಜನಿಸಿದ ರಾಮಸುಬ್ಬಯ್ಯರ್ ಇವರ ತಂದೆ. ಹದಿನಾರನೆಯ ವಂiÀÄಸ್ಸಿನಲ್ಲಿ ತಿರುವನಂತಪುರಕ್ಕೆ ಬಂದು ಆಗ ತಿರುವಾಂಕೂರ್ ಮಹಾರಾಜರ ಧರ್ಮಾಧಿಕಾರಿಯಾಗಿದ್ದ ಕರಮನೈ ಸುಬ್ರಹ್ಮಣ್ಯ ಶಾಸ್ತ್ರಿಯವರಲ್ಲಿ ತಮ್ಮ ಸಂಸ್ಕೃತ ವ್ಯಾಸಂಗ ಮುಂದುವರಿಸಿದರು. ಗಣಪತಿ ಶಾಸ್ತ್ರಿಗಳದು ಅಸಾಧಾರಣ ಪ್ರತಿಭೆ, ಪಾಂಡಿತ್ಯ. ಹದಿನೇಳನೆಯ ವಂiÀÄಸ್ಸಿನಲ್ಲೇ ಮಾಧವೀವಸಂತಮ್ ಎಂಬ ನಾಟಕವನ್ನು ಬರೆದು ಯುವರಾಜ ವಿಶಾಖಂ ತಿರುನಾಳ್ ಅವರಿಂದ ವಜ್ರದುಂಗುರವನ್ನು ಬಹುಮಾನವಾಗಿ ಪಡೆದರು. ಅರ್ಥಚಿತ್ರ ಮಣಿಮಾಲಾ ಎಂಬ ಅಲಂಕಾರ ಗ್ರಂಥ ಸೇತುಯಾತ್ರಾ ವರ್ಣನಂ ಎಂಬ ಗದ್ಯ ಗ್ರಂಥ, ಮರ್ಚೆಂಟ್ ಆಫ್ ವೆನಿಸ್ ನಾಟಕದ ಸಂಸ್ಕೃತಾನುವಾದ-ಇವು ಇವರ ಚೊಚ್ಚಲ ಕೃತಿಗಳು. ಹದಿನೆಂಟನೆಯ ವಂiÀÄಸ್ಸಿನಲ್ಲೇ ತಿರುವಾಂಕೂರ್ ಉಚ್ಚ ನ್ಯಾಯಾಲಯದಲ್ಲಿ ಉದ್ಯೋಗವೊಂದು ಸಿಕ್ಕಿತಾದರೂ ಅದನ್ನು ತ್ಯಜಿಸಿ ಮಹಾರಾಜ ವಿಶಾಖಂ ತಿರುನಾಳ್ ಅವರ ಕೋರಿಕೆಯ ಮೇಲೆ ಅರಮನೆಯ ಸರಸ್ವತೀ ಭಂಡಾರದ ಗ್ರಂಥಪಾಲರಾಗಿ ಕೇರಳವರ್ಮ, ವಲಿಯ ಕೋಯಿಲ್ ತಂಪುರಾನ್, ಎಳತ್ತೂರ್ ರಾಮಸ್ವಾಮಿಶಾಸ್ತ್ರಿ ಯವರಂಥ ಪ್ರಸಿದ್ಧ ಸಂಸ್ಕೃತಜ್ಞರ ನಿಕಟ ಸಂಪರ್ಕದಿಂದ ಪುರಾತನ ಹಸ್ತಪ್ರತಿಗಳ ಅಧ್ಯಯನಕ್ಕೆ ತೊಡಗಿದರು. 1889 ರಲ್ಲಿ ಸ್ಥಾಪಿತವಾದ ತಿರುವನಂತಪುರ ಸಂಸ್ಕೃತ ಮಹಾಪಾಠ ಶಾಲೆಗೆ 1899 ರಲ್ಲಿ ಮುಖ್ಯಾಧಿಕಾರಿಗಳಾದರು. ಇಷ್ಟಾದರೂ ಅರಮನೆಯ ಗ್ರಂಥಾಲಯದ ಅಧ್ಯಕ್ಷರಾಗಿಯೇ ಉಳಿದುಕೊಂಡು ತಿರುವಾಂಕೂರ್ ಸಂಸ್ಕೃತ ಗ್ರಂಥಮಾಲೆಯ ಸಂಪಾದಕತ್ವವನ್ನು ಮುಂದುವರಿಸಿದರು. ಇವರ ನೇತೃತ್ವದಲ್ಲಿ ಆ ಮಾಲೆಯಲ್ಲಿ ಎಂಬತ್ತೇಳು ಸುಪ್ರಸಿದ್ಧ ಗ್ರಂಥಗಳು ಅಚ್ಚಾಗಿ ಬೆಳಕು ಕಂಡುವು. ಈ ಮಧ್ಯೆ ಸಮಯಾವಕಾಶ ಕಲ್ಪಿಸಿಕೊಂಡು ಶಾಸ್ತ್ರಿಗಳು ಅನೇಕ ಸಂಸ್ಕೃತ ಪಠ್ಯ ಗ್ರಂಥಗಳನ್ನಲ್ಲದೇ ಇಂದಿಗೂ ಪ್ರಸಿದ್ಧವಾಗಿರುವ ಸ್ತೋತ್ರ ಗ್ರಂಥ ಅಪರ್ಣಾಸ್ತವವನ್ನೂ ಬರೆದರು. ಸಿಲ್ವೇನ್ ಲೀವೀ ಅವರ ಕೇಳಿಕೆಯ ಪ್ರಕಾರ ಭಾರತಾನುವರ್ಣನಂ ಎಂಬ ಬಾರತೀಯ ಸಂಸ್ಕೃತಿಯನ್ನು ಕುರಿತ ಒಂದು ಗ್ರಂಥವನ್ನೂ ಸಿದ್ಧಪಡಿಸಿದರು. 1908 ರಲ್ಲಿ ತಿರುವಾಂಕೂರು ಸರ್ಕಾರ ಶಾಸ್ತ್ರಿಗಳ ಗ್ರಂಥ ಸಂಪಾದನ ಸಾಮಥರ್್ಯ, ಹಸ್ತಪ್ರತಿಗಳ ವಿಮರ್ಶನ ಪಾಂಡಿತ್ಯಗಳನ್ನು ಪರಿಗಣಿಸಿ ಹಸ್ತ ಪ್ರತಿಗಳ ಸಂಗ್ರಹಣಕ್ಕಾಗಿಯೇ ಒಂದು ಇಲಾಖೆಯನ್ನು ಸ್ಥಾಪಿಸಿತು. ಗಣಪತಿ ಶಾಸ್ತ್ರಿಗಳು ಅದರ ಅಧ್ಯಕ್ಷರಾಗಿ 1,400 ಹಸ್ತ ಪ್ರತಿಗಳನ್ನು ಸಂಗ್ರಹಿಸಿದರು. 1910 ಶಾಸ್ತ್ರಿಗಳ ಜೀವನದ ಮುಖ್ಯ ವರ್ಷ. ಆಗ ಶಾಸ್ತ್ರಿಗಳಿಗೆ ಭಾಸನ ನಾಟಕಗಳ ಹಸ್ತಪ್ರತಿಗಳು ದೊರೆತುವು. 1912 ರಲ್ಲವು ಮುದ್ರಿತವಾಗಿ ಬೆಳಕು ಕಂಡು ವಿಶ್ವದ ಮೂಲೆ ಮೂಲೆಗಳ ಸಂಸ್ಕೃತಜ್ಞರ ಕೈ ಸೇರಿದುವು. ಪಾಶ್ಚಾತ್ಯ ಪೌರಸ್ತ್ಯವಿದ್ವಾಂಸರು ಒಕ್ಕೊರಲಿಂದ ಶಾಸ್ತ್ರಿಗಳನ್ನು ಶ್ಲಾಘಿಸಿದರು. ಅಲಹಾಬಾದಿನಲ್ಲಿ ನಡೆದ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನದ ಅಧ್ಯಕ್ಷ ಪಟ್ಟ ಶಾಸ್ತ್ರಿಗಳ ಪಾಲಿಗೆ ಬಂತು. 1920 ರಲ್ಲಿ ಪ್ಯಾರಿಸ್ಸಿನಲ್ಲಿ ನಡೆದ ವಿಶ್ವ ಪ್ರಾಚ್ಯ ವಿದ್ಯಾ ಸಮ್ಮೇಳನ ಇವರಿಗೆ ಅಭಿನಂದನಾ ಸಮಾರಂಭವೊಂದನ್ನೇರ್ಪಡಿಸಿತು. ಲಂಡನ್ನಿನ ರಾಯಲ್ ಏಷ್ಯಾಟಿಕ್ ಸಂಘದ ಗೌರವ ಸದಸ್ಯತ್ವ, ಜರ್ಮನಿಯ ಟೂಬಿಂಗೆನ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪ್ರಶಸ್ತಿ ಮತ್ತು ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ಭಾರತ ಸರ್ಕಾರದ ಮಹಾಮಹೋಪಾಧ್ಯಾಯ ಪ್ರಶಸ್ತಿ-ಇವೆಲ್ಲ ಶಾಸ್ತ್ರಿಗಳಿಗೆ ಲಭಿಸಿದುವು. 1924-26 ರ ವೇಳೆಗೆ ಶಾಸ್ತ್ರಿಗಳು ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ವ್ಯಾಖ್ಯಾನ ಬರೆಯಲು ತೊಡಗಿದರು. ಇದೇ ವೇಳೆಗೆ ಬರೋಡದ ಸಂಸ್ಕೃತ ಗ್ರಂಥಮಾಲೆಯಲ್ಲಿ ಭೋಜನ ಸಮರಾಂಗಣ ಸೂತ್ರಧಾರವೆಂಬ ಗ್ರಂಥ ಶಾಸ್ತ್ರಿಗಳಿಂದ ಸಂಪಾದಿಸಲ್ಪಟ್ಟು ಅಚ್ಚಾಯಿತು. ತಮಗೆ ಪರಮಾಶ್ರಯದಾತರಾಗಿದ್ದ ಮಹಾರಾಜ ಮೌಲಂತಿರುನಾಳ್ ಅವರೂ ತೀರಿಕೊಂಡದ್ದು ಶಾಸ್ತ್ರಿಗಳ ಮನಸ್ಸಿನ ಮೇಲೆ ದೊಡ್ಡ ಆಘಾತವನ್ನುಂಟುಮಾಡಿತು. ಸತತವಾಗಿ, ಅರ್ಧ ಶತಮಾನಕ್ಕೂ ಮೀರಿ, ಸಂಸ್ಕೃತಕ್ಕಾಗಿ, ಹಸ್ತಪ್ರತಿಗಳ ವಿಮರ್ಶಾತ್ಮಕ ಸಂಪಾದನೆಗಾಗಿ ಅಹರ್ನಿಶಿ ದುಡಿದ ಗಣಪತಿಶಾಸ್ತ್ರಿಗಳು 1926 ಏಪ್ರಿಲ್ ಮೂರರಂದು ಇಹಲೋಕವನ್ನು ತ್ಯಜಿಸಿದರು. ಇಂದು ಭಾಸನ ನಾಟಕಗಳನ್ನು ಓದುವ, ಅಭ್ಯಾಸ ಮಾಡುವ ಯಾರಾದರೂ ಇವರ ಹೆಸರನ್ನು ಸ್ಮರಿಸದಿರಲಾರರು