ಪುಟ:Ekaan'gini.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಲೋಟ ಬರಿದಾಯಿತು. ಆದರೆ ಹೃದಯ ತುಂಬಿರಲೇ ಇಲ್ಲ. ಬಾಗಿಲಿನತ್ತ ನೋಡುತ್ತ ಆತ ಮಲೆನಾಡಿನ ಬಾಹು ಬಳ್ಳಿಯಿಂದ ಆಕೆಯನ್ನು ಬಂಧಿಸಿದ.

     "ಒಬ್ಬನೇ ಇರೋಕೆ ನನ್ನಿಂದಾಗಲ್ಲ ಕಣೇ. ಎಷ್ಟೋ ಸಲ. ಇನ್ನೇನು ಹುಚ್ಚೇ ಹಿಡಿಯುತ್ತೆ ಅಂತಿದ್ದೆ.
     ವಿಜಯಾ ಆತನ ಗುಂಗುರು ಕೂದಲಿನೊಡನೆ ಆಟವಾಡಿದಳು.
     "ನನಗೂ ಹಾಗೇ ಆಗಿಲ್ವೇನೋ?"
     ವೆಂಕಟರಾಮಯ್ಯ, ಆ ತುಟಿ ಮೂಗು ಕಣ್ಣುಗಳನ್ನು ದಿಟ್ಟಿಸಿ ನೋಡಿದ. ಪ್ರಾಮಾಣಿಕವಾಗಿದ್ದ ನುಡಿ. ಎಷ್ಟೊಂದು ಅಪ್ಯಾಯಮಾನ ಅದು! ತನ್ನ ಆತ್ಮೀಯ ಜೀವದ ಅನುಭವವೂ ತನ್ನದಕ್ಕಿಂತ ಭಿನ್ನವಲ್ಲವೆಂದು ತಿಳಿಯುವುದು ಎಷ್ಟೊಂದು ಸಮಾಡಾನದ ವಿಷಯ!
     "ಯಾವತ್ತು ಹೊರಡೋಣ ವಿಜಯ?"
     "ನಿಮ್ಮ ಮಾವನನ್ನ ಕೇಳಿ."
     "ಪುನಃ ಪೂಜೆ ಪುನಸ್ಕಾರ ತಂತ್ರ ಮಂತ್ರ ಆಗ್ಬೇಕೇನೋ?
     "ಬೇಡವಾದರೆ ಬೇಡ."
     "ಕೇಳ್ತಾರೆಯೆ ಅವರು? ನಮ್ಮ ಮಾತೆಲ್ಲಿ ನಡೆಯುತ್ತೆ?"
     ಬಾಗಿಲು ಮೆಲ್ಲಮೆಲ್ಲನೆ ಕಿರ್ರೆಂದಿತು. ಕಳ್ಳ ಹೆಜ್ಜೆಯಿಂದ ಬಂದು ಯಾರೋ ನಿಂತು ಅದನ್ನ ಸ್ವಲ್ಪ ಸ್ವಲ್ಪನೆ ತಳ್ಳಿದ ಹಾಗೆ.ವೆಂಕಟರಾಮಯ್ಯ ಹುಬ್ಬು ಗಂಟಿಕ್ಕಿದ. ವಿಜಯ ಹೌಹಾರಿ ದೂರ ಕುಳಿತಳು, ಎದೆಯ ಮೇಲಿನ ಸೆರಗು ಸರಿಪಡಿಸಿಕೊಳ್ಳುತ್ತಾ.
     ಬಾಗಿಲು ತೆರೆದು ಒಳಗಿಣಿಕಿ ನೋಡಿದವಳು ಸರಸ್ವತಿ. ಹೊಸ ಗಂಡು ಮುಖ ಕಂಡು ಮಗುವಿಗೆ ದಿಗಿಲಾಯಿತು. ದಂಪತಿಗಳು ನಕ್ಕರು. ವಿಜಯಾ ಸರಸ್ವತಿಯನ್ನು ಕರೆದಳು.
     "ಬಾರೇ, ಬಾ...."
     ಸರಸ್ವತಿ ಬರಲಿಲ್ಲ. ಅವಸರ ಅವಸರವಾಗಿ ಪುಟ್ಟ ಹೆಜ್ಜೆಗಳನ್ನಿಡುತ್ತ, ಚಿಕ್ಕಮ್ಮನ ಜತೆಯಲ್ಲಿ ಯಾರೋ ಅಪರಿಚಿತನಿರುವನೆಂದು ದೂರು ಕೊಡಲು ಅಮ್ಮನೆಡೆಗೆ ನಡೆದಳು.