ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಶೋಕ ವೃಕ್ಷ

ವಿಕಿಸೋರ್ಸ್ದಿಂದ

ಫ್ಯಾಬೇಸೀ ಕುಟುಂಬ (ಲೆಗ್ಯುಮಿನೋಸೀ), ಸೇರಿದ ಸೀಸಾಲ್ ಪಿನಿಯಾಯ್ಡೀ ಉಪಕುಟುಂಬಕ್ಕೆ ಸೇರಿದ ಮರ. ಸಸ್ಯವೈಜ್ಞಾನಿಕ ಹೆಸರು ಸರಕ ಇಂಡಿಕ. ಉಷ್ಣವಲಯದಲ್ಲಿ ಬೆಳೆಯುತ್ತದೆ. ಉಗಮಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ತೋಟಗಾರಿಕೆ ಯನ್ನು ಕುರಿತು ಗ್ರಂಥ ರಚಿಸಿರುವ ಬೇಯಿಲೀ ಎಂಬ ಲೇಖಕನ ಅಭಿಪ್ರಾಯದಲ್ಲಿ ಈ ವೃಕ್ಷ ಭಾರತದ ಮೂಲವಾಸಿ ಎಂದಿದೆ; ಚಬ್ಬರ್‌ನ ಪ್ರಕಾರ ಇದು ಅಮೆರಿಕದ ಮೂಲದ್ದು; ಭಾರತೀಯ ಲೇಖಕ ರಾಂಧವಾ ಪ್ರಕಾರ ಇದು ಭಾರತ ಮತ್ತು ಶ್ರೀಲಂಕ ಮೂಲದ್ದು.


ಮರ ಚಿಕ್ಕಗಾತ್ರದ್ದು. ಹರಡಿರುವ ರೆಂಬೆಗಳುಳ್ಳದ್ದು. ಎಲೆಗಳು ಕಿರಿ ಅಗಲದವೂ ಮತ್ತು ಉದ್ದವೂ ಇವೆ. ತೊಟ್ಟುಗಳಿಲ್ಲ, ತುದಿ ಮೊನಚು; ನಿತ್ಯಹಸುರು. ಒಂದು ಎಲೆಯಲ್ಲಿ ಸುಮಾರು 4-6 ಜೊತೆ ಕಿರುಎಲೆಗಳು ಎದುರು ಬದುರಾಗಿ ಇರುತ್ತವೆ. ಎಳೆಯ ಎಲೆಗಳು ಹಳದಿ ಬಣ್ಣಕ್ಕಿದ್ದು ಇಳಿಬಿದ್ದಿರುವುವು. ಕಾಂಡದ ತೊಗಟೆಯ ಬಣ್ಣ ಕಂದು. ಹೂಗೊಂಚಲು ದಪ್ಪ; ಸಣ್ಣಗಾತ್ರದ ಕೊಂಬೆಗಳ ತುದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಎಳೆಯ ಹೂವಿನ ಬಣ್ಣ ಕಿತ್ತಲೆಯಿದ್ದು ಮುಂದೆ ಕೆಂಬಣ್ಣಕ್ಕೆ ತಿರುಗುವುದು. ಹಚ್ಚ ಹಸುರು ಎಲೆಗಳ ನಡುವೆ ಕೆಂಪು ಹೂರಾಶಿಗಳು ಚೆಲುವಾಗಿ ಕಾಣುತ್ತವೆ. ಹೂವು ಪತ್ರದ (ಕ್ಯಾಲಿಕ್ಸ್‌) ಕೆಳಗೆ ಕೆಂಪಾದ ಉಪಪತ್ರ (ಎಪಿಕೇಲಿಕ್ಸ್‌) ಇದೆ. ಹೂ ಬಿಡುವ ಕಾಲ ಜನವರಿಯಿಂದ ಮೇ ತಿಂಗಳವರೆಗೆ. ಹೂವಿನಲ್ಲಿ ಮಧುರವಾದ ಸುಗಂಧವೂ ಉಂಟು.


ಬೀಜಗಳನ್ನು ನೆಟ್ಟು ಸಸ್ಯಗಳನ್ನು ಪಡೆಯಬಹುದು. ಎಳೆಯ ಗಿಡಕ್ಕೆ ನೆರಳು ಅಗತ್ಯ. ಬಿಸಿಲು ಹೆಚ್ಚಾಗಿದ್ದರೆ ಗಿಡಗಳು ಮುರುಟಿಕೊಳ್ಳುವುವು.


ಮರದ ತೊಗಟೆಯಲ್ಲಿ ದೊರೆಯುವ ಗ್ಯಾಲಿಕ್ ಆಮ್ಲ ಔಷಧಿಗಳಿಗೆ ಉಪಯೋಗ ವಾಗುತ್ತದೆ. ಹೂವನ್ನು ಇದೇ ರೀತಿ ಬಳಸುವುದುಂಟು. ಶ್ರೀಲಂಕದಲ್ಲಿ ಈ ಮರವನ್ನು ಮನೆ ಕಟ್ಟುವ ಮರಮುಟ್ಟುಗಳಿಗಾಗಿ ಉಪಯೋಗಿಸುತ್ತಾರೆ. ಹಿಂದೂಗಳೂ ಬೌದ್ಧರೂ ಈ ಮರವನ್ನು ದೇವಾಲಯಗಳ ಸುತ್ತಲೂ ಬೆಳೆಸುವುದುಂಟು. ಇದರ ಹೂಗಳು ಪುಜೆಗೆ ಒದಗುತ್ತವೆ. ಈ ವೃಕ್ಷವನ್ನು ಇತ್ತೀಚೆಗೆ ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಅಶೋಕವೃಕ್ಷಕ್ಕೆ ಕೊಟ್ಟಿರುವ ಸ್ಥಾನ ಬಹಳ ಮುಖ್ಯವಾದುದು. ರಾಮಾಯಣ, ಮಹಾಭಾರತ ಕಾಲದಿಂದಲೂ ಜನಪ್ರಿಯ ವೃಕ್ಷ. ಈ ವೃಕ್ಷಗಳಿಂದ ಕೂಡಿದ ವನದಲ್ಲಿ ರಾವಣ ಸೀತೆಯನ್ನು ಅವಿತಿ(ಅಡಗಿಸಿ)ಟ್ಟಿದ್ದನೆಂದು ಹೇಳುತ್ತಾರೆ. ಕಾಳಿದಾಸನ ಕಾಲದಲ್ಲಂತೂ ಈ ಮರಕ್ಕೆ ದೊರೆತ ಗೌರವ ಅಪಾರ. ವಸಂತಕಾಲದಲ್ಲಿ ಒಂದು ನಿಶ್ಚಿತದಿನ ಸುಂದರಿಯೊಬ್ಬಳು ತನ್ನ ಎಡೆಗಾಲಿನಿಂದ ಮೃದುವಾಗಿ ಅಶೋಕವೃಕ್ಷವನ್ನು ಒದ್ದರೆ ಆ ಮರದಲ್ಲಿ ಗರ್ಭಾಂಕುರವಾಗುತ್ತಿತ್ತೆಂದು ಭೋಜರಾಜನ ಸರಸ್ವತೀ ಕಂಠಾಭರಣ, ಕಾಳಿದಾಸನ ಮಾಲವಿಕಾಗ್ನೀಮಿತ್ರ, ಹರ್ಷನ ರತ್ನಾವಳೀ ಗ್ರಂಥಗಳಲ್ಲಿ ಹೇಳಲಾಗಿದೆ. ಇದನ್ನು ದೋಹದ ಕ್ರಿಯೆಯೆಂದು ಬಣ್ಣಿಸಲಾಗಿದೆ. ಚೈತ್ರ ಶುಕ್ಲ ಅಷ್ಟಮಿಯಂದು ವ್ರತಮಾಡಿ ಅಶೋಕದ ಎಂಟು ಎಲೆಗಳನ್ನು ತಿಂದಲ್ಲಿ ಸ್ತ್ರೀಯರ ಸಂತಾನ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ.