ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀಮೂತವಾಹನ

ವಿಕಿಸೋರ್ಸ್ದಿಂದ

ಜೀಮೂತವಾಹನ ಶ್ರೀಹರ್ಷನ ಸಂಸ್ಕøತ ನಾಗಾನಂದ ನಾಟಕದ ನಾಯಕ. ವಿದ್ಯಾಧರ ರಾಜ ಜೀಮೂತಕೇತುವಿನ ಮಗ. ತಂದೆ ತಾಯಿಯರು ವಾನಪ್ರಸ್ಥವನ್ನು ಸ್ವೀಕರಿಸಿ ರಾಜ್ಯವನ್ನು ಯೋಗ್ಯ ಅಮಾತ್ಯರ ಕೈಗಿತ್ತು ನಡೆದಾಗ ತಾನೂ ತಂದೆ ತಾಯಿಯರನ್ನು ಹಿಂಬಾಲಿಸಿ ಅವರ ಸೇವೆಯಲ್ಲಿ ತಲ್ಲೀನನಾಗಿರುತ್ತಾನೆ. ಒಮ್ಮೆ ಮಲಯವತಿಯ ಭೇಟಿಯಾಗುತ್ತದೆ. ಇಬ್ಬರೂ ಪರಸ್ಪರ ಪ್ರೇಮಿಸಿ ಮುಂದೆ ಹಿರಿಯರ ಅಪ್ಪಣೆಯಂತೆ ಮದುವೆಯಾಗುತ್ತಾರೆ. ಕೆಲವು ದಿನಗಳ ಅನಂತರ ಮಲಯ ಪರ್ವತದ ಸಾನುಪ್ರದೇಶದ ವೃತ್ತಾಂತವನ್ನು ಮೈದುನ ಮಿತ್ರಾವಸು ತಿಳಿಸುತ್ತಾನೆ. ಅಸಂಖ್ಯಾತ ಸರ್ಪಗಳ ವಿನಾಶವನ್ನು ತಪ್ಪಿಸಲು ವಾಸುಕಿ ಗರುಡನೊಡನೆ ಮಾಡಿಕೊಂಡ ಒಪ್ಪಂದದಂತೆ ದಿನಕ್ಕೊಂದು ಸರ್ಪ ಆಹುತಿಯಾಗುವುದನ್ನು ಕೇಳಿ ಜೀಮೂತವಾಹನ ದುಃಖಿಸುತ್ತಾನೆ. ಆ ದಿನದ ಸರದಿ ಶಂಖಚೂಡನೆಂಬ ಸರ್ಪನದು. ಇದ್ದೊಬ್ಬ ಮಗನಿಗಾಗಿ ಆತನ ತಾಯಿ ಶೋಕಿಸುತ್ತಿರುತ್ತಾಳೆ. ಜೀಮೂತವಾಹನ ಅವರಲ್ಲಿಗೆ ಹೋಗಿ ತಾನು ಶಂಖಚೂಡನ ಸ್ಥಾನಕ್ಕೆ ಹೋಗುತ್ತೇನೆಂದರೂ ಅವರು ಒಪ್ಪುವುದಿಲ್ಲ. ಕೊನೆಯ ಕ್ಷಣದಲ್ಲಿ ಅವರು ಗೋಕರ್ಣೇಶ್ವರನ ದರ್ಶನಕ್ಕೆ ಹೋದಾಗ ದೀಪಾವಳಿಯ ಉಡುಗೊರೆಯಾಗಿ ಬಂದಿದ್ದ ಕೆಂಪು ವಸ್ತ್ರವನ್ನೇ ವಧ್ಯ ಚಿಹ್ನೆಯಾಗಿ ಹೊದ್ದು ವಧ್ಯಸ್ಥಾನದಲ್ಲಿ ಹೋಗಿ ನಿಲ್ಲುತ್ತಾನೆ. ಗರುಡ ನಿತ್ಯದಂತೆ ವಧ್ಯಸ್ಥಾನದಲ್ಲಿರುವವ ನಾಗನೆಂದೇ ತಿಳಿದು ಭಕ್ಷಿಸುವಾಗ ಆತನ ಸಹನೆ ತಾಳ್ಮೆಯನ್ನು ನೋಡಿ ಅಚ್ಚರಿಗೊಳ್ಳುತ್ತಾನೆ. ಆಗ ಅಲ್ಲಿಗೆ ಶಂಖಚೂಡ, ಜೀಮೂತವಾಹನನ ತಂದೆ, ತಾಯಿ, ಪತ್ನಿ ಎಲ್ಲರೂ ಬರುತ್ತಾರೆ. ವಸ್ತುಸ್ಥಿತಿಯನ್ನು ತಿಳಿದ ಗರುಡ ಪಶ್ಚಾತ್ತಾಪದಿಂದ ಅಹಿಂಸೆಯನ್ನು ಸ್ವೀಕರಿಸಿ ಅಮೃತವನ್ನು ತಂದು ದತ್ತ ನಾಗಗಳನ್ನು ಬದುಕಿಸುತ್ತಾನೆ. ಗೌರಿಯ ಆಶೀರ್ವಾದದಿಂದ ಜೀಮೂತವಾಹನ ಬದುಕಿ ವಿದ್ಯಾಧರ ಚಕ್ರವರ್ತಿಯಾಗುತ್ತಾನೆ.

ವಿದ್ಯಾಧರ ಜಾತಕ ಸಂಬಂಧವೆಂದು ನಾಟಕದ ಪ್ರಸ್ತಾವನೆಯಲ್ಲಿದ್ದರೂ ಜಾತಕ ಕಥೆಯಲ್ಲಿ ದೊರಕಿಲ್ಲ. ನಾಟಕದ ಕಥೆ ಬೃಹತ್ಕಥೆಯನ್ನು ಆಧರಿಸಿದ ಕಥಾಸರಿತ್ಸಾಗರ, ಬೃಹತ್ಕಥಾಮಂಜರಿಯಲ್ಲಿದೆ. ಮೂಲದಲ್ಲೆ ಜೀಮೂತವಾಹನನ ಪೂರ್ವ ಜನ್ಮದ ವೃತ್ತಾಂತವಿದೆ.

ಜೀಮೂತವಾಹನ ಧೀರೋದಾತ್ತ ನಾಯಕ. ರಾಜ್ಯಮೋಹದಿಂದ ಮುಕ್ತನಾದವ. ತಂದೆತಾಯಿಯರಲ್ಲಿ ಅನನ್ಯಭಕ್ತಿ ತೋರಿದವ. ಉತ್ತಮ ಪ್ರೇಮಿ ಮತ್ತು ಪತಿ, ಕಲ್ಪವೃಕ್ಷ, ರಾಜ್ಯ, ಕೊನೆಗೆ ತನ್ನ ಶರೀರವನ್ನೇ ದಾನವಾಗಿತ್ತ ತ್ಯಾಗಿ. ಕರುಣೆ, ಸಹನೆ, ತತ್ತ್ವನಿಷ್ಠೆ, ಅಹಿಂಸೆ, ಪರೋಪಕಾರ-ಆತನ ಜೀವನದಲ್ಲಿ ಕಾಣುವ ಗುಣಗಳು. (ಡಿ.ವಿ.)