ಪುಟ:Rangammana Vathara.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಗಳದಲ್ಲಿ ಹೆಂಗಸರು ಗುಂಪುಕಟ್ಟಿಕೊಂಡು ಗುಸು ಗುಸು ಮಾತನಾಡುತ್ತಿ

ದ್ದರು. ಆ ಮಾತುಕತೆಯ ನಡುವೆ ಒಮ್ಮೆಲೆ ಅವರ ಕಿವಿಗಳು ನಿಮಿರಿದವು. ಸದ್ದು,ಮೊದಲು ಅಸ್ಪಷ್ಟವಾಗಿದ್ದುದು, ಕ್ರಮೇಣ ಸ್ಪಷ್ಟವಾಗಿ ಕೇಳಿಸಿತು.

ಟಕ್-ಟಕ್-ಟಕ್....

ವಠಾರದ ನಡುವಿನ ಎರಡಡಿ ಅಗಲದ ಓಣಿಯಲ್ಲಿ ನಡೆಗೋಲನ್ನೂರಿಕೊಂಡು

ರಂಗಮ್ಮ ಬರುತ್ತಿದ್ದರು. ಎಂದಿನಂತೆ, ಆ ಸದ್ದಿನ ಜತೆಯಲ್ಲೆ, ಇದ್ದ ಕೆಲವು ಹಲ್ಲುಗಳನ್ನು ಕಡಿಯುವ ಸಪ್ಪಳ. ಅದರೊಡನೆ ಬೆರೆಯಲೆಂದು, ಗಂಟಲಿನಿಂದ ಹೊರಟು ಅಲ್ಲಿಯೆ ಇಂಗುತ್ತಿದ್ದ ಆಂ_ಊಂ_ನರಳಾಟ.

ವಯಸ್ಸಾಗಿದ್ದ ರಂಗಮ್ಮ ಮೆಲ್ಲನೆ ನಡೆದು ಬಂದು ಹೆಂಗಸರ ಗುಂಪಿನೆದುರು

ನಿಂತರು. ಬಾಗಿದ್ದ ಅವರ ಬೆನ್ನು ಕ್ಷಣ ಕಾಲ ನೇರವಾಗಿರಲು ಯತ್ನಿಸಿತು. ಆ ಯತ್ನಕ್ಕೆ ಬೆಂಬಲವಾಗಿ ಬಲಗೈ ಸೊಂಟದ ಮೇಲೇರಿತು.

ಉಳಿದೆಲ್ಲರ ಮುಖಗಳೂ ಪ್ರಶ್ನಾರ್ಥಕ ಚಿಹ್ನೆಯಾಗಿ ರಂಗಮ್ಮನತ್ತ ತಿರುಗಿ

ದುವು. ರಂಗಮ್ಮ ನಿಟ್ಟುಸಿರುಬಿಟ್ಟರು, ತಲೆಯಲ್ಲಾಡಿಸಿದರು. ಏನು ಅದರರ್ಥ? ಆಸೆ ಇಲ್ಲವೆ ಹಾಗಾದರೆ? ನಾರಾಯಣಿ ಬದುಕುವ ಆಸೆಯೇ ಇಲ್ಲವೆ?

ರಂಗಮ್ಮ ಮತ್ತಷ್ಟು ಬಿಗಿಯಾಗಿ ತುಟಿಗಳನ್ನು ಬಿಗಿದುಕೊಂಡರು. ಬೆನ್ನು

ಮೊದಲಿನಂತೆ ಬಾಗಿತು. ಕಾಲುಗಳು ಹಿಂತಿರುಗಿದವು. ಟಕ್_ಟಕ್_ಟಕ್ . . . ರಂಗಮ್ಮ ಸಾವಧಾನವಾಗಿ ನಡೆದು, ಆ ನಡುಹಗಲಲ್ಲೂ ಕತ್ತಲು ಅಡರಿದ್ದ ತಮ್ಮ ಗೂಡಿನೊಳಕ್ಕೆ ಸೇರಿಕೊಂಡರು.

ಮತ್ತೆ ಹೆಂಗಸರ ಗುಸು ಗುಸು ಮಾತು...

"ಅಯ್ಯೋ ಪಾಪ!"

" ಆ ಪುಟ್ಟ ಕೂಸುಗಳನ್ನ ಯಾರು ನೋಡ್ಕೊಳ್ಳೋರು ಇನ್ನು ?"

" ಆತನ ಕೆಲಸ ಬೇರೆ ಹೋಯ್ತಂತೆ."

"ಹೌದೆ? ನಿಜವೆ? ಅಯ್ಯೋ!"

ಆ ವಠಾರಕ್ಕೆ ಅದೇ ವರ್ಷ ಬಿಡಾರ ಬಂದಿದ್ದ, ಮಕ್ಕಳು ಮರಿ ಕಾಹಿಲೆ ಕಸಾಲೆ

ಎಂದರೇನೆಂಬುದನ್ನು ತಿಳಿಯದ, ಎಳೆಯ ಗೃಹಿಣಿಯೊಬ್ಬಳು ದೇವರನ್ನು ಟೀಕಿಸಿದಳು:

"ಆ ಪರಮಾತ್ಮ ಇಂಥ ಕಷ್ಟ ಕೊಡಬಾರದು!"

ಎಲ್ಲರೂ ಆ ಸ್ವರ ಕೇಳಿ ಅತ್ತ ನೋಡಿದರು. ಆದರೆ ಯಾರೂ ಮಾತನಾಡ

ಲಿಲ್ಲ ಮುಖ ಕೆಂಪೇರಿ, ಆಕೆ ತನ್ನ ಬಿಲ ಸೇರಿಕೊಂಡಳು.