ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಕೋಲ

ವಿಕಿಸೋರ್ಸ್ದಿಂದ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಶಿರಸಿ, ದಕ್ಷಿಣದಲ್ಲಿ ಕುಮಟ, ಉತ್ತರದಲ್ಲಿ ಕಾರವಾರ ಮತ್ತು ಯಲ್ಲಾಪುರ ತಾಲ್ಲೂಕುಗಳು ಈ ತಾಲ್ಲೂಕನ್ನು ಸುತ್ತುವರೆದಿವೆ. ಬೇಲೆಕೇರಿ, ಬಾಳಲೆ ಮತ್ತು ಭಾಸಗೋಡ ಇದರ ಹೋಬಳಿಗಳು. ತಾಲ್ಲೂಕಿನಲ್ಲಿ 86 ಗ್ರಾಮಗಳಿವೆ. ವಿಸ್ತೀರ್ಣ 971 ಚ.ಕಿಮೀ. ಜನಸಂಖ್ಯೆ 1,01,540. ತಾಲ್ಲೂಕಿನ ತೀರಪ್ರದೇಶ ಮರಳು ಭೂಮಿ. ಉಳಿದ ಭೂಭಾಗ ಕೆಂಪು ಜಂಬುಮಣ್ಣಿನಿಂದ ಕೂಡಿದೆ. ಮಳೆ ಹೆಚ್ಚು. ವಾರ್ಷಿಕ ಸರಾಸರಿ 3,405ಮಿಮೀ. ಬೇಡ್ತಿ ಅಥವಾ ಗಂಗಾವಳಿ ನದಿ ಈ ತಾಲ್ಲೂಕಿನ ಮಧ್ಯದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ ಹರಿದು ಅಂಕೋಲದ ದಕ್ಷಿಣದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವುದು. ಅಂಕೋಲದ ಬಳಿ ಅಂಕೋಲ ನದಿ ಇದೆ.ಇದರ ಪೂರ್ವ ಭಾಗವನ್ನು ಶಂಕದ ಹೊಳೆ ಎಂದು ಕರೆಯುತ್ತಾರೆ. ಇದರ ಉತ್ತರದಲ್ಲಿ ಬೇಲೆಕೇರಿ ನದಿ ಹರಿಯುವುದು. ಈ ನದಿಗಳು ತಾಲ್ಲೂಕಿನ ಬಹುತೇಕ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಹರಿಯುವುದರಿಂದ ನೀರಾವರಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಮಳೆನೀರಿನಿಂದ ಆಬಾದಾಗುವ ಅನೇಕ ತೋಟ ಗದ್ದೆಗಳಿವೆ. ಇಲ್ಲಿರುವ ಕೆಲವು ಬಾವಿಗಳಿಂದಲೂ ವ್ಯವಸಾಯಕ್ಕೆ ನೀರು ಒದಗುತ್ತದೆ. ಬತ್ತ, ಅಡಕೆ ಇಲ್ಲಿಯ ಮುಖ್ಯ ಬೆಳೆಗಳು. ತಾಲ್ಲೂಕಿನ ತೀರ ಪ್ರದೇಶ ಬಿಟ್ಟು ಅದರ ಪಕ್ಕದಲ್ಲೆ ಸಾಗುವ ಸುಮಾರು 5ರಿಂದ 8ಕಿಮೀ ಅಗಲದ ಒಳನಾಡ ಪ್ರದೇಶ ಬತ್ತದ ಗದ್ದೆಗಳಿಂದ, ಮಾವಿನ ತೋಪುಗಳಿಂದ ಗೇರು ಹಲಸು ಮತ್ತು ಇತರ ಫಲವೃಕಗಳಿಂದ ಕೂಡಿದೆ. ಇದರ ಪಕ್ಕದ ಸಣ್ಣ ಗುಡ್ಡಪ್ರದೇಶದಲ್ಲಿ ಹುಲ್ಲು ಬೆಳೆಯುತ್ತದೆ. ಇವುಗಳ ಪೂರ್ವಕ್ಕೆ ಎತ್ತರವಾದ ದಟ್ಟ ಕಾಡುಗಳಿಂದ ಕೂಡಿದ ಬೆಟ್ಟ ಪ್ರದೇಶವಿದೆ. ಒಟ್ಟು 75,374 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಮತ್ತಿ, ಹೊನ್ನೆ, ನಂದಿ ಮುಂತಾದ ಮರಗಳು ಬೆಳೆಯುತ್ತವೆ. ತೀರಪ್ರದೇಶದಲ್ಲಿ ತೆಂಗಿನ ಮರಗಳಿವೆ. ಇಲ್ಲಿನ ಕೆಲವು ಗ್ರಾಮಗಳು ಆರೋಗ್ಯದಾಯಕವೆಂದು ಪರಿಗಣಿತವಾಗಿವೆ.ಗಂಗಾವಳಿ ನದಿಯಲ್ಲಿ ಕೆಲವು ಕಿಮೀ ದೂರ ಸಣ್ಣ ದೋಣಿಗಳ ಸಂಚಾರ ಉಂಟು. ಕಾರವಾರ, ಹೊನ್ನಾವರ, ಮಂಗಳೂರುಗಳೊಡನೆ ಈ ತಾಲ್ಲೂಕು ಸಂಪರ್ಕ ಹೊಂದಿದೆ. ಅಂಕೋಲ ಪಟ್ಟಣದ ಉತ್ತರಕ್ಕೆ 8ಕಿಮೀ ದೂರದಲ್ಲಿರುವ ಅವರ್ಸೆ ಗ್ರಾಮದಲ್ಲಿ ಕಾತ್ಯಾಯಿನಿ ದೇವಾಲಯವಿದೆ. ಇಲ್ಲಿಯ ವಿಗ್ರಹ ಸಮುದ್ರದಲ್ಲಿ ದೊರೆತದ್ದೆಂದು ಪ್ರತೀತಿಯುಂಟು. ನವರಾತ್ರಿಯ ಒಂಬತ್ತು ದಿನಗಳೂ ಇಲ್ಲಿ ಜಾತ್ರೆ ನಡೆಯುವುದು. ಅಂಕೋಲದ ಉತರಕ್ಕೆ ಸುಮಾರು 6ಕಿಮೀ ದೂರದೆಲ್ಲಿ ಬೇಲೆಕೇರಿ ನದಿಯ ದಡದಲ್ಲಿರುವ ಬಂದರು, ಬೇಲೆಕೇರಿ ಗ್ರಾಮ. ಇದೊಂದು ಆರೋಗ್ಯಧಾಮವೆಂದು ಪ್ರಸಿದ್ಧವಾಗಿದೆ. ಅಂಕೋಲದ ದಕಿಣಕ್ಕೆ 8ಕಿಮೀ ದೂರದಲ್ಲಿರುವ ಗಂಗಾವಳಿ ಗ್ರಾಮ ಗಂಗಾವಳಿ ನದಿಯ ದಡದಲ್ಲಿದೆ. ಇಲ್ಲಿರುವ ಗಂಗೆ ದೇವಾಲಯ ಪ್ರಸಿದ್ಧ. ಗಂಗಾಷ್ಟಮಿಯಂದು ಇಲ್ಲಿ ಜಾತ್ರೆ ನಡೆಯುವುದು. ಗಂಗಾವಳಿ ಗ್ರಾಮಕ್ಕೆದುರಾಗಿ ನದಿಯ ಉತ್ತರ ದಂಡೆಯ ಮೇಲೆ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಂಜುಗುಣಿ ಗ್ರಾಮವಿದೆ.

ಈ ತಾಲ್ಲೂಕಿನ ಆಡಳಿತ ಕೇಂದ್ರ ಅಂಕೋಲ. ಜನಸಂಖ್ಯೆ 14,306. ಕಾರವಾರಕ್ಕೆ ಆಗ್ನೇಯದಲ್ಲಿ 24ಕಿಮೀ ದೂರದಲ್ಲಿ ಸಮುದ್ರತೀರದಿಂದ ಸುಮಾರು 3ಕಿಮೀ ಅಂತರದಲ್ಲಿದೆ ಇಲ್ಲಿಯ ಜನರ ಮುಖ್ಯ ಉದ್ಯೋಗ ವ್ಯವಸಾಯ, ವ್ಯಾಪಾರ ಮತ್ತು ಕೂಲಿಯ ದುಡಿಮೆ. ಅಂಕೋಲಪಟ್ಟಣ ಮುಂಬಯಿ ಮತ್ತು ಹುಬ್ಬಳಿಲ್ಲಿಯಿಂದ ಬರುವ ವಸ್ತುಗಳ ಮಾರುಕಟ್ಟೆ. ಅಕ್ಕಿ, ತೆಂಗು, ಅಡಕೆ ಹೊಗೆಸೊಪ್ಪು ಮುಂತಾದವು ಗಳ ವ್ಯಾಪಾರವೂ ನಡೆಯುವುದು.

ಅಂಕೋಲ ಒಂದು ಐತಿಹಾಸಿಕ ಸ್ಥಳ. ಪಟ್ಟಣದ ಪೂರ್ವಕ್ಕೆ ಸ್ವಲ್ಪ ಎತ್ತರದಲ್ಲಿ ವೃತ್ತಾಕಾರವಾದ ಶಿಥಿಲ ಕೋಟೆಯಿದೆ. ಸುಮಾರು 548ಮೀ ಸುತ್ತಳತೆಯುಳ್ಳ ಈ ಕೋಟೆಯ ಸುತ್ತ 4ಮೀ ಅಗಲ 4ಮೀ ಆಳದ ಕಂದಕವಿದೆ. ಇದನ್ನು ಬಳಸಿ ಮಾವು, ಗೋಡಂಬಿ, ಹಲಸು ಮುಂತಾದ ಫಲವೃಕ್ಷಗಳನ್ನು ಬೆಳೆಸಲಾಗಿದೆ. ಈ ಕೋಟೆಯನ್ನು ಸೋದೆಯ ದೊರೆ ಅಂಕೋಲದಲ್ಲಿ ವಾಸವಾಗಿದ್ದ ತನ್ನ ಪ್ರೇಯಸಿಗಾಗಿ ಕಟ್ಟಿಸಿದನೆಂದು ಪ್ರತೀತಿ. ಇಲ್ಲಿ ಮಹಾಮಾಯ, ಆರ್ಯದುರ್ಗಾ, ಕುಂಡೋದರಿ, ಶಾಂತಾದುರ್ಗಾ, ಕಾಳಮ್ಮ, ದತ್ತಾತ್ರೇಯ ಮೊದಲಾದ ದೇವಾಲಯಗಳಿವೆ. ಮಹಾಮಾಯ ಮತ್ತು ಕುಂಡೋದರಿ ದೇವಾಲಯಗಳು 16ನೆಯ ಶತಮಾನದೆಲ್ಲಿ ನಿರ್ಮಾಣಗೊಂಡವು . ಇಲ್ಲಿಯ ಕೋಟೇಶ್ವರ ಅಥವಾ ರುದ್ರೇಶ್ವರ ದೇವಾಲಯದ ಹತ್ತಿರ ಒಂದು ಕೊಳವೂ ಒಂದು ರೋಮನ್ ಕೆಥೊಲಿಕ್ ಇಗರ್ಜಿಯೂ ಇವೆ. 1540ರ ಸುಮಾರಿನಲ್ಲಿ ಈ ಊರು ಪೋರ್ಚುಗೀಸರ ವಶದಲ್ಲಿತ್ತು. ಆ ಕಾಲದಲ್ಲಿ ಅಂಕೋಲದ ಮೂಲಕ ಖನಿಜ ಮತ್ತು ಬಟೆಗಳ ವ್ಯಾಪಾರ ನಡೆಯುತ್ತಿತ್ತು. 1567ರಲ್ಲಿ ವೆನಿಸ್ಸಿನ ಪಸಿದ್ಧ ವ್ಯಾಪಾರಿಯಾದ ಸೀಸರ್ ಫ್ರೆಡರಿಕ್ ಅಂಕೋಲಕ್ಕೆ ಭೇಟಿಕೊಟ್ಟಿದ್ದ .ಬಿಜಾಪುರದ ರಾಜಪ್ರತಿನಿಧಿಯಾಗಿದ್ದ ಷರೀಫ್- ಉಚಲ್-ಮುಲ್ಕ್ 16ನೆಯ ಶತಮಾನದ ಕೊನೆಯಲ್ಲಿ ಅಂಕೋಲವನ್ನು ಆಡಳಿತ ಕೇಂದ್ರವನ್ನಾಗಿಮಾಡಿಕೊಂಡಿದ್ದ. 1676ರಲ್ಲಿ ಶಿವಾಜಿಯ ಸೇನೆ ಅಂಕೋಲದ ಅರ್ಧಭಾಗ ವನ್ನು ನಾಶಗೊಳಿಸಿತು. 1730ರಲ್ಲಿ ಅಂಕೋಲ ಸೋದೆ ರಾಜ್ಯದ ಬಂದರಾಗಿತ್ತೆಂದು ಹ್ಯಾಮಿಲ್ಟನ್ನನ ಬರವಣಿಗೆಯಲ್ಲಿ ಉಲ್ಲೇಖವಿದೆ. ಅಂಕೋಲ ಮೊದಲು ಕುಮಟ ತಾಲ್ಲೂಕಿನ ಭಾಗವಾಗಿತ್ತು. 1880ರಲ್ಲಿ ಇದನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಮಾಡಲಾಯಿತು.