ಪುಟ:Rangammana Vathara.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

15

ಯುವತಿ ತಂಗಿ, ವಠಾರದ ಗುಜುಗುಜು ಕೇಳಿಸಿದಂತೆ ಉಪಾಧ್ಯಾಯರ ಹೆಂಡತಿ
ಎಚ್ಚರಗೊಂಡು, ಅಡುಗೆ ಮನೆಯಲ್ಲಿ ಮಲಗಿದ್ದ ನಾದಿನಿಗೆ ಹೇಳುತ್ತಿದ್ದಳು:
"ಏ ಸುಮಂಗಳಾ...ಏಳೇ...ಏಳೇ...ಬೆಳಗಾಯ್ತೂಂತ ಕಾಣುತ್ತೆ."
ಹಾಗೆ ಹೇಳಿ ಆಕೆ ಹೊದಿಕೆಯನ್ನು ಮತ್ತಷ್ಟು ಬಲವಾಗಿ ಮುಖದ ಮೇಲೆಳೆದು
ಕೊಳ್ಳುತ್ತಿದ್ದಳು. ಮಕ್ಕಳ ಕಾಲುವೆಯ ಆಚೆ ದಡದಲ್ಲಿ ಮಲಗಿದ್ದ ಲಕ್ಷ್ಮೀನಾರಾ
ಯಣಯ್ಯ ಮಗ್ಗುಲು ಹೊರಳಿ, ಗೋಡೆಗೆ ಮೂಗು ಮುಟ್ಟಿಸುತ್ತ, ನಿದ್ದೆಯ
ಇನ್ನೊಂದು ಅಧ್ಯಾಯ ಆರಂಭಿಸುತ್ತಿದ್ದರು.
ಕೆಳಗಿನ ಮನೆಗಳಲ್ಲೆಲ್ಲ ಅಡ್ಡಗೋಡೆಯೊಂದು ಎರಡು ಕೊಠಡಿಗಳಿವೆಯೇನೋ
ಎಂಬ ಭ್ರಮೆಗೆ ಕಾರಣವಾಗಿತ್ತು. ಮಹಡಿಯ ವಿಭಾಗದಲ್ಲಿ ಅಂತಹ ಏರ್ಪಾಟಿರಲಿಲ್ಲ.
ಒಂಟಿ ಇಟ್ಟಿಗೆಯಿಟ್ಟು ಒಟ್ಟು ಮೂರು ಕೊಠಡಿಗಳನ್ನು ಮಾಡಿದ್ದರು. ಒಂದೊಂದು
ಕೊಠಡಿಯೂ ಒಂದೊಂದು ಮನೆ. ಆದರೆ ಮಹಡಿಯಾಗಿದ್ದುದರಿಂದ ಬಾಡಿಗೆಯ
ವಿಷಯದಲ್ಲಿ ಯಾವ ಮನೆಗೂ ಅವು ಕಡಿಮೆಯಾಗಿರಲಿಲ್ಲ.
ಮೊದಲ ಕೊಠಡಿಮನೆಯಲ್ಲಿ ಮೂವರು ವಿದ್ಯಾರ್ಥಿಗಳಿದ್ದರು. ಪರಸ್ಪರ
ತುಂಬಾ ಹೊಂದಿಕೊಂಡಿದ್ದ ಹುಡುಗರು! ರಾತ್ರೆ ರಂಗಮ್ಮ ದೀಪ ಆರಿಸುತ್ತಾರೆಂದು
ಅವರೆಂದೂ ನೊಂದುಕೊಂಡವರಲ್ಲ. ಬೆಳಗ್ಗೆ ದೀಪವಿಲ್ಲವೆಂದು ಚಡಪಡಿಸಿದವರೂ
ಅಲ್ಲ. ವಠಾರದಿಂದ ಎಷ್ಟೋ ಹಕ್ಕಿಗಳು ಹೊರಹೋದ ಮೇಲೆಯೇ ಅವರಿಗೆ ಬೆಳಕು
ಹರಿಯುತ್ತಿತ್ತು.
ಎರಡನೆಯ ಕೊಠಡಿಮನೆಯ ನಿವಾಸಿ, ಒಬ್ಬಂಟಿಗನಾದ ಚಂದ್ರಶೇಖರಯ್ಯ.
ಒಂದು ವಿಮಾಸಂಸ್ಥೆಯ ಈ ಪ್ರತಿನಿಧಿ ಉಸಿರಾಟದ ಸದ್ದೂ ಇಲ್ಲದೆ ನಿದ್ದೆ ಹೋಗು
ವಷ್ಟು ಸಮರ್ಥ. ತಿಂಗಳಲ್ಲಿ ಹತ್ತು ದಿನ ಆತ ಊರಲ್ಲಿದ್ದರೇ ಹೆಚ್ಚು. ಇದ್ದಾಗ,
ತಡವಾಗಿ ಮನೆಗೆ ಬರುವುದು, ತಡವಾಗಿ ಏಳುವುದು.

ಮೂರನೆಯ ಕೊಠಡಿಮನೆಯಲ್ಲಿದ್ದುದು ಸಾವಿತ್ರಮ್ಮನ ಸಂಸಾರ. 'ಅವರ
ಯಜಮಾನರು' ಹೆಚ್ಚಾಗಿ ಸ‍ರ್ಕೀಟಿನ ಮೇಲೆಯೇ ಇರುತ್ತಿದ್ದರು. ಆತ ಹಲವು
ಪ್ರಕಾಶನ ಸಂಸ್ಥೆಗಳ ಪ್ರತಿನಿಧಿ. ಕನ್ನಡದ ಅಪೂರ್ವ ವಿದ್ವ‍ತ್ತನ್ನೆಲ್ಲ ಪುಸ್ತಕಗಳ ರೂಪ
ದಲ್ಲಿ ಕಬ್ಬಿಣದೊಂದು ಪೆಟ್ಟಿಗೆಯಲ್ಲಿ ಹೊತ್ತು ಆತ ಊರೂರು ತಿರುಗುತ್ತಿದ್ದರು.
ಇಬ್ಬರು ಮಕ್ಕಳು ಆ ದಂಪತಿಗೆ. ಇಂಟರ್ ಪರೀಕ್ಷೆಗೆ ಎರಡು ಸಾರೆ ಕಟ್ಟಿ ಎರಡು
ಭಾಗಗಳಲ್ಲಷ್ಟೆ ಉತ್ತೀರ್ಣನಾದವನು ಜಯರಾಮು. ಎರಡು ವಾರಪತ್ರಿಕೆಗಳ
ಮಕ್ಕಳ ವಿಭಾಗಕ್ಕೆ ಸದಸ್ಯನಾಗಿದ್ದ ಆತನನ್ನು ಸುತ್ತಮುತ್ತಲಿನವರೆಲ್ಲ ಕವಿಯೆಂದು
ಕರೆಯುತ್ತಿದ್ದರು. ಆತನ ತಂಗಿ, ತಾಯ್ತಂದೆಯರ ದೃಷ್ಟಿಯಲ್ಲಿ 'ಇನ್ನೂ ಚಿಕ್ಕ
ಹುಡುಗಿ.' ಆದರೆ ಅಕ್ಕ ಪಕ್ಕದ ಮನೆ ಹೆಂಗಸರ ಅಭಿಪ್ರಾಯದ ಪ್ರಕಾರ 'ಬೆಳೆದು
ನಿಂತವಳು.' ಆದರೆ ಪುಟ್ಟ ರಾಧಾ ಈಗಲೂ ತಾಯಿಯ ಜತೆಯಲ್ಲೆ ಮೈಮುದುಡಿ
ಕೊಂಡು ಮಲಗುತ್ತಿದ್ದಳು. ಕತ್ತಲ್ಲನ್ನು ಕಂಡರೆ ಅವಳಿಗೆ ಭಯ. ಕವಿ ಜಯರಾಮು