ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಯ

ವಿಕಿಸೋರ್ಸ್ದಿಂದ
ಗಯ


ಬಿಹಾರ ರಾಜ್ಯದ ಪಾಟ್ನ ವಿಭಾಗದ ಒಂದು ನಗರ. ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಪೂರ್ವ ರೈಲ್ವೆಯ ಮುಖ್ಯ ಮಾರ್ಗದಲ್ಲಿ ಪಾಟ್ನ ನಗರಕ್ಕೆ 90 ಕಿಮೀ ದೂರದಲ್ಲಿ ಫಲ್ಗು ನದಿಯ ಪಶ್ಚಿಮ ದಂಡೆಯ ಉದ್ದಕ್ಕೂ ಬಹುತೇಕ ಹಬ್ಬಿರುವ ಈ ನಗರದ ವಿಸ್ತೀರ್ಣ 17.24 ಚ.ಕಿಮೀ. ಗಯೆಯ ಸುತ್ತಲೂ ಛೋಟಾನಾಗಪುರ ಪ್ರಸ್ಥಭೂಮಿಯ ಅಂಚಿನ ಬೆಟ್ಟಗಳಿವೆ. ವರ್ಷದಲ್ಲಿ ಬಹುಕಾಲ ಬರಡಾಗಿರುವ ಫಲ್ಗು ನದಿಯ ಮರಳು ಬಿಸಿಲಿನಿಂದ ಕಾಯುವುದರಿಂದ ಗಯ ನಗರ ಬಹಳ ಬಿಸಿ. ಗಯ ನಗರ ಛೋಟಾನಾಗಪುರ ಪ್ರಸ್ಥಭೂಮಿಯೂ ಗಂಗಾ ನದಿಯ ಬಯಲೂ ಕೂಡುವ ಎಡೆಯಲ್ಲಿರುವುದರಿಂದ ಇದೊಂದು ಮುಖ್ಯ ವ್ಯಾಪಾರ ಕೇಂದ್ರ. ಅಲ್ಲದೆ ಇದೊಂದು ಯಾತ್ರಾಸ್ಥಳ. ಪ್ರತಿ ವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಗಯಕ್ಕೆ ಬರುತ್ತಾರೆ. ಗಯ ನಗರದ ಅನೇಕ ದೇವಸ್ಥಾನಗಳಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ (1787) ವಿಷ್ಣುಪಾದ ದೇವಸ್ಥಾನ ಮುಖ್ಯವಾದದ್ದು. ಈ ಕ್ಷೇತ್ರದ ಒಂದು ಭಾಗವಾದ ಬ್ರಹ್ಮಗಯ ಹಿಂದುಗಳ ಯಾತ್ರಾಸ್ಥಳವಾದರೆ ಇನ್ನೊಂದು ಭಾಗವಾದ ಬೋಧಗಯ ಪ್ರಪಂಚದ ಬೌದ್ಧರ ಯಾತ್ರಾಸ್ಥಳ.


ಬೋಧಗಯ

ಬ್ರಹ್ಮಗಯಕ್ಕೆ ಸು.9 ಕಿಮೀ ದೂರದಲ್ಲಿದೆ. ಸಮೀಪದಲ್ಲಿಯೇ ಸು.2,400 ವರ್ಷಗಳಿಗೂ ಹಳೆಯದೆಂದು ಹೇಳಲಾದ ಬೋಧಿವೃಕ್ಷವಿದೆ. ಇಲ್ಲಿಯೇ ಶಾಕ್ಯವಂಶದ ಸಿದ್ದಾರ್ಥ ಆರು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ತನ್ನ 35ನೆಯ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ಬುದ್ಧನಾದದ್ದು. ಬುದ್ಧನ ಸಂದೇಶವನ್ನು ಪಡೆದ ಮೊದಲಿಗರಲ್ಲಿ ಗಯ ನಿವಾಸಿಗಳೂ ಸೇರಿದ್ದಾರೆ. ಗಯ ಪಟ್ಟಣಕ್ಕೆ 24 ಕಿಮೀ ದೂರದಲ್ಲಿರುವ ಬರಾಬರ್ ಬೆಟ್ಟದ ಗುಹೆಯೊಂದರಲ್ಲಿ ಅಶೋಕನ ಮೂರು ಶಾಸನವಿದೆ. ಪ್ರ.ಶ.ಪು. 3ನೆಯ ಶತಮಾನದಲ್ಲಿ ಇಲ್ಲಿಯ ಬೋಧಿವೃಕ್ಷದ ಸಮೀಪದಲ್ಲಿ ಅಶೋಕ ಕಟ್ಟಿಸಿದ್ದ ದೊಡ್ಡ ವಿಹಾರವೊಂದರ ಅವಶೇಷಗಳನ್ನು ಇಂದಿಗೂ ಕಾಣಬಹುದು. ಈಗ ಇಲ್ಲಿರುವ ದೇವಮಂದಿರ 48ಮೀ ಚೌಕವಾಗಿದ್ದು 15ಮೀ ಎತ್ತರವಾಗಿದೆ. ಒಳಗಡೆ ಬುದ್ಧನ ದೊಡ್ಡ ವಿಗ್ರಹವಿದೆ. ಮೇಲಿನ ಅಂತಸ್ತಿನಲ್ಲಿ ಸಿದ್ಧಾರ್ಥನ ತಾಯಿ ಮಾಯಾದೇವಿಯ ವಿಗ್ರಹವಿದೆ. 7ನೆಯ ಶತಮಾನದಲ್ಲಿ ಚೀನಿಯಾತ್ರಿಕ ಯುವಾನ್ಚಾಂಗ್ ಇಲ್ಲಿಗೆ ಬಂದಿದ್ದನೆಂದು ಹೇಳಲಾಗಿದೆ.


ತರದಿಹ್ (ಬೋಧಗಯ)

ಇಲ್ಲಿನ ಉತ್ಖನನದಲ್ಲಿ ಅನುಕ್ರಮವಾಗಿ ನವಶಿಲಾಯುಗ ಹಂತದಿಂದ ಪಾಲ ಅರಸು ಮನೆತನದ ಹಂತದವರೆಗೆ ಒಟ್ಟು ಏಳು ಸಾಂಸ್ಕೃತಿಕ ಹಂತಗಳು ಪತ್ತೆಯಾಗಿವೆ. ನವಶಿಲಾಯುಗದ ಆದಿಹಂತದಲ್ಲಿ ಕೈಯಿಂದ ಮಾಡಿದ ಮಣ್ಪಾತ್ರೆಗಳು ಮತ್ತು ಅಂತ್ಯ ಉಪಹಂತದಲ್ಲಿ ಉಜ್ಜಿದ ಹೊಳಪಿನ ಬೂದುಬಣ್ಣದ ಮಡಕೆಗಳು ವಿಶೇಷವಾಗಿವೆ. ಎರಡನೆಯ ಹಂತದಲ್ಲಿ ತಿಗುರಿಯ ಮೇಲೆ ಮಾಡಿದ ಮಡಕೆ, ತಾಮ್ರದ ಉಪಕರಣಗಳು ಹಾಗೂ ಕಪ್ಪು ಮತ್ತು ಬೂದುಬಣ್ಣದ ಮಡಕೆಗಳಿವೆ. ಮೂರನೆಯ ಹಂತದಲ್ಲಿ ಆದಿ ಕಬ್ಬಿಣಯುಗದ ಕಪ್ಪು, ಕೆಂಪು-ಕಪ್ಪು ದ್ವಿವರ್ಣ ಮಡಕೆಗಳು, ಕಬ್ಬಿಣದ ಬಾಣದ ಮೊನೆ, ಈಟಿ ಮೊನೆ, ಉಳಿ, ಮೊಳೆ ಕಲ್ಲಿನ ಮಣಿಗಳು, ಚಿಕ್ಕ ಅಲಗುಗಳು ಮುಂತಾದವು ದೊರೆತಿವೆ. ನಾಲ್ಕನೆಯ ಹಂತದಲ್ಲಿ ಪ್ರಥಮ ಬಾರಿಗೆ ಔತ್ತರೇಯ ಮೆರುಗಿನ ಕಪ್ಪುಬಣ್ಣದ ಮಡಕೆಗಳು, ಎಲುಬು, ಕಲ್ಲಿನ ಉಪಕರಣಗಳು, ಸುಡಾವೆ ಮಣ್ಣಿನ ಗೊಂಬೆಗಳು, ತಾಮ್ರದ ಮಣಿ, ಎರಕ ಹೊಯ್ದ ನಾಣ್ಯಗಳ ಜೊತೆಗೆ ಕಾಣಿಸಿಕೊಳ್ಳುತ್ತವೆ. ಐದನೆಯ ಹಂತದಲ್ಲಿ ಕುಷಾಣರ ಕಾಲದ ಕೆಂಪುವರ್ಣದ ಮಡಕೆ, ಕಲ್ಲಿನ, ಗಾಜಿನ, ಸುಡಾವೆ ಮಣ್ಣಿನ ಹಾಗೂ ತಾಮ್ರದ ಮಣಿಗಳು ಮುಖ್ಯವಾದವು. ಆರನೆಯ ಮತ್ತು ಏಳನೆಯ ಹಂತಗಳಲ್ಲಿ ಕ್ರಮವಾಗಿ ಗುಪ್ತರ ಕಾಲದ ಮತ್ತು ಪಾಲರ ಕಾಲದ ಪ್ರಾಚ್ಯಾವಶೇಷಗಳು ದೊರಕಿವೆ.


ಬ್ರಹ್ಮಗಯ

ಹಿಂದುಗಳ ಪುಣ್ಯಕ್ಷೇತ್ರವಾದ ಇದು ಸು.5ನೆಯ ಶತಮಾನದಿಂದಲೂ ಪ್ರಸಿದ್ಧವಾಗಿದೆ. ಪುರಾಣಗಳಲ್ಲಿ ಗಯದ ಉಲ್ಲೇಖವಿರುವುದಾದರೂ ಋಗ್ವೇದದಲ್ಲಿ ಇದು ಒಬ್ಬ ಋಷಿಯ ಹೆಸರು. ಈ ಕ್ಷೇತ್ರದಲ್ಲಿ ಯಾಗವನ್ನು ಕೈಗೊಂಡ ಧಾರ್ಮಿಕ ದೊರೆಯೊಬ್ಬನ ಪ್ರಸ್ತಾಪ ಮಹಾಭಾರತದಲ್ಲಿ ಬಂದಿದೆ. ಈತ ಚಿನ್ನದಿಂದಲೇ ಯಜ್ಞವೇದಿಕೆಯನ್ನು ನಿರ್ಮಿಸಿ ಕೊನೆಯಲ್ಲಿ ಆ ವೇದಿಕೆಯನ್ನು ಬ್ರಾಹ್ಮಣರಿಗೆ ಹಂಚಿಕೊಟ್ಟನೆಂದೂ ಈತ ಅಪಾರವಾಗಿ ಶೇಖರಿಸಿದ್ದ ಘೃತ ಮತ್ತು ಮಧುವನ್ನು ಯಜ್ಞ ಮುಗಿದ ಬಳಿಕ ಅಗ್ನಿಯ ಅನುಗ್ರಹದಿಂದ ಘೃತಕುಲ್ಯಾ ಎಂಬ ಹೆಸರಿನಿಂದ ನದಿಗಳ ರೂಪದಲ್ಲಿ ಹರಿಯಬಿಟ್ಟನೆಂದೂ ಹೇಳಲಾಗಿದೆ.


ಹುಟ್ಟಿದ ಮಕ್ಕಳಲ್ಲಿ ಒಬ್ಬನಾದರೂ ಗಯದಲ್ಲಿ ಶ್ರಾದ್ಧಮಾಡಿ ತನ್ನ ತಂದೆಗೆ ಸ್ವರ್ಗ ಪ್ರಾಪ್ತಿಯಾಗುವಂತೆ ಮಾಡಬೇಕೆಂದು ರಾಮಾಯಣದಲ್ಲಿ ಹೇಳಿದೆ. ಈ ಕ್ಷೇತ್ರದಲ್ಲಿ ಶ್ರಾದ್ಧ ನಡೆಸಿದವನ ವಂಶದ ನೂರು ಜನ ಪಿತೃಗಳಿಗಲ್ಲದೆ ಅವನಿಗೂ ಶಾಶ್ವತ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಸ್ಥಳಪುರಾಣ ತಿಳಿಸುತ್ತದೆ. ಈ ನಂಬಿಕೆಗೆ ಹಿನ್ನಲೆಯಾಗಿರುವ ಕಥೆ ಗಯ ಮಹಾತ್ಮ್ಯೆಯಲ್ಲಿ ಹೀಗಿದೆ:

ವಿಷ್ಣುವಿನ ಪರಮ ಭಕ್ತನಾದ ಗಯನೆಂಬ ಅಸುರ ಒಮ್ಮೆ ಕೋಲಾಹಲ ಪರ್ವತದ ಮೇಲೆ ಕಠಿಣ ತಪಸ್ಸನ್ನಾಚರಿಸಿದ. ಇದರಿಂದ ದೇವತೆಗಳೆಲ್ಲ ಖಿನ್ನರಾಗಿ ವಿಷ್ಣು ಮಹೇಶ್ವರರ ಬಳಿಗೆ ಹೋದರು. ವಿಷ್ಣು ದೇವತೆಗಳೊಡನೆ ಗಯಕ್ಕೆ ಬಂದು ಗಯ ಪರಿಶುದ್ಧನೆಂಬ ವಿಚಾರ ತಿಳಿದು, ಅವನನ್ನು ಸ್ಪರ್ಶಿಸಿದವರು ವೈಕುಂಠವನ್ನು ಸೇರಲಿ ಎಂಬುದಾಗಿ ವರ ನೀಡಿದ. ಅಂದಿನಿಂದ ಜನ ಗಯನನ್ನು ಸ್ಪರ್ಶಿಸಿ ಸ್ವರ್ಗಲಾಭ ಪಡೆಯತೊಡಗಿದರು. ಇದರಿಂದ ಯಮನ ರಾಜ್ಯ ಬರಿದಾಗಿ ಅವನಿಗೆ ಕೆಲಸವಿಲ್ಲದಂತಾಯಿತು. ಅನಂತರ ವಿಷ್ಣುವಿನ ಸಲಹೆಯಂತೆ ಬ್ರಹ್ಮ ಗಯನನ್ನು ಸಮೀಪಿಸಿ ಅವನ ಪವಿತ್ರ ದೇಹದ ಮೇಲೆ ಯಾಗ ಮಾಡಬೇಕೆಂಬ ಸಂಕಲ್ಪವನ್ನು ಅವನಲ್ಲಿ ವಿಜ್ಞಾಪನೆ ಮಾಡಿಕೊಂಡ. ಇದಕ್ಕೆ ಗಯ ಮರುಮಾತನಾಡದೆ ಸಮ್ಮತಿಯನ್ನಿತ್ತ. ಯಾಗಕರ್ಮಗಳನ್ನು ನಡೆಸಲು ಬ್ರಹ್ಮ ಋತ್ವಿಜರಾದ ಮಾನಸಪುತ್ರರನ್ನು ಸೃಷ್ಟಿಸಿದ. ಅವರು ಗಯನ ಶಿರ ಉತ್ತರದ ಕಡೆಗಿರುವಂತೆಯೂ ಪಾದಗಳು ದಕ್ಷಿಣದ ಕಡೆಗಿರುವಂತೆಯೂ ಮಾಡಿ ಅವನ ದೇಹದ ಮೇಲೆ ಯಜ್ಞವನ್ನು ವಿಜೃಂಭಣೆಯಿಂದ ನಡೆಸಿದರು. ಯಜ್ಞಸಮಾರಂಭದ ಕೊನೆಯಲ್ಲಿ ಗಯನ ತಲೆ ಅಲುಗಾಡತೊಡಗಿತು. ವಿಶೇಷವಾದ ಧರ್ಮಶಿಲೆಯೊಂದನ್ನು ತಂದು ಗಯನ ತಲೆಯ ಬಳಿ ಇಡಬೇಕೆಂದು ಆಗ ಬ್ರಹ್ಮ ಯಮನಿಗೆ ಸೂಚಿಸಿದ. ಆದರೂ ಗಯ ನಿಶ್ಚಲನಾಗಲಿಲ್ಲ. ದೇವತೆಗಳೆಲ್ಲ ಶಿಲೆಯ ಬಳಿ ನಿಂತರೂ ತಲೆಯ ಅಲುಗಾಟ ನಿಲ್ಲಲಿಲ್ಲ. ಕೊನೆಗೆ ವಿಷ್ಣುವೇ ಗದಾಧಾರಿಯಾಗಿ ಗಯನ ಶಿರದ ಬಳಿ ಪ್ರತ್ಯಕ್ಷನಾದಾಗ ತಲೆ ಅಲುಗಾಡುವುದು ನಿಂತಿತು. ಮಹಾವಿಷ್ಣುವಿನ ದರ್ಶನ ಲಾಭದಿಂದ ಕೃತಾರ್ಥನಾದ ಗಯ ತನಗೆ ವಿಷ್ಣುವಿನ ಆಜ್ಞೆಯೊಂದೇ ಸಾಕಾಗಿತ್ತೆಂದೂ ಅಷ್ಟು ಜನ ದೇವತೆಗಳು ಚಿತ್ರಹಿಂಸೆ ಕೊಡಬಾರದಾಗಿತ್ತೆಂದು ಭಿನ್ನೈಸಿಕೊಂಡ. ಗಯನ ಭಕ್ತಿಗೆ ಮೆಚ್ಚಿದ ವಿಷ್ಣು ಅವನಿಗೆ ವರಪ್ರಸಾದವನ್ನು ನೀಡಿ ತಾನೇ ಮೊದಲ್ಗೊಂಡು ಸಮಸ್ತ ದೇವತೆಗಳಿಗೂ ಅವನ ಶಿರದ ಬಳಿ ಶಾಶ್ವತವಾಗಿ ನಿಂತಿರುವಂತಾಗಿ ಆ ಸ್ಥಳ ಗಯನ ಹೆಸರಿನಿಂದ ಶೋಭಿಸಲೆಂದು ಅನುಗ್ರಹಿಸಿದ. ಅಂದಿನಿಂದ ಅದು ಗಯ ಕ್ಷೇತ್ರವೆಂದು ಪ್ರಸಿದ್ಧವಾಯಿತು.


ಭಾರತ ಭಾಗವತಾದಿಗಳಲ್ಲೆಲ್ಲಿಯೂ ಕಾಣದ, ಜನಜನಿತವಾದ, ಗಯೋಪಾಖ್ಯಾನ ವೆಂಬ ಹೆಸರಿನ ಒಂದು ಕಥೆಯಿದೆ. ಈ ಕಥೆಯ ವಿವರಗಳು ಹೀಗಿವೆ:

ಶಿವಭಕ್ತ ಸಂಪನ್ನನಾದ ಗಯನೆಂಬ ಒಬ್ಬ ಗಂಧರ್ವ ಒಮ್ಮೆ ಶಿವಪೂಜೆಗಾಗಿ ಕೈಲಾಸಕ್ಕೆ ಹೋಗಿ ಮಡದಿಮಕ್ಕಳೊಂದಿಗೆ ಹಿಂದಿರುಗಿ ವಿಮಾನದಲ್ಲಿ ಕುಳಿತು ಬರುವಾಗ ಬಾಯ ತಂಬುಲವನ್ನು ಉಗುಳಿದ. ಸೂರ್ಯನಿಗೆ ಅರ್ಘ್ಯವನ್ನು ಕೊಡುತ್ತ ಕಣ್ಮುಚ್ಚಿ ನಿಂತಿದ್ದ ಶ್ರೀಕೃಷ್ಣನ ಬೊಗಸೆಯಲ್ಲಿ ಅದು ಬಿತ್ತು. ಕೈಲಿದ್ದ ನೀರು ಕೆಂಪಾಗಿದ್ದುದನ್ನು ಕಂಡು ಕೋಪಗೊಂಡ ಕೃಷ್ಣ ಆ ಅಪರಾಧ ಎಸಗಿದವನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ. ಇದರಿಂದ ಭೀತಿಗೊಂಡ ಗಯ ದೇವತೆಗಳಲ್ಲಿ ಮೊರೆಯಿಟ್ಟ. ಯಾರೂ ಅಭಯ ನೀಡಲಿಲ್ಲ. ಕೊನೆಗೆ ನಾರದರ ಸೂಚನೆಯ ಮೇರೆಗೆ ಅರ್ಜುನನ ಮೊರೆಹೊಕ್ಕ. ಅರ್ಜುನ ಹಿಂದುಮುಂದು ನೋಡದೆ ಅಭಯಪ್ರದಾನ ಮಾಡಿದ. ಅನಂತರ ವಿಷಯ ತಿಳಿದು ತನ್ನ ಅವಿವೇಕವನ್ನು ಕಂಡು ವಿಷಾದಿಸಿದ. ಕಡೆಗೆ ಮೊರೆಹೊಕ್ಕವರನ್ನು ಕಾಪಾಡ ಬೇಕೆಂಬ ಧರ್ಮಕ್ಕೆ ಕಟ್ಟುಬಿದ್ದು ಗಯನಿಗಾಗಿ ಅರ್ಜುನ ಕೃಷ್ಣನನ್ನು ಇದಿರಿಸಿ ಯುದ್ಧದಲ್ಲಿ ತೊಡಗಿದ. ಆಗ ದೇವತೆಗಳು ಮಧ್ಯೆ ಪ್ರವೇಶಿಸಿ ಗಯನನ್ನು ಶ್ರೀಕೃಷ್ಣನ ಚರಣಗಳಿಗೆ ಅಡ್ಡಬೀಳಿಸಿ ಕೃಷ್ಣನಿಂದಲೇ ಗಯನಿಗೆ ಅಭಯಪ್ರದಾನ ಮಾಡಿಸಿದರು.


ಭಾರತದ ಎಲ್ಲ ಕಡೆಗಳಿಂದಲೂ ಹಿಂದುಗಳು ಗಯಕ್ಕೆ ಹೋಗಿ ಫಲ್ಗು ನದಿಯಲ್ಲಿ ಸ್ನಾನ ಮಾಡಿ ಪಿತೃಗಳಿಗೆ ತರ್ಪಣವನ್ನೂ ಪಿಂಡವನ್ನೂ ಅರ್ಪಿಸಿ ವಿಷ್ಣುಪಾದೋದಕ ವನ್ನು ಪ್ರೋಕ್ಷಿಸಿಕೊಳ್ಳುವ ಪದ್ಧತಿ ಬಹು ಹಿಂದಿನಿಂದ ನಡೆದುಬಂದಿದೆ. ಈ ಕ್ಷೇತ್ರದ ಮುಖ್ಯಸ್ಥರು ಇಲ್ಲಿ ಸಂಸ್ಕಾರ ನಡೆಸಿದವರ ಹೆಸರು ಕುಲಗೋತ್ರಗಳನ್ನು ಹಿಂದಿನಿಂದಲೂ ಬರೆದು ಇಟ್ಟಿದ್ದಾರೆ. ಈ ಕ್ಷೇತ್ರದ ಯಾತ್ರೆ ಪುರ್ಣವಾಗಬೇಕಾದರೆ ಸಮೀಪದಲ್ಲಿರುವ ಐದು ಸ್ಥಳಗಳಿಗೆ ಹೋಗಿ ಅಲ್ಲಿಯ ಯಮದೇವತೆಗೂ ಆತನ ದೂತನಿಗೂ ಪುಜೆ ಸಲ್ಲಿಸಬೇಕು. ಇವುಗಳಲ್ಲಿ ಮುಖ್ಯವಾದವು ರಾಮಶಿಲಾ ಮತ್ತು ಪ್ರೇತಶಿಲಾ ಗುಡ್ಡಗಳು. ಪ್ರೇತಶಿಲಾದಲ್ಲಿ ಯಮನನ್ನು ಪ್ರಾರ್ಥಿಸಿಯಾದ ಮೇಲೆ ಪಿತೃಯಾನದ ಕಾವಲು ನಾಯಿಗಳಿಗೂ ಪೂಜೆ ಸಲ್ಲಿಸುವುದು ವಾಡಿಕೆ.

ಗಯದ ವಾಸ್ತುಶಿಲ್ಪ[ಸಂಪಾದಿಸಿ]

ಗಯ ಪುರಾತನ ಹಿಂದೂ ಕ್ಷೇತ್ರಗಳಲ್ಲೊಂದಾದರೂ ಈಗ ಕಾಣುವ ಇಲ್ಲಿಯ ದೇವಾಲಯಗಳು ಮತ್ತು ಇತರ ಎಲ್ಲ ಪ್ರಾಚೀನ ಕಟ್ಟಡಗಳು ಪ್ರ.ಶ. 8ನೆಯ ಶತಮಾನದ ಅನಂತರ ಆಳಿದ ಪಾಲವಂಶದ ಅರಸರ ಮತ್ತು ಅವರ ಅನಂತರದವರ ಕಾಲಕ್ಕೆ ಸೇರಿದವುಗಳು. ಪ್ರಖ್ಯಾತವಾದ ಅಶ್ವತ್ಥ ವೃಕ್ಷ ಹಿಂದೂಗಳಿಗೂ ಬೌದ್ಧರಿಗೂ ಪವಿತ್ರವಾದ್ದು. ಈ ಬೋಧಿವೃಕ್ಷದ ಅಡಿಯಲ್ಲಿ ಧ್ಯಾನಾಸಕ್ತನಾಗಿದ್ದಾಗಲೇ ಗೌತಮ ಬುದ್ಧನಾದ್ದು. ಇಂದು ಇಲ್ಲಿ ಕಾಣುವ ಬೋಧಿವೃಕ್ಷ ಅಂದಿನದಲ್ಲ. ಅಶೋಕನ ಕಾಲದಲ್ಲಿ ಒಮ್ಮೆ ಒಣಗಿಹೋಗಿದ್ದ ಈ ವೃಕ್ಷವನ್ನು ತೆಗೆಸಿ ಅದೇ ಸ್ಥಳದಲ್ಲಿ ಅದರ ಬೀಜಗಳನ್ನು ನೆಟ್ಟು ಹೊಸ ವೃಕ್ಷವನ್ನು ಬೆಳೆಸಲಾಯಿತು. ಪ್ರ.ಶ.ಸು. 7ನೆಯ ಶತಮಾನದಲ್ಲಿ ಪುನಃ ಶಶಾಂಕ ಇಲ್ಲಿ ಹೊಸದೊಂದು ಸಸಿಯನ್ನು ನೆಡೆಸಿದ. 1876ರಲ್ಲಿ ಈ ಮರ ಒಣಗಿ ಬಿದ್ದು ಹೋದಾಗ ಪುನಃ ಅದರ ಬೀಜಗಳಿಂದ ಹೊಸದೊಂದು ಮರವನ್ನು ಬೆಳೆಸಲಾಯಿತು. ಇಂದು ಕಾಣುವ ಮರ ಸುಮಾರು ಒಂದು ಶತಮಾನದಷ್ಟು ಹಿಂದಿನದು. 7ನೆಯ ಶತಮಾನದ ಅನಂತರ ಹಲವಾರು ಬಾರಿ ಈ ಮರ ಜೀವದಾನ ಪಡೆದಿರಬೇಕು.


ಮೌರ್ಯ ಅಶೋಕ ಈ ವೃಕ್ಷದ ಹಿಂದೆ ಏಕಶಿಲಾಸ್ತಂಭವೊಂದನ್ನು ನಿಲ್ಲಿಸಿ, ಮರದ ಸುತ್ತಲೂ ಚೌಕಾಕಾರದ ಕಟಾಂಜನವನ್ನು ಕಟ್ಟಿಸಿದ. ಯುವಾನ್ಚಾಂಗ್ ಕಂಡಾಗ ಈ ಬೋಧಿವೃಕ್ಷದ ಸುತ್ತಲೂ ಇಟ್ಟಿಗೆಯ ಗೋಡೆಯೊಂದಿತ್ತು. ಮುಖ್ಯದ್ವಾರ ಪುರ್ವಾಭಿಮುಖ ವಾಗಿತ್ತೆಂದೂ ಉತ್ತರದ್ವಾರದ ಮೂಲಕ ಸಂಘಾರಾಮಕ್ಕೆ ಹೋಗಬಹುದಾಗಿತ್ತೆಂದೂ ಜಂಬೂದ್ವೀಪದ ಅನೇಕ ಅರಸರು ಕಟ್ಟಿಸಿದ ಸ್ತೂಪಗಳೂ ವಿಹಾರಗಳೂ ಇಲ್ಲಿದ್ದುವೆಂದೂ ಆ ಯಾತ್ರಿಕ ಹೇಳಿದ್ದಾನಾದರೂ, ಈಗ ಉಳಿದಿರುವುದೆಲ್ಲ ಕೆಲವು ಅವಶೇಷಗಳು ಮಾತ್ರ. ಅಶೋಕ ನಿಲ್ಲಿಸಿದನೆಂದು ಹೇಳಲಾದ ಶಿಲಾಸ್ತಂಭವನ್ನು ಬಾರ್ಹುತ್ದಲ್ಲಿಯ ಸ್ತೂಪಗಳಲ್ಲಿ ಕಂಡುಬರುವ ಚಿತ್ರಗಳಲ್ಲಿ ಕಾಣಿಸಿದೆ. ಕಂಬದ ಬೋದಿಗೆಯ ಮೇಲೆ ಆನೆಯೊಂದನ್ನು ಕೆತ್ತಲಾಗಿತ್ತು. ಈಗ ಕಾಣುವುದು ಅರ್ಧ ಮರಳುಗಲ್ಲಿನ, ಇನ್ನರ್ಧ ಬೆಣಚುಕಲ್ಲಿನ ಕಟಾಂಜನ. ಮರಳುಗಲ್ಲಿನ ಕಂಬಗಳಿಂದ ಕೂಡಿದ ಕಟಾಂಜನ ಅಶೋಕನ ಕಾಲದ್ದೆಂದು, ಬೆಣಚುಕಲ್ಲಿನದು ಅನಂತರದ ಕಾಲದ್ದೆಂದು ಹೇಳಲಾಗಿದೆ.


ಬೋಧಗಯಾದಲ್ಲಿ ಕನಿಂಗ್ ಹ್ಯಾಂ ಕಂಡುಹಿಡಿದ ಇನ್ನೊಂದು ಅವಶೇಷ ಪ್ರಾಚೀನ ವಜ್ರಾಸನ ಗಂಧಕುಟಿ. ಈ ಆಸನದ ಮೇಲೆ ಮೂರು ಪದರಗಳಿದ್ದುವು. ಕೆಳಗಿನ ಪದರ ಹೊಳಪು ಮಾಡಿದ ಮರಳುಕಲ್ಲಿನದು. ಇದರ ಮೇಲೆ ಗಿಲಾಯಿ ಮಾಡಿದ್ದ ಮಣ್ಣನ್ನು ತೆಗೆದಾಗ, ಚಿನ್ನದ ನಾಣ್ಯಗಳು, ಕೆಲವು ಆಭರಣಗಳು, ಬೆಳ್ಳಿಯ ನಾಣ್ಯಗಳು, ಮುತ್ತುಗಳು ಇತ್ಯಾದಿ ಅವಶೇಷಗಳು ದೊರಕಿದ್ದುವು. ಬೋಧಿವೃಕ್ಷದ ಮುಂದಿದ್ದ ಈ ಸಿಂಹಾಸನದ ಮೇಲೆ ಕುಳಿತಾಗಲೇ ಬುದ್ಧನಿಗೆ ಜ್ಞಾನೋದಯವಾಯಿತೆಂದು ಬೌದ್ಧರ ಸಾಂಪ್ರದಾಯಿಕ ಕತೆಗಳು ತಿಳಿಸುತ್ತವೆ. ಇದೇ ಸ್ಥಳದಲ್ಲಿ ಈ ಸಿಂಹಾಸನವನ್ನು ಸೇರಿಸಿದಂತೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸಿದ್ದರ ಗುರುತುಗಳಿವೆ. ಈ ಒಂದು ವಿಹಾರವನ್ನು ಅಶೋಕ ಕಟ್ಟಿಸಿದನೆಂದು ಯುವಾನ್ಚಾಂಗ್ ತಿಳಿಸುತ್ತಾನಾದರೂ, ಅನಂತರ ಪ್ರ.ಶ.ಪು. 1ನೆಯ ಶತಮಾನದಲ್ಲಿ ಕೌಶಿಕೀಪುತ್ರನ ಹಿರಿಯರಸಿಯಾದ ಕುರಂಗಿ ಕಟ್ಟಿಸಿದಳೆಂದು ಈಗ ಸಾಮಾನ್ಯವಾಗಿ ಒಪ್ಪಲಾಗಿದೆ.


ಇವೆಲ್ಲಕ್ಕಿಂತ ಪ್ರಖ್ಯಾತವಾದ ಬೋಧಗಯಾ ದೇವಾಲಯವನ್ನು ಆ ಚೀನೀ ಯಾತ್ರಿಕ ಮಹಾಬೋಧಿವಿಹಾರವೆಂದು ಕರೆದಿದ್ದಾನೆ. ಈಗಿರುವ ಕಟ್ಟಡ ಅನೇಕ ಬದಲಾವಣೆಗಳಿಗೆ ಒಳಗಾಗಿದೆ; ಅನೇಕ ಬಾರಿ ಜೀರ್ಣೋದ್ಧಾರಗೊಂಡಿದೆ. ಈಗಿನ ದೇವಾಲಯ ಚೌಕಾಕಾರದ ತಳಹದಿಯ ಮೇಲಿದೆ. ಪಕ್ಕದ ಗೋಡೆಗಳು ಇಳಿಜಾರಾಗಿ, ಮೇಲಕ್ಕೆ ಹೋಗುತ್ತ ಸೂಚ್ಯಗ್ರವಾಗಿದೆ. ಮೇಲೆ ಆಮಲಕವಿದೆ. ಮಹಾದ್ವಾರ ಇರುವುದು ಪೂರ್ವಕ್ಕೆ. ಗೋಪುರದ ಕೆಳಭಾಗದಲ್ಲಿ ನಾಲ್ಕು ದಿಕ್ಕುಗಳಲ್ಲಿ ಅದೇ ಆಕಾರದ ಸಣ್ಣ ಗೋಪುರಗಳಿವೆ. ಗೋಪುರಗಳಲ್ಲಿಯ ಮಾಡಗಳಲ್ಲಿ ಒಮ್ಮೆ ಬುದ್ಧನ ಮೂರ್ತಿಗಳಿದ್ದು ವೆಂದು ಯುವಾನ್ಚಾಂಗ್ನಿಂದ ತಿಳಿಯುತ್ತದೆ. ಇದು ಇಟ್ಟಿಗೆಯಿಂದ ಕಟ್ಟಲಾದ ಕಟ್ಟಡ. ಈ ಆಲಯದ ಮುಖ್ಯಭಾಗ, ಗೋಪುರ ಇತ್ಯಾದಿಗಳು ಪ್ರ.ಶ. 7ನೆಯ ಶತಮಾನದಷ್ಟು ಪ್ರಾಚೀನವೆಂದು ಹೇಳಲಾಗಿದೆ. ಸಿಂಹಳದ ಶ್ರಮಣ ಪ್ರಖ್ಯಾತಕೀರ್ತಿ, ಪಾಗನ್ ಅರಸನಾದ ಕಯಾನ್ ಜಿತ್ಥ, 12ನೆಯ ಶತಮಾನದಲ್ಲಿ ಆಳಿದ ಅರಕಾನಿನ ಲೆತ್ಯಮಿನ್ನ, ಪೆಗುವಿನ ಧರ್ಮಜೆ಼ದಿ ಮುಂತಾದ ವಿದೇಶಿ ಅರಸರು ಸಹ ಈ ದೇವಾಲಯದ ಜೀರ್ಣೋದ್ಧಾರ ಮಾಡಿಸಿದರೆಂದು ಅವರ ಶಾಸನಗಳಿಂದ ತಿಳಿದಿದೆ.


ವಿಷ್ಣುಪಾದ ದೇವಾಲಯದಲ್ಲಿ ಆದಿ ಗದಾಧರನೆಂದು ಹೇಳಲಾದ ಪಾದಗಳ ಗುರುತಿದೆ. ಆದರೆ ಪಾಹಿಯಾನ್ ಇಲ್ಲಿಗೆ ಬಂದಾಗ ಕಂಡದ್ದು ಹಾಳುಬಿದ್ದ ನಗರವನ್ನು ಮಾತ್ರ. ಇದೇ ಪರಿಸ್ಥಿತಿ ಯುವಾನ್ಚಾಂಗ್ನ ಕಾಲದಲ್ಲೂ ಮುಂದುವರಿದಿತ್ತು. ಹನ್ನೊಂದನೆಯ ಶತಮಾನದಲ್ಲಿ ಆಳಿದ ನಯಪಾಲದೇವ ಮತ್ತು ಅವನ ಅನಂತರದ ಅರಸರ ಕಾಲದಲ್ಲಿ ಈ ಸ್ಥಳದ ಜೀರ್ಣೋದ್ಧಾರ ಕಾರ್ಯಗಳು ಆರಂಭವಾದುವು. ತದನಂತರವೇ ಗಯ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು ಎಂಬ ಖ್ಯಾತಿ ಪಡೆದದ್ದು. ಗಯ ಮಾಹಾತ್ಮ್ಯ 13-14ನೆಯ ಶತಮಾನಕ್ಕೂ ಹಿಂದಿನದಲ್ಲವೆಂದೂ, ಅದರಲ್ಲಿ ಕಂಡುಬರುವ ವಿವರಗಳೆಲ್ಲ ಪಾಲ ಅರಸರು ಕೈಗೊಂಡ ಕಾರ್ಯಗಳ ಫಲವೆಂದೂ ಹೇಳಬಹುದು. ಅಲ್ಲಿ ಹಿರಿಯರಿಗೆ ಶ್ರಾದ್ಧ ಕರ್ಮಾದಿಗಳನ್ನು ನೆರವೇರಿಸಿದರೆ ಅವರಿಗೆ ಮುಕ್ತಿ ಲಭಿಸುತ್ತದೆ ಎಂಬ ಹಿಂದೂಗಳ ನಂಬಿಕೆಯಿಂದಾಗಿ ಮಾತ್ರ, ಅಂಥ ಕರ್ಮಗಳನ್ನು ನಡೆಸಬಹುದಾದ ಪುಣ್ಯಕ್ಷೇತ್ರವೆಂದು ಮಾತ್ರ, ಗಯ ಇದಕ್ಕೆ ಮೊದಲೂ ಪ್ರಸಿದ್ಧವಾಗಿತ್ತು.


ಗಯದಲ್ಲಿರುವ, ದಕ್ಷಿಣ ಭಾರತದ ಅರಸರ ಶಾಸನಗಳು[ಸಂಪಾದಿಸಿ]

ಗಯೆಯಲ್ಲಿ ದೊರಕಿರುವ ಶಾಸನಗಳು ಬಹುತೇಕ ಆ ಪ್ರಾಂತ್ಯದ ಅರಸು ಮನೆತನಗಳಿಗೆ ಸೇರಿದವಾದರೂ ಅಲ್ಲಿಯ ವಿಷ್ಣುಪಾದ ದೇವಾಲಯದಲ್ಲಿ ದಕ್ಷಿಣಾಪಥದ ಅರಸರ ಕೆಲವು ಶಾಸನಗಳು ದೊರೆತಿವೆ. ಆ ದೇವಾಲಯದ ಮುಂದಿರುವ ಶಿವ ಗುಡಿಯ ಬಲಭಾಗದ ಗೋಡೆಗೆ ಸೇರಿಸಿ ಕಟ್ಟಲಾದ ಕರಿಯ ಕಲ್ಲಿನಲ್ಲಿ ರಾಜನಾದ ಪ್ರತಾಪರುದ್ರನ, 31 ಸಾಲುಗಳುಳ್ಳ ಸಂಸ್ಕೃತ ಶಾಸನ ಒಂದಿದೆ. ಇದನ್ನು ನಂದಿ ನಾಗರೀ ಲಿಪಿಯಲ್ಲಿ ಕೆತ್ತಲಾಗಿದೆ. ಈತನ ಗುರುವಾದ ತ್ರಿಭುವನ ವಿದ್ಯಾಚಕ್ರವರ್ತಿ ಬಿರುದಾಂಕಿತನಾದ ಮಲ್ಲಿಕಾರ್ಜುನ, ವಿಂಧ್ಯಾದ್ರಿಗೆ ದಕ್ಷಿಣದಲ್ಲಿ, ಗೌತಮೀ ಗೋದಾವರೀ ತೀರದ ಮಂತ್ರಕೂಟದಲ್ಲಿ (ಈಗಿನ ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯ ಮಂಥನಿ) ಅನೇಕ ರಮ್ಯ ಕಟ್ಟಡಗಳನ್ನು ಕಟ್ಟಿಸಿದ್ದ. ಈತ ಪರಮ ಶಿವಭಕ್ತ. ಆದರೆ ಈತನ ಪತ್ನಿಯಾದ ಕಂದಮ್ಮಟಿ ಮನೆತನಕ್ಕೆ ಸೇರಿದ ಗೌರಿ ಗೋಪೀನಾಥದೇವರ (ವಿಷ್ಣುವಿನ) ಭಕ್ತೆ. ಶಾಸನ ಕಾಲಕ್ಕೆ ಗಯದ ಮಣಿಕರ್ಣಿಕಾ ಘಟ್ಟದಲ್ಲಿ ನೆಲಸಿದ್ದ ಈಕೆ ಗಯಶ್ರಾದ್ಧವನ್ನು ಮಾಡಿಸಿದಳೆಂದು ಶಾಸನ ಹೇಳುತ್ತದೆ. ಈ ಶಾಸನದಲ್ಲಿ ಉಕ್ತನಾದ ಅರಸ ಕಾಕತೀಯ ವಂಶದ ಒಂದನೆಯ ಪ್ರತಾಪರುದ್ರನೆಂದೂ ಆತನ ಗುರುವಾದ ಮಲ್ಲಿಕಾರ್ಜುನನೇ ಸುಪ್ರಸಿದ್ಧ ಶೈವ ಗುರುವಾದ ಮಲ್ಲಿಕಾರ್ಜುನ ಪಂಡಿತಾರಾಧ್ಯನೆಂದೂ ಊಹಿಸಲಾಗಿದೆ. ಶಾಸನದ ಕಾಲಕ್ಕೆ ಆ ಗುರು ದೈವಾಧೀನನಾಗಿ, ಆತನ ಆತ್ಮಶಾಂತಿಗಾಗಿ ಗಯಶ್ರಾದ್ಧವನ್ನು ಅವನ ಧರ್ಮಪತ್ನಿ ಮಾಡಿಸಿದ್ದಿರಬೇಕು. 1163-1195ರ ವರೆಗೆ ಆಳಿದ ಪ್ರತಾಪರುದ್ರ ಇನ್ನೂ ಜೀವಿಸಿದ್ದಾಗಲೇ ಈತನ ಗುರು ಮರಣ ಹೊಂದಿದನೆಂಬುದು ಇದರಿಂದ ಖಚಿತವಾಗುತ್ತದೆ.


ಇದೇ ದೇವಾಲಯದ ಪ್ರಾಂಗಣದಲ್ಲಿರುವ ಮಹದೇವಗುಡಿಯ ಬಾಗಿಲುವಾಡದಲ್ಲಿ ಹೊಯ್ಸಳ ವಂಶದ ಮುಮ್ಮಡಿ ನರಸಿಂಹನ ಶಾಸನವೊಂದಿದೆ. ಇದೂ ನಂದಿ ನಾಗರೀಲಿಪಿಯಲ್ಲಿದೆಯಾದರೂ ಇದರ ಭಾಷೆ ಕನ್ನಡ. ತನ್ನ ರಾಜಧಾನಿಯಾದ ದೋರಸಮುದ್ರದಲ್ಲಿ ಈ ಅರಸ ಬಹುಶಃ ಕಟ್ಟಿಸಿದ್ದ ದೇಹಾರದ (ದೇಗುಲದ) ಗಯವ್ರಜನ ಮಠವನ್ನು ಆಚಾರ್ಯನಾದ ಪದ್ಮನಾಭ ಚಟ್ಟೋಪಾಧ್ಯಾಯರ ಮಗ ಅಪ್ಪಣ್ಣನು ಗಯೆಯಲ್ಲಿ ಮಾಡಿಸಿ ದೇವಋಣಗಳನ್ನು ಕಳೆದನೆಂದು ಶಾಸನ ಹೇಳಿದೆ. ಆತ ಆ ಸ್ಥಳದಲ್ಲಿ ಧರ್ಮಶಾಲೆಯೊಂದನ್ನು ಕಟ್ಟಿಸಿರಬಹುದೆಂದು ಇದರಿಂದ ಸೂಚಿತವಾಗುತ್ತದೆ. ಶಾಸನದ ಕಾಲ ಪ್ರ.ಶ. 1291ರ ಸೆಪ್ಟೆಂಬರ್ 24 ಆಗಿರಬಹುದು. ಈ ಶಾಸನದ ಕೆಳಗಡೆ ಕನ್ನಡ ಲಿಪಿಯ ಇನ್ನೊಂದು ಶಾಸನವಿದೆ. ಇದರ ಕಡೆಯ ಭಾಗ ಒಡೆದಿದೆ. ವೀರನರಸಿಂಹ ದೇವರಸರ ಕಮ್ಮಟದ (ನಾಣ್ಯಗಳನ್ನು ಅಚ್ಚು ಹಾಕುವ ಟಂಕಸಾಲೆಯ) ಜಕ್ಕಂಣನ ಮಗ ದೇವಂಣ ಇದೇ ವರ್ಷದ ಸೆಪ್ಟೆಂಬರ್ 24ರಂದು ಗಯ ಪ್ರವೇಶ ಮಾಡಿದನೆಂದು ಶಾಸನ ಹೇಳುತ್ತದೆ. ಈ ಎರಡೂ ಶಾಸನಗಳನ್ನು ಕೊರೆದವನು ದೇವರಸನೆಂದು ತೋರುತ್ತದೆ.


ಗದಾಧರ ಗುಡಿಯ ಮುಂದೆ ಗದಾಧರ ಘಾಟಿನ ಬಲಗೋಡೆಗೆ ಸೇರಿಸಲಾದ ಕಲ್ಲೊಂದರಲ್ಲಿ ವಿಜಯನಗರದ ಕೃಷ್ಣದೇವರಾಯನ 1521ರ ಶಾಸನವಿದೆ. ತೆಲುಗುಲಿಪಿ ಹಾಗೂ ಭಾಷೆಯ ಈ ಶಾಸನದಲ್ಲಿ ತೆಲುಗಿನ ಸುಪ್ರಸಿದ್ಧ ಸಮಕಾಲೀನ ಕವಿಯಾದ ಮುಕ್ಕುತಿಮ್ಮಯನ (ತಿಮ್ಮಣ) ಪಾರಿಜಾತಾಪಹರಣದಿಂದ ಆರಿಸಲಾದ ಪದ್ಯವೊಂದಿದೆ. ಶಾಸನವನ್ನು ವಿಜಯ ಶಾಸನವೆಂದು ಕರೆದಿರುವುದರಿಂದ ಕೃಷ್ಣದೇವರಾಯ ತನ್ನ ಉತ್ತರ ದಿಗ್ವಿಜಯದ ಸಂದರ್ಭದಲ್ಲಿ ಗಯೆಯವರೆಗೂ ಬಂದು ಈ ಪ್ರದೇಶವನ್ನು ಸ್ವಲ್ಪಕಾಲದ ಮಟ್ಟಿಗಾದರೂ ಆಕ್ರಮಿಸಿದ್ದನೆಂದು ಒಂದಿಬ್ಬರು ವಿದ್ವಾಂಸರು ಊಹಿಸಿದ್ದಾರಾದರೂ ಇದು ಒಂದು ಧರ್ಮಶಾಸನವೇ ಹೊರತು ವಿಜಯಶಾಸನವಲ್ಲ. ಈ ಶಾಸನದ ಕರ್ತೃ ಸಹ ಮುಕ್ಕುತಿಮ್ಮಯನೇ. ಇವನ ಹೆಸರು ಬೇರೆ ಯಾವ ಶಾಸನಗಳಲ್ಲೂ ಉಲ್ಲೇಖವಾದಂತೆ ಇದುವರೆಗೂ ಕಂಡುಬಂದಿಲ್ಲ. ಅಂತೆಯೇ ಇವನ ಕಾವ್ಯದಿಂದ ಉದ್ಧರಿಸಲಾದ ತಿರುಮಲದೇವೀವಲ್ಲಭ

ಕರುಣಾಮಯಹೃದಯ ರಾಜಕಂಠೀರವ ಈ

ಶ್ವರನರಸ ಭೂಪುರಂದರ

ವರನಂದನ ಬಾಸದಪ್ಪುವರ ಗಂಡ್ಡಾಂಕಾ

ಎಂಬ ಕಂದವೃತ್ತದ ಪದ್ಯ ಸಹ. ತಿಮ್ಮಣನ ಪಾರಿಜಾತಾಪಹರಣ 1521ಕ್ಕೂ ಮೊದಲೇ ರಚಿತವಾಗಿತ್ತೆಂಬ ಅಂಶ ಈ ಶಾಸನದಿಂದ ತಿಳಿದುಬರುತ್ತದೆ. ಕವಿ ತನ್ನ ಆಶ್ರಯದಾತನ ಪ್ರತಿನಿಧಿಯಾಗಿ ಗಯೆಗೆ ಬಂದು, ಆ ಸಂದರ್ಭದಲ್ಲಿ ಈ ಶಾಸನವನ್ನು ಕೆತ್ತಿಸಿದನೆಂದು ಊಹಿಸಲಾಗಿದೆ.


ಮಹಾದೇವ ಗುಡಿಯಲ್ಲಿರುವ ಇನ್ನೊಂದು ಶಾಸನ ವಿಜಯನಗರದ ಅರಸನಾದ ಅಚ್ಯುತರಾಯನದು. 1531ರ ಈ ತೆಲುಗು ಶಾಸನದಲ್ಲಿ ತಿಮ್ಮಣನ್ನನೆಂಬವನು ವಿಜಯನಗರ ಸಿಂಹಾಸನ ಕರ್ತರನ್ನು ಗಯಮುಕ್ತರನ್ನಾಗಿ ಮಾಡಿದನೆಂದು ಹೇಳಿದೆ. ಇದರಲ್ಲಿ ಅಚ್ಯುತರಾಯನವಂಶಾವಳಿ ಅವನ ಮುತ್ತಜ್ಜನಿಂದ ಆರಂಭವಾಗಿದೆ. ತಿಮ್ಮಯ, ಈಶ್ವರ ಮತ್ತು ನಾರಸಿಂಹರನ್ನು ಹೆಸರಿಸಿ ಅನಂತರ ಇದು ಮಂಡಲೇಶ್ವರ ಶ್ರೀವೀರ ಅಚ್ಯುತರಾಯ ಮಹಾರಾಯರ ಧರ್ಮಶಾಸನವೆಂದು ಹೇಳಿದೆ.