ಪುಟ:Rangammana Vathara.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

13

ಆಗಲೇ ಬೆಳಗು.

ಹೊತ್ತಿಗೆ ಏಳುವ ಇನ್ನೊಬ್ಬ ವ್ಯಕ್ತಿ ನಾರಾಯಣ.ಹಿಂದೂಸ್ಥಾನ

ವಿಮಾನ ಕಾರಖಾನೆಯಲ್ಲಿ ಲೆಕ್ಕ ಕೂಡಿಸಿ ಕಳೆಯುವ ಗುಮಾಸ್ತೆ. ವಿಮಾನಪುರದಲ್ಲಿ 'ನ_ರಾಯನ್' ಎಂದು ಬದಲಾಗಿತ್ತು ಆತನ ಹೆಸರು.ಹೊಸ ಸಂಸಾರ ಹೂಡಿದ ಈ ಪತಿರಾಯ ಐದು ಘಂಟೆಗೇ ಎಚ್ಚರವಾದರೂ ಏಳದೆ, ತನ್ನ ಹಾಸಿಗೆಯ ಮೇಲೆಯೇ ಮುದುಡಿ ಮಲಗಿದ್ದ ಹೆಂಡತಿ ಕಾಮಾಕ್ಷಿಯನ್ನು ಕತ್ತಲಲ್ಲೇ ಎವೆಯಿಕ್ಕದೆ ನೋಡುತ್ತಿದ್ದ. ಅಷ್ಟರಲೇ ಆಲಾರಾಂ ಗಡಿಯಾರದ ಕಿಟಿಕಿಟಿ.ನಾರಾಯಣ ಕೈಚಾಚಿ ಅಲಾರಾಂ ಗುಂಡಿಯನ್ನು ಅದುಮಿ ಆ ಸದ್ದನ್ನು ಅಡಗಿಸುತ್ತಿದ್ದ. ಅದೇ ಕೈಯಿಂದ ಕಾಮಾಕ್ಷಿಯನ್ನು ಸುತ್ತುವರಿದು ಬರಸೆಳೆದು ನಾರಾಯಣ ಆಕೆಯ ಕಿವಿ ಯೊಳಕ್ಕೆ ಕುಟುರುತ್ತಿದ್ದ:

"ಕಾಮೂ...ಕಾಮೂ...ಏ ಕಾಮೂ..."

ಊ...ಎಂದು ರಾಗವೆಳೆಯುತ್ತಿದ್ದಳು ಕಾಮಾಕ್ಷಿ-ಏಳಬೇಡಿ.ಹೋಗಬೇಡಿ,

ಎನ್ನುವಂತೆ, ನಾರಯಣ ಆಕೆಯ ತಲೆಗೂದಲನ್ನೊಮ್ಮೆ ಮೂಸಿ, ನಕ್ಕು, ಎದ್ದು ಕುಳಿತು, ದೀಪ ಹಚ್ಚುತ್ತಿದ್ದ...ಆ ಬಳಿಕ ಸ್ಟವ್ ಉರಿಸುವುದು, ಅದರ ಮೇಲೆ ಅನ್ನ ಕ್ಕಾಗಿ ನೀರು...

ವೈದಿಕ ಕಾರ್ಯಕ್ಕೆಂದು ಕಮಲಮ್ಮನ ಗಂಡ ಪರವೂರಿಗೆ ಹೋಗಿದ್ದ.

ಹಾಗೆಂದು, ಒಂಟಿ ಜೀವವಾದ ಕಮಲಮ್ಮನೇನೂ ಸ್ವಸ್ಥವಾಗಿ ಮಲಗುವ ಹಾಗಿರಲಿಲ್ಲ. ಚಿರದುಃಖಿನಿಯಾದ ಆ ಹೆಂಗಸು ಬೇಗನೆ ಏಳುತ್ತಿದ್ದಳು.ರಾತ್ರಿ ರುಬ್ಬಿ ಇಟ್ಟಿದ್ದ ಹಿಟ್ಟನ್ನು ಹುಯ್ದು ಸಣ್ಣ ಪುಟ್ಟ ಹೇರಳ ದೋಸೆಗಳನ್ನು ಆಕೆ ಸಿದ್ಧಪಡಿಸಬೇಕು. ಇಡ್ಲಿಗಳನ್ನು ಬೇಯಿಸಬೇಕು.ಆರು ಘಂಟೆಗೆ ಐದು ನಿಮಿಷವಿರುವಾಗಲೇ ಎದುರು ಬೀದಿಯ ಹುಡುಗನೊಬ್ಬ ಬಂದು ತಿಂಡಿಯ ಆ ಬುಟ್ಟಿಯನ್ನು ಮಾರಾಟಕ್ಕೆ ಒಯ್ಯು ತ್ತಿದ್ದ. ತಲೆ ನೋವಿರಲಿ,ಮೈಕೈ ಮುಟ್ಟಿದರೆ ನೋಯುತ್ತಿರಲಿ, ಕಮಲಮ್ಮ ಐದು ಘಂಟೆಯ ಸುಮಾರಿಗೆ ಎದ್ದೇಬಿಡುತ್ತಿದ್ದಳು.ಎರಡು ಒಲೆಯುರಿಸು ತ್ತಿದ್ದಳು.ಬೆಂಕಿಯ ನಾಲಿಗೆಗಳು ನಗುತ್ತ ಕುಣಿಯುತ್ತ ಗೋಡೆಗೆ ನೇತು ಹಾಕಿದ್ದ ಚಿಮಿಣಿ ದೀಪವನ್ನು ಅಣಕಿಸುತ್ತಿದ್ದುವು.

ರಾಮಚಂದ್ರಯ್ಯನ ಮನೆಗೂ ರಂಗಮ್ಮನದಕ್ಕೂ, ನಡುವಿನ ಮನೆಯಲ್ಲಿ ಹಸ್ತ

ಸಾಮುದ್ರಿಕದ ಜ್ಯೋತಿಷಿ ಪದ್ಮನಾಭನಿದ್ದ.ಮಧ್ಯ ವಯಸ್ಕ. ಮಗಳು ಮದುವೆ ಯಾಗಿ ಗಂಡನ ಮನೆ ಸೇರಿದ್ದಳು. ಮಗ ಅರವತ್ತು ರೂಪಾಯಿ ಸಂಬಳದ ಕೆಲಸ ದೊರಕಿಸಿಕೊಂಡು ಹೈದರಾಬಾದಿನಲ್ಲಿ ಹೆಂಡತಿ, ಪದ್ಮನಾಭನಿಗೂ ಬೇಗನೆ ಏಳುವ ಅಭ್ಯಾಸ. ಹಾಗೆ ಎದ್ದು ಏನಾದರೂ ಶ್ಲೋಕವನ್ನು ಆತ ಗುಣುಗುಣಿಸುತ್ತಿದ್ದ ಅದು ಯಾವ ಶ್ಲೋಕ ಎಂಬುದು ಎಂದೂ ಯಾರಿಗೂ ತಿಳಿಯುವ ಹಾಗಿರಲಿಲ್ಲ.