ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಕರ್ನಾಟಕ

ವಿಕಿಸೋರ್ಸ್ದಿಂದ

ಜಯಕರ್ನಾಟಕ - ಧಾರವಾಡದಿಂದ ಪ್ರಕಟವಾಗುತ್ತಿದ್ದ ಒಂದು ಕನ್ನಡ ಮಾಸಪತ್ರಿಕೆ. ಆಲೂರು ವೆಂಕಟರಾಯರಿಂದ ಅವರ ಸಂಪಾದಕತ್ವದಲ್ಲೇ 1923ರ ನವೆಂಬರಿನಲ್ಲಿ ಇದು ಪ್ರಾರಂಭವಾಯಿತು. ಕಿರೀಟ ಅಷ್ಟದಳದ 80 ಪುಟಗಳಿಂದ ಕೂಡಿರುತ್ತಿದ್ದ ಈ ಸಚಿತ್ರ ಪತ್ರಿಕೆ ಆಗ ಅಖಿಲ ಕರ್ನಾಟಕದ ವಿಶಿಷ್ಟ ಪತ್ರಿಕೆಯೆನಿಸಿತು. ಕನ್ನಡ ನಾಡು, ನುಡಿ, ಚರಿತ್ರೆ, ಸಂಸ್ಕøತಿಗಳ ಪರಿಚಯ-ಪ್ರಚಾರಗಳ ಹಾಗೂ ಕರ್ನಾಟಕ ಏಕೀಕರಣಕ್ಕೆ ಹೆಚ್ಚಿನ ಮಹತ್ವ ನೀಡುವ ಉದ್ದೇಶವಿರಿಸಿಕೊಂಡು ಹೊರಟ ಈ ಪತ್ರಿಕೆ, ತೆರೆಯ ಮರೆಯಲ್ಲಿದ್ದ ಹಲವು ಕನ್ನಡ ಲೇಖಕರನ್ನು ಹೊರಗೆ ತಂದಿತು. ಅನೇಕ ಕವಿಗಳನ್ನೂ ಕಥೆಗಾರರನ್ನೂ ಸೃಷ್ಟಿಸಿತು. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಮೇಲ್ತರದ ಲೇಖನ ಪ್ರಬಂಧಗಳೂ, ರಾಜಕೀಯ ಸಾಮಾಜಿಕ ವಿಚಾರಗಳನ್ನೂ ಕುರಿತ ಕಾಲೋಚಿತ ಟೀಕೆ-ಟಿಪ್ಪಣಿಗಳೂ ಸುಶಿಕ್ಷಿತ ವಾಚಕರ ಮನಸ್ಸು ಬುದ್ಧಿಗಳನ್ನು ಆಕರ್ಷಿಸಿ, ಕನ್ನಡದ ಮಾಡರ್ನ್ ರಿವ್ಯೂ ಎಂದು ಪ್ರಸಿದ್ಧವಾಯಿತು. 1929ರಲ್ಲಿ ಈ ಪತ್ರಿಕೆ ಧಾರವಾಡದ ಗೆಳೆಯರ ಗುಂಪಿನ ಕಡೆಗೆ ಬಂತು. ಕನ್ನಡ ಸಾಹಿತ್ಯ ಸಂಸ್ಕøತಿಗಳ ಅಭ್ಯಾಸಿಗಳಾಗಿದ್ದ ಗುಂಪಿನ ಗೆಳೆಯರು ಹೊಸ ಹುಮ್ಮಸ್ಸಿನಿಂದ ಪತ್ರಿಕೆಯನ್ನು ಮುಂದಿನ ಮೂರು ವರ್ಷ ಯಶಸ್ವಿಯಾಗಿ ನಡೆಸಿದರು. ವ್ಯಾವಹಾರಿಕ ತೊಡಕಿನಿಂದಾಗಿ ಬೆಳಗಾಂವಿ (ಈಗ ವಿನೀತ) ರಾಮಚಂದ್ರರಾಯರಿಗೆ ಒಪ್ಪಿಸಿಕೊಟ್ಟರು. ಎಲ್ಲ ಬಗೆಯ ಒಡೆತನವನ್ನೂ ಪಡೆದುಕೊಂಡ ಬೆಳಗಾಂವಿ ರಾಮಚಂದ್ರರಾಯರು ಜಯಕರ್ನಾಟಕವನ್ನು ಹಲವು ವರ್ಷಗಳ ಕಾಲ ನಡೆಯಿಸಿ ಶಿ.ಶಿ. ಬಸವನಾಳ ಅವರ ಒಡೆತನಕ್ಕೆ ಒಪ್ಪಿಸಿದರು. ಅವರು ಈ ಮಾಸಪತ್ರಿಕೆಯೊಂದಿಗೆ ಇದೇ ಹೆಸರಿನ ವಾರಪತ್ರಿಕೆಯನ್ನೂ ಪ್ರಾರಂಭಿಸಿ ನಡೆಸುತ್ತಿದ್ದರು.

 	1951ರ ಡಿಸೆಂಬರಿನಲ್ಲಿ ಶಿ.ಶಿ. ಬಸವನಾಳ ಅವರು ದಿವಂಗತರಾದಾಗ ಅವರು ತಮ್ಮಂದಿರಾದ ವಿ.ಎಸ್.ಬಸವನಾಳ ಅವರು ಮಾಸಪತ್ರಿಕೆ, ವಾರಪತ್ರಿಕೆಗಳೆರಡಕ್ಕೂ ಸಂಪಾದಕರಾಗಿ 3-4 ವರ್ಷಗಳ ಕಾಲ ಮುಂದುವರಿಸಿದರು. ಆಮೇಲೆ ಎರಡೂ ಪತ್ರಿಕೆಗಳು ನಿಂತುಹೋದುವು.									(ಬಿ.ಕೆ.ಆರ್.)