ಪುಟ:Banashankari.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೦ ಬನಶಂಕರಿ ಛಾವಣಿಯೇ ಹಾರಿ ಹೋಗುವಂತೆ ಅಮ್ಮಿ ಕೂಗಿದಳು : " ಸುಂದರಮ್ಮ !ಅಕ್ಕಾ ! ಅಕ್ಕಾ ! ಬನ್ನಿ ! ಬನ್ನಿ ! ಯಾವನೋ ಪಿಶಾಚಿ ಬಾಗಿಲು ಬಡೀತಿದಾನೆ!" " ಬಂದೇ!" ಎಂದು ಸುಂದರಮ್ಮನ ಸ್ವರ ಬಂತು. ಆದರೆ ಒಮ್ಮೆಲೆ ಅವಳು ಬರಲಿಲ್ಲ. ಮಗುವನ್ನು ಮಲಗಿಸುತ್ತಿದ್ದವಳು ಎದ್ದು ನಿಂತಳು. ಗಂಡ ಮನೆಗೆ ಬಂದಿರಲಿಲ್ಲ, ಅದು ಅನಿಶ್ಚಯತೆಯ ಒಂದು ನಿಮಿಷ. ಬಾಗಿಲು ಬಡೆಯುತ್ತಿದ್ದವನಿಗೆ ರಾಮಶಾಸ್ತ್ರಿ ಮನೆಯಲ್ಲಿ ಇಲ್ಲದೆ ಇರುವ ವಿಷಯ ತಿಳಿದಿತ್ತೇನೋ! ಆತ ಮೌನವಾಗಿಯೇ ನಿಂತ. ಅಮ್ಮಿ ಮತ್ತೆ ಕರೆದಳು : "ಅಕ್ಕಾ ! ಬನ್ನಿ! ಆಕ್ಕಾ !" ಅದು ಕಾತರಪೂರ್ಣ ಆರ್ತನಾದ. ತನಗರಿಯದಂತೆಯೇ ಸುಂದರಮ್ಮ ಅದಕ್ಕೆ ಉತ್ತರವಿತ್ತಳು : " ಬಂದೆ ಬನೂ...ಕತ್ತಿ ಹುಡುಕ್ಕಾ ಇದೀನಿ–ಸಿಗ್ತು ! ಬಂದೆ! ಅವರೂ ಬಂದ್ಬಿಟ್ರು !" ರಾಮಶಾಸ್ತ್ರಿಯ ಮನೆಯ ಬಾಗಿಲು ತೆರೆದ ಸದ್ದಾಯಿತು. ಇತ್ತ ಹೊರಗಿದ್ದ ವ್ಯಕ್ತಿ ಚಲಿಸಿದ ಸಪ್ಪಳ . ಮತ್ತೆರಡು ನಿಮಿಷ ಮೌನ. "ತಗೆಯೇ ಬಾಗಿಲ ! " ಅದು ಸುಂದರಮ್ಮನ ಸ್ವರ. ಅಮ್ಮಿ ಬಾಗಿಲು ತೆರೆದಳು. ಒಂದು ಕೈ‍ ಮುರು ಕಲು ಕುಡುಗೋಲೊಂದು. ಇನ್ನೊಂದರಲ್ಲಿ ಚಿಮಿಣಿದೀಪ. ಹಣೆಯ ಮೇಲೆ ಬೆವರಿನ ಮುತ್ತುಗಳು ಸಾಲು ಕಟ್ಟಿದ್ದರೂ ಕಣ್ಣುಗಳಲ್ಲಿ ಸಿಟ್ಟ ಕಿಡಿಕಾರುತ್ತಿತ್ತು. ಆ ಅಕ್ಕನ ಎದುರು ಅಳಬೇಕೆನ್ನಿಸಿತು ಅಮ್ಮಿಗೆ. ಆದರೂ ಆಕೆ ಮನಸ್ಸನ್ನು ಬಿಗಿ ಹಿಡಿದು ಕೇಳಿದಳು: " ಎಲ್ಲಿ ನಿಮ್ಮವರು?" " ఆ ಪಿಶಾಚೀನ ಆಟ್ಟಿಸ್ಕಂಡು ಹೋಗಿದಾರೆ ! " "ಅಯ್ಯೋ! ಒಬ್ಬರೇ ಹೋದರೆ?" " ಒಬ್ಬರ ಸಾಲ್ದೇನು ಅದಕ್ಕೆ? ಅಂಥವ್ರಿಗೆಲ್ಲಾ ಶಕ್ತಿ ಸಾಮರ್ಥ್ಯ ಇರುತ್ತೆ ಅಂತ ತಿಳ್ಕೊಂಡಿದ್ಯೇನು ನೀನು?" "...ಬಾ ಅಕ್ಕ, ಒಳಗೆ." ಸುಂದರಮ್ಮ ಒಳಬಂದಳು. ಅಜ್ಜಿ ತನ್ನ ಕೆಂಪು ಸೀರೆಯ ಸೆರಗಿನಿಂದ ಕಣ್ಣೋರೆಸಿ ಕೊಳ್ಳುತ್ತಿದ್ದಳು. " ನಮ್ಗತಿ ಈ ಸ್ಥಿತಿಗೂ ಬಂತಲ್ಲೇ.." ಎಂದು ಆಕೆ ಎರಡು ಮನೂರು ಸಾರೆ ಅಂದಳು. "ಒಬ್ಬೊಬ್ಬರದು ಒಂದೊಂದು ಗತಿ. ನೀವು ಸುಮ್ನಿರ್ಬರದೆ ಅಜ್ಜಿ  ? " ಎಂದಳು ಸುಂದರಮ್ಮ. ನಿಮಿಷಗಳು ಕಳೆದುವು ಮೆಲ್ಲನೆ.