ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇರಾಕ್

ವಿಕಿಸೋರ್ಸ್ದಿಂದ

ಇರಾಕ್ ಏಷ್ಯದ ನೈಋತ್ಯ ಭಾಗದಲ್ಲಿರುವ ಸ್ವತಂತ್ರ ಅರಬ್ಬೀ ರಾಜ್ಯ. ಪ್ರಾಚೀನ ಮೆಸೊಪೊಟೇಮಿಯ. ಉತ್ತರದಲ್ಲಿ ತುರ್ಕಿ, ಪಶ್ಚಿಮದಲ್ಲಿ ಸಿರಿಯ, ಜಾರ್ಡನ್, ದಕ್ಷಿಣದಲ್ಲಿ ಸೌದಿ ಅರೇಬಿಯ, ಕುವೈತ್, ಪರ್ಷಿಯನ್ ಖಾರಿ, ಪೂವ9ದಲ್ಲಿ ಇರಾನ್, ಇವೆ. ವಿಸ್ತೀರ್ಣ 1,73,258ಚ.ಮೈ. ಜನಸಂಖ್ಯೆ 83,38,000 (1966); ರಾಜಧಾನಿ ಬಾದ್ ದಾದ್. ಪರ್ಷಿಯನ್ ಖಾರಿಯ ತೀರದಲ್ಲಿ 25 ಮೈಲಿ ಕರಾವಳಿಯಿದೆ.

ಭೌಗೋಳಿಕವಾಗಿ ಈ ದೇಶವನ್ನು ಮುರು ಭಾಗಗಳಾಗಿ ವಿಂಗಡಿಸಬಹುದು. ಉತ್ತರದ ಇತ್ತರ ಪ್ರದೇಶ (ಸು. 10,000'); ಟೈಗ್ರಿಸ್ ಮತ್ತು ಯೂಫ್ರೆಟಿಸ್ ಯಮಳ ನದೀಪ್ರದೇಶ; ಮತ್ತು ಪಶ್ಚಿಮದ ಮರುಭೂಮಿ. ಜಾಗ್ರೊಸ್ ಪರ್ವತ ಮತ್ತು ಅರೇಬಿಯದ ದಿಣ್ಣೆ ನೆಲದ ಮಧ್ಯ ಈ ನದಿಗಳ ಜಲಾಯನ ಪ್ರದೇಶವಿದೆ. 1,150 ಮೈ. ಉದ್ದವುಳ್ಳ ಟೈಗ್ರಿಸ್ ಅತಿಮುಖ್ಯ ನದಿ. 1,700 ಮೈಲಿ ಉದ್ದವಾದ ಯೂಫ್ರಟಿಸ್ ಮುಂದವಾದಿ, ಬಳಸಾಗಿ ಹರಿಯುತ್ತಿದ್ದರೂ ಇದರಿಂದ ಪರ್ಷಿಯನ್ ಖಾರಿ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ವ್ಯಾಪಾರ ಮಾರ್ಗ ಏರ್ಪಟ್ಟಿದೆ. ಟೈಗ್ರಿಸ್ ಮತ್ತು ಯೂಫ್ರೆಟಿಸ್ ನದಿಗಳೆರಡೂ ಪ್ರವಾಹ ಕಾಲದಲ್ಲಿ ಮಣ್ಣನ್ನು ದಂಡೆಗೆ ತಂದು ಹಾಕುತ್ತವೆ. ಈ ಎರಡೂ ನದಿಗಳ ಮುಖಜ ಭೂಮಿ ಬಹಳ ಫಲವತ್ತಾಗಿದೆ. ಈ ಯಮಳ ನದಿಪ್ರದೇಶ ಪುರಾತನ ನಾಗರಿಕತೆಯ ತೊಟ್ಟಿಯಾಗಿತ್ತು.

ಅತಿ ಉತ್ತರದ ಗಡಿಪ್ರದೇಶ ಸಮುದ್ರಮಟ್ಟಕ್ಕಿಂತ 10,000' ಇತ್ತರದಲ್ಲಿದೆ. ಉತ್ತರ ಇರಾಕಿನಲ್ಲಿರುವ ಅಡಿಗುಡ್ಡದ ಪ್ರದೇಶ 2,000' ಎತ್ತರದಲ್ಲಿದೆ. ಉತ್ತರದ ಪರ್ವತ ಪ್ರದೇಶದ ಹುಲ್ಲುಗಾವಲುಗಳು ಅಲೆಮಾರಿಗಳಾದ ಕುಡ್ರ್ಸ್ ಜನರ ನೆಲೆ.

ಖನಿಜ : ತೈಲವೊಂದನ್ನು ಬಿಟ್ಟರೆ ಇರಾಕಿನಲ್ಲಿ ಉಳಿದ ಯಾವ ಖನಿಜ ಸಂಪತ್ತೂ ಹೆಚ್ಚಿನ ಪ್ರಮಾಣದಲ್ಲಿಲ್ಲ. ಉತ್ತರದಲ್ಲಿ ತೈಲ್ ನಿಕ್ಷೇಪವಿದೆ. ಈಶಾನ್ಯದಲ್ಲಿ ಚಿನ್ನ, ಕಬ್ಬಿಣ, ಪ್ಲಾಟಿನಂ, ಸತು ದೊರೆತಿವೆ. ಮಾಸಲು ಹಳದಿಬಣ್ಣದ ಕಲ್ಲಿದ್ದಲು ಆಗ್ನೇಯದಲ್ಲಿ ದೊರೆಯುತ್ತದೆ. ಜಿಪ್ಸಂ ಮತ್ತು ಲವಣ ಎಲ್ಲೆಡೆ ದೊರೆಯುತ್ತವೆ.

ವಾಯುಗುಣ : ಇಲ್ಲಿ ಸಾಮಾನ್ಯವಾಗಿ ಉಷ್ಣಹವೆ ಇರುತ್ತದೆ. ಇಲ್ಲಿಯದು ಮರಳುಗಾಡಿನ ವಾಯುಗುಣ. ಬಾಗ್ ದಾದಿನಲ್ಲಿ ಮಳೆ ವರ್ಷಕ್ಕೆ ಸುಮಾರು 6.5". ಸಾಮಾನ್ಯವಾಗಿ ಚಳಿಗಾಲದಲ್ಲಿ (ನವೆಂಬರಿನಿಂದ ಜೂನ್ ಅವಧಿಯಲ್ಲಿ) ಮಳೆಯಾಗುವುದು. ಜನವರಿ ಅತ್ಯಂತ ಚಳಿಯಾಗುವ ತಿಂಗಳು. ಆಗ ಉಷ್ಣತೆ 49o ಫ್ಯಾ ನಷ್ಟಿರುವುದು. ಆಗಸ್ಟಿನಲ್ಲಿ ಸರಾಸರಿ ಉಷ್ಣತೆ 93( ಫ್ಯಾ. ಮಧ್ಯಾಹ್ನದಲ್ಲಿ 100( - 120( ಫ್ಯಾ. ಇರುವುದು ಸಾಮಾನ್ಯ. ಈಶಾನ್ಯಭಾಗ ತಂಪಾಗಿದೆ. ಇಲ್ಲಿ ಸ್ವಲ್ಪ ಹೆಚ್ಚು ಮಳೆಯಾಗುವುದು. ಆದರೆ ಪಶ್ಚಿಮದಲ್ಲಿರುವ ಸಿರಿಯನ್ ಮರುಭೂಮಿಯಲ್ಲಿ ಒಂದು ಅಂಗುಲಕ್ಕಿಂತಲೂ ಕಡಿಮೆ ಮಳೆಯಾಗುತ್ತದೆ. ಆದ್ರ್ರತೆ ತುಂಬ ಕಡಿಮೆ.

ಟೈಗ್ರಿಸ್ ಯೂಫ್ರೆಟಿಸ್ ನದಿಗಳ ಪ್ರದೇಶ ಫಲವತ್ತಾದದ್ದು. ವ್ಯವಸಾಯಕ್ಕೆ ನೀರಾವರಿ ಯೋಜನೆ ಅನಿವಾರ್ಯ. ಸಿರಿಯನ್ ಮರುಭೂಮಿ ಪ್ರದೇಶದಲ್ಲಿ ಜನ ವಸತಿಯಿಲ್ಲ. ಇದು ಗಿಡಮರಗಳಿಲ್ಲದ ಪ್ರದೇಶವೆಂದು ಹೇಳಬಹುದು. ವಿರಳವಾಗಿ ಗಿಡಗಂಟೆಗಳಿವೆ. ಇವು ಮುಳ್ಳು ಮತ್ತು ಮರುಭೂಮಿ ಗಿಡಗಳು. ನದೀತಟದಲ್ಲಿ ಖರ್ಜೂರದ ಗಿಡಗಳು ಬೆಳೆಯುತ್ತವೆ. ಕಿರುವ, ತೋಳ, ನರಿ, ಕುಂದಿಲಿ, ಚಿಗರೆ ಮುಖ್ಯ ಪ್ರಾಣಿಗಳು. ರಣಹದ್ದು, ಡೇಗೆ ಮುಂತಾದ ಪಕ್ಷಿಗಳು ಸಾಮಾನ್ಯ.

ಭೂ ಇತಿಹಾಸ : ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿರುವ ಗುಡ್ಡ ಪ್ರದೇಶಗಳಿಂದ ಸುತ್ತುವರಿದಿರುವ ತಗ್ಗು ಪ್ರದೇಶವೇ ಇರಾಕ್, ಆಗ್ನೇಯ ದಿಕ್ಕಿನತ್ತ ಇದು ಮುಂದುವರಿದು ಪರ್ಷಿಯನ್ ಕೊಲ್ಲಿ ಎನಿಸಿಕೊಳ್ಳುತ್ತದೆ. ಇರಾಕ್ ಅಸ್ಥಿರ ಭೂಭಾಗವಾಗಿದ್ದು ಕೊಂಚಮಟ್ಟಿಗೆ ಭೂ ಕುಸಿತಕ್ಕೂ ಒಳಗಾಗಿದೆ. ಇಲ್ಲಿ ವಯಸ್ಸಿನಲ್ಲಿ ಕಿರಿಯದಾದ ಜಲಜಶಿಲಾಪ್ರಸ್ತರಗಳಿವೆ. ಪಶ್ಚಿಮದತ್ತ ಅತಿ ಪುರಾತನ ಮತ್ತು ಗಡುಸಾದ ಶಿಲೆಗಳಿಂದ ಕೂಡಿದ ಸಿರಿಯ-ಅರೇಬಿಯ ಭೂಪ್ರದೇಶವೂ ಪೂರ್ವ ಮತ್ತು ಉತ್ತರದ ಕಡೆಗೆ ತೀವ್ರ ಮಡಿಕೆ ಬಿದ್ದಿರುವ ಮತ್ತು ಉನ್ನತವಾಗಿರುವ ಜಾಗ್ರೋಸ್ ಮತ್ತು ಆನತೋಲಿಯನ್ ಪರ್ವತ ಪಂಕ್ತಿಗಳೂ ಇವೆ. ಈ ಪರ್ವತಗಳೂ ಕಿರಿಯ ವಯಸ್ಸಿನ ಶಿಲಾಶ್ರೇಣಿಗಳಿಂದಾದುವು. eóÁಗ್ರೋಸಿನವು ಬಹು ವಿಸ್ತಾರವಾದ ಮೇಲ್ಮಡಿಕೆಗಳು. ಇವು ಕಡಿದಾದ ಬೆಟ್ಟಗಳೋಪಾದಿಯಲ್ಲಿದ್ದು ವಾಯವ್ಯ-ಆಗ್ನೇಯ ಜಾಡಿನಲ್ಲಿ ಹಬ್ಬಿವೆ. ಅಲ್ಲದೆ ಮಟ್ಟಸವಾದ ನದೀ ಮೆಕ್ಕಲಿನ ಬಯಲುಪ್ರದೇಶದಿಂದ ಧಿಡೀರನೆ ಎದ್ದುನಿಂತು ಗಂಭೀರವಾಗಿ ತೋರುತ್ತವೆ. ಇರಾಕ್-ಇರಾನ್ ಗಡಿ ಈ ಜಾಡನ್ನನುಸರಿಸಿ ಸುಮಾರು 250 ಮೈ. ಉದ್ದಕ್ಕೂ ಹಬ್ಬಿದೆ. ಇನ್ನೂ ದಕ್ಷಿಣಕ್ಕೆ ಕಡಿದಾದ ಬೆಟ್ಟಗಳಿಂದ ಕೂಡಿದ ಪ್ರದೇಶವಿದೆ. ವಾಯುವ್ಯ-ಪಶ್ಚಿಮ ದಿಕ್ಕುಗಳಲ್ಲಿ ನೆಲಭಾಗ ಕ್ರಮೇಣ ಸಮುದ್ರಮಟ್ಟದಿಂದ ಎತ್ತರವಾಗುತ್ತ ಸಿರಿಯ-ಅರೇಬಿಯ ಪ್ರಸ್ಥಭೂಮಿಯಲ್ಲಿ ಪರ್ಯವಸಾನಗೊಳ್ಳುತ್ತದೆ. ಇಲ್ಲಿ ಮುಖ್ಯವಾಗಿ ಆರ್ಕೀಯನ್ ಯುಗದ ಗ್ರ್ಯಾನೈಟುಗಳಿವೆ. ಇವುಗಳ ಮೇಲೆ ಜೂರಾಸಿಕ್, ಕ್ರಿಟೇಷಸ್, ಇಯೋಸೀನ್ ಮತ್ತು ಮಯೊಸೀನ್ ಯುಗಗಳ ಜಲಜ ಶಿಲಾಪ್ರಸ್ತರಗಳು ನಿಕ್ಷೇಪಗೊಂಡಿವೆ. ಈ ಪ್ರಸ್ತರಗಳು ಮಟ್ಟಸವಾಗಿರದೆ ಕೊಂಚ ಮಟ್ಟಿಗೆ ವಾಲಿವೆ. ಅನೇಕ ಕಡೆ ಭೂಸವೆತಕ್ಕೊಳಗಾಗಿ ಸಣ್ಣಪುಟ್ಟ ವೈಲಕ್ಷಣ್ಯಗಳು ಮೈದೋರಿವೆ. ಯೂಫ್ರೆಟಿಸ್ ಕಣಿವೆಯ ಪಶ್ಚಿಮದ ಅಂಚಿನಲ್ಲಿ ಎದ್ದು ಕಾಣುವ ಕಡಿದಾದ ಬೆಟ್ಟವಿದೆ. ದೇಶಭಾಷೆಯಲ್ಲಿ ಇದಕ್ಕೆ ಇರಾಕ್ ಎಂದು ಹೆಸರು. ಬಹುಶಃ ಈ ಹೆಸರೇ ಇಡೀ ದೇಶಕ್ಕೆ ಅನ್ವಯವಾಗಿದೆ. ವಾಯುವ್ಯ ದಿಕ್ಕಿನಲ್ಲಿರುವ ಶಿಲಾ ಪ್ರಸ್ಥರಗಳಲ್ಲಿ ಅನೇಕ ಸಣ್ಣಪುಟ್ಟ ಮಡಿಕೆಗಳಿದ್ದು ಇವು ಬಹುಮಟ್ಟಿಗೆ ಪೂರ್ವ-ಪಶ್ಚಿಮ ಜಾಡಿನಲ್ಲಿ ಬೆಟ್ಟದ ಸಾಲುಗಳಂತೆ ತೋರಿಬರುತ್ತವೆ. ಈ ಸಾಲುಗಳಲ್ಲಿ ಮುಖ್ಯವಾದುದು ಮೊಸುಲ್ ಬಳಿ ಇರುವ ಜಿಬಲ್ ಸಿಂಜಾರ್. (ಬಿ.ವಿ.ಜಿ.)

ಸಂವಿಧಾನ ಮತ್ತು ಆಡಳಿತ : ಇರಾಕ್ ಬಹುಕಾಲ ಆಟೋಮನ್ ಸಾಮ್ರಾಜ್ಯದ ಆಶ್ರಿತ ರಾಜ್ಯವಾಗಿತ್ತು. ತುರ್ಕಿಯ ಆಡಳಿತ ಇದರ ಜನಜೀವನದ ಮೇಲೆ ಪ್ರಭಾವ ಬೀರಿದ್ದು ಕಂಡುಬರುತ್ತದೆ. ಪ್ರಥಮ ಮಹಾಯುದ್ಧ ಮತ್ತು ಬ್ರಿಟಿಷ್ ಸೈನ್ಯಾಡಳಿತದ ಅನಂತರ 1921ರಲ್ಲಿ ಇಲ್ಲಿ ಘಟನಾತ್ಮಕ ಅರಸೊತ್ತಿಗೆ ಸ್ಥಾಪಿತವಾಯಿತು. ಹಷೆಮೈಟ್ ದೊರೆ ಫೈಸಲ್ ಮೊದಲನೆಯಮ. 1924ರಲ್ಲಿ ಈ ದೇಶದ ಸಂವಿಧಾನ ಪರಿಷ್ಕøತವಾಯಿತು. ಇರಾಕಿನ ಸಾರ್ವಭೌಮತ್ವಕ್ಕೆ ಧಕ್ಕೆ ಬರದಂತೆ ಗ್ರೇಟ್ ಬ್ರಿಟನ್ ಸಲಹೆ ನೀಡುವ ಬಗ್ಗೆ 1930ರಲ್ಲಿ ಒಂದು ಒಪ್ಪಂದವಾಯಿತು. 1932ರಲ್ಲಿ ರಾಷ್ಟ್ರಕೂಟಕ್ಕೆ (ಲೀಗ್ ಆಫ್ ನೇಷನ್ಸ್) ಇರಾಕ್ ಪ್ರವೇಶ ಪಡೆಯಿತು. ಅದೇ ವರ್ಷ ಅದು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಯಿತು. 1933ರಲ್ಲಿ ಫೈಸಲ್ ಕಾಲವಾದ. ಆಗ ಅಲ್ಲಿ ಸಿಂಹಾಸನಕ್ಕಾಗಿ ಜಗಳವಾಯಿತು. ಕಿರಿಯ ಮಗ ಅಬ್ದುಲ್ಲ ತನ್ನ ಸೋದರಳಿಯನ ರಾಜ ಪ್ರತಿನಿಧಿಯಾಗಿ ಆಡಳಿತ ನಿರ್ವಹಿಸಿದ. ಮುಂದೆ ಆ ಸೋದರಳಿಯನೇ ಫೈಸಲ್ II ಎಂಬ ಅಭಿದಾನದಿಂದ ರಾಜ್ಯವಾಳಿದ. ಈ ಅವಧಿಯಲ್ಲಿ ರಾಜಕೀಯ ಜೀವನದಲ್ಲಿ ಸೈನ್ಯದ ಪ್ರಭಾವ ಹೆಚ್ಚತೊಡಗಿತು. ಅಲ್ಲಿ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವವಿತ್ತು. ನಿಜವಾದ ಅಧಿಕಾರ ಕೆಲವೇ ಜನ ಧಾರ್ಮಿಕ ಮುಖಂಡರ ಮತ್ತು ಅಧಿಕಾರಿಗಳ ಕೈಯಲ್ಲಿತ್ತು. 1948ರಲ್ಲಿ ಬ್ರಿಟನ್ನಿನೊಂದಿಗೆ ಪರಸ್ಪರ ಸಹಾಯದ ಒಪ್ಪಂದವಾಯಿತು. ಆದರೆ ಇದಕ್ಕೆ ಜನರಿಂದ ವಿರೋಧ ವ್ಯಕ್ತವಾದದ್ದರಿಂದ ಈ ಒಪ್ಪಂದವನ್ನು ಕೈಬಿಡಲಾಯಿತು. 1958ರಲ್ಲಿ ಸೈನಿಕ ಕ್ಷಪ್ರಕ್ರಾಂತಿಗೆ ಎಡೆಮಾಡಿಕೊಟ್ಟಿತು. ಅರಸೊತ್ತಿಗೆ ಕೊನೆಗೊಂಡಿತು. ಜನರಲ್ ಅಬ್ದುಲ್ ರಹೀಂ ರಾಸೀಮನ ಬೆಂಬಲವಿರುವ ಸೈನ್ಯದ ತುಕಡಿಗೆ ಅಧಿಕಾರ ಬಂತು. 1963ರಲ್ಲಿ ಈತನನ್ನು ಕರ್ನಲ್ ಅರಿಫ್ ಪದಚ್ಯುತಗೊಳಿಸಿದ. 1958ರಲ್ಲಿ ಇರಾಕ್ ಸ್ವತಂತ್ರ ಸಾರ್ವಭೌಮ ಇಸ್ಲಾಮೀ ಗಣರಾಜ್ಯವೆಂದು ಘೋಷಿಸಲಾಯಿತು. ಅಲ್ಲಿ ಈಗ ಸೆನೆಟ್ ಮತ್ತು ಚೇಂಬರ್ ಆಫ್ ಡೆಪ್ಯುಟೀಸ್ ಎಂಬ ಎರಡು ವಿಧಾನಸಭೆಗಳಿವೆ. ಆಡಳಿತ ದೃಷ್ಟಿಯಿಂದ ದೇಶವನ್ನು 14 ಪ್ರಾಂತ್ಯಗಳಾಗಿ (ಲಿವ್ರ) ವಿಭಾಗ ಮಾಡಲಾಗಿದೆ. ಪ್ರತಿಯೊಂದು ಲಿವ್ರದ ಆಡಳಿತವನ್ನು ಮುತಾಸರಿಫ್ ಅಥವಾ ರಾಜ್ಯಪಾಲ ನೋಡಿಕೊಳ್ಳುತ್ತಾನೆ. ಆಡಳಿತದ ಅನುಕೂಲಕ್ಕಾಗಿ ಇವನ್ನು ಮತ್ತೆ ವಿಭಾಗಿಸಲಾಗಿದೆ.

ಸೈನ್ಯ : 18 ವರ್ಷ ಮೀರಿದ ಪ್ರತಿಯೊಬ್ಬ ಪುರುಷನಿಗೂ ಸೈನ್ಯದಲ್ಲಿ ಇಎರು ವರ್ಷದ ಸೇವೆ ಕಡ್ಡಾಯ. ಅವನು ಇಚ್ಚಿಸಿದರೆ 45 ವರ್ಷಗಳ ವರೆಗೆ ಸೇವೆಯಲ್ಲಿ ಮುಂದುವರಿಯಬಹುದು. ಸೇನಾ ಬಲ ಸುಮಾರು 70,000 (1967). ಇದು ಸೋವಿಯತ್ ಒಕ್ಕೂಟದ ನೆರವಿನಿಂದ ಸುಸಜ್ಜಿತವಾಗಿದೆ. ಟೈಗ್ರಿಸ್-ಯೂಫ್ರೆಟಿಸ್ ವಿಭಾಗದಲ್ಲಿ ನೌಕಾಬಲವೂ ಇದೆ.

ಶಿಕ್ಷಣ : ಪ್ರಾಥಮಿಕ ಶಿಕ್ಷಣ ಕಡ್ಡಾಯ ಮತ್ತು ಉಚಿತ. ಅಲ್ ಹಿಕ್ಮಾ, ಮಸ್ತಾನ, ಸಿರಿಯ, ಬಾಗ್‍ದಾದ್‍ಗಳಲ್ಲಿ ವಿಶ್ವವಿದ್ಯಾನಿಲಯಗಳಿವೆ. 1947ರಲ್ಲಿ ತಾಂತ್ರಿಕ ಶಿಕ್ಷಣವನ್ನು ಪ್ರಾರಂಭಿಸಲಾಯಿತು. ಇರಾಕಿನ ವಿದ್ಯಾರ್ಥಿಗಳನೇಕರು ಅಮೆರಿಕ, ಗ್ರೇಟ್ ಬ್ರಿಟನ್, ಲೆಬನಾನುಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆಯುತ್ತಾರೆ.

ನ್ಯಾಯ : ಇರಾಕಿನಲ್ಲಿ ಈಗ ವ್ಯಾವಹಾರಿಕ (ಸಿವಿಲ್), ಧಾಮಿ9ಕ, ಮತ್ತು ವಿಶೇಷ ಕಲಾಪಗಳಿಗೆ ಸಂಬಂಧಿಸಿದಂತೆ ಮೂರು ವಿಧದ ನ್ಯಾಯಾಲಯಗಳಿವೆ. ಬಾಗ್‍ದಾದ್, ಬಸ್ರ, ಮೊಸುಲ್ ಮತ್ತು ಕಿರ್ಕೂಕುಗಳಲ್ಲಿ ಅಪೀಲು ನ್ಯಾಯಾಲಯಗಳಿವೆ. 1950ರಲ್ಲಿ ಒಂದು ನ್ಯಾಯಮಂಡಲಿ ಸ್ಥಾಪಿತವಾಯಿತು.

ಆರ್ಥಿಕ ವ್ಯವಸ್ಥೆ : ಇರಾಕ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಕೃಷಿ ಈ ರಾಷ್ಟ್ರದ ಪ್ರಮುಖ ಆರ್ಥಿಕ ಚಟುವಟಿಕೆ. ತೈಲ ಉತ್ಪಾದನೆ ಪ್ರಮುಖವಾಗಿದ್ದರೂ ಕೃಷಿಯ ಮೇಲೆ ಅವಲಂಬಿತರಾಗಿರುವವರ ಸಂಖ್ಯೆಯೇ ಅಧಿಕ. ಕೈಗಾರಿಕೆ ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯ ಪಡೆಯುತ್ತಿದೆ.

ಕೃಷಿ : ಇರಾಕಿನ ಕೃಷಿ ಪ್ರದೇಶವನ್ನು 2 ಭಾಗಗಳಾಗಿ ವಿಂಗಡಿಸಬಹುದು. ಒಂದು, ಮಳೆಯ ಆಧಾರದ ಮೇಲೆ ಬೆಳೆ ತೆಗೆಯುವ ಪ್ರದೇಶ. ಎರಡು, ನೀರಾವರಿಯಿಂದ ಸಾಗುವಳಿಯಾಗುವ ಪ್ರದೇಶ. ಮಳೆಯ ಆಧಾರದಿಂದ ಬೆಳೆ ತೆಗಿಯುವ ಪ್ರದೇಶಗಳ ಪ್ರಮುಖ ಬೆಳೆಗಳೆಂದರೆ ಬಾರ್ಲಿ, ಗೋಧಿ, ಹೊಗೆಸೊಪ್ಪು, ಅಂಜೂರ ಮತ್ತು ಬತ್ತ. ನೀರಾವರಿ ಅವಶ್ಯವಿರುವ ಪ್ರದೇಶಗಳಲ್ಲಿ ಬೆಳೆಯಲಾಗುವ ಪ್ರಮುಖ ಬೆಳೆಗಳೆಂದರೆ, ಬಾರ್ಲಿ, ಅಂಜೂರ ಮತ್ತು ಬತ್ತ. ಬಾರ್ಲಿ ಇರಾನಿನ ಅತ್ಯಂತ ಪ್ರಮುಖ ಬೆಳೆ. ಲೆಂಟಿಲ್ಸ್ (ಚೆನ್ನಂಗಿ ಮೊದಲಾದ ಜಾತಿಯ ಬೆಳೆಗಳು), ವೆಚ್ ಮುಖ್ಯವಾಗಿ ಮೇವಿನ ಬೆಳೆ), ನಾರಗಸೆ (ಲಿನ್ಸೀಡ್)-ಇವು ಚಳಿಗಾಲದ ಪ್ರಮುಖ ಬೆಳೆಗಳು. ಸಾಮಾನ್ಯವಾಗಿ ಬಾರ್ಲಿಯನ್ನು ಅಧಿಕ ಪ್ರಮಾಣದಲ್ಲಿ ಬೆಳೆದು ರಫ್ತು ಮಾಡುತ್ತಾರೆ. ಒಮ್ಮೊಮ್ಮೆ ಮಳೆ ಕಡಿಮೆಯಾದಾಗ ರಫ್ತು ಅಸಾಧ್ಯವಾಗುತ್ತದೆ. ಹೊಗೆಸೊಪ್ಪು, ಬತ್ತ, ಸಿಸೇಮ್ ಬೇಸಗೆಯ ಬೆಳೆಗಳು, ಮರದ ಬೆಳೆಗಳಲ್ಲಿ ಅಂಜೂರ ಅತ್ಯಂತ ಪ್ರಮುಖವಾದುದು. ಇರಾಕ್ ಅತ್ಯಂತ ಹೆಚ್ಚು ಅಂಜೂರ ಬೆಳೆಯುವ ರಾಷ್ಟ್ರವೆನಿಸಿಕೊಂಡಿದೆ; ಸೋವಿಯತ್ ಒಕ್ಕೂಟಕ್ಕೇ ಮೀಸಲಾಗಿದ್ದ ಪ್ರಥಮ ಸ್ಥಾನವನ್ನು ಇದು ಅನೇಕ ಸಾರಿ ಪಡೆದುಕೊಂಡಿದೆ. 1966-67ರಲ್ಲಿ 3,80,000 ಟನ್ ಅಂಜೂರ ಬೆಳೆಯಲಾಗಿತ್ತು. ಉತ್ಪಾದನೆಯ 2/3 ರಷ್ಟು ಅಂಜೂರವನ್ನು ರಫ್ತು ಮಾಡಲಾಗುತ್ತಿದೆ. ತೈಲವನ್ನು ಬಿಟ್ಟರೆ, ವಿದೇಶೀ ವಿನಿಮಯದ ಗಳಿಕೆಯಲ್ಲಿ ಅಂಜೂರಕ್ಕೆ ಪ್ರಥಮ ಸ್ಥಾನ.

1958ರಲ್ಲಿ ಅಕ್ಟೋಬರ್‍ನಲ್ಲಿ ಇರಾಕ್ ಸರ್ಕಾರ ಒಂದು ಹೊಸ ಭೂಸುಧಾರಣೆ ಕ್ರಮವನ್ನು ಜಾರಿಗೆ ತಂದಿತು. ಇದರ ಉದ್ದೇಶ ಬೃಹತ್ ಜಮೀನುಗಳನ್ನು ಒಡೆದು ಸಣ್ಣಸಣ್ಣವನ್ನಾಗಿ ಮಾಡಿ ರೈತರಿಗೆ ಹಂಚುವುದು. ಕೃಷಿರಂಗದಲ್ಲಿ ಸಹಕಾರ ಪ್ರಮುಖ ಪಾತ್ರ ವಹಿಸಬೇಕೆಂಬುದು ಸರ್ಕಾರದ ಉದ್ದೇಶ.

ಇರಾಕಿನ ಯೋಜನೆಗಳು ನೀರಾವರಿಗೆ ಬಹಳ ಪ್ರಾಮುಖ್ಯ ಕೊಟ್ಟಿದೆ. ಈ ಯೋಜನೆಗಳು ಕಾರ್ಯಗತವಾದಲ್ಲಿ ಇರಾಕಿನ ಬೇಸಾಯದ ಜಮೀನು ದ್ವಿಗುಣಗೊಳ್ಳುವುದೆಂದು ನಂಬಲಾಗಿದೆ. ವಿದ್ಯುತ್ತಿನ ಉತ್ಪಾದನೆಗೂ ಗಮನ ಕೊಡಲಾಗಿದೆ.

ತೈಲ : ಇರಾಕಿನ ಆರ್ಥಿಕ ವ್ಯವಸ್ಥೆಯಲ್ಲಿ ತೈಲಕ್ಕೆ ವಿಶಿಷ್ಟ ಸ್ಥಾನ. ಇದು ಇರಾಕಿನ ಕೈಗಾರಿಕೆಯ ರಂಗಕ್ಕೆ ಬಂಡವಾಳ ಒದಗಿಸುತ್ತ ಬಂದಿದೆ. ಅತ್ಯಂತ ಪ್ರಮುಖ ತೈಲ ಕಂಪನಿಯೆಂದರೆ ಇರಾಕ್ ಪೆಟ್ರೋಲಿಯಂ ಕಂಪನಿ ಮತ್ತು ಅದರ ಇತರ ಕಂಪನಿಗಳು. ಕಿರ್ಕೂಕ್‍ನಲ್ಲಿ ಪ್ರಮುಖ ತೈಲನಿಕ್ಷೇಪವಿದೆ. ಇಲ್ಲಿ ತೈಲಶೋಧನ ಕೇಂದ್ರ ಸಹ ಇದೆ. ಖಾನಾ ಕ್ವಿನ್ ತೈಲಕೇಂದ್ರ ಸರ್ಕಾರದ ಪರವಾಗಿ ಕಾರ್ಯ ನಡೆಸುತ್ತದೆ. 1955ರಲ್ಲಿ ಬಾಗ್‍ದಾದ್ ಸಮೀಪದಲ್ಲಿ 13.5 ಲಕ್ಷ ಟನ್ ಸಾಮಥ್ರ್ಯವುಳ್ಳ ತೈಲಶೋಧನ ಕೇಂದ್ರವನ್ನು ಸ್ಥಾಪಿಸಲಾಯಿತು. ಇರಾಕಿನಲ್ಲಿ ಒಟ್ಟು ಐದು ತೈಲ ಶೋಧನ ಕೇಂದ್ರಗಳಿವೆ. ಇದು ತೈಲೋತ್ಪಾದಕ ರಾಷ್ಟ್ರಗಳ ಪೈಕಿ 7ನೆಯ ಸ್ಥಾನವನ್ನೂ ಮಧ್ಯ ಏಷ್ಯದಲ್ಲಿ 4ನೆಯ ಸ್ಥಾನವನ್ನೂ ಪಡೆದಿದೆ. 1966ರಲ್ಲಿ ಇರಾಕ್ 67.7 ದಶಲಕ್ಷ ಟನ್ ತೈಲವನ್ನು ಉತ್ಪಾದಿಸಿತು. ಆದರೆ 1967ರಲ್ಲಿ ಇಸ್ರೇಲ್-ಅರಬ್ ಯುದ್ಧದಿಂದಾಗಿ ಉತ್ಪಾದನೆ 5.95 ಕೋಟಿ ಟನ್‍ಗೆ ಇಳಿಯಿತು.

ಕೈಗಾರಿಕೆ : ಇರಾಕಿನಲ್ಲಿ ಕೈಗಾರಿಕೆಗೆ ಇತ್ತೀಚೆಗೆ ಪ್ರಾಮುಖ್ಯ ದೊರೆಯುತ್ತಿದೆ. ಯೋಜನೆಯಲ್ಲಿ ಕೈಗಾರಿಕೆಗೆ ಪ್ರಾಧಾನ್ಯ ಕೊಡಲಾಗಿದೆ. ಒಳನಾಡಿನ ಬೇಡಿಕೆಗಳನ್ನು ಪೂರೈಸಬಹುದಾದ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗಳಿಗೆ ಹೆಚ್ಚು ಗಮನ ಕೊಡಲಾಗುತ್ತಿದೆ. 1961-62 ರಿಂದ 66-67ರ ಯೋಜನೆಯಲ್ಲಿ ಕೈಗಾರಿಕೆಗೆ 9,805 ಕೋಟಿ ಇರಾಕ್ ದೀನಾರುಗಳನ್ನು ನಿಗದಿ ಮಾಡಲಾಗಿದೆ. ಇರಾಕಿನಲ್ಲಿ ಬೃಹತ್ ಕೈಗಾರಿಕೆಗಳು ಕಡಿಮೆ. ಬಾಗ್ ದಾದಿನಲ್ಲಿ ಮಾತ್ರ ವಿದ್ಯುತ್, ಇಟ್ಟಿಗೆ ಮತ್ತು ಸಿಮೆಂಟಿನ ಬೃಹತ್ ಕೈಗಾರಿಕೆಗಳಿವೆ. ಇದರ ಜೊತೆಗೆ ಅಸಂಖ್ಯಾತ ಸಣ್ಣ ಉದ್ಯಮಗಳಿವೆ. ಅಂಜೂರ ಹದಮಾಡಿ ರಫ್ತು ಮಾಡುವುದು. ಆಹಾರವಸ್ತು ಸಂಶೋಧನಾಲಯ, ನೇಯ್ಗೆ, ಸಿಗರೇಟ್-ಇವು ಮುಖ್ಯ. 1954ರ ಜನಗಣತಿಯಿಂದ ಈ ಕೆಲವು ಅಂಶಗಳು ಹೊರಬಿದ್ದಿವೆ: ಕೇವಲ 294 ಉದ್ಯಮಗಳು 20ಕ್ಕಂತ ಅಧಿಕ ಜನರನ್ನು ಕೂಲಿಯ ಮೇಲೆ ನೇಮಿಸಕೊಂಡಿದ್ದುವು. ಅದರಲ್ಲೂ 50% ಭಾಗ ಬಾಗ್‍ದಾದಿನಲ್ಲೇ ಸ್ಥಾಪಿತವಾಗಿದ್ದವು. ಉತ್ಪಾದನ ರಂಗದಲ್ಲಿ ಒಟ್ಟು 80,000 ಜನರನ್ನು ನೇಮಿಸಿಕೊಳ್ಳಲಾಗಿತ್ತು. ಇದರಲ್ಲಿ 10,000 ಜನ ವಿದ್ಯುತ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು.

1959ರಲ್ಲಿ ಸೋವಿಯತ್ ಸಹಕಾರದೊಂದಿಗೆ 11 ಕಾರ್ಖಾನೆಗಳ ನಿರ್ಮಾಣ ಆರಂಭವಾಯಿತು. ಅವುಗಳಲ್ಲಿ ಮುಖ್ಯವಾದುವೆಂದರೆ, ಉಕ್ಕಿನ ಕಾರ್ಖಾನೆ (ಬಾಗ್‍ದಾದ್). ವಿದ್ಯುತ್ ಸಲಕರಣೆಗಳು (ಬಾಗ್‍ದಾದ್), ಔಷಧ ತಯಾರಿಕೆ (ಸಮಾರಾ), ಮತ್ತು ವ್ಯವಸಾಯೋಪಕರಣ (ಮುಸಾಯಿಬ್). 1961ರ ಕೈಗಾರಿಕಾಭಿವೃದ್ಧಿ ನೀತಿಯಿಂದ ಹೊಸ ಕೈಗಾರಿಕೆಗಳಿಗೆ ಪ್ರೋತ್ಸಾಹ ದೊರಕುತ್ತಿದೆ. 1949ರಲ್ಲಿ ಸ್ಥಾಪಿತವಾದ ಕೈಗಾರಿಕಾ ಬ್ಯಾಂಕು ಕೈಗಾರಿಕೆಯ ಅಭಿವೃದ್ಧಿಗೆ ಬಹಳ ಮಟ್ಟಿಗೆ ಸಹಾಯಕ.

ಆರ್ಥಿಕ ಯೋಜನೆ : 1959ರಲ್ಲಿ ನಾಲ್ಕು ವರ್ಷಗಳ ಅವಧಿಯ ಒಂದು ತಾತ್ಕಾಲಿಕ ಯೋಜನೆ ಇರಾನಿನಲ್ಲಿ ಜಾರಿಗೆ ಬಂತು. 1961 ರಲ್ಲಿ ವಿಸ್ತøತವಾದ ಪಂಚವಾರ್ಷಿಕ ಯೋಜನೆಯಲ್ಲಿ ಇದು ಲೀನಗೊಂಡಿತು. ಈ ಯೋಜನೆಯ ಒಟ್ಟು ವೆಚ್ಚ 56.634 ಕೋಟಿ ಇರಾಕಿ ದೀನಾರ. ಈ ಯೋಜನೆಯಲ್ಲಿ ಕೈಗಾರಿಕೆಗೆ ಸಾಕಷ್ಟು ಪ್ರಾಧಾನ್ಯ ದೊರೆತಿದೆ. ಆದರೆ ಯೋಜನೆಯ ವಾಸ್ತವ ವೆಚ್ಚ, ಉದ್ದೇಶಿಸಿದ್ದಕ್ಕಿಂತ ಕಡಿಮೆಯಿತ್ತು. ಜೋಜನೆಗೆ ಹಣವನ್ನು ತೈಲ ಉತ್ಪಾದನೆಯ ಲಾಭದಿಂದಲೂ ಸೋವಿಯತ್ ಒಕ್ಕೂಟದ ನೆರವಿನಿಂದಲೂ ಸರ್ಕಾರದ ಉದ್ಯಮಗಳ ಲಾಭದಿಂದಲೂ ಒದಗಿಸಲಾಯಿತು.

1965-69ರ ಪಂಚವಾರ್ಷಿಕ ಯೋಜನೆಯನ್ನು ಒಟ್ಟು 82.0 ಕೋಟಿ ಇರಾಕಿ ದೀನಾರಗಳ ವೆಚ್ಚದಲ್ಲಿ ಜಾರಿಗೆ ತರಲಾಯಿತು. ಸಕಾ9ರಿ ರಂಗ 64 ಕೋಟಿಯನ್ನೂ ಖಾಸಗಿ ರಂಗ 18 ಕೋಟಿ ದೀನಾರ್‍ಗಳನ್ನೂ ವೆಚ್ಚ ವಿದ್ಯುತ್ ಉದ್ದೇಶಿಸಿದ ಹೆಚ್ಚಿನ ಗಮನ ಸಂದಿದೆ. ಈ ರಂಗಗಳಿಗೆ 63% ರಷ್ಟನ್ನು ನಿಯೋಜಿಸಲಾಗಿದೆ. ಈ ಯೋಜನೆಯ ಅವಧಿಯಲ್ಲಿ ರಾಷ್ಟ್ರೀಯ ಆದಾಯವನ್ನು ವರ್ಷಂಪ್ರತಿ 8% ರಂತೆ ಹೆಚ್ಚಿಸಬೇಕೆಂಬುದು ಗುರಿ.

ಇರಾಕಿ ನಾಣ್ಯ : ಇರಾಕಿ ದೀನಾರ್ ಎಂಬುದು ಈ ದೇಶದ ನಾಣ್ಯ. 1 ಇರಾಕಿ ದೀನಾರ್ 1000 ಫಿಲ್. 1, 5, 10, 25, 50 ಮತ್ತು 100 ಫಿಲ್‍ಗಳ ನಾಣ್ಯಗಳೂ ¼, ಳಿ, 1, 5 ಮತ್ತು 10 ಇರಾಕಿ ದೀನಾರ್‍ಗಳ ನೋಟುಗಳೂ ಚಲಾವಣೆಯಲ್ಲಿವೆ, ವಿದೇಶಿ ವಿನಿಮಯ ದರ : 0.857 ಇರಾಕಿ ದೀನಾರ್ _1 ಪೌಂ. ಸ್ಟರ್ನಂಗ್ 357ಫಿಲ್ =1 ಅಮೆರಿಕನ್ ಡಾಲರ್ (1969).

 (ಸಿ.ಕೆ.ಆರ್.)