ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರುವತ್ತನಾಲ್ಕು ಕಲೆಗಳು

ವಿಕಿಸೋರ್ಸ್ದಿಂದ

ಅರುವತ್ತನಾಲ್ಕು ಕಲೆಗಳು : ವಾತ್ಸ್ಯಾಯನನ ಕಾಮಸೂತ್ರದಲ್ಲಿ ಇವುಗಳ ಉಲ್ಲೇಖ ವಿದೆ. ಇವು ಅರುವತ್ತನಾಲ್ಕು ಎಂಬುದರ ಬಗ್ಗೆ ಪಂಚಾಲ, ವಾತ್ಸ್ಯಾಯನ, ಯಶೋಧರ, ಶ್ರೀಧರಸ್ವಾಮಿ, ರಾಮಚಂದ್ರರೂ ಶುಕನೀತಿಸಾರ ಎಂಬ ಗ್ರಂಥವೂ ಒಪ್ಪುತ್ತವೆ. ವಾತ್ಸ್ಯಾಯನನೇ ತನ್ನ ಪಟ್ಟಿಗಿಂತ ಭಿನ್ನ ವಾದ ಪಟ್ಟಿ ಪಂಚಾಲನದು ಎಂದು ಒಂದು ಕಡೆ ಹೇಳಿದ್ದಾನೆ. ಯಶೋಧರ ತನ್ನ ಜಯಮಂಗಲ ಎಂಬ ಕಾಮಸೂತ್ರದ ವ್ಯಾಖ್ಯಾನದಲ್ಲಿ ಈ ಕಲೆಗಳ ವಿವರಗಳನ್ನು ಕೊಡುವುದಲ್ಲದೆ ಒಟ್ಟು 512 ಕಲೆಗಳಿದ್ದುವೆಂದು ಹೇಳುತ್ತಾನೆ. ಶ್ರೀಮದ್ಭಾಗವತದ ವ್ಯಾಖ್ಯಾನಕಾರ ಶ್ರೀಧರಸ್ವಾಮಿ ಶೈವತಂತ್ರದ 64 ಕಲೆಗಳನ್ನು ಉದ್ಧರಿಸುತ್ತಾನೆ. ಆ ಪಟ್ಟಿ ವಾತ್ಸ್ಯಾಯನನ ಪಟ್ಟಿಯನ್ನೇ ಸ್ಥೂಲವಾಗಿ ಹೋಲುತ್ತದೆ. ಚಂಪೂ ರಾಮಾಯಣದ ರಾಮಚಂದ್ರ ಮತ್ತು ಶುಕ್ರನೀತಿಸಾರಗಳು ತೀರ ಭಿನ್ನ ವಾದ 64 ಕಲೆಗಳ ಪಟ್ಟಿಯನ್ನು ಕೊಡುತ್ತವೆ. ಎ.ವೆಂಕಟಸುಬ್ಬಯ್ಯನವರು ದಿ ಕಲಾಸ್ (ಕಲೆಗಳು) ಎಂಬ ಗ್ರಂಥದಲ್ಲಿ ಇವುಗಳ ಬಗ್ಗೆ ದೀರ್ಘ ವಿವೇಚನೆ ನಡೆಸಿದ್ದಾರೆ. ವಾತ್ಸ್ಯಾಯನನ ಅಭಿಪ್ರಾಯದಂತೆ ಕಲೆಗಳು 64 ಎಂದು ನಿರ್ಧರಿಸುವಲ್ಲಿ ಋಗ್ವೇದದ ಹತ್ತು ಮಂಡಲಗಳ 64 ವಿಭಾಗಗಳು ಮಾದರಿಯಾಗಿವೆ. ವಾತ್ಸ್ಯಾಯನನ ರೀತ್ಯಾ ಅರುವತ್ತನಾಲ್ಕು ಕಲೆಗಳು:

  1. ಗೀತಂ: ಹಾಡುಗಾರಿಕೆ;
  2. ವಾದ್ಯಂ: ವಾದ್ಯಗಳನ್ನು ನುಡಿಸುವುದು;
  3. ನೃತ್ಯಂ: ನಾಟ್ಯವಾಡುವುದು;
  4. ಆಲೇಖ್ಯಂ:ಚಿತ್ರಬರೆಯುವಿಕೆ, ಗೊಂಬೆಮಾಡುವಿಕೆ ಇತ್ಯಾದಿ;
  5. ವಿಶೇಷಯಕ ಚ್ಛೇದ್ಯಂ: ವಿವಿಧ ಆಕಾರಗಳ ಹಣೆಯ ಅಲಂಕಾರ:
  6. ತಂಡುಲಕುಸುಮಬಲಿವಿಕಾರಾಃ: ಬಣ್ಣದ ಅಕ್ಕಿ ಮತ್ತು ಹೂಗಳಿಂದ ರಂಗವಲ್ಲಿಯಂತೆ ವಿವಿಧಾಕಾರಗಳ ರಚನೆ;
  7. ಪುಷ್ಪಾಂಸ್ತರಣಂ:ಪುಷ್ಪದಿಂದ ಗೃಹಾಲಂಕಾರ;
  8. ದಶವಸನಂಗರಾಗಃ; ತುಟಿ ಬಟ್ಟೆ ಮತ್ತು ಅಂಗಗಳಿಗೆ ಬಣ್ಣ ಹಚ್ಚುವಿಕೆ;
  9. ಮಣಿಭೂಮಿಕಾಕರ್ಮ: ಮಣಿ ಮೊದಲಾದವುಗಳಿಂದ ನೆಲದ ಅಲಂಕಾರ;
  10. ಶಯನರಚನಂ: ಹಾಸಿಗೆವನ್ನು ಸಿದ್ಧಪಡಿಸುವುದು;
  11. ಉದಕವಾದ್ಯಂ: ನೀರಿನ ಸಹಾಯದಿಂದ ವಿವಿಧ ವಾದ್ಯಗಳ ಧ್ವನಿಯನ್ನು ಹೊರಡಿಸುವುದು ಜಲತರಂಗ ನುಡಿಸುವುದು;
  12. ಉದಕಘಾತಃ: ಜಲ ಕ್ರೀಡೆಯಲ್ಲಿ ಬೊಗಸೆ ನೀರಿನಿಂದ ಹೊಡೆಯುವುದು;
  13. ಚಿತ್ರಾಶ್ಚಯೋಗಾಃ: ಇತರರಿಗೆ ನಿಶ್ಯಕ್ತಿ, ಹುಚ್ಚು, ಅಕಾಲವೃದ್ಧಾಪ್ಯ ಮುಂತಾದುವು ಬರುವಂತೆ ನಡೆಸುವ ಔಷಧ ಪ್ರಯೋಗ ಮತ್ತು ಮಾಟ ಇತ್ಯಾದಿ;
  14. ಮಾಲ್ಯಗ್ರಥನ ವಿಕಲ್ಪಾಃ: ವಿವಿಧ ಬಗೆಯ ಹೂವಿನ ಹಾರಗಳ ರಚನೆ:
  15. ಶೇಖರಕಾಪೀಡಯೋಜನಂ: ತಲೆಗೆ ಮಾಡುವ ವಿವಿಧ ಹೂಗಳ ಅಲಂಕಾರ;
  16. ನೇಪಥ್ಯ ಪ್ರಯೋಗಾಃ: ನೇಪಥ್ಯ ದಲ್ಲಿ ನಡೆಸುವ ವಸ್ತ್ರಾಲಂಕಾರ;
  17. ಕರ್ಣಪ್ರಭಂಗಃ: ದಂತ ಮೊದಲಾದುವುಗಳಿಂದ ಕಿವಿಯ ಒಡವೆಗಳನ್ನು ತಯಾರಿಸುವುದು;
  18. ಗಂಧಯುಕ್ತಿಃ: ಸುವಾಸನಾದದ್ರವ್ಯಗಳನ್ನು ತಯಾರಿಸುವುದು:
  19. ಭೂಷಣಯೋಜನಂ: ಒಡವೆಗಳನ್ನು ತಯರಿಸುವುದು;
  20. ಐಂದ್ರಜಾಲಯೋಗಾಃ: ಕಣ್ಕಟ್ಟು ಮುಂತಾದ ಇಂದ್ರಜಾಲವನ್ನು ಮಾಡುವುದು;
  21. ಕೌಚುಮಾರಾಶ್ಚಯೊಗಾಃ: ಕುಚುಮಾರನ ರೀತ್ಯ ಶಾರೀರಕ ದೌರ್ಬಲ್ಯ ಮತ್ತು ಅಕಾಲ ವೃದ್ಧಾಪ್ಯಗಳನ್ನು ಹೋಗಲಾಡಿಸಲು ನಡೆಸುವ ವಾಜೀಕರಣ ಇತ್ಯಾದಿ;
  22. ಹಸ್ತಲಾಘವಂ. ಕಾರ್ಯಯೋಜನೆಗಿರಬೇಕಾದ ಕೈಚಳಕ;
  23. ವಿಚಿತ್ರ ಶಾಕಯೂಷಭಕ್ಷ್ಯ ವಿಕಾರಕ್ರಿಯಾ: ನಾನಾ ತರಕಾರಿ, ಸಾರು ಮತ್ತು ಭಕ್ಷ್ಯಗಳನ್ನು ತಯಾರಿಸುವುದು;
  24. ಪಾನಕರಸರಾಗಾಸವಯೋಜನಂ: ಪಾನಕ ರಸ ಮೊದಲಾದ ಪಾನೀಯಗಳನ್ನು ತಯಾರಿಸುವುದು;
  25. ಸೂಚೀವಾನಕರ್ಮಾಣಿ: ಹೊಲಿಯುವುದು, ನೇಯುವುದು, ಕಸೂತಿ ಮುಂತಾದ ಸೂಜಿಕೆಲಸ;
  26. ಸೂತ್ರ ಕ್ರೀಡಾ; ಬೆರಳಿನಿಂದ ದಾರವನ್ನು ವಿವಿಧಾಕಾರಗಳನ್ನಾಗಿ ಮಾಡುವ ಆಟ;
  27. ವೀಣಾ ಡಮರುಕವಾದ್ಯಾನಿ: ವೀಣೆ, ಡಮರು ಮುಂತಾದ ವಾದ್ಯಗಳನ್ನು ನುಡಿಸುವುದು;
  28. ಪ್ರಹೇಲಿಕಾ: ಒಗಟುಗಳನ್ನು ಹೇಳುವುದು;
  29. ಪ್ರತಿಮಾಲಾ: ಶ್ಲೋಕದ ಕಡೆಯ ಅಕ್ಷರವನ್ನು ಬಳಸಿ ಪರಸ್ಪರರು ಶ್ಲೋಕ ಕಟ್ಟುವುದು: ಅಂತ್ಯಾಕ್ಷರಿ;
  30. ದುರ್ವಾಚಕಯೋಗಾಃ: ಪ್ರತಿವಾದಿ ಪುನಃ ಹೇಳಲಾಗದಂತೆ ಕಠಿಣಾಕ್ಷರಗಳಿಂದ ಕೂಡಿದ ಶ್ಲೋಕವನ್ನು ರಚಿಸುವುದು;
  31. ಪುಸ್ತಕವಾಚನಂ- ಪುಸ್ತಕಗಳನ್ನು ಓದುವುದು;
  32. ನಾಟಕಾಖ್ಯಾಯಿಕಾದರ್ಶನಂ- ನಾಟಕ ಮತ್ತು ಕಥೆಗಳ ತಿಳಿವಳಿಕೆ;
  33. ಕಾವ್ಯಸಮಸ್ಯಾಪೂರಣಂ- ಕಡೆಯ ಕಾಲು ಭಾಗವನ್ನು ಕೊಟ್ಟಾಗ ಶ್ಲೋಕವನ್ನು ಪೂರ್ತಿ ಮಾಡುವುದು;
  34. ಪಟ್ಟಿಕಾವೇತ್ರವಾನವಿಕಲ್ಪಾಃ ಬೆತ್ತ, ಬಿದಿರು ಮೊದಲಾದುವುಗಳಿಂದ ಮಂಚ, ಆಸನ ಮೊದಲಾದುವುಗಳನ್ನು ಮಾಡುವುದು;
  35. ತಕ್ಷಕರ್ಮಾಣಿ- ಲೋಹ ಮತ್ತು ಮರಗಳಲ್ಲಿ ನಡೆಸುವ ಕೆತ್ತನೆಯ ಕೆಲಸ;
  36. ತಕ್ಷಣಂ- ಬಡಗಿ ಕೆಲಸ;
  37. ವಾಸ್ತುವಿದ್ಯಾ- ಕಟ್ಟಡ (ಗೃಹ) ರಚನೆಯ ವಿದ್ಯೆ;
  38. ರೂಪ್ಯರತ್ನ ಪರೀಕ್ಷಾ: ನಾಣ್ಯ ಮತ್ತು ರತ್ನ ಗಳ ಪರೀಕ್ಷೆ;
  39. ಧಾತುವಾದಃ - ಅದಿರಿನಿಂದ ಲೋಹಗಳನ್ನು ಬೇರ್ಪಡಿಸುವ ಕಲೆ;
  40. ಮಣಿರಾಗಾಕರ ಜ್ಞಾನಂ- ರತ್ನಗಳಿಗೆ ಬಣ್ಣಹಾಕುವುದು, ಅವುಗಳ ನಿಕ್ಷೇಪ ಕಂಡುಹಿಡಿಯುವುದು;
  41. ವೃಕ್ಷಾಯುರ್ವೇದಯೋಗಾಃ: - ಗಿಡಮರಗಳ ಆರೋಗ್ಯ, ಬೆಳೆವಣಿಗೆ ನೋಡುವುದು ಅವುಗಳಿಂದ ಹೆಚ್ಚಿನ ಉಪಯೋಗವನ್ನು ಪಡೆಯುವುದು;
  42. ಮೇಷ ಕುಕ್ಕುಟಲಾವಕಯುದ್ಧವಿಧಿಃ - ಟಗರು, ಕೋಳಿ, ಲಾವಕಗಳ ಕಾಳಗವನ್ನು ಏರ್ಪಡಿಸುವುದು;
  43. ಶುಕಸಾರಿಕಾಪ್ರಲಾಪನಂ- ಗಂಡು ಮತ್ತು ಹೆಣ್ಣು ಗಿಳಿಗಳಿಗೆ ಮಾತು ಕಲಿಸುವುದು;
  44. ಉತ್ಸಾದನೇ ಸಂವಾಹನೇ ಕೇಶಮರ್ದನೇ ಚ ಕೌಶಲಂ- ಶರೀರವನ್ನು ಕಾಲಿನಿಂದ ಮರ್ದಿಸುವುದು, ಕೈಯಿಂದ ಉಜ್ಜುವುದು, ತಲೆಯನ್ನು ತಿಕ್ಕುವುದರಲ್ಲಿನ ಜಾಣ್ಮೆ ಇತ್ಯಾದಿ;
  45. ಅಕ್ಷರಮುಷ್ಟಿಕಾಕಥನಂ ಕೈಯ ಬೆರಳುಗಳ ಚಳಕದಿಂದ ಅಕ್ಷರಗಳನ್ನು ತಿಳಿಸುವುದು;
  46. ಮ್ಲೇಚ್ಛಿತವಿಕಲ್ಪಾಃ ವಿವಿಧ ಅರ್ಥಗಳನ್ನುಳ್ಳ ಸಂಕೇತ (ಶೂನ್ಯ) ಭಾಷೆ;
  47. ದೇಶಭಾಷಾವಿಜ್ಞಾನಂ-; ವಿವಿಧ ದೇಶಗಳ ಭಾಷೆಗಳ ಜ್ಞಾನ;
  48. ಪುಷ್ಟಶಕಟಿಕಾ: ಹೂವಿನಿಂದ ರಥ, ಕುದುರೆ, ಆನೆ ಮುಂತಾದುವನ್ನು ಮಾಡುವುದು;
  49. ನಿಮಿತ್ತಜ್ಞಾನಂ- ಶಕುನ ಹೇಳುವುದು;
  50. ಯಂತ್ರಮಾತೃಕಾ: ಪಯಣಕ್ಕಾಗಿ, ನೀರು ಸರಬರಾಜಿಗಾಗಿ, ಯುದ್ಧಕ್ಕಾಗಿ ಯಂತ್ರಗಳನ್ನು ತಯಾರಿಸುವುದು;
  51. ಧಾರಣಮಾತೃಕಾ- ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು;
  52. ಸಂಪಾಠ್ಯಂ: ಪಂದ್ಯದಲ್ಲಿ ಒಬ್ಬ ಹೇಳಿದ ಶ್ಲೋಕವನ್ನು ಇನ್ನೊಬ್ಬ ಹೇಳುವುದು;
  53. ಮಾನಸೀ- ಪಂದ್ಯದಲ್ಲಿ ಒಂದು ಶ್ಲೋಕದಲ್ಲಿರುವ ಅನುಸ್ವಾರ ಮತ್ತು ವಿಸರ್ಗಗಳನ್ನು ಬರೆದು ಅಕ್ಷರಗಳನ್ನು ಬಿಟ್ಟಾಗ ಆ ಅಕ್ಷರಗಳನ್ನು ಕೂಡಿಸಿ ಶ್ಲೋಕ ಪೂರ್ತಿಗೊಳಿಸುವುದು;
  54. ಕಾವ್ಯಕ್ರಿಯಾ - ಕಾವ್ಯಗಳನ್ನು ರಚಿಸುವುದು;
  55. ಅಭಿದಾನಕೋಶಚಂಧೋವಿಜ್ಞಾನಂ: ನಿಘಂಟು ಮತ್ತು ಛಂದಸ್ಸುಗಳ ಪರಿಚಯ ಜ್ಞಾನ;
  56. ಕ್ರಿಯಾಕಲ್ಪಃ : ಕಾವ್ಯಾಲಂಕಾರಗಳ ಜ್ಞಾನ;
  57. ಛಲಿತಕಯೋಗಾಃ - ಬೇರೆಯವನಿಗೆ ಗೊತ್ತಾಗದಿರಲು ವೇಷ ಮತ್ತು ಧ್ವನಿವನ್ನು ಬದಲಾಯಿಸುವುದು;
  58. ವಸ್ತ್ರ ಗೋಪನಾನಿ - (i) ಭ್ರಮೆ ಪಡಿಸುವಂತೆ, ಮೋಸ ಮಾಡುವಂತೆ ಬಟ್ಟೆ ಧರಿಸುವುದು, ಚಿಕ್ಕ ಬಟ್ಟೆಯನ್ನೇ ದೊಡ್ಡದಾಗಿ ಕಾಣುವಂತೆ ಉಡುವುದು; (ii) ಬಟ್ಟೆಯ ಹರಿದ ಭಾಗವು ಕಾಣದಂತೆ ಉಡುವುದು;
  59. ದ್ಯೂತವಿಶೇಷಾಃ - ಹಲವು ಜೂಜುಗಳ ಜ್ಞಾನ;
  60. ಆಕರ್ಷಕ್ರೀಡಾ- ಜೂಜಿನಲ್ಲಿ ನಿರ್ದಿಷ್ಟವಾದ ಒಂದು ಆಟ;
  61. ಬಾಲ ಕ್ರೀಡನಕಾನಿ- ಮಕ್ಕಳಿಗಾಗಿ ಚೆಂಡಿನಿಂದ, ಗೊಂಬೆ ಮುಂತಾದುವುಗಳಿಂದ ಆಟಗಳನ್ನು ಮಾಡುವುದು;
  62. ವೈನಯಿಕೀನಾಂ ವಿದ್ಯಾನಾಂ ಜ್ಞಾನಂ - ಒಬ್ಬನಿಗೆ ತಿಳಿವನ್ನು ಕೊಡುವ ವಿಜ್ಞಾನ ಮತ್ತು ಕಲೆಗಳ ತಿಳಿವಳಿಕೆ;
  63. ವೈಜಯಿಕೀನಾಂ ವಿದ್ಯಾನಾಂ ಜ್ಞಾನಂ : ಗೆಲುವನ್ನು ಖಚಿತಪಡಿಸುವ ವಿದ್ಯೆಗಳ ತಿಳಿವಳಿಕೆ;
  64. ವ್ಯಾಯಾಮಿಕೀನಾಂವಿದ್ಯಾನಾಂ ಜ್ಞಾನಂ : ಈಜು, ಕುಸ್ತಿ ಮೊದಲಾದ ದೈಹಿಕ ವ್ಯಾಯಾಮಗಳ ತಿಳಿವಳಿಕೆ.

ಭಾರತೀಯರು ನಾಗರಿಕರಾದಂತೆ ಜೀವನವನ್ನು ಸುಂದರಗೊಳಿಸಲು ಪ್ರಯತ್ನಿಸಿದಂತೆ ಕಲೆ ಎಂಬ ಮಾತು ಬಳಕೆಗೆ ಬಂತು. ಕಾಳಿಕಾಪುರಾಣದಲ್ಲಿ ಕಲೆಗಳ ಹುಟ್ಟಿನ ಬಗ್ಗೆ ಒಂದು ಕುತೂಹಲಕಾರಿ ಕಥೆಯಿದೆ. ಆದರೆ ಅದಕ್ಕಿಂತ ಹಿಂದಿನದಾದ ವಿಷ್ಣು ಪುರಾಣ, ವಾಯುಪುರಾಣಗಳಲ್ಲಿ ಕಲೆಯ ಹುಟ್ಟಿನ ಬಗ್ಗೆ ಯಾವ ಮಾತೂ ಇಲ್ಲ. ಇದರಿಂದ ತಿಳಿದು ಬರುವುದೇನೆಂದರೆ ಆ ಸಮಯಕ್ಕೆ ಕಲೆಗಳ ಹುಟ್ಟಿನ ಬಗ್ಗೆ ಒಂದು ಪಟ್ಟಿ ಸಿದ್ಧವಾಗಿರಲಿಲ್ಲ. 64 ಕಲೆಗಳು ಭಾರತೀಯರ ಜೀವನದ ಮೇಲೆ ಮಹತ್ತ್ವಪೂರ್ಣ ಪರಿಣಾಮವನ್ನು ಬೀರಿವೆ. ಚತುಃಷಷ್ಟಿಕಲಾಗಮಪ್ರಯೋಗಚತುರ, ಸಕಲಕಲಾ ಪ್ರವೀಣಹೀಗೆ ವ್ಯಕ್ತಿಗಳನ್ನು ವಿಶೇಷಿಸಿರುವುದೂ ಉಂಟು. ಅಂದರೆ 64 ಕಲೆಗಳಲ್ಲಿ ಒಬ್ಬ ವ್ಯಕ್ತಿ ಪವೀಣನಾಗಿರಬೇಕು ಎಂದು ಆಶಿಸುವುದು ಸಹಜವಾದರೂ ಎಲ್ಲರಲ್ಲಿಯೂ ಈ ಪ್ರಾವೀಣ್ಯವಿದ್ದಿತೆಂದಲ್ಲ. ಜನಸಾಮಾನ್ಯರಿಗಿಂತ ಹೆಚ್ಚು ಕಲೆಗಳಲ್ಲಿ ಪ್ರವೀಣನಾದವನನ್ನು ನಿರ್ದೇಶಿಸುವಲ್ಲಿ ಚತುಃಷಷ್ಟಿ ಕಲೆಗಳಲ್ಲಿ ಪರಿಣತನಂದು ಬಳಸುತ್ತಿದ್ದ ರು. ಅಲ್ಲದೆ ಈ 64 ಕಲೆಗಳ ಪಟ್ಟಿವನ್ನು ನೋಡಿದಾಗ ಅವು ಜೀವನದಲ್ಲಿ ಹಾಸು ಹೊಕ್ಕಾಗಿವೆಯೆಂಬ ಅಂಶ ಸ್ಪಷ್ಟವಾಗುತ್ತದೆ. ಆದ್ದರಿಂದ ವಿಶೇಷ ಶ್ರಮವಿಲ್ಲದೆ ಇವುಗಳ ನಿರ್ವಹಣೆ ಸಾಧ್ಯ. ಕರ್ನಾಟಕ ಕಲೆಗಳ ತವರು. ಇಲ್ಲಿನ ಜನ ಜೀವನವೈಭವವನ್ನು ಕಂಡವರು. ರಾಜ ಮಹಾರಾಜರು ಕಲೆಗಳಲ್ಲಿ ಸ್ವಯಂ ಪರಿಣಿತರಲ್ಲದೆ ಪೋಷಕರೂ ಆಗಿದ್ದರು. ಇಲ್ಲಿ ಅನೇಕಾನೇಕ ಪರಿಣತರಿದ್ದರೆನ್ನ ಲು ಚರಿತ್ರೆಯ ನಿದರ್ಶನಗಳಿವೆ. (ಜಿ.ಜಿ.ಎಂ.)