ಪುಟ:Mysore-University-Encyclopaedia-Vol-1-Part-1.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗ್ಗಿಷ್ಟಿಕೆ : ಹಿಂದೂಗಳು ಗೃಹಾಗ್ನಿಯೆಂದು ಕರೆಯುವ ಸ್ಥಳೆ. ಗೃಹಾಗ್ನಿ ಬಹುಶಃ ಪುರಾತನಕಾಲದಿಂದ ಎಲ್ಲ ಜನರ ವಾಸಸ್ಥಳದಲ್ಲೂ ಗಣ್ಯ ಹಾಗೂ ಪವಿತ್ರ ಸ್ಥಾನವನ್ನು ಪಡೆದಿದೆ. ಹಿಂದೂಗಳಲ್ಲಿ ಗೃಹಾಗ್ನಿಯೆಂದರೆ ಅಡುಗೆಯ ಒಲೆಯ ಅಗ್ನಿಯಾಗಬಹುದು, ಹೋಮಾಗ್ನಿಯಾದರೂ ಆಗಬಹುದು. ಎರಡು ಸ್ಥಳಗಳೂ ಪವಿತ್ರವಾದುವೇ. ಹಿಂದೂ ಆದವನು ಯಾವನೂ ಕಾಲು ತೊಳೆದುಕೊಳ್ಳದೆ ಅಡುಗೆಯ ಮನೆಗೆ ಪ್ರವೇಶಿಸಕೂಡದು. ಬ್ರಾಹ್ಮಣರು ಸ್ನಾನಮಾಡಿ ಮಡಿ ಉಟ್ಟುಕೊಂಡ ಹೊರತು ಒಲೆಯಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸುವಂತಿಲ್ಲ. ಹೋಮಕ್ಕೆ ಪ್ರತ್ಯೇಕ ಸ್ಥಳವಿರುವಾಗಲೂ ಆ ಸ್ಥಳಕ್ಕೆ ಅಡುಗೆಯ ಒಲೆಯ ಬೆಂಕಿಯನ್ನು ಮಡಿಯುಟ್ಟ ಹೆಂಗಸರು ತುಂಬ ಕಟ್ಟುನಿಟ್ಟಿನಿಂದ ತಂದಿಡುತ್ತಾರೆ. ಪಾರಸಿಕರಿಗೆ ಗೃಹಾಗ್ನಿ ತುಂಬ ಪೂಜ್ಯವಾದದ್ದು. ನಿಷ್ಠರಾದ ಪಾರಸಿಕರು ಅದು ಆರಿಹೋಗದಂತೆ ನಿರಂತರವಾಗಿ ಪೋಷಿಸುತ್ತಾರೆ. ಅದನ್ನು ಆರಿಸುವುದನ್ನು ಮಹಾಪಾಪವೆಂದು ಎಣಿಸುತ್ತಾರೆ. ಕಾಡು ಜನರಲ್ಲೂ ಇಂಥ ಭಾವನೆಯುಂಟು. ದಕ್ಷಿಣ ಆಫ್ರಿಕದ ಡಮಾರ ಜನರು ಗೃಹಾಗ್ನಿಯನ್ನು ಆರಿಹೋಗದಂತೆ ತುಂಬ ಜಾಗರೂಕತೆಯಿಂದ ಇಡುತ್ತಾರೆ. ಈ ಕರ್ತವ್ಯ ಪರಿಪಾಲನೆಯನ್ನು ಗುಂಪಿನ ಮುಖ್ಯಸ್ಥನ ಮಗಳಿಗೆ ವಹಿಸುತ್ತಾರೆ. (ಜಿ.ಎಚ್.) ಅಗ್ನಿ1 : ಪೃಥ್ವಿಗೆ ಅಧಿಪತಿಯಾದ ದೇವತೆ ಎಂದು ಪ್ರಸಿದ್ಧನಾಗಿದ್ದು ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ. ಸಕಲ ದೇವಮಾನವಾದಿಗಳೆಲ್ಲರ ವ್ಯವಹಾರಕ್ಕೂ ಮಾರ್ಗದರ್ಶಕನಾದ್ದರಿಂದ ಅಗ್ನಿ ಎಂಬ ಹೆಸರು ಅನ್ವರ್ಥವಾಗಿದೆ (ನಿರುಕ್ತ 7.14). ವಿಶ್ವವ್ಯಾಪಕನೂ ವಿಶ್ವಧಾರಕನೂ ಸಕಲದೇವತಾತ್ಮನೂ ಅಮರನೂ ಆದ ಅಗ್ನಿಯ ರೂಪಾಂತರಗಳು ವೈಶ್ವಾನರಾದಿ ಸಂಜ್ಞೆಗಳಿಂದ ಪ್ರಶಂಸಿತವಾಗಿದೆ. ಸಕಲ ಭೂತಗಳಲ್ಲೂ ಪ್ರವೇಶಿಸಿ ನೇತೃವಾಗಿರುವುದರಿಂದ ವೈಶ್ವಾನರ, ಧನ ಮತ್ತು ಶಕ್ತಿದಾತನಾದ್ದರಿಂದ ಪ್ರವಿಣೋದಾಃ, ಉತ್ಪನ್ನವಾದ ಸಕಲವನ್ನೂ ಅರಿತಿರುವುದರಿಂದ ಜಾತವೇದಸ್, ನರರಿಂದ ಪ್ರಶಂಸಿತನಾಗಿರುವುದರಿಂದ ನರಾಶಂಸ, ಉದಕಗಳಿಂದ ಓಷಧಿಗಳೂ ಓಷಧಿಗಳಿಂದ ಅಗ್ನಿಯೂ ಉತ್ಪನ್ನವಾಗುವುದರಿಂದ ಅಪಾಂನಪಾತ್, ತನ್ನಿಂದ ತಾನೇ ಉತ್ಪನ್ನವಾಗುವುದ ರಿಂದ ತನೂನಪಾತ್, ಅಂಗಾರದಿಂದ (ಕೆಂಡ) ಉತ್ಪನ್ನವಾಗುವುದರಿಂದ ಅಂಗಿರಾ- ಹೀಗೆ ನಾನಾವಿಧವಾಗಿ ಅಗ್ನಿಯ ರೂಪಾಂತರಗಳನ್ನು ಸ್ತುತಿಸಿದೆ. ಅಗ್ನಿಯ ಸ್ವರೂಪವೆರಡು ವಿಧ. ಒಂದು ನಿತ್ಯ-ನಿಣ್ಯ ಗುಹ್ಯ ಇತ್ಯಾದಿ ವಿಶೇಷಣಗಳಿಂದ ವರ್ಣಿತವಾದ ಮತ್ತು ಸಾಧಾರಣ ದೃಷ್ಟಿಗೆ ಗೋಚರವಾಗದ ದಿವ್ಯ ಸ್ವರೂಪವುಳ್ಳದ್ದು. ಇನ್ನೊಂದು ಉತ್ಪನ್ನ-ಲೌಕಿಕಸ್ವರೂಪವುಳ್ಳದ್ದಾದರೂ ಅಸಾಧಾರಣಶಕ್ತಿಯಿಂದ ಕೂಡಿದ್ದು. ಈ ಎರಡು ರೂಪಗಳಿಂದಲೂ ಅಗ್ನಿಯ ಪ್ರಸಾರ ಮತ್ತು ಆಧಿಪತ್ಯ ಮೂರು ಲೋಕಗಳಿಗೂ ಸಂಬಂಧಿಸಿದೆ. ಅಗ್ನಿ ಪ್ರಥಮತಃ ದ್ಯುಲೋಕದಲ್ಲಿ ಆದಿತ್ಯಾತ್ಮನಾಗಿ ಉತ್ಪನ್ನನಾದ. ಎರಡನೆಯದಾಗಿ ಪೃಥ್ವಿಯಲ್ಲಿ ಜಾತವೇದರೂಪವನ್ನು ಹೊಂದಿದ. ಮೂರನೆಯದಾಗಿ ಅಂತರಿಕ್ಷದಲ್ಲಿ ಮಿಂಚಿನ ರೂಪದಲ್ಲಿ ಜನಿಸಿದ. ಈತ ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನ. ಪೃಥಿವಿಗೆ ನಾಭಿ ರೂಪದ ಸಂರಕ್ಷಕ. ದ್ಯಾವಾಪೃಥಿವಿಗಳೆರಡಕ್ಕೂ ಅಧಿಪತಿ. ದಿವ್ಯಾಗ್ನಿ ರಾತ್ರಿಕಾಲದಲ್ಲಿ ಅಗ್ನಿ ರೂಪದಿಂದಲೂ ಪ್ರಾತಃಕಾಲ ಸೂರ್ಯರೂಪದಿಂದಲೂ ಪ್ರಕಾಶಿಸುತ್ತ ತನ್ನ ಲೋಕರಕ್ಷಣಾಕಾರ್ಯವನ್ನು ನಿರ್ವಹಿಸುತ್ತಾನೆ. ಸಕಲರೂಪಗಳನ್ನು ಹೊಂದಿರುವದರಿಂದ ವಿಶ್ವಾಪ್ಸು. ಇವನೇ ಚಂದ್ರ, ಇವನೇ ವರುಣ, ಮಿತ್ರಾದಿ ಸಕಲದೇವತೆಗಳೂ ಇವನೇ. ಮೂರು ಲೋಕಗಳಲ್ಲೂ ವ್ಯಾಪಿಸುವುದರಿಂದ ತ್ರಿತ. ಆದಿತ್ಯಾದಿ ಮೂರು ರೂಪಗಳಿಂದ ಪ್ರಕಾಶಿಸುವುದರಿಂದ ತ್ರಯಃಕೇಶಿನಃ ಎಂದು ಪ್ರಶಂಸಿತನಾಗಿದ್ದಾನೆ. ತ್ರಿಮೂರ್ಥಾ ತ್ರಿಧಾತು ತ್ರಿಪಾಜಸ್ಯ ತ್ರ್ಯನೀಕ ಇತ್ಯಾದಿ ವಿಶೇಷಣಗಳು ಮೂರುಲೋಕಗಳಲ್ಲೂ ಅಗ್ನಿಯ ಪ್ರಸಾರಕ್ರಮವನ್ನು ಕ್ರಿಯಾಪ್ರಭೇದಗಳನ್ನು ತಿಳಿಸುತ್ತವೆ. ಇವನು ಯಜ್ಞದಲ್ಲಿ ಅರ್ಪಿಸಿದ ಹವಿಸ್ಸನ್ನು ಎಲ್ಲ ದೇವತೆಗಳಿಗೂ ಮುಟ್ಟಿಸುವನು; ಆದ್ದರಿಂದ ಎಲ್ಲ ದೇವತೆಗಳೂ ಬೇಕಾದವನು. ಅಗ್ನಿಯನ್ನು ಕುರಿತು ಋಗ್ವೇದದಲ್ಲಿ ಅನೇಕ ಸೂಕ್ತಿಗಳಿವೆ. ಪಾರ್ಥಿವಾಗ್ನಿಯ ಉತ್ಪತ್ತಿ ಅನೇಕ ವಿಧ. ಎಲೈ ಅಗ್ನಿಯೇ, ಶುಷ್ಕವೂ ರಸರಹಿತವೂ, ನಿರ್ಜೀವಿಯೂ ಆದ ಅರಣಿಗಳಿಂದ ಚೈತನ್ಯಾತ್ಮಕವಾದ ನೀನು ಉತ್ಪನ್ನನಾದೊಡನೆ ಯಜಮಾನರು ಭಕ್ತಿಯಿಂದ ನಿನ್ನನ್ನು ಪೂಜಿಸಿದರು. ಈ ಶಿಶು ಉತ್ಪನ್ನನಾದೊಡನೆ ತನ್ನ ಅಲೌಕಿಕವಾದ ಪ್ರಭಾವದಿಂದ ತನ್ನ ಪಿತೃಗಳನ್ನೆ ನುಂಗುವ ಪ್ರಯತ್ನಮಾಡುತ್ತದೆ. ಅಗ್ನಿ ಉತ್ಪನ್ನನಾದೊಡನೆ ನುಲುಚಿಕೊಂಡು ಏದುವ ಸರ್ಪದಂತೆ ತೀವ್ರ ಗಮನವುಳ್ಳವನಾಗಿ ಮಾನವನ ಹಿಡಿತಕ್ಕೆ ಸಿಲುಕದೆ ತಪ್ಪಿಸಿಕೊಳ್ಳುತ್ತಾನೆ. ‘ಸ್ವರೂಪತಃ ಅಗ್ನಿ ಸುವರ್ಣಾತ್ಮಕ ಮತ್ತು ಪ್ರಭಾಪೂರಿತ. ಆದರೆ, ಅವನ ಸಂಚಾರಮಾರ್ಗ ಕೃಷ್ಣವರ್ಣವುಳ್ಳದ್ದು. ವನವನ್ನೆಲ್ಲ ಆಕ್ರಮಿಸಿ ದಹಿಸಿ ಎಲ್ಲವನ್ನೂ ಕೃಷ್ಣವರ್ಣವುಳ್ಳದ್ದನ್ನಾಗಿ ಮಾಡುತ್ತಾನೆ.' ಅವನ ಜ್ವಾಲೆಗಳು ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತದೆ. ಗುಡುಗಿನಂತೆಯೂ ಸಿಂಹದಂತೆಯೂ ಗರ್ಜಿಸುತ್ತಾನೆ. ಅವನ ರಥ ಪ್ರಭಾಯುತವೂ ಸುವರ್ಣನಿರ್ಮಿತವೂ ಆಕರ್ಷಕವೂ ಆಗಿದೆ. ರಥದ ಅಶ್ವಗಳು ಇನ್ನೂ ಆಕರ್ಷಕವಾಗಿವೆ. ಅವು ಘೃತಪೃಷ್ಠವುಳ್ಳವಾಗಿಯೂ ವಾಯುಪ್ರೇರಿತವಾಗಿಯೂ ಹೊಂಬಣ್ಣದಿಂದ ಕೂಡಿಯೂ ಕ್ರಿಯಾಶಕ್ತಿಯುತವಾಗಿಯೂ ನಾನಾ ರೂಪವಾಗಿಯೂ ಸಂಕಲ್ಪ ಮಾತ್ರದಿಂದಲೆ ರಥಕ್ಕೆ ಯೋಜಿತವಾಗಿಯೂ ಇವೆ. ದ್ಯುಲೋಕದ ಶ್ಯೇನ (ಗಿಡುಗ) ಪಕ್ಷಿಯಾದ ಅಗ್ನಿ ದಿವ್ಯರಥದಲ್ಲಿ ಕುಳಿತು ಯಜ್ಞಾರ್ಥವಾಗಿ ಇಳಿಯುತ್ತಾನೆ. ಇಂಥ ಅಸಾಧಾರಣ ಪ್ರಭಾವವುಳ್ಳ ಅಗ್ನಿಯನ್ನು ಭೃಗು, ಅಂಗೀರಸ, ಅಥರ್ವ, ಇತ್ಯಾದಿ ಮಹರ್ಷಿಗಳು ಯಜ್ಞಾರ್ಥವಾಗಿ ಪೃಥ್ವಿಗೆ ಕರೆತಂದರು, ದೇವಮಾನವಾದಿಗಳಿಂದೆಲ್ಲ ಪ್ರಾರ್ಥಿತನಾದ ಅಗ್ನಿ ಸಕಲ ಯಜ್ಞಕರ್ಮಗಳನ್ನೂ ಸಮಸ್ತ ಋತ್ವಿಕ್ಕುಗಳ ರೂಪದಲ್ಲಿ ನಿರ್ವಹಿಸಲು ಶಕ್ತ. ಅತ್ಯುತ್ತಮವಾದ ಜ್ಞಾನವುಳ್ಳವ. ಕವಿಗಳಿಗೆಲ್ಲ ದಿವ್ಯಸ್ವರೂಪಿ. ಯಜ್ಞಸಾಧಕ, ಯಜ್ಞರಕ್ಷಕ. ಪ್ರತಿಯೊಂದು ಗೃಹದಲ್ಲೂ ಪ್ರಭಾವಯುತನಾದ ಅತಿಥಿ. ಸಕಲರಿಗೂ ಕ್ಷೇಮಕಾರಿ. ಸಕಲ ಮಾನವರಿಗೂ ಪ್ರಭುವೂ ಪಾಲಕನೂ ಆದ ಎಲೈ ಅಗ್ನಿಯೇ, ನೀನು ಯಾಗಾರ್ಥವಾಗಿ ಉತ್ಪನ್ನನಾಗಿದ್ದೀಯೆ. ಸ್ವತಃ ತೇಜೋಮಯನಾಗಿದ್ದು ಸಕಲ ಜಗತ್ತಿಗೂ ಪ್ರಕಾಶವನ್ನು ಹರಡುತ್ತೀಯೆ. ನಿನ್ನ ಮಾಹಾತ್ಮ್ಯ ದ್ಯುಲೋಕಕ್ಕಿಂತಲೂ ಅಧಿಕವಾಗಿ ಬೆಳೆದಿದೆ. ಮಾನವರಿಗೆ ಪ್ರಭುವಾಗಿರುವಂತೆ ಸಕಲ ದೇವತೆಗಳಿಗೂ ನೀನು ಪ್ರಭು. ದ್ವಾವಾಪೃಥಿವಿಗಳು ವಿಸ್ತøತವಾಗಿ ಪ್ರಸರಿಸಲು ನೀನೇ ಕಾರಣ. ಅವು ನಿನ್ನ ಶಕ್ತಿಯಿಂದಲೇ ಸ್ಥಿರವಾಗಿ ನಿಂತಿವೆ. ‘ಔಷನ್ಯೋಗ್ನಿ ದ್ಯಾವಾಪೃಥಿವಿಗಳೆರಡನ್ನೂ ತನ್ನ ತೇಜಸ್ಸುಗಳಿಂದ ಅಲಂಕರಿಸುತ್ತ ಉದಕಕ್ಕೆ ಮೂಲಸ್ಥಾನವಾದ ಅಂತರಿಕ್ಷವನ್ನೆಲ್ಲ ವ್ಯಾಪಿಸುತ್ತಾನೆ. ಅಂತರಿಕ್ಷದ ಜಲ ಸಂಘಾತವನ್ನು ಪ್ರವಾಹರೂಪದಿಂದ ಹರಿಯುವಂತೆ ಮಾಡುತ್ತಾನೆ. ವೃಷ್ಟಿಯ ಫಲವಾಗಿ ಉತ್ಪನ್ನವಾದ ಸಕಲ ಸಸ್ಯಗಳಲ್ಲೂ ವ್ಯಾಪಿಸುತ್ತಾನೆ.' ‘ಸಕಲ ಚರಾಚರಾತ್ಮಕವಾದ ಜಗತ್ತಿಗೂ ನಾಭಿಭೂತವಾದ ಅಗ್ನಿಯ ವೈಶ್ವಾನರ ಸಂಜ್ಞಕವಾದ ತತ್ತ್ವವನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಪೂಜಿಸೋಣ‘. (ಜಿ.ಎನ್.ಸಿ.) ಅಗ್ನಿಯ ಉಪಯೋಗದಿಂದ ಮಾನವಸಮಾಜ ತನ್ನ ಸುತ್ತಲಿನ ಪ್ರಾಣಿವರ್ಗದಿಂದ ಭಿನ್ನವಾಗಿದೆ. ಅದನ್ನುಪಯೋಗಿಸದ ಜನರಿಲ್ಲ. ಅನೂಹ್ಯವಾದ ಅದರ ಶಕ್ತಿ ಮತ್ತು ಅಗತ್ಯತೆಗಳು ಕಾರಣವಾಗಿ ಅದಕ್ಕೆ ಪವಿತ್ರತೆಯ ದೇವಪಟ್ಟ ಲಭಿಸಿದೆ. ಭಾರತೀಯರಂತೆ ಜರತುಷ್ಟ್ರನ ಅನುಯಾಯಿಗಳು ಸೂರ್ಯನೊಂದಿಗೆ ಅಗ್ನಿಯನ್ನೂ ಪೂಜಿಸುತ್ತಾರೆ. ಗ್ರೀಕರು ತಮ್ಮ ವಸಾಹತುಗಳಿಗೆ ಮೂಲನಗರದಿಂದ ಬೆಂಕಿಯನ್ನೊಯ್ಯುತ್ತಿದ್ದರು. ರೋಮನರಲ್ಲಿ ಅಗ್ಗಿಷ್ಟಿಕೆಯ ದೇವತೆಯಾದ ವೆಸ್ಟಳ ಪಂಥ ಪ್ರಬಲವಾಗಿತ್ತು. ಬೆಂಕಿ ತಂದ ಪ್ರಮಿÁತಿಯಸ್ಸನ ಕಥೆ ಗ್ರೀಕ್ ಪುರಾಣದಲ್ಲಿ ಬಹುಪ್ರಸಿದ್ಧವಾದದ್ದು. ಅಗ್ನಿ ನಾಲ್ಕು ಮೂಲವಸ್ತುಗಳಲ್ಲೊಂದೆಂದು ಗ್ರೀಕ್ ತತ್ತ್ವಜ್ಞಾನಿಗಳ ಅಭಿಮತ. (ಎನ್.ಎಸ್.ಎ.) ಅಗ್ನಿ2 : ಸಾಮಾನ್ಯವಾಗಿ ಯಾವುದನ್ನು ಬೆಂಕಿ ಎನ್ನಲಾಗುತ್ತದೊ ಅದನ್ನೇ ಅಗ್ನಿ ಎಂದೂ ಕರೆಯಲಾಗುತ್ತದೆ. ಮಾನವ ಮತ್ತು ಅಗ್ನಿ ಇವುಗಳ ನಡುವಿನ ಸಂಬಂಧವನ್ನು ಹೇಳುವುದಾದರೆ, ಅಗ್ನಿಯನ್ನು ಮಾನವ ಪವಿತ್ರವಸ್ತುವೆಂಬುದಾಗಿ ಭಾವಿಸಿ ಅದರಲ್ಲಿ ದೈವತ್ವವನ್ನು ಕಂಡು ಪೂಜಿಸಿ, ಸ್ತುತಿಸುವಂಥ ಅನೇಕ ಸಂದರ್ಭಗಳನ್ನು ಭಾರತದ ಪುರಾಣಗಳನ್ನೊಳಗೊಂಡಂತೆ ಪ್ರಪಂಚದ ಎಲ್ಲ ನಾಡಿನ ಪುರಾಣೇತಿಹಾಸಗಳಲ್ಲಿಯೂ ಕಾಣಬಹುದು. ಇದಲ್ಲದೆ ಮಾನವ ತನ್ನ ನಿತ್ಯಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬೆಂಕಿಯನ್ನುಪಯೋಗಿಸಿಕೊಂಡು ಅದರಿಂದ ಪೂರ್ಣ ಪ್ರಯೋಜನವನ್ನು ಪಡೆದು ಕೊಂಡಿದ್ದಾನೆ. ಬೆಂಕಿಯ ಉಪಯೋಗದಿಂದ ಮಾನವನ ಸಂಸ್ಕøತಿ, ನಾಗರಿಕತೆಗಳು ಸಾಕಷ್ಟು ಪ್ರಭಾವಿತಗೊಂಡಿವೆ. ಬೆಂಕಿಯ ಬಳಕೆ ಮಾನವನ ನಿತ್ಯಜೀವನದಲ್ಲಿ ಅನಿವಾರ್ಯವೂ ಅತ್ಯಗತ್ಯವೂ ಆಗಿರುವಂಥ ವಿಶೇಷಗಳಲ್ಲೊಂದು. ಬೆಂಕಿಯನ್ನು ಉತ್ಪಾದಿಸುವ ಪ್ರಾಚೀನ ವಿಧಾನಗಳು: ಅನಾದಿಕಾಲದಿಂದಲೂ ಮಾನವಜೀವನದ ಅವಿಭಾಜ್ಯ ಅಂಗವಾಗಿ ಮುಂದುವರಿದುಕೊಂಡು ಬಂದಿರುವ ಬೆಂಕಿಯನ್ನು ಕಂಡುಹಿಡಿದದ್ದು ಯಾವಾಗ, ಬಳಕೆ ಪ್ರಾರಂಭವಾದದ್ದು ಯಾವಾಗ,- ಮುಂತಾದ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಆದಿಮಾನವರು ಬೆಂಕಿಯುರಿಯನ್ನು ಉತ್ಪತ್ತಿ ಮಾಡಿಕೊಳ್ಳುತ್ತಿದ್ದ ವಿಧಾನಗಳಿಂದಾಗಿ ಅದರ ಉತ್ಪಾದನೆ ಹಾಗೂ ಬಳಕೆ ಬಹು ಪ್ರಾಚೀನಕಾಲದಿಂದಲೂ ಅನೂಚಾನವಾಗಿ ಬೆಳೆದುಬಂದಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಜೀವನದ ಅತ್ಯಗತ್ಯಗಳಲ್ಲಿ ಒಂದಾಗಿರುವ ಆಹಾರವನ್ನು ಸಂಪಾದಿಸಲೋಸುಗ, ಅನಂತರ ಅವುಗಳನ್ನು ಬೇಯಿಸಿ, ಸೇವಿಸಲು ಅಗ್ನಿಯನ್ನು ಬಳಸಿಕೊಂಡುದುಂಟು. ಈ ಕೆಲಸಕ್ಕೆ ಬೇಕಾಗುವ ಬೆಂಕಿಯನ್ನು ಪಡೆಯಲು ಎರಡು ಕಲ್ಲುಗಳನ್ನು ಒಂದರಮೇಲೊಂದು ಉಜ್ಜಿ, ಘರ್ಷಣೆಯಿಂದುತ್ಪತ್ತಿಯಾದ ಶಾಖದ ಪರಿಣಾಮದಿಂದ ಬೆಂಕಿ ಉದ್ಭವಗೊಂಡುದನ್ನು ಅರಿತ ಮಾನವ, ಆಗಾಗ ನೈಸರ್ಗಿಕವಾಗಿ ಸಂಭವಿಸಿದ - ಕಾಡುಗಿಚ್ಚು ಮುಂತಾದ ಅಗ್ನಿಪ್ರಮಾದಗಳ ಅನುಭವದಿಂದಾಗಿ, ಅಂಥ ಅನಾಹುತದಲ್ಲಿ ಸಿಕ್ಕಿ ಬೆಂದುಹೋದ ಪ್ರಾಣಿಗಳನ್ನು ತಿಂದು ಸೇವಿಸಿ ಉದರಪೋಷಣೆ ಮಾಡಿಕೊಳ್ಳುತ್ತಿದ್ದ. ಅಗ್ನಿಯಿಂದಾಗುವ ಪ್ರಯೋಜನವನ್ನು ಅರಿತು ಕಾಲಕ್ರಮೇಣ ಅದನ್ನು ಬೇರೆ ಬೇರೆ ರೀತಿಗಳಲ್ಲಿ ಪಡೆಯುವ ವಿಧಾನಗಳನ್ನು ಕಂಡುಕೊಂಡ. ಕಲ್ಲುಗಳನ್ನು