ಪುಟ:Rangammana Vathara.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

26

ಸೇತುವೆ

ರೂಪು ತಳೆಯುತ್ತಿದ್ದ ಮಾತು ಆತನ ಗಂಟಲಲ್ಲೇ ಇಂಗಿ ಹೋಯಿತು.
ಸ್ವರವೇರಿಸಿ ರಂಗಮ್ಮ ನುಡಿದರು:
"ನೋಡಪ್ಪಾ, ಇನ್ನೂ ಒಂದು ದಿವಸ ಜಾಸ್ತಿ ಅವಕಾಶ ಕೊಡ್ತೀನಿ. ಶನಿವಾರ
ಸಾಯಂಕಾಲ ಹೊತ್ತಿಗೆ ಮನೆ ಖಾಲಿ ಮಾಡೇ ತೀರ್ಬೇಕು. ಭಾನುವಾರ ಮನೆ
ನೋಡೋಕೆ ಬರ್ತಾರೆ."
ಯಾರಾದರೂ ಮನೆ ನೋಡಲು ಬರಬಹುದು ಎಂಬ ನಿರೀಕ್ಷೆಯನ್ನು 'ಬರ್ತಾರೆ'
ಎಂದು ರಂಗಮ್ಮ ಮಾರ್ಪಾಡಿಸಿದ್ದರು. ಹಾಗೆ ಹೇಳುವುದು ಅಗತ್ಯವಾಗಿತ್ತು.
ಆ ನಿರಾಶೆಯಲ್ಲೂ ಆತ ಏನೋ ಹೇಳಲೆತ್ನಿಸಿದ:
"ಒಂದು ತಿಂಗಳು__"
"ಇಲ್ಲವಪ್ಪಾ, ಇಲ್ಲ. ನನ್ನನ್ನ ರೇಗಿಸ್ಬೇಡ. ನಾಲ್ಕು ಜನರ ಕೈಲಿ ಕೆಟ್ಟೋಳು
ಅನ್ನಿಸ್ಬೇಡ."
"ಇಲ್ಲ ರಂಗಮ್ನೋರೆ. ಮುಖ್ಯ ನನ್ನ ಹಣೇಲಿ ಹೀಗೆ ಬರೆದಿತ್ತು."
ಆತ ಕಣ್ಣುಗಳನ್ನು ಹಿಂಡಿ ಒಂದೊಂದು ಹನಿ ಕಂಬನಿ ಉದುರಿಸಲು ಯತ್ನಿಸಿದ.
ಆದರೆ ಅವು ಬತ್ತಿ ಹೋಗಿದ್ದುವು.
ಹೆಣ್ಣಿಗಿಂತಲೂ ಕಡೆಯಾಗಿ ವರ್ತಿಸುತ್ತಿದ್ದ ಆತನನ್ನು ಕಂಡು ರಂಗಮ್ಮನ ಸೈರಣೆ
ತಪ್ಪಿತು. ಚೆನ್ನಾಗಿ ಬಯ್ಯಬೇಕೆನಿಸಿತು. ವಠಾರದಲ್ಲೇ ಮುಂದೆಯೂ ಆತ ಇರುವ
ಪ್ರಮೇಯವಿದ್ದರೆ ಹೇಳುತ್ತಲೂ ಇದ್ದರೇನೋ ಆದರೆ 'ಹಾಳಾಗಿ ಹೋಗಲಿ'
ಎಂದು ಈಗ ಅವರು ಸುಮ್ಮನಾದರು.
ನಾರಾಯಣಿಯ ಗಂಡನೆದ್ದು, ಚಾಪೆಯ ಮೇಲೆ ನಿದ್ದೆ ಬಾರದೆ ಹೊರಳಾಡುವ ಸುಖಕ್ಕಾಗಿ ಮಕ್ಕಳೆಡೆಗೆ ನಡೆದ.
ಮರುದಿನವೂ ಆತ ಮಕ್ಕಳಿಗೆ ಗಂಜಿ ಬೇಯಿಸಿಕೊಟ್ಟು ಹೊರ ಹೋದ.
ರಂಗಮ್ಮ ವಠಾರಕ್ಕೆಲ್ಲಾ ತಿಳಿಯುವಂತೆ ಡಂಗುರ ಸಾರಿದರು:
"ನಾರಾಯಣಿಯ ಗಂಡ ಮನೆ ಖಾಲಿ ಮಾಡ್ತಾನೆ."
"ಎಲ್ಲಿಗೆ ಹೋಗ್ತಾರಂತೆ? ಕೆಲಸ ಸಿಕ್ತೇನು?"
"ಏನೋಪ್ಪ. ಅಂತೂ ಶನಿವಾರ ಸಾಯಂಕಾಲದೊಳಗೆ ಮನೆ ಖಾಲಿ
ಮಾಡ್ತಾನೆ."
ನಾರಾಯಣಿ ಬಿಟ್ಟುಹೋಗಿದ್ದ ಮಕ್ಕಳಲ್ಲಿ ಕಿರಿಯದು ಎದೆ ಹಾಲಿಲ್ಲದೆ ಬಿರು
ಗಣ್ಣು ಬಿಡುತ್ತಿತ್ತು. ಅದನ್ನು ಗಟ್ಟಿಯಾಗಿ ತಬ್ಬಿಕೊಂಡು ಕಮಲಮ್ಮ ಬಾಡಿದ
ಮುಖದಿಂದ ಆ ಸುದ್ದಿ ಕೇಳಿದಳು.
ಕೇಳಿದವರು ನಂಬಲಿ ನಂಬದಿರಲಿ, ರಂಗಮ್ಮ ಹೇಳುವ ವೈಖರಿ ಅಂಥದು.
ಒಂದು ಸಂಸಾರವನ್ನು ವಠಾರದಿಂದ ರಂಗಮ್ಮ ಹೊರಹಾಕಿದಳು ಎಂಬ ಮಾತು
ಪ್ರಸಾರವಾಗುವ ಇಷ್ಟ ಅವರಿಗಿರಲಿಲ್ಲ.