ಪುಟ:Banashankari.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕೊನೇಲಿ ನಿಂತ್ಕೊಂಡು ಹಾರಿಸಿ..." " ಹೂನಪ್ಪಯ್ಯಾ, ಹಂಗೇ ಮಾಡ್ತೀವಿ."

.. ರಂಗ ಮಾಲೆಯಿಂದ ಬಿಚ್ಚಿದೊಂದು ಪಟಾಕಿಯನ್ನು ಮೊದಲು ಹಾರಿಸಿದ. ಅದು

ಆರಂಭ, ಆ ಬಳಿಕ ಹುಡುಗರ ಹುಚ್ಚು ಕುಣಿದಾಟದೊಡನೆ, ಹಿರಿಯರ ನಗೆ ಸಂತೋಷ ದೊಡನೆ, ಅಮ್ಮಿಯ ಆನಂದೋತ್ಸಾಹದೊಡನೆ, ಪಟಾಕಿಗಳು ಚಟ್ ಚಟಿಲೆಂದುವು, ಸುರು ಸುರು ಬಾಣಗಳು ಆಕಾಶಕ್ಕೆ ನೆಟ್ಟವು. ನಕ್ಷತ್ರಕಡ್ಡಿಗಳು ಮೌನವಾಗಿ ಬಣ್ಣಬಣ್ಣವಾಗಿ ಉರಿದು ಸಾವಿರ ನಕ್ಷತ್ರಗಳನ್ನು ಉಗುಳಿದುವು: ಆ ಬೆಳಕು ತಾರೆಗಳನ್ನೆಲ್ಲ ಅಂಗೈಯಲ್ಲಿ, ಸೆರಗಿನಲ್ಲಿ, ಹಿಡಿಯಬೇಕೆಂಬ ಬಯಕೆ ಅಮ್ಮಿಗೆ. ಆದರೆ ಗೃಹಿಣಿಯಾದ ಆಕೆ ಹಾಗೆ ಮಾಡಲು ಸ್ವತಂತ್ರಳಲ್ಲ. ಇಷ್ಟಿದ್ದರೂ ಒಂದು ವಿಷಯದಲ್ಲಿ ಮಾತ್ರ ಯಾರಿಗೂ ಇಲ್ಲದ ಹೆಮ್ಮೆ ಅವಳ ಆಸ್ತಿಯಾಗಿತ್ತು. ಪೇಟೆಯಿಂದ ತನ್ನ ಪತಿದೇವರು ಕಳುಹಿದ್ದರಿಂದಲ್ಲವೆ, ಈ ದಿನ ಪಟಾಕಿಯಾಟ ಸಾಧ್ಯವಾದುದು ? ಆ ಮಧಾಹ್ನ ಬಲು ಜಂಭದಿಂದ ನಾಣಿ ಹೇಳಿದ್ದ: " ಏ ಅಮ್ಮಿ-ಇವತು ಸಾಯಂಕಾಲ ಎಂಥೆಂಥ ಪಟಾಕಿ ಹಾರಿಸ್ತೀವಿ ಗೊತ್ತಾ?" ರಂಗ ರಾಗವೆಳೆದಿದ್ದ:"ಆನೆ ಪಟಾಕಿ... ಕುದುರೆ ಪಟಾಕಿ..." ಅಮ್ಮಿಗೆ, ತನಗೆ ಆ ಭಾಗ್ಯವಿಲ್ಲವೆಂಬ ದುಃಖ ಒಂದೆಡೆ: ಪಟಾಕಿಗಳನ್ನು ಕಳುಹಿಸಿ ಕೊಟ್ಟುದು ತನ್ನ ಗಂಡನೆಂದು ಆ ಮೈದುನಂದಿರು ಹೇಳಲಿಲ್ಲವೆಂಬ ಸಿಟ್ಟು ಒಂದೆಡೆ. ಆ ಭಾವನೆಗಳಿಂದ ನೋಂದು ಆವಳ ಸುಂದರ ಮುಖ ಸಿ೦ಡರಿಸಿತು. ನೋವಿನ ಧ್ವನಿಯಲ್ಲಿ ಒಂದು ಪ್ರಶ್ನೆ: " ಆ ಪಟಾಕಿ ಎಲ್ಲಿಂದ್ದಂತೋ ?" " ಚಿಕ್ಕಮಗಳೂರಿಂದ." "ಹುಂ, ಯಾರೊ ಕಳಿಸ್ಕೊಟ್ಟೋರು?" ನಮ್ಮಣ್ನ ಕಣೇ-ನಮ್ಮಣ್ನ !" ಮತ್ತೆ ಸೋಲು ಅಮ್ಮಿಗೆ. ರಾತ್ರೆ ಅಂಚೆಯವನ ಜತೆಗೂಡಿ ಅವರು ಬರುವರು; ಆಗ ಸಮಯ ಸಾಧಿಸಿ ಗುಟ್ಟಾಗಿ ಅವರಿಗೆ, ತನಗಾದ ಅವಮಾನದ ವರದಿಯೊಪ್ಪಿಸಬೇಕು ಎಂದು ಅಮ್ಮಿ ಯೋಚಿಸಿದಳು. ಹಾಗೆ ಎಷ್ಡೊಂದು ಸಾರಿ ಯೋಚಿಸಿರಲಿಲ್ಲ! ಆದರೆ ಗಂಡ ಬಂದಾಗ ಎಂದೂ ಅಂತಹ ಮಾತನ್ನು ಆಡಿದವಳಲ್ಲ. ಅಷ್ಟೇಕೆ? ಕ್ಷಣ ಕಾಲ ಎಂದಾದರೊಮ್ಮೆ ಗೋಪ್ಯದಲ್ಲಿ ಸಂಧಿಸಿದಾಗ ಹಾ-ಹೂ ಹೊರತಾಗಿ ಹೆಚ್ಚು ಮಾತನ್ನೇ ಅವಳು ಆಡಿದವಳಲ್ಲ. ...ಅವರ ಆಗಮನ...ಸಾಲುದೀಪಗಳ ಬೆಳಕಿನ ಆವರಣದೊಳಗೆ ಆ ಹುಡುಗರಿಬ್ಬರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕತ್ತಲು-ಬೆಳಕುಗಳ ನಡುವೆ ಕಣ್ಣುಮುಚಾಲೆಯಾಟ

ನಡೆದಿದೆ. ಅದನ್ನು ಅಮ್ಮಿ ಬಾಗಿಲ ಬಳಿ ನಿಂತು ನೋಡುತ್ತಿದ್ದಾಳೆ. ಹಾಗೆ ನೋಡುತ್ತಿದ್ದರೂ ಅವಳ ದೃಷ್ಟಿ ಮುಂದಕ್ಕೆ ಹರಿದಿದೆ–ಮುಂದಕ್ಕೆ, ದೂರ-ಗುಡ್ಡ ಬೆಟ್ಟಗಳನ್ನು ದಾಟಿ,