ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರುವತ್ತನಾಲ್ಕು ಶೀಲಗಳು

ವಿಕಿಸೋರ್ಸ್ದಿಂದ

ಅರುವತ್ತನಾಲ್ಕು ಶೀಲಗಳು : ವೀರಶೈವಧರ್ಮದಲ್ಲಿ ನಿಷ್ಠೆಯುಳ್ಳವರು ಇವನ್ನು ಆಚರಿಸಬೇಕೆಂಬ ನಿಯಮವಿದೆ. ಪ್ರಖ್ಯಾತ ಶರಣರಾದ ಪಾಲ್ಕುರಿಕೆ ಸೋಮನಾಥ, ಸರ್ವಶೀಲೆ ಚೆನ್ನ ಮ್ಮ, ಈ ಶೀಲಗಳನ್ನು ಚಾಚೂ ತಪ್ಪದೆ ಆಚರಿಸುತ್ತಿದ್ದರೆಂದು ಪುರಾಣಗಳಲ್ಲಿ ಹೇಳಿದೆ. ಇವುಗಳಲ್ಲಿ ಶಿವಭಕ್ತ ಹೇಗಿರಬೇಕೆಂಬ ಎಲ್ಲ ವಿವರಗಳೂ ಸಿಕ್ಕುತ್ತವೆ. ಲಿಂಗಪೂಜೆ, ಮನೆಯ ವಾತಾವರಣ, ಲಿಂಗಜಂಗಮ ಭಕ್ತಾದಿಗಳ ವಿಚಾರದಲ್ಲಿ ತೋರಬೇಕಾದ ನಡೆವಳಿಕೆಗಳು, ತಿನ್ನಬೇಕಾದ ಆಹಾರ, ಪಾನೀಯಗಳ ವಿವರ, ವಿಹಾರ ವರ್ಜನೆ, ಪಶುಪ್ರಾಣಿಗಳ ಸಂಬಂಧವಾದ ನಡೆವಳಿಕೆ, ಇತರ ಜಾತಿಗಳವರ ಬಗ್ಗೆ ಇರಬೇಕಾದ ವರ್ತನೆ−ಹೀಗೆ ಅನೇಕ ವಿವರಗಳಿವೆ. ಇವೆಲ್ಲವನ್ನೂ ಆಚರಿಸಬೇಕೆಂಬುದು ಕಟ್ಟಳೆಯಾದರೂ ಮುಖ್ಯವಾಗಿ ಭವಿಪಾಕ, ಪರಸ್ರ್ತೀ, ಬಹುಜಲ, ಅನ್ಯದೈವ, ಭವಿಗಳನ್ನು ಬಿಟ್ಟು ಸರ್ವಾಚಾರ ಸಂಪನ್ನ ನಾಗಿ, ನಿರ್ಮಲತೆಯಿಂದ ನಡೆಯಲು ಪ್ರತಿಯೊಬ್ಬನೂ ಪ್ರಯತ್ನಿಸಬಹುದು. ನಿದರ್ಶನಕ್ಕ್ಕಾಗಿ ಕೆಲವು ಶೀಲಗಳನ್ನು ನೋಡಬಹುದು: ಲೌಕಿಕವನ್ನು ಅತಿಗಳೆವುದು, ಸತಿಪತಿಗಳಿಬ್ಬರೂ ಶೀಲವಂತರಾಗಿರುವುದು, ಶಿವಭಕ್ತಲ್ಲಿ ಜಾತಿವನ್ನು ಅರಸದಿರುವುದು, ಎಮ್ಮೆ ಹಾಲು ವರ್ಜಿಸುವುದು, ಮರದ ಹಾವುಗೆ ಮೆಟ್ಟುವುದು, ಹುಸಿಯ ನುಡಿಯದಿರುವುದು, ತ್ರಿವಿಧ ದಾಸೋಹ ಮಾಡುವುದು, ಉಚಿತವರಿತು ದಾನ ಮಾಡುವುದು; ಡಂಭದ ಲಿಂಗಾರ್ಚನೆ, ಆಸೆಯ ಶಿವದೀಕ್ಷೆ ಮಾಡದಿರುವುದು, ಕಿವಿಯಿಂದ ಕೆಟ್ಟ ಶಬ್ದಗಳನ್ನು ಕೇಳದಿರುವುದು. ಗುರುವಿನ ಸೇವೆಗೆಯ್ಯುವುದು, ಆಚಾರವೇ ಗುರು; ಲಿಂಗವೇ ಜಂಗಮ ಎಂದು ತಿಳಿಯುವುದು, ಎಲ್ಲವೂ ಶೀವಾಧೀನವೆಂದು ಭಾವಿಸುವುದು, ನಿರಂತರ ಸಾವಧಾನಿಯಾಗಿರುವುದು, ಬಯಸಿ ಬಂದುದು ಅಂಗಭೋಗ, ಬಯಸದೆ ಬಂದುದು ಲಿಂಗಭೋಗವೆಂದು ಅನುಭವಿಸುವುದು, ಅಷ್ಟ ಮಹಾಸಿದ್ಧಿಗಳನ್ನು ತೃಣೀಕರಿಸುವುದು; ಶೀಲವೇ ಜ್ಞಾನ; ಜ್ಞಾನವೇ ಶೀಲವೆಂಬುದನ್ನು ತಿಳಿಯುವುದು.