ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಂಟೂರು

ವಿಕಿಸೋರ್ಸ್ದಿಂದ

ಆಂಧ್ರ ಪ್ರದೇಶದ ಒಂದು ಜಿಲ್ಲೆ. ಮತ್ತು ಆ ಜಿಲ್ಲೆಯ ಮುಖ್ಯಪಟ್ಟಣ. ಉ. ಅ. 16° 18' ಮತ್ತು ಪು.ರೇ. 80° 28' ಮೇಲೆ. ಹೈದರಾಬಾದ್ ನಗರದ ಆಗ್ನೇಯಕ್ಕೆ 400 ಕಿ.ಮೀ. ದೂರದಲ್ಲಿದೆ. ಇದು ದಕ್ಷಿಣ ರೈಲ್ವೆಯ ವಿಜಯವಾಡ-ಗುಂಟಕಲ್ ಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣ. ಜಂಕ್ಷನ್, ವಿಶಾಖಪಟ್ಟಣ-ಮದ್ರಾಸ್ ರಸ್ತೆಯಲ್ಲಿದೆ. ಬೇಸಗೆಯಲ್ಲಿ ಉಷ್ಣತೆಯ ಸರಾಸರಿ 32° ಸೆಂ., ಚಳಿಗಾಲದಲ್ಲಿ 20° ಸೆಂ. ಇಲ್ಲಿ ಆಂಧ್ರ ವಿಶ್ವವಿದ್ಯಾಲಯದ ಮನ್ನಣೆ ಪಡೆದ ಕಾಲೇಜುಗಳಿವೆ. ಸೆಣಬು, ಎಣ್ಣೆ, ಮತ್ತು ಅಕ್ಕಿ ಗಿರಣಿಗಳು, ಹೊಗೆಸೊಪ್ಪು, ಪರಿಷ್ಕರಣ, ಎಂಜಿನಿಯರಿಂಗ್-ಇವು ಇಲ್ಲಿಯ ಕೈಗಾರಿಕೆಗಳು. ಇತರ ಪಟ್ಟಣಗಳೊಂದಿಗೆ ರೈಲ್ವೆ ಮತ್ತು ರಸ್ತೆ ಸಂಪರ್ಕ ಹೊಂದಿರುವುದರಿಂದ ಇದೊಂದು ಪ್ರಮುಖ ವ್ಯಾಪಾರ ಸ್ಥಳ. 18ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚರು ಈ ಪಟ್ಟಣವನ್ನು ಸ್ಥಾಪಿಸಿದರೆಂದು ಕಾಣುತ್ತದೆ. ಗುಂಟೂರು ಸ್ವಲ್ಪ ಕಾಲ ನಿಜಾಮನ ಅಧೀನದಲ್ಲಿತ್ತು. 1788ರಲ್ಲಿ ಇದು ಬ್ರಿಟಿಷರ ಅಧೀನಕ್ಕೆ ಬಂತು. 1866ರಲ್ಲಿ ಇಲ್ಲಿ ಪೌರಸಭೆ ಸ್ಥಾಪಿತವಾಯಿತು.


ಗುಂಟೂರು ಜಿಲ್ಲೆಯ ವಿಸ್ತೀರ್ಣ 5,802 ಚ.ಕಿ.ಮೀ ಜನಸಂಖ್ಯೆ 48.89.230 (2011) ಕೃಷ್ಣಾ ನದಿಯಿಂದ ನೀರಾವರಿ ಸೌಲಭ್ಯವುಂಟು. ಅಕ್ಕಿ, ಜೋಳ, ಮೆಣಸಿನಕಾಯಿ, ನೆಲಗಡಲೆ, ಹೊಗೆಸೊಪ್ಪು ಇಲ್ಲಿಯ ಬೆಳೆಗಳು, ವನಸ್ಪತಿ, ಜವಳಿ, ಸಿಮೆಂಟ್ ಮತ್ತು ಹೊಗೆಸೊಪ್ಪಿನ ಕಾರ್ಖಾನೆಗಳು ಈ ಜಿಲ್ಲೆಯಲ್ಲಿವೆ. ಜಿಲ್ಲೆಗೆ ಸೇರಿದ ಅಮರಾವತಿಯಲ್ಲಿ ಆಂಧ್ರ ಸಾತವಾಹನ ರಾಜರು ಕಟ್ಟಿಸಿದ ಮಹಾಯಾನ ಬೌದ್ಧಧರ್ಮದ ಚೈತ್ಯಗಳನ್ನೂ ವಿಹಾರಗಳನ್ನೂ ಸ್ತೂಪಗಳನ್ನು ಮತ್ತ ನಾಗಾರ್ಜುನ ಕೊಂಡಗಳು ಬೌದ್ಧರ ಕಾಲದ ಅವಶೇಷಗಳ ನೆಲೆಗಳು.