ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿನ್ಸೆ, ಆಲ್ಫ್ರೆಡ್ ಚಾರಲ್ಸ್‌

ವಿಕಿಸೋರ್ಸ್ದಿಂದ

ಕಿನ್ಸೆ, ಆಲ್‍ಫ್ರೆಡ್ ಚಾರಲ್ಸ್

 (1894-1956). ಜನರ ಲೈಂಗಿಕ ಜೀವನದ ಒಳಗುಟ್ಟುಗಳನ್ನು ಆಳವಾಗಿ ಅಭ್ಯಸಿಸಲು ದೊಡ್ಡ ಯೋಜನೆಯನ್ನೇ ಕೈಗೊಂಡ ಅಮೆರಿಕದ ಪ್ರಾಣಿಶಾಸ್ತ್ರಜ್ಞ. ಅಮೆರಿಕದ ನ್ಯೂಜರ್ಸಿಯಲ್ಲಿ ಹುಟ್ಟಿದ. ಬ್ರನ್ಸ್‍ವಿಕ್, ಹಾರ್ವರ್ಡ್‍ಗಳಲ್ಲಿ ಕಲಿಕೆ ಮುಂದುವರಿಸಿ ಕೊನೆಗೆ 1920 ರಿಂದ 27 ವರ್ಷಗಳ ಕಾಲ ಪ್ರಾಣಿಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಆಮೇಲೆ ಕೊನೆಯ ತನಕ ಇಂಡಿಯಾನಾ ವಿಶ್ವವಿದ್ಯಾಲಯದ ಲೈಂಗಿಕ ಸಂಶೋಧನ ಸಂಸ್ಥೆಯ ನಿರ್ದೇಶಕನಾಗಿದ್ದ. ಲೈಂಗಿಕ ಜೀವನದ ಪದ್ಧತಿ, ರೂಢಿ, ಸಂಪ್ರದಾಯ, ಒಳಗುಟ್ಟುಗಳನ್ನು ಹೊರಗೆಡಹುವುದರಲ್ಲಿ ಇವನಿಗಿದ್ದ ಕಟ್ಟಾಸಕ್ತಿಯಿಂದ ಆ ಸಂಸ್ಥೆ ಹುಟ್ಟಿತು. ಇವನೂ ಇವನ ಸಹೋದ್ಯೋಗಿಗಳು ಸೇರಿ ನಡೆಸಿದ ಶೋಧನೆಗಳ ಫಲವಾಗಿ ಪ್ರಪಂಚದಲ್ಲಿ ಎಲ್ಲೆಲ್ಲೂ ಗಂಡಸರಲ್ಲಿನ ಲೈಂಗಿಕ ವರ್ತನೆ (1948), ಹೆಂಗಸರಲ್ಲಿನ ಲೈಂಗಿಕ ವರ್ತನೆ(1953) ಎಂಬ ಹೆಸರಾದ ಎರಡು ಪುಸ್ತಕಗಳು ಹೊರಬಂದವು. 18,500 ಜನರನ್ನು ಕಂಡು ಗೋಪ್ಯವಾಗಿ ಸಂಗ್ರಹಿಸಿದ ವಿವರಗಳು ಈ ಪುಸ್ತಕಗಳಲ್ಲಿವೆ. ಗಂಡು ಹೆಣ್ಣುಗಳ ಲೈಂಗಿಕ ವರ್ತನೆಗಳಲ್ಲಿ ಎಷ್ಟೊಂದು ಅಭಾಸ, ಏರುಪೇರು, ವಿಚಿತ್ರಗಳಿವೆ ಎನ್ನುವುದನ್ನು ಈತ ವರದಿಮಾಡಿದ್ದಾನೆ. ಇವನ ಇವೆರಡು ವರದಿಗಳ ಆಧಾರದ ಮೇಲೆ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಇವುಗಳಲ್ಲಿನ ತರ್ಕ, ವಾದ, ರೀತಿ ನೀತಿಗಳನ್ನು ಕಟುವಾಗಿ ಟೀಕಿಸಿದವರೂ ಇದ್ದಾರೆ.

 

(ಡಿ.ಎಸ್.ಎಸ್.)