ಪುಟ:Abhaya.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಓ! ಆಮೇಲೆ ವಾಪ್ಪು ಹೋಗ್ಲೇ ಇಲ್ಲೋ ?”

" ಇಲ್ಲ"

ತುಂಗಮ್ಮ ಕಾರಿನಲ್ಲಿ ಬಂದಿರಲಿಲ್ಲ ಮುಳ್ಳು ತುಳಿದು ನಡೆದು ಬಂದು, ಬಾಗಿಲುತಟ್ಟಿ, ಬಳಲಿ ಬವಳಿ ಬಂದು ಮೆಟ್ಟಗಲ್ಲ ಮೇಲೆ ಬಿದ್ದಿದ್ದಳು. ಅದನ್ನೆಲ್ಲ ಆಕೆ ಹೇಳಲಿಲ್ಲ ಅದನ್ನು ಪ್ರಭಾಗೆ ಹೇಳುವುದರಿಂದ ಯಾವ ಪ್ರಯೋಜನವೂ ಇದ್ದಂತೆ ತುಂಗಮ್ಮನಿಗೆ ತೋರಲಿಲ್ಲ, ಅಷ್ಟೇಅಲ್ಲ, ಬೇರೆಹುಡುಗಿಯರ ಜೀವನ ವೃತ್ತಾಂತಗಳನ್ನೂ ಅವಳು ತಿಳಿಸಲಿಲ್ಲ.

ಒಂದೇ ಕಟ್ಟಡದಲ್ಲಿದ್ದೂ ಬೇರೆಯಾಗಿ ಈ ಹುಡುಗಿ ಪ್ರಭಾ ಸಂಕಟ ಪಡುತ್ತಿರುವಳಲ್ಲಾ - ಎಂದು ಸರಸಮ್ಮನಿಗೆ ಕೆಡುಕೆನಿಸಿತು. ಆದ್ರೆ ಮುಂದೆ ಆ ವಿಚಾರವಾಗಿ ಹೆಚ್ಚಿನ ಯೋಚನೆ ಮಾಡುವ ಅಗತ್ಯ ಬೀಳಲಿಲ್ಲ.

ಪ್ರಭಾಗೆ ದಿನಗಳು ತುಂಬಿ ನೋವು ಕಾಣಿಸಿಕೊಂಡಿತು. ಆಕೆಯ ಊರಿನಿಂದ ಅಣ್ಣ ಬಂದ ನಿನ್ಜಾತರಾದ ಶ್ತ್ರೀವೈದ್ಯರು ಬಂದರು.

ಸುಲಭವಾಗಿ ಹೆರಿಗೆಯಾಯಿತು ಮುದ್ದಾದ ಗಂಡು ಕೂಸು. ತಾನು ಮಗುವಿಗೆ ಜನ್ಮ ಕೊಟ್ಟ ಸ್ವಲ್ಪ ಹೊತ್ತಾದ ಬಳಿಕ ಚೇತರಿಸಿ ಕೊಂಡು ಪ್ರಭಾ, ಮಗುವಿನ ಮುಖನೋಡಿ ಒಮ್ಮೆ ಮುಗುಳ್ನಕ್ಕರೂ, ಬಳಿಕ ಒಂದೇ ಸಮನೆ ಅತ್ತಳು – ತನಗೆ ಹಾಗಾಯಿತಲ್ಲಾ ಎಂದು.

"ಇದೊಂದು ವಿಚಿತ್ರ ಹುಡುಗಿ”

-ಎಂದು ಗೊಣಗುಟ್ಟಿದಳು. ತುಂಗಮ್ಮ.

ಕೆಲವು ದಿನಗಳಲ್ಲೆ ಪ್ರಭಾ ಎದ್ದು ನಡೆದಳು ಹಿಂದೊಮ್ಮೆ ಬಂದಿದ್ದ ಕಾರೇ ಮತ್ತೆ ಬಂದು ಅವಳನ್ನು ಕರೆದೊಯ್ದಿತು. ಹಿಂದೆಯೇ ಉಳಿಯಿತು ಮಗು. ಒಂದು ಮಗುವನ್ನು ಹೊತ್ತು ಹೆತ್ತು ಆಡಿಸಿ ಕಳೆದುಕೊಂಡಿದ್ದ ಒಬ್ಬಳು ಈ ಮಗುವನ್ನೆತ್ತಿಕೊಂಡು ಅದರ ಬಾಯಿಗೆ ತನ್ನ ಸ್ತನವನ್ನು ನೀಡಿದಳು. ಮಗು ಚೀಪಿತು .ಹಾಲು ಬರಲಿಲ್ಲವೆಂದು ಅತ್ತಿತು.

ಮಾರನೆದಿನವೆ ಅನಾಥಾಶ್ರಮದವರು ಒಂದು ಟ್ಯಾಕ್ಸಿನಲ್ಲಿ ಬಂದು ಮಗುವನ್ನೊಯ್ದರು, ಆದನ್ನು ಸಾಕಲೆಂದು ಅವರಿಗೂ ಹಣ ದೊರೆತಿತ್ತು.