ಪುಟ:Abhaya.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಾಗಾದರೆ. ಆದರೆ ಇಲ್ಲಿ ಯಾವುದರಲ್ಲೂ ಮೊಳೆ ಇರಲಿಲ್ಲ ಆದುದರಿಂದ,ಈ ಕೊಠಡಿಯನ್ನು ಬಾಡಿಗೆಗೆ ಕೊದುವ ಪ್ರಮೇಯವೇ ಇರಲಿಲ್ಲ.

ತುಂಗಮ್ಮನಿಗೆ ನಿರಾಶೆಯಾಯಿತು ಕತ್ತಲಾದಮೇಲೆ ಯಾವ ಹೆಣ್ಣು ಗುಬ್ಬಚ್ಚಿಯೂ ಇಲ್ಲಿಗೆ ಬರಲಾರದು. ಮುಂಜಾವದಲ್ಲಿ ಗಂಡುಗುಬ್ಬಚ್ಚಿ ಬಂದು ಅದನ್ನು ಕರೆಯಲಾರದು....ಆದರೆ ಆ ಗುಬ್ಬಚ್ಚಿ ಸಂಸಾರದ ಯೋಚನೆ ಸುಖಕರವಾಗಿರಲಿಲ್ಲ ಆ ಗುಬ್ಬಚ್ಚಿದಗಳನ್ನು ತಾನು ಮರೆತು ಬಿಡುವುದೇ ಮೇಲು , ಎಂದುಕೊಂಡಳು ತುಂಗಮ್ಮ.

ಲವಲವಿಕೆಯಿಂದಲೇ ಜಲಜ ಒಳಬಂದಳು.

"ತುಂಗಕ್ಕ,ಲಲಿತಾ ಮತ್ತು ನಾನು ಮಾರ್ಕೆಟ್ಟಿಗೆ ಹೋಗ್ತೀವಿ!"

ಮಾರ್ಕೆಟ್ಟಿಗೆ ? ಬೀಗತಗಲಿಸಿದ್ದ ಬಾಗಿಲನ್ನು ದಾಟಿ ಮಾರ್ಕೆಟಿಗೆ ?

"ಯಾಕೆ ಹಾಗೆ ನೋಡ್ತಿದೀಯಾ ತುಂಗಕ್ಕ ? ಆಶ್ಚರ್ಯವಾಯ್ತೆ ನಿಂಗೆ ?"

"ನೀವು ಯಾರೊ ಈ ಮನೆ ಬಿಟ್ಟೀ ಹೋಗಲ್ವೇನೋಂತಿದ್ದೆ."

"ನಾನು ಮತ್ತು ಲಲಿತಾ ಹಿರೇಮಣಿಗಳು ತುಂಗಕ್ಕ"

"ದೊಡ್ಡಮ್ಮನೂ ಜತೇಲಿ ಬರ್ತಾರೆ ?"

"ಇಲ್ಲ! ನಾವೇ - ಇಬ್ಬರೇ..." ತುಂಗಮ್ಮ ಸುಮ್ಮನಾದಳು. ಆ ಮೌನ ಜಲಜೆಗೆ ಇಷ್ಟವಾಗಲಿಲ್ಲ. ಆಕೆ ಅಸಹನೆಯಿಂದ ಕೇಳಿದಳು:

"ಯಾಕೆ ಹೋಗ್ತೀರಾಂತ ಕೇಳ್ಬಾರ್ದೆ ತುಂಗಕ್ಕ ?"

ತುಂಗಮ್ಮನಿಗೆ ನಗು ಬಂತು.

"ಆಗಲಮ್ಮ. ಕೇಳ್ತೀನಿ. ಈಗ ಹೇಳು, ಯಾಕೆ ಹೋಗ್ತೀರಾ?"

"ಒಂದುವಾರವೆಲ್ಲ ಇನ್ನು ಲಲಿತಾ ನಳಪಾಕ. ತರಕಾರಿ ತರ್ಬೀಕಲ್ಲ. ಎರಡು ಮೂರು ದಿವಸಕ್ಕೆ ಆಗೋವಷ್ಟು ತಂದು ಹಾಕ್ತೀವಿ ಒಂದೇ ಸಲಿ."

ಜಲಜ - ಲಲಿತೆಯರಿಗೆ ಯಾರ ಭಯವೂ ಇಲ್ಲ. ಅವರು ಹಾಗೆಲ್ಲ ಹೊರಹೋಗಿ ಬರಬಲ್ಲರು. ಆದರೆ ತನಗೆ ಆ ಸ್ವಾತಂತ್ರ್ಯವಿಲ್ಲ ಅಕ್ಷಮ್ಯ ಅಪರಾಧ ಮಾಡಿದವರ ಹಾಗೆ ಬಸಿರನ್ನು ಬಚ್ಚಿಡಬೇಕು ಬೇರೆಯವರಿಂದ. ಕೊಲೆಪಾತಕಿಯಹಾಗೆ ಜನರದೃಷ್ಟಿಯಿಂದ ಅವಿತಿರಬೇಕು,ದೂರ.