ಪುಟ:Abhaya.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಚಿಕ್ ಚಿಕ್ ಚಿಕ್ ಚಿಲಿಪಿಲಿ ಚಿಲಿ. . ."

ಪುನಃ ಪುನಃ ಅದೇ ಸದ್ದು.

ಯಾರೋ 'ತುಂಗಾ ತುಂಗಾ' ಎಂದು ಕರೆದಂತಾಯಿತೆಂದು

ತುಂಗಮ್ಮ ಮೆಲ್ಲನೆ ಕಣ್ಣು ತೆರೆದಳು. ಕೊಠಡಿಯ ತೆರೆದ ಕಿಟಕಿಯ ಎಡೆಯಿಂದ ಮುಂಬೆಳಗು ತೂರಿ ಬರುತಿತ್ತು. ಕತ್ತಲಿನ ಆಳವಾದ ಗುಹೆಯೊಳಗೆ ಇಳಿದು ಹೋಗಿದ್ದ ಆಕೆಯ ಮನಸ್ಸು ಮತ್ತೆ ಮೇಲೆ ಬಂದು ಸುತ್ತಲಿನ ವಾತಾವರಣವನ್ನು ಮೂಸಿ ನೋಡಿತು.

ಹೊಸ ಜಾಗ, ಹೊಸ ಆವರಣ....

ಯಾರು ತನ್ನನ್ನು ಕರೆದವರು 'ತುಂಗ' ಎಂದು?

-ಬಲು ಹಿಂದೆ ಬಾಲ್ಯದಲ್ಲಿ ತಾಯಿ ಹಾಗೆ ಕರೆಯುತಿದ್ದಳು.

ಆದರೆ ಆ ಸ್ವರ ಕೋಮಲವಾಗಿರಲಿಲ್ಲ; ಜೀವನದ ತಾಳಕ್ಕೆ ಮೇಳೈಸದೆ ಅದು ಕಕ್ರಶವಾಗಿತ್ತು. . ತನ್ನನ್ನು ತೋಳಕ್ಕೆ ತೆಕ್ಕೆಯಲ್ಲಿ ಬಿಗಿದುಕೊಂಡಿದ್ದಾಗ ಆತ 'ತುಂಗಾ ತುಂಗಾ' ಎಂದು ಪದ್ದೋಚ್ಚಾರಮಾಡಿದ್ದ ಮೃದುವಾಗಿ. ಆಗ ಎಷ್ಟೊಂದು ಇಂಪಾಗಿ ಕೇಳಿತ್ತು ಆ ಧ್ವನಿ! ಆದರೆ ಆ ಇನಿಧ್ವನಿಯೇ ಆಕೆಯ ಬಾಳಿನ ಅಪಸ್ವರವಾಗಿತ್ತು. ಈಗ ಆ ಕರೆಯ ನೆನಪಾದಾಗ ಮುಳ್ಳಾಗುತಿತ್ತು ಮೈ ಕೂದಲು.

ಆದರೂ ಯಾರೋ ಕರೆದ ಹಾಗಾಯಿತಲ್ಲವೆ ?

ರಾತ್ರೆ ತಾನು ನಿದ್ದೆ ಹೋದುದಕ್ಕೆ ಮುಂಚೆ ತನ್ನ ಮುಂಗುರುಳು

ನೇವರಿಸಿದ ಆ ಹೆಂಗಸು. ಅಭಯದಾಮದ ಹಿರಿಯೆ?...

ತುಂಗಮ್ಮ ಆ ಮಬ್ಬು ಬೆಳಕಿನಲ್ಲಿ ಕೊಠಡಿಯನ್ನು ನೋಡಿದಳು.

ಮಂಚ ಖಾಲಿಯಾಗಿತ್ತು. ಹಾಸಿಗೆಯನ್ನು ಸುರುಳಿ ಸುತ್ತಿದ್ದರು.

ಹಾಗಾದರೆ ಅವರು ಆಗಲೆ ಎದ್ದರೆ?

ಪಕ್ಕದ ಹಾಸಿಗೆ....ಜಲಜ....ತನ್ನೆಡೆಗೆ ಮುಖ ಮಾಡಿ ಮಲಗಿ

ದ್ದಾಳೆ. ಕಣ್ಣುಗಳು ಮುಚ್ಚಿಕೊಂಡಿದ್ದರೂ ತುಟಿಗಳು ಅರೆತೆರೆದು ನಗುತ್ತಿವೆ.