ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗರ್ಭಪಾತ

ವಿಕಿಸೋರ್ಸ್ದಿಂದ


ನಿರ್ಣಯಿತ ಕಾಲಕ್ಕೆ ಮುಂಚೆ ಪ್ರಸವವಾಗಿ ಹೀಗೆ ಪ್ರಸವಗೊಂಡ ವಸ್ತು ಜೀವಂತವಾಗಿರದ ಘಟನೆ (ಅಬಾರ್ಷನ್). ಮನುಷ್ಯರಲ್ಲಿ ಗರ್ಭಧಾರಣದ ಪುರ್ಣಕಾಲ 40 ವಾರಗಳು. ಗರ್ಭಿಣಿಯಲ್ಲಿ ಇದಕ್ಕೆ ಮೊದಲೇ ಗರ್ಭಾವಸ್ಥೆ ಕೊನೆಗೊಂಡು ಜೀವದಿಂದಿರಲಾಗದ ಮಗು ಜನಿಸುವ ಘಟನೆಯೇ ಗರ್ಭಪಾತ. ಮೊದಲಿಗೆ ಗರ್ಭಕ್ಷಯ, ಗರ್ಭಪಾತ, ದಿನ ತುಂಬುವುದಕ್ಕೆ ಮುಂಚೆಯೇ ಅವಸರದಿಂದ ಹಡೆಯುವಿಕೆ ಎಂಬ ವಿವಿಧ ಘಟ್ಟಗಳನ್ನು ಗುರುತಿಸಲಾಗುತ್ತಿತ್ತು. ಗರ್ಭ ತಾಳುವುದಕ್ಕೆ ಹಿಂದಿನ ರಜಸ್ಸ್ರಾವದ ಪ್ರಾರಂಭದ ದಿವಸದಿಂದ ಲೆಕ್ಕ ತೆಗೆದುಕೊಂಡು ಸು. 28 ವಾರಗಳಾದರೂ ಭ್ರೂಣ ಗರ್ಭಕೋಶದಲ್ಲಿ ಬೆಳೆಯದೆ ಇದ್ದರೆ ಪ್ರಸವವಾದಾಗ ಅದು ಜೀವಂತವಾಗಿರಲಾರದು. ಆಮೇಲೆ ಹುಟ್ಟಿದ ಮಕ್ಕಳು ಜೀವಂತವಾಗಿದ್ದರೂ ಹುಟ್ಟಿದಾಗ ಒಂದು ಕೆಜಿಗಿಂತ ಹೆಚ್ಚು ತೂಕವಿರದಿದ್ದರೆ, ಅವುಗಳ ಪೋಷಣೆ ಅತಿ ಕ್ಲಿಷ್ಟ ಸಮಸ್ಯೆಯಾಗಿ ಅವು ಬಹುವಾಗಿ ಸತ್ತು ಹೋಗುತ್ತವೆ. 34-36 ವಾರಗಳ ಕಾಲವಾದರೂ ಅವು ಗರ್ಭಾವಸ್ಥೆಯಲ್ಲಿ ಬೆಳೆಯುತ್ತ ಇದ್ದರೆ ಹುಟ್ಟಿದ ಮೇಲೆ ಜೀವಂತವಾಗಿದ್ದು ಸಹಜವಾಗಿ ಬೆಳೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಮಾನ್ಯವಾಗಿ 28 ವಾರಗಳಿಗೆ ಮೊದಲೇ ಕೊನೆಗೊಂಡ ಗರ್ಭಾವಸ್ಥೆಯನ್ನು ಗರ್ಭಪಾತವೆಂದು ಗಣಿಸಬಹುದಾದರೂ ಬೇರೆ ಬೇರೆ ದೇಶಗಳಲ್ಲಿ ಗರ್ಭಪಾತಕ್ಕೆ ಬೇರೆ ಬೇರೆ ವ್ಯಾಖ್ಯಾನವಿದ್ದುದರಿಂದ ವಿಶ್ವ ಆರೋಗ್ಯಸಂಸ್ಥೆ 1950ರಲ್ಲಿ ಗರ್ಭಪಾತವನ್ನು ಈ ಮುಂದಿನಂತೆ ನಾಲ್ಕು ರೀತಿಯಲ್ಲಿ ವಿಂಗಡಿಸಿತು

  1. 20 ವಾರಗಳ ಗರ್ಭಾವಧಿಗೆ ಮುಂಚೆಯೇ, ಸತ್ತುಹುಟ್ಟುವ ಸಂದರ್ಭಗಳು;
  2. ಭ್ರೂಣ 20 ವಾರಗಳಾದ ಮೇಲೂ ಬೆಳೆಯುತ್ತಿದ್ದು 28ನೆಯ ವಾರದ ಒಳಗೆ, ಸತ್ತುಹುಟ್ಟುವ ಸಂದರ್ಭಗಳು;
  3. ಭ್ರೂಣ 28 ವಾರಗಳೂ ಗರ್ಭದಲ್ಲಿ ಬೆಳೆದು ಆಮೇಲೆ, ಸತ್ತು ಹುಟ್ಟುವ ಸಂದರ್ಭಗಳು;
  4. ಇವು ಮೂರು ಗುಂಪಿಗೂ ಸೇರದ, ಸತ್ತ ವಸ್ತುವಿನ ಜನನ.


ಗರ್ಭಪಾತ ಸ್ವಾಭಾವಿಕವಾಗಿ ಆಗಬಹುದು. ಇಲ್ಲವೇ ಕೃತಕವಾಗಿ ಆಗಬಹುದು. ಸ್ವಾಭಾವಿಕ ಗರ್ಭಪಾತ ಅಥವಾ ಸಾಮಾನ್ಯವಾಗಿ ಜನ ಕರೆಯುವಂತೆ ಮೈ ಇಳಿಯುವುದು ಶೇ. 12 ಗರ್ಭಿಣಿಯರಲ್ಲಿ ಕಂಡುಬರಬಹುದೆಂದು ಅಂದಾಜು ಮಾಡಲಾಗಿದೆ. ಅನೇಕರಿಗೆ ಗರ್ಭಧಾರಣೆಯಾದ ಕೆಲವು ವಾರಗಳಲ್ಲೆ ಗರ್ಭಪಾತವಾಗುವುದರಿಂದ ಗರ್ಭಪಾತವಾದ ವಿಷಯ ಗಮನಕ್ಕೇ ಬರದಿರಬಹುದು. ಪತನವಾದ ವಸ್ತು ಕೆಲವು ವೇಳೆ ಇನ್ನೂ ಭ್ರೂಣಾವಸ್ಥೆಯನ್ನೂ ಹೊಂದದೆ ಇರಬಹುದು. ಅಂತೂ ಈ ರೀತಿಯ ಗರ್ಭಪಾತ ಸ್ವಲ್ಪ ತಡವಾದ ಮತ್ತು ಅಧಿಕವಾದ ಸ್ವಾಭಾವಿಕ ಋತುಸ್ರಾವದಂತೆಯೇ ಇದ್ದು ಗರ್ಭನಷ್ಟವಾಗುವುದರಿಂದ ಗೋಚರಕ್ಕೆ ಬರುವುದಿಲ್ಲ. ಒಟ್ಟು ಗರ್ಭಧಾರಣೆಗಳಲ್ಲಿ ಶೇ.20 ರಷ್ಟು ಈ ರೀತಿಯ ಅವ್ಯಕ್ತ ಗರ್ಭಪಾತ ಕಾಣಬರುತ್ತದೆ. ಸ್ವಾಭಾವಿಕ ಗರ್ಭಪಾತಗಳಲ್ಲಿ ಶೇ.75ರಷ್ಟು ಸಾಮಾನ್ಯವಾಗಿ 3-4 ತಿಂಗಳ ಗರ್ಭಿಣಿಯರಲ್ಲಿ ಕಂಡುಬರುತ್ತದೆ. ಗರ್ಭಪಾತವಾಗುವುದಕ್ಕೆ ಕೆಲವು ದಿವಸಗಳಿಗೆ ಮುಂಚೆಯೇ ಭ್ರೂಣ ಗರ್ಭಕೋಶದೊಳಗೆ ಸತ್ತು ಹೋಗಿರುವುದು ಸಾಮಾನ್ಯ. ಕೆಲವು ವೇಳೆ ಹೀಗೆ ಸತ್ತುಹೋಗಿರುವ ಭ್ರೂಣ ವಿಸರ್ಜಿಸಲ್ಪಡದೆ ಗರ್ಭಕೋಶದ ಒಳಗೇ ಅನೇಕ ವಾರಗಳು ಇರಬಹುದು. ಇಂಥ ಸಂದರ್ಭಗಳಲ್ಲಿ ಗರ್ಭಪಾತದ ಸೂಚನೆ ಕಂಡುಬಂದು ಬಹುಬೇಗನೆ ಸಮಾಧಾನವಾಗಿ, ಗರ್ಭಸ್ಥಿತಿ ಮುಂದುವರಿಯುತ್ತಿದೆಯೇನೋ ಎನ್ನುವಂತೆ ಇರುತ್ತದೆ. ಆದರೆ ಗರ್ಭದ ಬೆಳೆವಣಿಗೆ ಇಲ್ಲದೆ ಒಂದೇ ಸ್ಥಿತಿಯಲ್ಲಿರುವುದು ಮತ್ತು ಇತರ ಸೂಚನೆಗಳಿಂದ ಈ ರೀತಿಯ ಗೋಪ್ಯಗರ್ಭಪಾತಗಳನ್ನು ಗುರುತಿಸಬಹುದು. ಇಂಥ ಸಂದರ್ಭಗಳಲ್ಲಿ ಗರ್ಭಕೋಶದೊಳಗೆ ಇರುವ ಸತ್ತ ಮತ್ತು ಶಿಥಿಲವಾಗುತ್ತಿರುವ ಭ್ರೂಣದ ವಿಸರ್ಜನೆಗೆ ಚಿಕಿತ್ಸೆ ಮಾಡಬೇಕಾಗುತ್ತದೆ. ಇದು ಔಷಧೋಪಚಾರಗಳಿಂದ ಸಾಗದಿದ್ದರೆ ಶಸ್ತ್ರಚಿಕಿತ್ಸೆಯನ್ನು ಅವಲಂಬಿಸಬೇಕು. ಕೆಲವು ವೇಳೆ ಯೋನಿಯೊಳಗಿನಿಂದ ರಕ್ತಸ್ರಾವ, ಸೊಂಟನೋವು, ಕಿಬ್ಬೊಟ್ಟೆನೋವು ಮುಂತಾದ ಸೂಚನೆಗಳು ಕಂಡುಬಂದು ಗರ್ಭಪಾತವಾಗುವ ಹೆದರಿಕೆ ಉಂಟಾಗುತ್ತದೆ. ಆದರೆ ಪೂರ್ಣ ವಿಶ್ರಾಂತಿ, ಔಷಧೋಪಚಾರಗಳಿಂದ ಗರ್ಭಪಾತವಾಗುವುದನ್ನು ತಪ್ಪಿಸಬಹುದು ಮತ್ತು ಗರ್ಭದ ಬೆಳೆವಣಿಗೆ ಮುಂದುವರಿಯುವಂತೆ ಮಾಡಬಹುದು. ಇಂಥ ಸಂದರ್ಭಗಳನ್ನು ಬೆದರಿಕೆ ಗರ್ಭಪಾತವೆನ್ನುತ್ತಾರೆ. ಇನ್ನು ಕೆಲವು ವೇಳೆ ಮೇಲೆ ಹೇಳಿದ ಗರ್ಭಪಾತದ ಸೂಚನೆಗಳು ಅಗಾಧವಾಗಿ ಕಂಡುಬಂದು ಏನು ಮಾಡಿದರೂ ಗರ್ಭಪಾತವಾಗುವುದನ್ನು ತಪ್ಪಿಸಲು ಸಾಧ್ಯವಾಗದೇ ಹೋಗಬಹುದು. ಇದು ಅನಿವಾರ್ಯ ಗರ್ಭಪಾತ. ಹೀಗೆ ಗರ್ಭಪಾತವಾದಾಗ ಗರ್ಭಕೋಶ ಪೂರ್ಣವಾಗಿ ಖಾಲಿಯಾದರೆ ಅದು ಸಮಗ್ರ ಅನಿವಾರ್ಯ ಗರ್ಭಪಾತ. ಅದಿಲ್ಲದೆ ಗರ್ಭಕೋಶದೊಳಗಿನ ವಸ್ತು ಪೂರ್ತಿಯಾಗಿ ವಿಸರ್ಜಿಸಲ್ಪಡದಿದ್ದರೆ ಅದು ಅಸಮಗ್ರ ಅನಿವಾರ್ಯ ಗರ್ಭಪಾತ ಎನ್ನಿಸಿಕೊಳ್ಳುತ್ತದೆ. ಈ ಸ್ಥಿತಿಯಲ್ಲಿ ಅತಿಯಾದ ರಕ್ತಸ್ರಾವ, ವಿಷಾಣು ಸೋಂಕು ಮುಂತಾದ ಭೀಕರ ಅವಸ್ಥೆಗಳು ಉಂಟಾಗದಂತೆ ಔಷಧೋಪಚಾರಗಳಿಂದ, ಅಗತ್ಯವಾದರೆ ಶಸ್ತ್ರಕಾರ್ಯ ದಿಂದ, ಚಿಕಿತ್ಸೆ ಮಾಡಿ ಗರ್ಭಪಾತ ಪುರ್ಣವಾಗುವಂತೆ ಮಾಡಬೇಕಾಗುತ್ತದೆ.


ಗರ್ಭಪಾತಕ್ಕೆ ಕಾರಣಗಳು

ತಾಯಿಯಲ್ಲಿ ಅಥವಾ ಭ್ರೂಣದಲ್ಲಿ ಇರಬಹುದು. ತಾಯಿಯಲ್ಲಿ ಸಿಡುಬು, ಪ್ಲೇಗು, ಮಲೇರಿಯ, ರೂಬೆಲ್ಲ, ಪರಂಗಿ ರೋಗ ಮುಂತಾದ ರೋಗಗಳ ನಂಜಿನಿಂದ ಗರ್ಭಪಾತವಾಗಬಹುದು. ಕ್ಷಯ, ಸಿಹಿಮೂತ್ರ, ಅಧಿಕ ರಕ್ತದೊತ್ತಡ, ನೆಫ್ರೈಟಿಸ್ ಮುಂತಾದ ರೋಗಗಳಿಂದಲೂ ಗರ್ಭಪಾತವಾಗುವ ಸಾಧ್ಯತೆ ಇದೆ. ತೀವ್ರವಾದ ಭೀತಿ, ದುಃಖ, ಆತಂಕಗಳು, ಹಾರ್ಮೋನುಗಳ ಮತ್ತು ನರಮಂಡಲದ ಏರುಪೇರುಗಳು ಗರ್ಭಪಾತವನ್ನು ಉಂಟುಮಾಡಬಲ್ಲವು. ಗರ್ಭಕೋಶ ವಿಕಾರವಾಗಿದ್ದರೆ, ರೋಗಪೀಡಿತವಾಗಿದ್ದರೆ, ಸ್ಥಳಾಂತರಗೊಂಡಿದ್ದರೆ, ದುರ್ಮಾಂಸ ದಿಂದೊಡಗೂಡಿದ್ದರೆ, ಅತಿ ಸಂಭೋಗದಿಂದ ಉದ್ರೇಕಗೊಂಡಿದ್ದರೆ ಗರ್ಭಪಾತವಾಗ ಬಹುದು. ಅತಿಯಾದ ದೈಹಿಕ ಶ್ರಮ, ಗರ್ಭಕೋಶದ ಹತ್ತಿರ ಘಾತ, ಕೃತಕ ಗರ್ಭಪಾತದ ಪ್ರಯತ್ನಗಳು ಇವು ಭ್ರೂಣವನ್ನು ರೂಢಮೂಲವಾಗಿ ಬೇರ್ಪಡಿಸಿ ಗರ್ಭಪಾತವನ್ನು ಉಂಟುಮಾಡಬಹುದು. ಆಹಾರಲೋಪ ಅಥವಾ ಬೇರೆ ಕಾರಣದಿಂದಾದ ನಿಶ್ಯಕ್ತಿಯೇ ಗರ್ಭಪಾತವನ್ನು ಉಂಟುಮಾಡಬಹುದು. ಸೀಸ, ತಾಮ್ರ, ಪಾದರಸ ಮುಂತಾದ ಲೋಹ ಸಂಯುಕ್ತ ವಸ್ತುಗಳು ಗರ್ಭಪಾತವನ್ನು ಉಂಟುಮಾಡುತ್ತವೆ. ಹಾಗೆಯೇ ರೋಗಪೀಡಿತ ಅಂಡಾಣು ಅಥವಾ ಪುರಷಾಣುಗಳ ಮಿಲನದಿಂದ ವಿಕೃತಿಗೊಂಡ ಭ್ರೂಣ, ರೋಗಪೀಡಿತವಾದ ಮತ್ತು ಪರಸ್ಥಳದಲ್ಲಿ ಊರ್ಜಿತವಾದ ಜರಾಯು, ಗರ್ಭಕೋಶದಲ್ಲಿ ಭ್ರೂಣದ ಅತಿಯಾದ ಚಲನದಿಂದ ಹೊಕ್ಕಳಬಳ್ಳಿ ಭ್ರೂಣದ ಕತ್ತಿಗೆ ಸುತ್ತಿಕೊಂಡು ನೇಣುಹಾಕುವುದು, ಭ್ರೂಣದ ರಕ್ತ ತಾಯಿಯ ರಕ್ತದಿಂದ ಆರ್ಹೆಚ್ ಎಂಬ ಘಟಕದಲ್ಲಿ ಭಿನ್ನವಾಗಿರುವಿಕೆ, ಹಾರ್ಮೋನು ಏರುಪೇರು ಇವು ಭ್ರೂಣಕ್ಕೆ ಸಂಬಂಧಿಸಿದಂತೆ ಗರ್ಭಪಾತ ಮಾಡಿಸುವ ಕಾರಣಗಳು.


ಕೆಲವರಲ್ಲಿ ಗರ್ಭಧಾರಣೆಯಾಗಿ ಸುಮಾರು 12 ವಾರಗಳ ಬಳಿಕ ಪ್ರತಿಸಲವೂ ಗರ್ಭಪಾತ ಸಂಭವಿಸುವುದು ರೂಢಿಯಾಗಿಬಿಟ್ಟಿರುತ್ತದೆ. ಇಂಥ ವರ್ತನೆಯ ಗರ್ಭಪಾತಕ್ಕೆ ಮೇಲೆ ಹೇಳಿದ ಕಾರಣಗಳು ಯಾವುವೂ ಅನ್ವಯಿಸುವಂತೆ ಕಾಣುವುದಿಲ್ಲ. ಸಾಮಾನ್ಯವಾಗಿ ಗರ್ಭಪಾತ ಸಹಜ ಋತುಕ್ರಮದಂತೆ ಋತುಸ್ರಾವವಾಗಬಹುದೆಂದು ನಿರೀಕ್ಷಿಸಬಹುದಾದ ದಿವಸಗಳಲ್ಲಿ ಆಗುತ್ತದೆ. ಪದೇ ಪದೇ ಗರ್ಭಪಾತಕ್ಕೊಳಗಾಗು ವವರಲ್ಲಂತೂ ಇದು ಸ್ಪಷ್ಟವಾಗಿ ಕಾಣಬರುತ್ತದೆ.


ಕೃತಕ ಗರ್ಭಪಾತ ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ತೀವ್ರ ಅಪರಾಧವೆಂದು ಗಣಿಸಲ್ಪಟ್ಟಿದೆ. ಕೃತಕವಾಗಿ ಗರ್ಭಪಾತ ಮಾಡಿಸುವವರನ್ನೂ ಅವರಿಗೆ ಸಹಾಯ ಮಾಡುವವರನ್ನೂ ಶಿಕ್ಷೆಗೆ ಗುರಿ ಮಾಡಲಾಗುತ್ತಿದೆ. ಮಾನ ಹೋಗುವ ಸಂದರ್ಭಗಳಲ್ಲಿ, ಆರ್ಥಿಕ ಸಮಸ್ಯೆಗಳಿಗಾಗಿ, ಸಂತಾನ ನಿರೋಧ ಕ್ರಮದ ರಕ್ಷಣೆ ಅನಿರೀಕ್ಷಿತವಾಗಿ ಕುಸಿದು ಗರ್ಭಧಾರಣೆಯಾಗಿಬಿಟ್ಟಾಗ ಅಥವಾ ಬೇರೆ ಕಾರಣದಿಂದಲಾದರೂ ಬೇಡದ ಬಸಿರನ್ನು ಕಳೆದುಕೊಳ್ಳುವುದಕ್ಕಾಗಿ ಕೃತಕಗರ್ಭಪಾತವನ್ನು ಮಾಡಿಕೊಳ್ಳುತ್ತಾರೆ, ಇಲ್ಲವೇ ಮಾಡಿಸಿ ಕೊಳ್ಳುತ್ತಾರೆ. ಗರ್ಭಾವಸ್ಥೆಯ ಮೂರನೆಯ ತಿಂಗಳಲ್ಲಿ ಗರ್ಭಧಾರಣೆಯಾದ ವಿಷಯ ಖಚಿತವಾಗಿ ಮನದಟ್ಟಾದಾಗ, ಸಾಮಾನ್ಯವಾಗಿ, ಕೃತಕ ಗರ್ಭಪಾತದ ಪ್ರಯತ್ನ ನಡೆಯುತ್ತದೆ. ಇಲ್ಲವೇ ನಾಲ್ಕು ತಿಂಗಳುಗಳು ಕಳೆದ ಮೇಲೆ ಗರ್ಭಿಣಿಯೆಂಬ ವಿಷಯ ಬಹಿರಂಗವಾಗಿ ಗೋಚರವಾಗುವಂತಾದಾಗ ಈ ಪ್ರಯತ್ನ ನಡೆಯುತ್ತದೆ. ಕೃತಕ ಗರ್ಭಪಾತ ಅಪರಾಧವಾದುದರಿಂದ, ಸ್ವಪ್ರಯತ್ನ ಇಲ್ಲವೇ ಗುಟ್ಟಿನಲ್ಲಿ ಒದಗಬಹುದಾದ, ಕೌಶಲವಿಲ್ಲದವರ ಅಥವಾ ಕುಶಲಿಗಳ ಸಹಾಯದಿಂದ, ಸಾಮಾನ್ಯವಾಗಿ ಅಶುದ್ಧವಾದ ಸ್ಥಳದಲ್ಲಿ, ಅಶುದ್ಧ ಸಲಕರಣೆಗಳಿಂದ ಗರ್ಭಪಾತವನ್ನು ಉಂಟುಮಾಡಲಾಗುತ್ತದೆ. ಕೃತಕ ಗರ್ಭಪಾತ ಔಷಧ ಸೇವನೆ ಅಥವಾ ಪ್ರಯೋಗದಿಂದಾಗಲಿ ಅಥವಾ ಬಲಪ್ರಯೋಗ ದಿಂದಾಗಲಿ ಅಥವಾ ಸಲಕರಣೆಗಳ ಉಪಯೋಗದಿಂದಾಗಲಿ ಫಲಿಸುವಂತೆ ಪ್ರಯತ್ನ ನಡೆಯುತ್ತದೆ. ಖಚಿತವಾಗಿ ಗರ್ಭಪಾತ ಮಾಡಿಸಬಲ್ಲ ಸುರಕ್ಷಿತ ಔಷಧಿಗಳು ಅಷ್ಟಾಗಿ ಇಲ್ಲವೆಂದೇ ಹೇಳಬೇಕು. ಬಹಳ ರೀತಿಯ ಔಷಧಿಗಳನ್ನು ಗರ್ಭಪಾತವಾಗುವಷ್ಟು ಉಪಯೋಗಿಸಿದರೂ ಅವು ದೇಹಕ್ಕೆ ಅಪಾಯವಾಗುವಷ್ಟು ಗಾತ್ರದಲ್ಲಿ ಅವನ್ನು ಉಪಯೋಗಿಸಬೇಕಾಗಿದೆ. ಎರ್ಗಾಟ್, ಕ್ವಿನೀನ್, ಈಸ್ಟ್ರೋಜೆನ್ನುಗಳು, ಟರ್ಪೆಂಟೈನ್ ಕ್ಯಾಂಥರಿಡೀನುಗಳು, ಜಾಪಾಳ, ಕಿಲುಬು ಮುಂತಾದ ತೀಕ್ಷ್ಣವಾದ ವಮನ ವಿರೇಚಿಗಳು, ಸೀಸ ಸಂಯುಕ್ತ ರಾಸಾಯನಿಕಗಳು ಇವೆಲ್ಲವನ್ನು ಗರ್ಭಪಾತವಾಗಲು ಉಪಯೋಗಿಸುತ್ತಾರೆ. ಭಾರತದಲ್ಲಿ ಎಳೇ ಪರಂಗಿಬೀಜ, ಎಕ್ಕದ ಹಾಲು, ಚಿತ್ರಮೂಲ, ಹಾಗಲ, ನುಗ್ಗೆ ಮುಂತಾದವನ್ನು ಗರ್ಭಪಾತಕ್ಕೆ ಉಪಯೋಗಿಸುವುದುಂಟು. ಹಿಗ್ಗೀನ್ಸ್ ಪಿಚಕಾರಿಯಿಂದ ಯೋನಿಯ ಮೂಲಕ ಗರ್ಭಕೋಶಕ್ಕೆ ಒತ್ತಡದಿಂದ ಜಲಸೇಚನ ಮಾಡುವುದು, ಭಟ್ಟಿ ಜಾರಿದಾಗ ಅನುಸರಿಸುವಂಥ ಪಾತ್ರಾಪ್ರಯೋಗ, ಹೊಟ್ಟೆ ಮೇಲೆ ತುಳಿಸಿಕೊಳ್ಳುವುದು, ಹೊಟ್ಟೆ ಸುತ್ತ ಅತಿ ಬಿಗಿಯಾಗಿ ಸಿಂಬಿ ಸುತ್ತಿಕೊಳ್ಳುವುದು, ಎತ್ತರದಿಂದ ಧುಮುಕುವುದು, ಕುದುರೆ ಸವಾರಿ, ಶ್ರಮವಾಗುವ ಕುಣಿತ, ಮಹಡಿ ಹಂತವನ್ನು ಹತ್ತಿ ದುಡುದುಡನೆ ಇಳಿಯುವುದು ಮುಂತಾದ ಬಲಪ್ರಯೋಗಗಳನ್ನೂ ಗರ್ಭಪಾತವಾಗುವ ಸಲುವಾಗಿ ಅನುಸರಿಸಲಾಗುತ್ತದೆ. ಸಾಮಾನ್ಯವಾಗಿ ಪಿಚಕಾರಿ ಉಪಯೋಗದಿಂದ ಗರ್ಭಪಾತದ ಸ್ವಪ್ರಯತ್ನ ಪ್ರಾರಂಭವಾಗುತ್ತದೆ. ಅದು ಸಫಲವಾಗದಿದ್ದಾಗ ಶ್ರಮಸಾಧನೆಗಳು, ಅವೂ ತಪ್ಪಿದರೆ ಔಷಧ ಸೇವನೆ, ಅವೂ ತಪ್ಪಿದರೆ ಸಲಕರಣೆಗಳ ಉಪಯೋಗವನ್ನು ಕೃತಕ ಗರ್ಭಪಾತದ ಪ್ರಯತ್ನಗಳಾಗಿ ಕಾಣಬಹುದು. ಹೊರಗಿನವರಿಂದ ಗರ್ಭಪಾತ ಮಾಡಿಸಿ ಕೊಳ್ಳುವಾಗ ಸಾಮಾನ್ಯವಾಗಿ ಸಲಕರಣೆಗಳ ಉಪಯೋಗವೇ ಅನುಸರಿಸುವ ಮಾರ್ಗ. ತಿಳಿಯದ ಜನ ಸಲಕರಣೆಗಳನ್ನು ಉಪಯೋಗಿಸಿದಾಗ ಸ್ವಪ್ರಯತ್ನದಲ್ಲಿ ಸಲಕರಣೆಯ ಉಪಯೋಗದಂತೆಯೇ ಶರೀರ ಘಾತವಾಗುವ ಸಾಧ್ಯತೆ ಬಹಳ ಉಂಟು. ಅನುಭವಸ್ಥರು ಅಥವಾ ಶಸ್ತ್ರಕ್ರಿಯಾ ಜ್ಞಾನವುಳ್ಳವರು ಸಲಕರಣೆಗಳನ್ನು ಉಪಯೋಗಿಸಿದರೆ ಅಷ್ಟಾಗಿ ಘಾತವಾಗದೆ ಹೆಚ್ಚು ಕಡಿಮೆ ಖಚಿತವಾಗಿ ಗರ್ಭಪಾತವಾಗುವ ಸಂಭವವಿರುತ್ತದೆ. ಅನನುಭವಿಗಳು ಪಿಚಕಾರಿ ಪ್ರಯೋಗ, ಯೋನಿಯೊಳಗಿನಿಂದ ಗರ್ಭಕೋಶ ದ್ವಾರಕ್ಕೆ ಸಿಕ್ಕಿಕೊಳ್ಳುವಂತೆ ಔಷಧಗಳನ್ನು ಲೇಪಿಸಿದ ಕಡ್ಡಿಗಳನ್ನು ತೂರಿಸುವುದು, ಸೂಜಿ, ಮೊಳೆ ಮುಂತಾದ ಚೂಪಾದ ವಸ್ತುಗಳಿಂದ ಭ್ರೂಣವನ್ನು ಆವರಿಸಿರುವ ಚೀಲವನ್ನು ಛಿದ್ರಿಸುವುದು ಮುಂತಾದ ಮಾರ್ಗಗಳನ್ನು ಅನುಸರಿಸುತ್ತಾರೆ. ಅನುಭವಿಗಳೂ ಶಸ್ತ್ರಕ್ರಿಯಾ ಜ್ಞಾನವುಳ್ಳವರೂ ಸಾಮಾನ್ಯವಾಗಿ ಈ ನೀರಿನ ಚೀಲವನ್ನು ಛಿದ್ರಿಸುವ ವಿಧಾನವನ್ನೇ ಅನುಸರಿಸುತ್ತಾರೆ. ಶಸ್ತ್ರಕ್ರಿಯಾ ಶಾಸ್ತ್ರಜ್ಞರು ಸಾಮಾನ್ಯವಾಗಿ ಶಸ್ತ್ರಕ್ರಿಯೆಗೆ ಅನುಸರಿಸುವ ಎಚ್ಚರಿಕೆಗಳನ್ನು ಆದಷ್ಟು ಮಟ್ಟಿಗೆ ಅನುಸರಿಸುವುದರಿಂದ ಇವರು ಜರುಗಿಸುವ ಕೃತಕ ಗರ್ಭಪಾತ ತಕ್ಕಮಟ್ಟಿಗೆ ಕ್ಷೇಮವಾಗಿರುತ್ತದೆ ಮತ್ತು ಬಹುವಾಗಿ ಸ್ವಾಭಾವಿಕ ಗರ್ಭಪಾತದಂತೆಯೇ ಇರುತ್ತದೆ. ಅಕುಶಲಿಗಳು ಅನುಸರಿಸುವ ಸಲಕರಣೆಗಳ ಪ್ರಯೋಗದಿಂದ ಮತ್ತು ಸ್ಥಳೀಕವಾಗಿ ತೀವ್ರ ಔಷಧ ಪ್ರಯೋಗಗಳಿಂದ ಯೋನಿ, ಗುದದ್ವಾರ, ಗರ್ಭಕೋಶದ್ವಾರ, ಗರ್ಭಕೋಶ ಗಳಲ್ಲಿ ಗಾಯ ವ್ರಣಗಳಾಗಿ, ರಕ್ತಸ್ರಾವ, ಡೊಗರು ಬೀಳುವಿಕೆ, ತೀವ್ರ ಆಘಾತಗಳಾಗಿ ಸಾವು ಸಂಭವಿಸಬಹುದು; ಇಲ್ಲವೇ ವಿಷಾಣು ಸೋಂಕಾಗಿ ವಿಷಮಿಸಿ ಸಾವು ಸಂಭವಿಸ ಬಹುದು. ಇಂಥ ಸಾವು, ಸ್ವಯಂಕೃತ ಮತ್ತು ಅಕುಶಲ ಪರಕೃತ ಕೃತಕ ಗರ್ಭಪಾತಗಳಲ್ಲಿ ಶೇ.16ರಷ್ಟು ಸಂಭವಿಸಬಹುದೆಂದು ಅಂದಾಜು ಮಾಡಿದ್ದಾರೆ. ಆಘಾತಗಳಿಂದ ಚೇತರಿಸಿಕೊಂಡರೂ ಅನೇಕ ಕಾಲ ಸೊಂಟನೋವು, ಅತಿರಜಸ್ರಾವ, ಬಿಳುಪು ಹೋಗುವುದು ಮುಂತಾದ ಅನಾರೋಗ್ಯ ಸ್ಥಿತಿಗಳಿಂದ ಬಹುಕಾಲ ನರಳಬೇಕಾಗುತ್ತದೆ.


ಕೃತಕ ಗರ್ಭಪಾತ ಕೆಲವು ಸಂದರ್ಭಗಳಲ್ಲಿ ಸಮರ್ಥನೀಯವಾಗಿರುತ್ತದೆ. ಇದು ಸಾಮಾನ್ಯವಾಗಿ ಮುಚ್ಚುಮರೆ ಇಲ್ಲದೆ ಸಕಲ ಸೌಕರ್ಯವೂ ಇರುವ ಆಸ್ಪತ್ರೆಯಲ್ಲಿ ತಜ್ಞರು ಮಾಡುವ ಕಾರ್ಯ. ಸಮರ್ಥನೀಯ ಗರ್ಭಪಾತವನ್ನು ಮಾಡಿಸುವ ಮೊದಲು ಆ ಗರ್ಭ ಮುಂದುವರಿದರೆ ತಾಯಿಯ ದೇಹಸೌಖ್ಯಕ್ಕೆ, ಮನೋಸ್ಥಿತಿಗೆ ಮತ್ತು ಜೀವಕ್ಕೆ ಅಪಾಯ ಉಂಟೆಂದು ಸಾಮಾನ್ಯವಾಗಿ ಇಬ್ಬರು ತಜ್ಞರಾದರೂ ಒಮ್ಮತದಿಂದ ಸಮ್ಮತಿಸಬೇಕಾಗುತ್ತದೆ. ಅಂತೆಯೇ ವ್ಯಕ್ತಿ ಮತ್ತು ಸಂಬಂಧಿಗಳ ಲಿಖಿತ ಒಪ್ಪಿಗೆಯೂ ಅಗತ್ಯ. ತುರ್ತು ಪರಿಸ್ಥಿತಿಗಳಲ್ಲಿ ಈ ನಿರ್ಬಂಧಗಳನ್ನು ಸಾಮಾನ್ಯವಾಗಿ ಸಡಿಲಿಸುತ್ತಾರೆ. ಸಮರ್ಥನೀಯ ಗರ್ಭಪಾತ ಮಾಡಬೇಕಾದ ಸಂದರ್ಭಗಳು ನವೀನ ಔಷಧಿಗಳು ಮತ್ತು ಚಿಕಿತ್ಸಾ ಕ್ರಮಗಳಿಂದ ಈಚೆಗೆ ಕಡಿಮೆಯಾಗಿವೆ. ಕ್ಷಯ, ತಕ್ಕಮಟ್ಟಿನ ಹೃದಯ ದೌರ್ಬಲ್ಯ, ರಕ್ತದ ಒತ್ತಡ ಮುಂತಾದ ಕಾರಣಗಳಿಗಾಗಿ ಈಚೆಗೆ ಗರ್ಭಪಾತವನ್ನು ಉಂಟುಮಾಡುವುದಿಲ್ಲ. ಅನಿವಾರ್ಯ ಗರ್ಭಪಾತ ಸಮಗ್ರಗೊಳ್ಳದೆ ದೀರ್ಘಕಾಲಿಕ ವಾದಾಗ, ಕೃತಕ ಗರ್ಭಪಾತದ ಅಕುಶಲಿತ ಪ್ರಯತ್ನಗಳಿಂದ ದೇಹಾಘಾತವಾಗಿ ವಿಷಾಣು ಸೋಂಕುಂಟಾದಾಗ, ಗರ್ಭಕೋಶದಲ್ಲಿ ದುರ್ಮಾಂಸ ಏಡಿಗಂತಿಗಳಿದ್ದಾಗ, ಮೂರ್ಛಾರೋಗ, ಹಿಂದಿನ ಪ್ರಸವ ಕಾಲಗಳಲ್ಲಿ ಮನೋವಿಕಲ್ಪ ಇಂಥ ಸಂದರ್ಭಗಳಲ್ಲಿ ಕೃತಕ ಗರ್ಭಪಾತ ಸಾಮಾನ್ಯವಾಗಿ ಸಮರ್ಥನೀಯವೆಂದು ಗಣಿಸಲ್ಪಡುತ್ತದೆ.


ಅನುವಂಶಿಕವಾಗಿರಬಹುದಾದ ಮೂರ್ಛಾರೋಗ, ಮನೋವಿಕಲ್ಪ, ತೀವ್ರ ಅಂಗವಿಕಲತೆ ಇವನ್ನು ತಡೆಗಟ್ಟಲು ಗರ್ಭಪಾತ ಸಮರ್ಥನೀಯವೆಂದು ಕೆಲವು ದೇಶಗಳಲ್ಲಿ ಎಣಿಸಲಾಗಿದೆ. ಅತಿಕ್ರಮ ಸಂಭೋಗದಿಂದಾದ ಗರ್ಭವನ್ನು ಕಳೆದುಕೊಳ್ಳಲೂ ಗರ್ಭಪಾತವನ್ನು ಸಮರ್ಥನೀಯವೆಂದು ಕೆಲವು ದೇಶಗಳಲ್ಲಿ (ಇತ್ತೀಚೆಗೆ ಭಾರತದಲ್ಲೂ) ಭಾವಿಸಲಾಗಿದೆ. ಈಚೆಗೆ ಜಪಾನ್ ಮುಂತಾದ ಕೆಲವು ದೇಶಗಳಲ್ಲಿ ಕುಟುಂಬ ಯೋಜನೆಯ ಅಂಗವಾಗಿ, ಸಾಮಾಜಿಕ ವೈಯಕ್ತಿಕ ಕಾರಣಗಳಿಗಾಗಿ ಗರ್ಭಪಾತವನ್ನು ಐಚ್ಛಿಕ ವಿಷಯವನ್ನಾಗಿ ಮಾಡಲಾಗಿದೆ. ಇಂಥ ಗರ್ಭಪಾತಗಳನ್ನು ಸರಕಾರದ ಅನುಮತಿ ಇರುವ ಸ್ಥಳಗಳಲ್ಲಿ ಮಾತ್ರ ತಜ್ಞರು ಯಾವ ಮುಚ್ಚುಮರೆಯೂ ಇಲ್ಲದೆ ಮಾಡಬೇಕಾಗಿರುತ್ತದೆ. ಈ ವ್ಯವಸ್ಥೆಗೆ ಈಡಾಗುವುದಕ್ಕೆ ಹೀನಾಯ ಪಟ್ಟುಕೊಂಡೋ ಆರ್ಥಿಕ ಕಾರಣಗಳಿಗಾಗಿಯೋ ಐಚ್ಛಿಕ ಗರ್ಭಪಾತವನ್ನು ಗುಟ್ಟಾಗಿ ಅಕುಶಲಿಕವಾಗಿ ಪ್ರಯತ್ನಿಸುವುದೂ ಅದರಿಂದಾಗಬಹುದಾದ ಗಂಡಾಂತರವನ್ನು ಅನುಭವಿಸುವುದೂ ಸಮಾಜದಲ್ಲಿ ಇದ್ದೇ ಇರುತ್ತದೆ. ಐಚ್ಛಿಕ ಗರ್ಭಪಾತವನ್ನು ಈಚೆಗೆ ನವವಿಧಾನಗಳಿಂದ ಕ್ಷೇಮಕರವಾಗಿ ಮಾಡಲಾಗಿದೆ. ಅಗತ್ಯವಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮರೆಯದೆ ಕಿಬ್ಬೊಟ್ಟೆಯ ಮೂಲಕ ಚುಚ್ಚುಮದ್ದಿನ ದೊಡ್ಡ ಸೂಜಿಯನ್ನು ಭ್ರೂಣವನ್ನು ಆವರಿಸಿರುವ ನೀರಿನ ಚೀಲದೊಳಗೆ ಹುಗಿಸಿ, ಆದಷ್ಟು ನೀರನ್ನು ತೆಗೆದು, ಅಷ್ಟೇ ಗಾತ್ರದಲ್ಲಿ ಶುದ್ಧೀಕರಿಸಿ ಬೆಚ್ಚಗೆ ಮಾಡಿದ ಶೇ.20 ಉಪ್ಪುನೀರನ್ನೋ ಶೇ.50 ಗ್ಲೂಕೋಸ್ ದ್ರಾವಣವನ್ನೊ ಚೀಲದೊಳಕ್ಕೆ ಸೇರಿಸುತ್ತಾರೆ. ಇದಾದ ಕೆಲವು ಗಂಟೆಗಳಲ್ಲಿ ಸಾಮಾನ್ಯವಾಗಿ ಗರ್ಭಪಾತ ಉಂಟಾಗುತ್ತದೆ. ಈ ರೀತಿ ಗರ್ಭಪಾತವನ್ನು ಉಂಟುಮಾಡಿದಾಗ ಹುಟ್ಟುವ ಮಕ್ಕಳು ಸತ್ತು ಹೋಗಿರುತ್ತವೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಅಮೆರಿಕದಲ್ಲಿ ಈಚೆಗೆ ವಿದ್ಯುತ್ ಸಹಾಯದಿಂದ ಗರ್ಭಕೋಶವನ್ನು ಸಂಕುಚಿಸಿ ಗರ್ಭಪಾತವಾಗುವಂತೆ ಮಾಡುವುದೂ ರೂಢಿಗೆ ಬಂದಿದೆ. ಈ ರೀತಿಯ ಕೃತಕ ಗರ್ಭಪಾತಗಳು ಸಹಜ ಗರ್ಭಪಾತಗಳಂತೆಯೇ ಇದ್ದು ಭಿನ್ನತೆ ವ್ಯಕ್ತವಾಗದೇ ಇರಬಹುದಾದ್ದರಿಂದ ಇವನ್ನು ಪತ್ತೆಮಾಡುವುದು ಕಷ್ಟ.


ಭಾರತದಲ್ಲೂ (ಆಗಸ್ಟ್ 1971) ಐಚ್ಛಿಕ ಗರ್ಭಪಾತ ಕುಟುಂಬ ಯೋಜನೆ ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ನ್ಯಾಯಸಮ್ಮತವೆಂದು ಶಾಸನ ಮಾಡಲಾಗಿದೆ.


ಕಾನೂನಿನ ದೃಷ್ಟಿಯಲ್ಲಿ ಗರ್ಭಪಾತ[ಸಂಪಾದಿಸಿ]

ಗರ್ಭ ನಿಂತ ಯಾವುದೇ ಅವಧಿಯಲ್ಲಿ ಅನೈಸರ್ಗಿಕವಾಗಿ ಅಥವಾ ಕೃತ್ರಿಮ ರೀತಿಯಿಂದ ಗರ್ಭಕೋಶದಲ್ಲಿದ್ದ ಭ್ರೂಣ ಅಥವಾ ಅದರ ಅಂಶವನ್ನು ಹೊರಗೆ ಹಾಕುವುದನ್ನು ಕಾನೂನು ಗರ್ಭಪಾತವೆಂದು ಪರಿಗಣಿಸುತ್ತದೆ. ತೀರ ಇತ್ತೀಚಿನವರೆಗೆ ಗರ್ಭಪಾತ ಮಾಡಿಕೊಳ್ಳುವುದು ಇಲ್ಲವೇ ಮಾಡಿಸುವುದು ಕಾನೂನಿನಂತೆ ಅಪರಾಧವಾಗಿತ್ತು. ಈ ಅಪರಾಧಕ್ಕೆ ಮೂರು ವರ್ಷದ ಕಾರಾಗೃಹವಾಸದ ಶಿಕ್ಷೆ ಮತ್ತು/ಅಥವಾ ದಂಡ, ತಾಯಿ ಅಸುನೀಗಿದರೆ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು/ಅಥವಾ ದಂಡ ಹಾಗೂ ಗರ್ಭಪಾತಕ್ಕೊಳಗಾಗುವವಳ ಅನುಮತಿ ಇಲ್ಲದೇ ಮಾಡಿದ ಅಪರಾಧಕ್ಕೆ ಗರಿಷ್ಠ ಆಜೀವ ಕಾರಾಗೃಹವಾಸದ ಶಿಕ್ಷೆಯಿತ್ತು. ಒಂದು ವೇಳೆ ತಾಯಿಯ ಜೀವವನ್ನು ಉಳಿಸುವ ಪ್ರಾಮಾಣಿಕ ಉದ್ದೇಶದಿಂದ ಗರ್ಭಪಾತ ಮಾಡಿಸಿದ್ದಾದರೆ ಮಾತ್ರ ಈ ಶಿಕ್ಷೆ ಅನ್ವಯಿಸುವುದಿಲ್ಲ.


ಕುಟುಂಬ ಯೋಜನಾ ಕಾರ್ಯಕ್ರಮ ಹಾಗೂ ಇನ್ನಿತರ ಸಾಮಾಜಿಕ ಕಾರಣಗಳಿಂದಾಗಿ ಗರ್ಭಪಾತವನ್ನು ಕಾಯಿದೆಬದ್ಧಗೊಳಿಸುವ ಮಸೂದೆ ಭಾರತದಲ್ಲಿ ಜಾರಿಗೆ ಬಂದಿದೆ. ಅದರಂತೆ ಗರ್ಭಪಾತವನ್ನು ಕಾಯಿದೆಬದ್ಧವಾಗಿ ಈ ಕೆಳಗಿನ ಕಾರಣಗಳಿಂದ ಮಾಡಿಸಬಹುದಾಗಿದೆ:


  1. ಗರ್ಭ ನಿಲ್ಲುವುದರಿಂದ ತಾಯಿಯ ಜೀವಕ್ಕೆ ಅಪಾಯ ಒದಗಬಹುದಾದ ಸಂದರ್ಭಗಳಲ್ಲಿ. ಉದಾಹರಣೆಗೆ, ತಾಯಿಯಾಗಲಿರುವವಳು ಹೃದಯ ಅಥವಾ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದಾಗ ಅಥವಾ ಸ್ತನ ಅಥವಾ ಗುಪ್ತಾಂಗಗಳ ಕ್ಯಾನ್ಸರ್ ಮೊದಲಾದ ರೋಗಗಳಿಗೆ ತುತ್ತಾದಾಗ.
  2. ವಿಕೃತ ಮಗುವಿನ ಜನನದ ಸಂಶಯವಿದ್ದಾಗ, ದೈಹಿಕವಾಗಿ ಅಥವಾ ಮಾನಸಿಕವಾಗಿ ವಿಕೃತಗೊಂಡ ಗರ್ಭ ಬೆಳೆವಣಿಗೆಯಲ್ಲಿದೆಯೆಂಬ ಸಂಶಯಕ್ಕೆ ಕಾರಣವಿದ್ದಲ್ಲಿ, ಅಂದರೆ ಗುಹ್ಯರೋಗಗಳು, ಮಾರಕ ಅಥವಾ ಮಾದಕ ಔಷಧ ಸೇವನೆ ಮುಂತಾದ ಸಂದರ್ಭಗಳಲ್ಲಿ ಇಂಥ ಸಂಶಯಕ್ಕೆ ಕಾರಣವಿದೆ. ವಿಕಿರಣಪಟುತ್ವದಿಂದ ಭ್ರೂಣ ಘಾಸಿಗೊಂಡಾಗ ಸಹ ಗರ್ಭಪಾತ ಮಾಡಿಸಬಹುದು.
  3. ಅತ್ಯಾಚಾರಕ್ಕೆ ಬಲಿಯಾಗಿ ಗರ್ಭ ನಿಂತ ಸಂದರ್ಭಗಳಲ್ಲಿ ಗರ್ಭಪಾತ ಮಾಡಿಸಬಹುದಾಗಿದೆ.
  4. ಸಾಮಾಜಿಕ ಇಲ್ಲವೇ ಇತರ ಕಾರಣಗಳು.


ಅವಿವಾಹಿತ ಕನ್ಯೆ, ವಿಧವೆ ಮೊದಲಾದವರು ಗರ್ಭವತಿಯರಾದಲ್ಲಿ ಅಥವಾ ಮಕ್ಕಳ ಸಂಖ್ಯೆ ಅತಿಯಾಗಿದ್ದಲ್ಲಿ ಗರ್ಭಪಾತವನ್ನು ಕಾನೂನು ಒಪ್ಪುತ್ತದೆ. ಆದರೆ ಇಂಥ ಪ್ರಸಂಗದಲ್ಲಿ ಅವರವರ ಸಾಮಾಜಿಕ ಸ್ಥಾನಮಾನ, ತಾಯಿಯಾಗಲಿರುವವಳ ವಯಸ್ಸು, ಮಕ್ಕಳ ಸಂಖ್ಯೆ, ಕುಟುಂಬದ ವರಮಾನ ಮುಂತಾದವುಗಳನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು. ಗರ್ಭ ಧರಿಸಿದ 12 ವಾರಗಳಲ್ಲಿ (ಮೂರು ತಿಂಗಳು) ಯಾವುದೇ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟಿಶನರ್ ಅಥವಾ ಸ್ತ್ರೀ ರೋಗ ತಜ್ಞ ವೈದ್ಯರು ಗರ್ಭಪಾತವನ್ನು ಮಾಡಿಸಬಹುದಾಗಿದೆ. ಆದರೆ 12 ವಾರಗಳ ಅನಂತರ 20 ವಾರದೊಳಗೆ ಗರ್ಭಪಾತ ಮಾಡಿಸುವ ಬಗ್ಗೆ ಇಂಥ ಇಬ್ಬರು ಡಾಕ್ಟರರ ಒಮ್ಮತದ ನಿರ್ಣಯ ಅವಶ್ಯ. ಜನನ ನಿಯಂತ್ರಣದ ಕೃತ್ರಿಮ ಸಾಧನಗಳ ದೋಷದಿಂದಾದ ಗರ್ಭವನ್ನು ತೆಗೆಯಿಸಲೂ ಕೂಡ ಕಾನೂನು ಅವಕಾಶ ಮಾಡಿಕೊಡುವುದು. ಗರ್ಭಪಾತವನ್ನು ಸರ್ಕಾರ ನಿಗದಿ ಮಾಡಿದ ಆಸ್ಪತ್ರೆಗಳಲ್ಲಿಯೇ ಮಾಡಿಸಬೇಕು. ಈ ಬಗ್ಗೆ ದಾಖಲೆಯಿಡತಕ್ಕದ್ದು. ಗರ್ಭಪಾತ ಮಾಡಿಕೊಳ್ಳುವವಳು ಹುಚ್ಚಿ ಇಲ್ಲವೇ ಅಪ್ರಾಯಸ್ಥಳು ಇದ್ದ ಸಂದರ್ಭವನ್ನು ಹೊರತುಪಡಿಸಿ ಗರ್ಭಪಾತ ಮಾಡಿಕೊಳ್ಳುವ ಬಗ್ಗೆ ಅಂತಿಮ ನಿರ್ಣಯವನ್ನು ಮಾಡಿಸಿಕೊಳ್ಳುವ ಹೆಂಗಸೇ ನಿರ್ಧರಿಸತಕ್ಕದ್ದು. ಪ್ರಾಮಾಣಿಕವಾಗಿ ಸದುದ್ದೇಶದಿಂದ ಮಾಡಿದ ಗರ್ಭಪಾತ ಕ್ರಿಯೆಗೆ ವೈದ್ಯರ ವಿರುದ್ಧ ನಷ್ಟ ವಗೈರೆ ಬಗ್ಗೆ ಕಾನೂನುಕ್ರಮ ಕೈಗೊಳ್ಳದಂತೆ ಅವರಿಗೆ ಕಾಯ್ದೆಯ ರಕ್ಷಣೆಯಿದೆ.