ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೇಬಲ್, (ವಿಲಿಯಂ) ಕ್ಲಾರ್ಕ್

ವಿಕಿಸೋರ್ಸ್ದಿಂದ
ಗೇಬಲ್, (ವಿಲಿಯಂ) ಕ್ಲಾರ್ಕ್

1901-60. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಸಿನಿಮಾ ಪ್ರಪಂಚದಲ್ಲಿ ಮೆರೆದು ನಟಸಾರ್ವಭೌಮನೆಂದೆನಿಸಿಕೊಂಡ ಖ್ಯಾತ ನಟ. ಆಂಟೇರಿಯೋ ರಾಜ್ಯದ ಕ್ಯಾಡಿಜ಼್‌‍ನಲ್ಲಿ ಜನಿಸಿದ. ಈತನ ತಂದೆ ವಿಲಿಯಂ ಎಚ್. ಗೇಬಲ್ ಒಬ್ಬ ಎಣ್ಣೆಬಾವಿ ಕೆಲಸಗಾರನಾಗಿದ್ದ. ಗೇಬಲ್ ಚಿಕ್ಕವನಿದ್ದಾಗ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದನಷ್ಟೆ. ಅನಂತರ ಎಡ್ ಲಿಲ್ಲೀ ಷೇರು ಕಂಪನಿಯಲ್ಲಿ ಕೆಲ ಕಾಲ ಕೆಲಸದಲ್ಲಿದ್ದ. ಆಗಾಗ್ಗೆ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಈತ ವಹಿಸುತ್ತಿದ್ದ. 1924ಕ್ಕೆ ಮೊದಲು ಕೆಲವು ಮೂಕ ಚಲನಚಿತ್ರಗಳಲ್ಲಿ ಪಾತ್ರ ವಹಿಸಲು ಆರಂಭಿಸಿ ಕ್ರಮೇಣ ಸುಧಾರಿತ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸತೊಡಗಿದ. 1928ರಲ್ಲಿ ಮ್ಯಾಕಿನಲ್ ಎಂಬ ಚಿತ್ರದಲ್ಲಿ ಈತನಿಗೆ ಒಂದು ಮುಖ್ಯ ಪಾತ್ರವನ್ನು ಕೊಡಲಾಯಿತು. ಈತನ ಮೊದಲ ಪತ್ನಿ (ಮದುವೆಯಾದದ್ದು 1924ರಲ್ಲಿ) ಜೋಸಫೀನ್ ಡಿಲ್ಲಾನ್ ಎಂಬುವಳು ಆ ಪ್ರಮುಖ ಪಾತ್ರ ವಹಿಸಲು ಈತನಿಗೆ ಬಹುವಾಗಿ ನೆರವಾದಳು. ಅನಂತರ ಹಾಲಿವುಡ್ಡಿಗೆ ಬಂದು ಅಲ್ಲಿ ಹೆಚ್ಚು ಕಡಿಮೆ ಎಲ್ಲ ಪ್ರಮುಖ ಚಿತ್ರಗಳಲ್ಲೂ ಪಾತ್ರ ವಹಿಸತೊಡಗಿದ. 1931ರಲ್ಲಿ ತೆರೆಕಂಡ ಕ್ಲ್ಯಾರೆನ್ಸ್‌ ಬ್ರೌನ್ ತಯಾರಿಸಿದ ಎ ಫ್ರೀ ಸೋಲ್ ಎಂಬ ಚಿತ್ರದಲ್ಲಿ ಈತನ ದರೋಡೆಕಾರನ ಪಾತ್ರ ಜನರ ಮೆಚ್ಚುಗೆ ಗಳಿಸಿತು. ಖ್ಯಾತ ಚಲನಚಿತ್ರ ನಿರ್ಮಾಪಕ ಸಂಸ್ಥೆ ಎನಿಸಿದ ಮೆಟ್ರೋ-ಗೋಲ್ಡ್‌ವಿನ್-ಮೇಯರ್ ಸ್ಟುಡಿಯೋದಲ್ಲಿ 1931-1954 ರವರೆಗೆ ಇದ್ದು ಅಲ್ಲಿ ತಯಾರಾಗುತ್ತಿದ್ದ ಬಹುತೇಕ ಚಿತ್ರಗಳಲ್ಲಿ ಪಾತ್ರ ವಹಿಸಿದ. ಈತನನ್ನು ಅಲ್ಲಿನ ಸಿನಿಪ್ರೇಮಿಗಳು ತಮ್ಮ ಆರಾಧ್ಯದೈವವೆಂದೇ ಪರಿಗಣಿಸಿದ್ದರು. ಈತನ ಪಾತ್ರಗಳಲ್ಲಿ ಪೌರುಷ, ಹಠಮಾರಿತನ, ಗಂಡುಗಲಿತನಗಳು ಕಂಡುಬರುತ್ತಿದ್ದು ಜನ ಈತನನ್ನು ಒರಟು ಸ್ವಭಾವದವನೆಂದು ಕರೆದರೂ ಗೇಬಲ್ ತನ್ನಲ್ಲಿದ್ದ ಆ ಆಕರ್ಷಣೀಯ ದೇಹ ಸೌಂದರ್ಯವನ್ನು ಎಂದೂ ಕಳೆದುಕೊಳ್ಳಲಿಲ್ಲ. ತನ್ನ ಮೂರನೆಯ ಪತ್ನಿ ಕ್ಯಾರಲ್ ಲಂಬಾರ್ಡ್ ತೀರಿಕೊಂಡ ಅನಂತರ ಅಮೆರಿಕ ಸಂಯುಕ್ತಸಂಸ್ಥಾನದ ವಾಯುಪಡೆಗೆ ಸೇರಿದ. ಆಗ ಎರಡನೆಯ ಮಹಾಯುದ್ಧದ ಸಮಯ. ಬಾಂಬು ಎಸೆತದ ವಿಮಾನ ಕಾರ್ಯಾಚರಣೆಗಳಲ್ಲಿ ಅತ್ಯದ್ಭುತ ಕೌಶಲವನ್ನು ಪ್ರದರ್ಶಿಸಿದ್ದರಿಂತ ಈತನಿಗೆ ವಾಯುಸೇನಾ ಪದಕವನ್ನೀಯಲಾಯಿತಲ್ಲದೆ ಈತನನ್ನು ಮೇಜರ್ ದರ್ಜೆಗೂ ಏರಿಸಲಾಯಿತು. ಈತನ ಐದನೆಯ ಪತ್ನಿ ಕೇ ವಿಲಿಯಂಸ್ ಸ್ಪ್ರೆಕ್ಕೆಲ್ಸ್‌ ತನ್ನ ಪತಿಯ ಮರಣದ ನಾಲ್ಕು ತಿಂಗಳಿನ ಅನಂತರ ಒಂದು ಗಂಡು ಮಗುವಿಗೆ ಜನ್ಮವಿತ್ತಳು.


ಜನಪ್ರಿಯ ಸಿನಿಮಾತಾರೆಯರಾದ ಗ್ರೀಟ ಗಾರ್ಬೋ, ಜೋನ್ ಕ್ರಾಫರ್ಡ್, ನಾರ್ಮ ಷಿಯರರ್, ಮರ್ನ ಲಾಯ್ ಮುಂತಾದವರೊಡನೆ ಗೇಬಲ್ ಪಾತ್ರವಹಿಸಿದ್ದಾನೆ. ಇವುಗಳಲ್ಲೆಲ್ಲ ಜೀನ್ ಹಾರ್ಲೋಳೊಡನೆ ಈತ ನಟಿಸಿದ ಪಾತ್ರ ಜನಪ್ರಶಂಸೆಗಳಿಸಿತು. ಇವರೀರ್ವರೂ ಒಟ್ಟುಗೂಡಿ ಆರು ಚಿತ್ರಗಳಲ್ಲಿ ಪಾತ್ರವಹಿಸಿದರು. ಫ್ರಾಂಕ್ ಕಾಪ್ರಾ ತಯಾರಿಸಿದ ಇಟ್ ಹ್ಯಾಪನ್ಡ್‌ ಒನ್ ನೈಟ್ ಎಂಬ ಚಲನಚಿತ್ರದಲ್ಲಿನ ಈತನ ಪಾತ್ರಕ್ಕೆ ಅಕೆಡಮಿ ಪ್ರಶಸ್ತಿ ದೊರೆತಿದೆ (1934).


ಫ್ರಾಂಕ್ ಲಾಯ್ಡ್‌ನ ಮ್ಯೂಟಿನಿ ಆನ್ ದಿ ಬೌಂಟಿ (1935), ವಿಲಿಯಂ ಎಸ್. ವ್ಯಾನ್ಡೈಕ್ನ ಸ್ಯಾನ್ ಫ್ರಾನ್ಸಿಸ್ಕೋ (1936), ಜಾನ್ ಎಂ. ಸ್ಟಾಹ್ಲ್‌ನ ಪಾರ್ನೆಲ್ (1937); ಟೆಸ್ಟ್‌ ಪೈಲಟ್ (1938) ಮತ್ತು ವಿಕ್ಟರ್ ಫ್ಲೆಮಿಂಗನ ಗಾನ್ ವಿತ್ ದಿ ವಿಂಡ್ (1939) - ಮುಂತಾದವು ಈತನಿಗೆ ಹೆಸರು ತಂದ ಚಲನಚಿತ್ರಗಳು. ಆರ್ಥರ್ ಮಿಲ್ಲರನ ದಿ ಮಿಸ್ಫಿಟ್ಸ್‌ (1960) ಈತನ ಕಡೆಯ ಚಿತ್ರ. ಈತ ಹಾಲಿವುಡ್ಡಿನಲ್ಲಿ ಹೃದಯಾಘಾತದಿಂದ ನಿಧನನಾದ.