ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಠಿ ಎಸ್ ಆರ್

ವಿಕಿಸೋರ್ಸ್ದಿಂದ

ಕಂಠಿ, ಎಸ್.ಆರ್ : 1908-69. ಕರ್ನಾಟಕದ ಮಾಜಿ ಮುಖ್ಯಮಂತ್ರಿ (1962). ಬಾಗಲಕೋಟೆ ತಾಲ್ಲೂಕಿನ ಕೆರೂರಿನಲ್ಲಿ 1908 ಡಿಸೆಂಬರ್ 21ರಂದು ಜನಿಸಿದರು. ಧಾರವಾಡದ ಕರ್ನಾಟಕ ಕಾಲೇಜು, ಕೊಲ್ಲಾಪುರದ ರಾಜಾರಾಮ್ ಕಾಲೇಜು ಮತ್ತು ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಇವರು ಬಾಗಲಕೋಟೆಯಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು (1935). ಹರಿಜನರ, ರೈತರ ಮತ್ತು ನೇಕಾರರ ಏಳ್ಗೆಗಾಗಿ ಶ್ರಮಿಸಿದರು. 1939ರಲ್ಲಿ ಕೆ.ಪಿ.ಸಿ.ಸಿ. ಮತ್ತು ಎ.ಐ.ಸಿ.ಸಿಗಳಿಗೆ ಸದಸ್ಯರಾಗಿ ಆಯ್ಕೆಯಾದರು. 1940-41ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಸತ್ಯಾಗ್ರಹ ವ್ಯವಸ್ಥೆ ಮಾಡಿ 10 ತಿಂಗಳ ಸೆರೆಮನೆವಾಸ ಅನುಭವಿಸಿದರು. 1942ರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮತ್ತೊಮ್ಮೆ ಸೆರೆಯಾಗಿ ಅದೇ ವರ್ಷ ಬಿಡುಗಡೆ ಹೊಂದಿದರು. ಅನಂತರ ಮುಂಬಯಿ ಸ್ಥಳೀಯ ಆಹಾರ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿದ್ದುಕೊಂಡು ಕ್ಷಾಮ ಪರಿಹಾರ ಸಮಿತಿಯ ಪರವಾಗಿ ಕ್ಷಾಮಪೀಡಿತ ಪ್ರದೇಶಗಳಿಗೆ ಊಟ, ಬಟ್ಟೆ ಇತ್ಯಾದಿ ಸರಬರಾಜು ಮಾಡುವ ಸಾರ್ವಜನಿಕ ಸೇವೆಯಲ್ಲಿ ಪ್ರವೃತ್ತರಾದರು. 1946ರಲ್ಲಿ ಬಿಜಾಪುರ ಜಿಲ್ಲೆಯ ರೈತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತರ ಅಂದಿನ ಮುಂಬಯಿ ಮಂತ್ರಿ ಮಂಡಲದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡು 6 ವರ್ಷಗಳ ಕಾಲ ಸೇವೆಸಲ್ಲಿಸಿದರು (1946-52). ಆಗ ಸುಮಾರು ಎರಡು ವರ್ಷಗಳ ಕಾಲ ಹಣಕಾಸಿನ ಶಾಖೆಯನ್ನು ಹಾಗೂ ಮೂರು ವರ್ಷಗಳ ಕಾಲ ವ್ಯವಸಾಯ, ಅರಣ್ಯ ಮತ್ತು ಸಹಕಾರ ಇಲಾಖೆಗಳ ಅದಿsಕಾರವನ್ನು ವಹಿಸಿಕೊಂಡಿದ್ದರು. 1952-56ರ ವರೆಗೆ ಮುಂಬಯಿ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ ರಾಜ್ಯದ ನಿರ್ಮಾಣದ ಬಗ್ಗೆ ವಿಷಯ ಸಂಗ್ರಹಿಸಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ರಚಿಸಿದ ಸಮಿತಿಗೆ ಇವರನ್ನು ಕಾರ್ಯದರ್ಶಿಯಾಗಿ ನೇಮಿಸಿತ್ತು. ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ 1956ರಲ್ಲಿ ಮೈಸೂರು ವಿಧಾನ ಸಭೆಯ ಅಧ್ಯಕ್ಷರಾದ ಕಂಠಿಯವರು ಸುಮಾರು 6 ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. 1961ರಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂಸದೀಯ ನಿಯೋಗಕ್ಕೆ ಇವರು ಮುಖ್ಯಸ್ಥರಾಗಿದ್ದರು. ಮೂರನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು 1962 ಮಾರ್ಚ್ 9ರಿಂದ 1962 ಜುಲೈ 20ರವರೆಗೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅನಂತರ 1962 ಜುಲೈ 21ರಂದು ವಿದ್ಯಾಮಂತ್ರಿಯಾಗಿ ನೇಮಕಗೊಂಡರು. ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಇವರು ವಿದ್ಯಾಮಂತ್ರಿಯಾಗಿದ್ದಾಗ. ನಾಲ್ಕನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಆಯ್ಕೆಯಾಗಿ 1967 ಮಾರ್ಚ್ 14ರಿಂದ 1968 ಏಪ್ರಿಲ್ 29ರವರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿಯಾಗಿದ್ದರು. ಇವರು ಕೆಲಕಾಲ ಕರ್ನಾಟಕ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷರೂ ಮೈಸೂರು ಪ್ರದೇಶದ ಭಾರತ ಸೇವಕ ಸಮಾಜದ ಅಧ್ಯಕ್ಷರೂ ಆಗಿದ್ದರು. 1959ರಲ್ಲಿ ಲಂಡನಿನಲ್ಲಿ ನಡೆದ ಕಾಮನ್ವೆಲ್ತ್‌ ಸಂಸದೀಯ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ಇವರನ್ನು ತನ್ನ ಪ್ರತಿನಿದಿsಯನ್ನಾಗಿ ಕಳಿಸಿತ್ತು. ಆ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಇವರು ನೋಟ್ಸ್‌ ಆನ್ ದಿ ಪಾರ್ಲಿಮೆಂಟರಿ ಕೋರ್ಸ್ ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ.

ಕರ್ನಾಟಕದ ಏಳಿಗೆಗೆ ಅಪಾರವಾಗಿ ಶ್ರಮಿಸಿದ ಕಂಠಿಯವರು ರಾಜ್ಯ ವಿಧಾನ ಸಭೆಯ ಸದಸ್ಯರಾಗಿರುವಾಗಲೇ, 1969 ಡಿಸೆಂಬರ್ 25ರಂದು ನಿಧನ ಹೊಂದಿದರು. (ಟಿ.ಇ.ಎಚ್.)