ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಾಲದಾಸ

ವಿಕಿಸೋರ್ಸ್ದಿಂದ

ಗೋಪಾಲದಾಸ - ಕನ್ನಡ ನಾಡಿನ ಹರಿದಾಸರಲ್ಲಿ ಅಗ್ರಗಣ್ಯ; ವಿಜಯ ದಾಸನ ಶಿಷ್ಯ. `ಭಕ್ತಿಯಲ್ಲಿ ಭಾಗಣ್ಣ ಎಂಬ ಸ್ತುತಿಗೆ ಪಾತ್ರನಾದವ. ಕಾಲ ಹದಿನೆಂಟನೆಯ ಶತಮಾನ. ಹರಿದಾಸರ ಪೀಳಿಗೆಯನ್ನು ನಿರೂಪಿಸುವಲ್ಲಿ ಪುರಂದರ ದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರುಗಳನ್ನು ಒಟ್ಟಿಗೆ ದಾಸ ಚತುಷ್ಟಯರೆಂದು ನಿರ್ದೇಶಿಸುವ ಸಂಪ್ರದಾಯ ಉಂಟು. ಗೋಪಾಲದಾಸ ಹುಟ್ಟಿದ್ದು ಈಗಿನ ಆಂಧ್ರ ಪ್ರದೇಶಕ್ಕೆ ಸೇರಿದ ಗದ್ವಾಲಿಗೆ ಸಮೀಪದಲ್ಲಿರುವ ಮೊಸರು ಕಲ್ಲು ಎಂಬಲ್ಲಿ. ಈತ ಹುಟ್ಟಿದ ಕೆಲವು ವರ್ಷಗಳಲ್ಲಿ ತಂದೆ ಕಾಲವಾದುದರಿಂದ ಈತನ ತಾಯಿ ವೆಂಕಮ್ಮ ತನ್ನ ನಾಲ್ವರು ಗಂಡುಮಕ್ಕಳೊಂದಿಗೆ ದಿಕ್ಕಿಲ್ಲದೆ ಸಂಕಾಪುರಕ್ಕೆ ಬಂದು ಅಲ್ಲಿನ ಊರ ಹೊರಗಿದ್ದ ಮಾರುತಿ ದೇವಾಲಯದಲ್ಲಿ ಆಶ್ರಯ ಪಡೆದಳು. ಆಕೆಗೆ ಮಕ್ಕಳನ್ನು ಸಾಕುವುದು ತುಂಬ ಕಷ್ಟವಾಗಿತ್ತು. ಸ್ವಲ್ಪ ವಯಸ್ಸಿಗೆ ಬಂದು ವಿದ್ಯಾವಂತನಾದ, ಗೋಪಾಲದಾಸ ತಾಯಿಯ ಬವಣೆಯನ್ನು ತಪ್ಪಿಸುವ ಉದ್ದೇಶದಿಂದ ಸಂಪಾದಿಸುವ ಮನಸ್ಸು ಮಾಡಿದ. ಗಾಯತ್ರೀ ಮಂತ್ರ ಧ್ಯಾನದಿಂದ ಅಪೂರ್ವ ಸಿದ್ಧಿಯನ್ನು ಪಡೆದು ಭವಿಷ್ಯ ಹೇಳುವುದರಲ್ಲಿ ನಿಷ್ಣಾತನಾದ. ದಿನದಿನಕ್ಕೆ ಈತನ ಬಗ್ಗೆ ಜನಾನುರಾಗ ಹೆಚ್ಚಿತು. ಇದಲ್ಲದೆ ಕವಿತೆ ರಚಿಸುವ ಸಾಮಥ್ರ್ಯವೂ ಈತನಿಗೆ ದೈವ ದತ್ತವಾಗಿ ಲಭಿಸಿತ್ತು. ಮಗನ ಈ ಏಳಿಗೆಯಿಂದ ವೆಂಕಮ್ಮನ ಕಷ್ಟಗಳು ಕ್ರಮಕ್ರಮವಾಗಿ ಕಡಿಮೆಯಾಯಿತಾಗಿ ಆಕೆ ಮಕ್ಕಳೊಂದಿಗೆ ಊರ ಹೊರಗಿನ ಮಾರುತಿ ದೇವಾಲಯದಿಂದ, ಉತ್ತನೂರಿಗೆ ಬಂದು ನೆಲೆಸಿದಳು. ಅಲ್ಲಿನ ವೆಂಕಟೇಶನ ಗುಡಿಯೇಶ್ವರ ಗೋಪಾಲದಾಸನ ಕಾರ್ಯಕ್ಷೇತ್ರವಾಯಿತು. ಹರಿದಾಸರಲ್ಲಿ ಪ್ರಸಿದ್ಧನಾಗಿದ್ದ ವಿಜಯದಾಸನ ಸಂದರ್ಶನ ಗೋಪಾಲದಾಸನಿಗೆ ಲಭ್ಯವಾದದ್ದು ಅಲ್ಲಿಯೇ. ಅವನಿಂದ ಗೋಪಾಲದಾಸ ಗೋಪಾಲವಿಠಲ ಎಂಬ ಅಂಕಿತವನ್ನು ಪಡೆದು, ಹರಿದಾಸ ದೀಕ್ಷೆಯನ್ನು ಕೈಕೊಂಡ. ಅಣ್ಣನ ಈ ದೀಕ್ಷೆಯನ್ನು ಕಂಡು ತಮ್ಮಂದಿರೂ ಆ ಕೈಂಕರ್ಯದಲ್ಲಿಯೇ ತೊಡಗಿ ಕೀರ್ತನೆಗಳನ್ನು ರಚಿಸಿ ಕೃತಾರ್ಥರಾದರು. ವಿಜಯದಾಸನ ಪರಮಾನುಗ್ರಹಕ್ಕೆ ಪಾತ್ರನಾಗಿದ್ದ ಗೋಪಾಲದಾಸ ವಿಖ್ಯಾತನಾದ ಮಾನ್ವಿಯ ಶ್ರೀನಿವಾಸಾಚಾರ್ಯನಿಗೆ (ಜಗನ್ನಾಥದಾಸ) ತನ್ನ ಆಯಸ್ಸಿನ ಸ್ವಲ್ಪ ಅವಧಿಯನ್ನು ದಾನ ಮಾಡಿ, ಆತ ಹರಿದಾಸ ದೀಕ್ಷೆಯಲ್ಲಿ ನಿರತನಾಗುವಂತೆ ಮಾಡಿದ ಸಂಗತಿಯಂತೂ ಅಸದೃಶ್ಯವೂ ಆಶ್ಚರ್ಯಕರವೂ ಆದುದು. ಹೀಗೆಯೇ ಗೋಪಾಲದಾಸ ತನ್ನ ತಮ್ಮಂದಿರೊಂದಿಗೆ ಕೂಡಿ ಆಶುಕವಿತೆಯಲ್ಲಿ ಜಯಪ್ರದನಾಗಿ ಉತ್ತರಾದಿ ಮಠದ ಶ್ರೀಗಳವರಾದ ಸತ್ಯಭೋಧತೀರ್ಥರ ಅನುಗ್ರಹವನ್ನು ಸಂಪಾದಿಸಿದ ಘಟನೆ ಉಲ್ಲೇಖನಾರ್ಹವಾದುದು. ಐಜಿ ವೆಂಕಟರಾಮಾಚಾರ್ಯ ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಗೋಪಾಲದಾಸನ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಪ್ರಮುಖರು. ಗೋಪಾಲದಾಸ ಕೀರ್ತನಕಾರನಾಗಿದ್ದದ್ದಂತೆಯೇ ಕುಶಲಿಯಾದ ಚಿತ್ರಕಾರನೂ ಆಗಿದ್ದ. ಆ ಕಲೆಯನ್ನು ತನ್ನ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಒಂದು ಸಾಧನವನ್ನಾಗಿ ಬಳಸಿಕೊಂಡ. ಈತನಿಂದ ರಚಿತವಾದ ಎಷ್ಟೋ ಚಿತ್ರಪಟಗಳನ್ನು ಭಕ್ತರು ಪೂಜಿಸಿ, ತಮ್ಮ ಇಷ್ಟಾರ್ಥವನ್ನು ಪಡೆದರೆಂದು ತಿಳಿದುಬರುತ್ತದೆ.

ಗೋಪಾಲದಾಸ ರಚಿಸಿರುವ ಧನ್ವಂತ್ರಿಸ್ತುತಿ, ಪಂಡರಾಪುರದ ಪಾಂಡುರಂಗನ ದರ್ಶನವಿತ್ತ ಸಂದರ್ಭವನ್ನು ಕುರಿತ ಒಂದು ಸುಳಾದಿ, ಕರ್ತೃವಿನ ಅಂತರಂಗದ ಅಭೀಷ್ಟ ಮತ್ತು ಆಧ್ಯಾತ್ಮಿಕ ಪ್ರಗತಿಗಳನ್ನು ಚಿತ್ರಿಸುವ ಹಲವಾರು ರಚನೆಗಳು - ಹರಿದಾಸ ಸಾಹಿತ್ಯದಲ್ಲಿ ತುಂಬ ಮನ್ನಣೆ ಗಳಿಸಿವೆ. (ವಿ.ಜಿ.)