ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜುಲೈ

ವಿಕಿಸೋರ್ಸ್ದಿಂದ

ಜುಲೈ ಕ್ರಿಸ್ತವರ್ಷದ ಏಳನೆಯ ತಿಂಗಳು. ಇದರಲ್ಲಿ 31 ದಿವಸಗಳಿವೆ. ಜೂಲಿಯಸ್ ಸೀಸರನ ಕಾಲಕ್ಕಿಂತ (ಕ್ರಿ.ಪೂ. 100-ಕ್ರಿ.ಪೂ. 44) ಮೊದಲು ಈ ತಿಂಗಳು ವರ್ಷದ ಐದನೆಯ ಮಾಸವಾಗಿ ಪರಿಗಣನೆ ಆಗುತ್ತಿತ್ತು; ಅಂತೆಯೇ ಅಂದಿನ ರೋಮನ್ನರು ಇದನ್ನು ಕ್ವಿಂಟೆಲಿಸ್ ಎಂದು ಕರೆಯುತ್ತಿದ್ದರು. ಜೂಲಿಯಸ್ ಸೀಸರ್ ಈ ತಿಂಗಳಿನಲ್ಲಿ ಹುಟ್ಟಿದುದರಿಂದ ಅವನ ಗೌರವಾರ್ಥ ಮುಂದೆ ಇದನ್ನು ಜುಲೈ ಎಂದು ನಾಮಕರಿಸಲಾಯಿತು. ಇದು ಬಳಕೆಗೆ ಬಂದದ್ದು ಸೀಸರನ ಮರಣದ ವರ್ಷದಲ್ಲಿ. ಆಂಗ್ಲೋ ಸ್ಯಾಕ್ಸನರು ಜುಲೈ ತಿಂಗಳನ್ನು ಹುಲ್ಲಿನ ತಿಂಗಳೆಂದೂ ಹುಲ್ಲುಗಾವಲಿನ ತಿಂಗಳೆಂದೂ ಕರೆದಿದ್ದರು. ಭಾರತೀಯ ಪಂಚಾಂಗದ ಪ್ರಕಾರ ಜ್ಯೇಷ್ಠ-ಆಷಾಢ ಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಬರುತ್ತವೆ. ನವರತ್ನಗಳಲ್ಲಿ ಒಂದಾದ ಕೆಂಪನ್ನು ಜುಲೈ ತಿಂಗಳಿಗೆ ಅನ್ವಯಿಸುವುದು ರೂಢಿ.