ಅಯ್ಯಾ, ವಿರಕ್ತ ವಿರಕ್ತರೆಂದೇನೊ?

ವಿಕಿಸೋರ್ಸ್ದಿಂದ


Pages   (key to Page Status)   

ಅಯ್ಯಾ
ವಿರಕ್ತ ವಿರಕ್ತರೆಂದೇನೊ? ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಕೈಯೊಳಗಣ ಓಲೆ
ಕಂಕುಳೊಳಗಣ ಸಂಪುಟ
ಬಾಯೊಳಗಣ ಮಾತು. ಪುಣ್ಯವಿಲ್ಲ-ಪಾಪವಿಲ್ಲ
ಕರ್ಮವಿಲ್ಲ-ಧರ್ಮವಿಲ್ಲ
ಸತ್ಯವಿಲ್ಲ-ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು. ಅದೆಂತೆಂದಡೆ ಕಂಗಳ ನೋಟ ಹಿಂಗದನ್ನಕ್ಕ
ಕೈಯೊಳಗಣ ಬೆರಟು ನಿಲ್ಲದನ್ನಕ್ಕ
ಹೃದಯದ ಕಾಮ ಉಡುಗದನ್ನಕ್ಕ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಬಲ್ಲ ವಿರಕ್ತನ ಹೃದಯವುದಕದೊಳಗಣ ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೊ? ಕಂಡಾತಂಗೆ ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ
ಕರ್ಣದಲ್ಲಿ ಕೇಳಿದ ಆಗಮ ಪುರಾಣಂಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ ಜಿಹ್ವೆಯಲ್ಲಿ ರುಚಿಸಿದ ಪದಾರ್ಥಗಳು ಆ ಲಿಂಗಕ್ಕರ್ಪಿತ. ಅದೆಂತೆಂದಡೆ ಅಂಗವೂ ಲಿಂಗವೂ ಏಕೀಭವಿಸಿದಡೆ ಅವಂಗೆ ಪುಣ್ಯವಿಲ್ಲ-ಪಾಪವಿಲ್ಲ
ಕರ್ಮವಿಲ್ಲ-ಧರ್ಮವಿಲ್ಲ
ಸತ್ಯವಿಲ್ಲ-ಅಸತ್ಯವಿಲ್ಲ. ಅದೆಂತೆಂದಡೆ: ಬಂದುದ ಲಿಂಗಕ್ಕೆ ಕೊಟ್ಟನಾಗಿ
ಬಾರದುದ ಬಯಸನಾಗಿ. ಅಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ ತಾ ಮಹಾಲಿಂಗವನಪ್ಪುವನಾಗಿ
ಅವಂಗೆ ಮುಖ ಬೇರಲ್ಲದೆ
ಆತ್ಮನೆಲ್ಲಾ ಒಂದೆ. ಅದಕ್ಕೆ ಜಗವು ಪಾಪ ಪುಣ್ಯವೆಂದು ಮಾತನಾಡುತಿಪ್ಪರು. ಅದೆಂತೆಂದಡೆ: ಶಿವಂಗೆ ತಾಯಿಯಿಲ್ಲ
ಭುವನಕ್ಕೆ ಬೆಲೆಯಿಲ್ಲ. ತರು ಗಿರಿ ಗಹ್ವರಕ್ಕೆ ಮನೆಯಿಲ್ಲ. ಲಿಂಗವನೊಡಗೂಡಿದ ವಿರಕ್ತಂಗೆ ಪುಣ್ಯ ಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನಾ.