ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆರಾರ್ಡ್ ಡೊಮಾಕ್

ವಿಕಿಸೋರ್ಸ್ದಿಂದ
ಗೆರಾರ್ಡ್ ಡೊಮಾಕ್

1895-1964. ಜರ್ಮನಿಯ ಜೀವರಸಾಯನ ಮತ್ತು ಸೂಕ್ಷ್ಮವಿಜ್ಞಾನಿ. ಈಗ ಪೋಲೆಂಡಿನಲ್ಲಿರುವ ಬ್ರಾಂಡೆನ್ ಬರ್ಗಿನ ಲ್ಯಾಗೋನಲ್ಲಿ 1895ರ ಅಕ್ಟೋಬರ್ 30ರಂದು ಜನಿಸಿದ. ಸಲ್ಫೊನಮೈಡ್ ಔಷಧಗಳ ಪೈಕಿ ಮೊದಲನೆಯದಾದ ಪ್ರೋಂಟೋಸಿಲ್ಲಿನ ಸೂಕ್ಷ್ಮಜೀವಿ ವಿರುದ್ಧ (ಆ್ಯಂಟಿ ಬ್ಯಾಕ್ಟೀರಿಯಲ್) ಗುಣಗಳನ್ನು ಶೋಧಿಸಿದ್ದಕ್ಕಾಗಿ 1936ರಲ್ಲಿ ಈತನಿಗೆ ವೈದ್ಯ ಹಾಗೂ ಶರೀರಕ್ರಿಯಾವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಕ ಲಭಿಸಿತು. ಆದರೆ ಹಿಟ್ಲರ್ ಪ್ರಭಾವದಲ್ಲಿದ್ದ ಜರ್ಮನಿಯ ಈ ಪೌರನಿಗೆ ಅದನ್ನು ಸ್ವೀಕರಿಸಲು ಅನುಮತಿ ದೊರೆಯಲಿಲ್ಲ. ಹಿಟ್ಲರನ ಮರಣಾನಂತರ, 1947ರಲ್ಲಿ, ಡೊಮಾಖ್ ಸ್ವೀಡನ್ನಿಗೆ ತೆರಳಿ ನೊಬಲ್ ಪಾರಿತೋಷಕ ಪಡೆದ. ಆದರೆ, ಬಹುಮಾನದ ಹಣ ಮಾತ್ರ ದೊರೆಯಲಿಲ್ಲ.


ಡೊಮಾಕ್ನ ವಿದ್ಯಾರಂಭದ ವೇಳೆ ಒಂದನೆಯ ಮಹಾಯುದ್ಧ ನಡೆಯುತ್ತಿದ್ದುದರಿಂದ ಈತನ ಅಧ್ಯಯನಕ್ಕೆ ತೊಂದರೆ ಉಂಟಾಯಿತು. ಸಮರಾನಂತರ ವಿದ್ಯಾಭ್ಯಾಸವನ್ನು ಮುಂದುವರಿಸಿ ಆಮೇಲೆ 1921ರಲ್ಲಿ ವೈದ್ಯಶಾಸ್ತ್ರದಲ್ಲಿ ತರಬೇತಿ ಹೊಂದಿ ಪದವಿ ಪಡೆದ. 1924ರಲ್ಲಿ ಇವನು ಗ್ರೀ‌‍ಫ್ಸ್ ‌‌ಪಾಲ್ಡ್‌ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿದ. ಕೆಲವು ವರ್ಷಗಳ ಬಳಿಕ ಮುನ್ಸ್‌ಟರ್ನ ರೋಗವಿಜ್ಞಾನ ಸಂಸ್ಥೆಯಲ್ಲಿ ಹುದ್ದೆ ಸಿಕ್ಕಿತು. ಈ ಸಂಸ್ಥೆಯಲ್ಲಿಯೇ 1928ರಲ್ಲಿ ಸಾಮಾನ್ಯ ರೋಗವಿಜ್ಞಾನಶಾಸ್ತ್ರದ (ಜನರಲ್ ಪ್ಯಾಥಾಲಜಿ) ಮತ್ತು ರೋಗಶಾಸ್ತ್ರೀಯ ಅಂಗರಚನಾ ವಿಜ್ಞಾನದ (ಪ್ಯಾಥಲಾಜಿಕಲ್ ಅನಾಟಮಿ) ಪ್ರಾಧ್ಯಾಪಕನಾಗಿ ನೇಮಕಗೊಂಡ. ಉಪ್ಪೆರ್ಟಾಲ್-ಎಲ್ಬರ್ಫೆಲ್ಡ್‌ನಲ್ಲಿನ ಬೇಯರ್ ಕಂಪನಿಯ ಬಣ್ಣದ ಕೈಗಾರಿಕೆಯ ಪ್ರಯೋಗ ಶಾಲೆಯಲ್ಲಿ ಸಂಶೋಧನೆಯ ನಿರ್ದೇಶಕ ನಾಗಿರಲು ಆಹ್ವಾನ ಬಂದಾಗ (1927) ಒಪ್ಪಿಕೊಂಡ. ಇಲ್ಲಿ ಡೊಮಾಕನು ಸಹೋದ್ಯೋಗಿ ಗಳಾದ ಫ್ರಿಟ್ಚ್‌ ಮಿಶ್ಚ್‌ ಮತ್ತು ಜೋಸೆಫ್ ಕ್ಲಾರರ್ ಎಂಬವರ ಜೊತೆಯಲ್ಲಿ ಹೊಸ ಬಣ್ಣಗಳ ತಯಾರಿಕೆಗೆ ಕ್ರಮ ಬದ್ಧವಾಗಿ ಸಂಶೋಧನೆ ಮಾಡಿ ಹಲವಾರು ನೂತನ ಆಜೋಸಂಯುಕ್ತಗಳನ್ನು ಸಂಶ್ಲೇಷಿಸಿದ. ಇವುಗಳ ವೈದ್ಯಕೀಯ ಗುಣಗಳನ್ನು ಕೂಡ ಪರಿಶೀಲಿಸಲಾಯಿತು. ಈ ಅನ್ವೇಷಣೆಯಲ್ಲಿದ್ದಾಗಲೇ ಪ್ರೋಂಟೋಸಿಲ್ ರೆಡ್ ಎನ್ನುವ ಬಣ್ಣವೊಂದು (ಸಲ್ಫೊನೊಮೈಡ್ ಗುಂಪಿಗೆ ಸೇರಿದ್ದು) ಇಲಿಗಳಲ್ಲಿರುವ ಸೋಂಕುಗಳ ಮೇಲೆ ನಿರ್ದಿಷ್ಟವಾದ ಪರಿಣಾಮವನ್ನು ಉಂಟುಮಾಡುತ್ತದೆಂದು ಆತ ಕಂಡುಹಿಡಿದ. ಆಮೇಲೆ ಇದನ್ನು ವೈದ್ಯಕೀಯ ವೃತ್ತಿಯಲ್ಲಿಯೂ ಬಳಸಲಾಯಿತು. ಅದೇ ವೇಳೆ ಸ್ವತಃ ಡೊಮಾಕನ ಮಗಳು ಚುಚ್ಚುಮದ್ದಿನ ಪರಣಾಮವಾಗಿ ತೀವ್ರ ಸ್ಟ್ರೆಪ್ಟೋಕಾಕಸ್ ಸೋಂಕಿನಿಂದ ನರಳುತ್ತಿದ್ದಳು. ಡೊಮಾಕ್ ಈ ಹೊಸ ಔಷಧಿಯನ್ನು ಆಕೆಯ ಮೇಲೆ ಪ್ರಯೋಗಿಸಿ ಅವಳನ್ನು ಗುಣಮುಖ ಮಾಡಿದ. ಔಷಧಿಯ ಈ ವಿನೂತನ ಗುಣವನ್ನು ಅವನು 1932ರಲ್ಲಿ ಪ್ರಕಟಿಸಿದ. ಅಂದಿನಿಂದಲೇ ವೈದ್ಯಶಾಸ್ತ್ರದಲ್ಲಿ ರಸಚಿಕಿತ್ಸಕ (ಕೆಮೊತೆರಪ್ಯಾಟಿಕ್) ವಸ್ತುಗಳ ಬಳಕೆಯ ಯುಗ ಆರಂಭವಾಯಿತೆನ್ನಬಹುದು.


ಡೊಮಾಕ್ ತೀವ್ರಸೋಂಕುಗಳ ಚಿಕಿತ್ಸೆ ಮಾಡುವುದಷ್ಟೇ ಅಲ್ಲದೆ ಕ್ಷಯರೋಗ ನಿವಾರಣೆಯ ಮೇಲೂ ಸಂಶೋಧನೆ ನಡೆಸಿದ. 1947ರಿಂದ ಮುಂದಕ್ಕೆ ಅವನು ಕೆಲವು ವರ್ಷ ಏಡಿಗಂತಿ ರೋಗದ ಸಂಶೋಧನೆಗೆ ಸಂಬಂಧಪಟ್ಟ ಒಂದು ವಿಜ್ಞಾನಪತ್ರಿಕೆಯ ಸಂಪಾದಕನೂ ಆಗಿದ್ದ. ಈತ 1964ರ ಏಪ್ರಿಲ್ 24ರಂದು ವುರ್ಟಿಂಗ್ಘ-ಬ್ಯಾಡೆನ್ನಿನ ಬರ್ಬರ್ಗ್ನಲ್ಲಿ ನಿಧನನಾದ.