ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಮಕಸ್ತೂರಿ

ವಿಕಿಸೋರ್ಸ್ದಿಂದ

ಕಾಮಕಸ್ತೂರಿ

 ಲೇಬಿಯೇಟೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಶಾಸ್ತ್ರೀಯ ನಾಮ ಆಸಿಮಮ್ ಬೇಸಿಲಿಕಮ್. ಇಂಗ್ಲಿಷಿನ ಸಾಮಾನ್ಯ ಬಳಕೆಯ ಹೆಸರು ಸ್ವೀಟ್ ಬೇಸಿಲ್. ತುಳಸಿ ಗಿಡದ ಹತ್ತಿರ ಸಂಬಂಧಿಯಾದ ಇದೂ ಪರಿಮಳಯುಕ್ತವಾಗಿದೆ. ಮಧ್ಯ ಏಷ್ಯ ಮತ್ತು ವಾಯವ್ಯ ಭಾರತ ಇದರ ಮೂಲ ಸ್ಥಾನ. ಈಗ ಭಾರತದಾದ್ಯಂತ ಬೆಳೆಯುತ್ತದೆ. ಸುಗಂಧಪೂರಿತ ಎಣ್ಣೆಗಾಗಿ ತೋಟಗಳಲ್ಲಿ ಇದನ್ನು ಬೆಳೆಸುತ್ತಾರೆ. ಗಿಡ ನೆಲದಿಂದ ನೇರವಾಗಿ 30-90 ಸೆಂ ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ; ಆಕಾರ ಈಟಿಯಂತೆ ಅಥವಾ ಅಂಡದಂತೆ; ತುದಿ ಚೂಪು; ಅಂಚು ಗರಗಸದಂತೆ; ರೋಮರಹಿತ. ಹೂಗಳು ಬಿಳಿ ಅಥವಾ ತಿಳಿ ಊದಾಬಣ್ಣದವು. ಸರಳವಾದ ಅಥವಾ ಕವಲೊಡೆದ ಅಂತ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. 4 ಪುಷ್ಪಪತ್ರಗಳು ಕೂಡಿಕೊಂಡು ಆಗಿರುವ ಪುಷ್ಪಪಾತ್ರೆ 2 ತುಟಿಗಳಂತೆ ಭಾಗವಾಗಿದೆ. ಇದರ ಆಕಾರ ಗಂಟೆಯಂತೆ. ಪುಷ್ಪಪಾತ್ರೆ ಹಣ್ಣಿನಲ್ಲೂ ಉಳಿದಿರುತ್ತದೆ. ಪುಷ್ಪದಳ ಸಮೂಹ 4 ದಳಗಳಿಂದ ಕೂಡಿದೆ. ಇದೂ ಕೂಡ 2 ತುಟಿಗಳಂತೆ ಇಬ್ಭಾಗವಾಗಿದೆ. ಕೇಸರಗಳು 4. ಇವುಗಳಲ್ಲಿ 2 ಉಳಿದೆರಡಕ್ಕಿಂತ ದೊಡ್ಡವು. ಅಂಡಾಶಯ ಉಚ್ಚಸ್ಥಾನದ್ದು; 2 ಕಾರ್ಪೆಲುಗಳಿಂದ ಕೂಡಿದೆ. ಫಲ 4 ಭಾಗಗಳಿಂದ ಕೂಡಿದ ವಿಶಿಷ್ಟ ಬಗೆಯದಾಗಿದೆ. ಇದಕ್ಕೆ ನಟ್‍ಲೆಟ್ಸ್ ಗುಂಪು ಎಂದು ಹೆಸರು. ಒಂದೊಂದು ನಟ್‍ಲೆಟಿನಲ್ಲಿಯೂ ಒಂದೊಂದೇ ಬೀಜ ಇದೆ. ಬೀಜವನ್ನು ನೀರಿಗೆ ಹಾಕಿದಾಗ ಉಬ್ಬಿಕೊಂಡು ಒಂದು ಬಗೆಯ ಅರ್ಧ ಪಾರದರ್ಶಕ ವಸ್ತುವಿನಿಂದ ಆವೃತವಾಗುತ್ತದೆ. ಕಾಮಕಸ್ತೂರಿಯಲ್ಲಿ ಗಾತ್ರ, ಬೆಳೆವಣಿಗೆ, ರೋಮರಾಶಿ, ಎಲೆ, ಹೂ, ಕಾಂಡಗಳ ಬಣ್ಣಗಳಲ್ಲಿ ವ್ಯತ್ಯಾಸವನ್ನು ತೋರಿಸುವ ಅನೇಕ ಬಗೆಗಳಿವೆ. ಇವುಗಳಲ್ಲಿ ಬೇಸಿಲಿಕಮ್. ಪೈಲೋಸಮ್, ಮೇಜಸ್, ಡಿಫಾರ್ಮೆ (ಸುರುಳಿ ಎಲೆಯ ಬೇಸಿಲ್), ಪರಿಪ್ಯೂರೆಸೆನ್ಸ್ (ನಸುಕೆಂಪು ಬೇಸಿಲ್) ಮತ್ತು ಗ್ಲಾಬ್ರೇಟಮ್ (ಬಿಳಿ ಬೇಸಿಲ್)-ಎಂಬುವು ಮುಖ್ಯವಾದವು.

 ಬೀಜಗಳಿಂದ ತಳಿ ವೃದ್ಧಿ. ಭಾರತದ ಮೈದಾನ ಪ್ರದೇಶಗಳಲ್ಲಿ ಅಕ್ಟೋಬರ್-ನವಂಬರ್ ತಿಂಗಳುಗಳಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲೂ ಬಿತ್ತನೆ ಮಾಡುತ್ತಾರೆ. ಮೊದಲು ಒಟ್ಲುಪಾತಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಆಮೇಲೆ ಬೇರೆಡೆಗೆ ನಾಟಿ ಹಾಕುತ್ತಾರೆ. ನಾಟಿ ಮಾಡಿದ ಎರಡು ಮೂರು ತಿಂಗಳಲ್ಲಿ ಕೊಯ್ಲು ಮಾಡಬಹುದು. ಗಿಡಗಳನ್ನು ನೆಲಮಟ್ಟಕ್ಕೆ ಕತ್ತರಿಸಿ ಕಂತೆಕಟ್ಟಿ, ಒಣಗಿಸುತ್ತಾರೆ. ಒಣಗಿದ ಎಲೆ ಮತ್ತು ಹೀವಿರುವ ರೆಂಬೆಗಳನ್ನು ಮುಖ್ಯಕಾಂಡದಿಂದ ಬೇರ್ಪಡಿಸಿ ಗಾಳಿಯ ಸಂಪರ್ಕಕ್ಕೆ ಬಾರದಂತೆ ಡಬ್ಬಗಳಲ್ಲಿ ಶೇಖರಿಸಿಡುತ್ತಾರೆ. ಒಂದು ಫಸಲಿನಿಂದ ಹಲವಾರು ಬಾರಿ ಕುಯ್ಲು ಮಾಡಬಹುದು. ಹೆಕ್ಟೇರ್ ಒಂದಕ್ಕೆ ಸುಮಾರು 6800 ಕೆಜಿ ಉತ್ಪನ್ನವಿದೆ.

 ಕಾಮಕಸ್ತೂರಿಗೆ ಲವಂಗದಂಥ ಪರಿಮಳವೂ ಸ್ವಲ್ಪ ಉಪ್ಪಿನಂಥ ರುಚಿಯೂ ಇದೆ. ಎಲೆ ಮತ್ತು ಹೂಗೊಂಚಲುಗಳಿಂದ ಒಂದು ಬಗೆಯ ಸುಗಂಧಪೂರಿತ ಚಂಚಲ ತೈಲವನ್ನು ಇಳಿಸಬಹುದು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಹಳ ಉಪಯೋಗಿಸುತ್ತಾರೆ. ಈ ಎಣ್ಣೆಯ ರಾಸಾಯನಿಕ ಸಂಯೋಜನೆ ಮತ್ತು ಗುಣ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಇದರ ಆಧಾರದ ಮೇಲೆ ಎಣ್ಣೆಯನ್ನು ನಾಲ್ಕು ಮುಖ್ಯ ವಿಧಗಳಾಗಿ ವಿಂಗಡಿಸಬಹುದು: 1 ಐರೋಪ್ಯ ವಿಧ-ಇದರಲ್ಲಿ ಮೀಥೈಲ್ ಚಾವಿಕಾಲ್ ಮತ್ತು ಲಿನಲೂಲ್ ಎಂಬ ವಸ್ತುಗಳಿವೆ. ಇದರ ವಾಸನೆ ಉತ್ಕøಷ್ಟವಾದುದು. ಇದರಿಂದ ಇದಕ್ಕೆ ಬಹಳ ಬೆಲೆ. 2 ರಿಯೂನಿಯನ್ ವಿಧ-ಇದನ್ನು ರಿಯೂನಿಯನ್ ದ್ವೀಪದಲ್ಲಿ ಪ್ರಥಮವಾಗಿ ಬಟ್ಟಿ ಇಳಿಸಲಾಯಿತು. ಈಗ ಮಡಗಾಸ್ಕರ್‍ನಲ್ಲೂ ತಯಾರಿಸುತ್ತಿದ್ದಾರೆ. ಇವುಗಳಲ್ಲಿರುವ ಮುಖ್ಯ ಘಟಕಗಳೆಂದರೆ ಮೀಥೈಲ್ ಚಾವಿಕಾಲ್ ಮತ್ತು ಕರ್ಪೂರ. ಲಿನಲೂಲ್ ಇಲ್ಲ. ಇದು ಯೂರೋಪಿಯನ್ ವಿಧಕ್ಕಿಂತ ಕೆಳದರ್ಜೆಯದು. 3 ಮೀಥೈಲ್ ಸಿನ್ನಮೇಟ್ ಬಗೆ-ಇದರ ಘಟಕಾಂಶಗಳು ಮೀಥೈಲ್ ಚಾವಿಕಾಲ್, ಲಿನನೂಲ್ ಮತ್ತು ಮೀಥೈಲ್ ಸಿನಮೇಟ್. ಬಲ್ಗೇರಿಯ, ಸಿಸಿಲಿ, ಭಾರತ, ಈಜಿಪ್ಟ್‍ಗಳಲ್ಲಿ ಇದನ್ನು ತಯಾರಿಸುತ್ತಾರೆ. 4 ಯೂಜಿನಾಲ್ ಬಗೆ-ಇದರ ಮುಖ್ಯ ಘಟಕ ಯೂಜಿನಾಲ್, ರಷ್ಯ, ಜಾವ ಮತ್ತು ಸಮೋವ ದ್ವೀಪಗಳಲ್ಲಿ ಇದನ್ನು ತಯಾರಿಸುತ್ತಾರೆ.

 ಐರೋಪ್ಯ ಬಗೆಯ ಎಣ್ಣೆಯನ್ನು ಸಿಹಿ ತಿಂಡಿ ತಯಾರಿಕೆಯಲ್ಲಿ, ಚಟ್ನಿ ತಯಾರಿಸುವಾಗ, ಟೊಮ್ಯಾಟೊ ಹಣ್ಣಿನ ಕಣಕದ ಜೊತೆಗೆ, ಉಪ್ಪಿನಕಾಯಿಯೊಂದಿಗೆ, ಮಾಂಸಾಹಾರದಲ್ಲಿ ಮಸಾಲೆಯೊಂದಿಗೆ ರುಚಿ ಮತ್ತು ಸುವಾಸನೆ ಕೊಡಲು ಉಪಯೋಗಿಸುತ್ತಾರೆ. ಮಲ್ಲಿಗೆ ಎಣ್ಣೆ ಜೊತೆ ಮಿಶ್ರಮಾಡಿ ದಂತಧಾವನ ವಸ್ತುಗಳ ತಯಾರಿಕೆಯಲ್ಲಿ ಬಳಸುವುದೂ ಉಂಟು. ರಿಯೂನಿಯನ್ ಬಗೆಯ ಎಣ್ಣೆ ಕೂಡ ಇದೇರೀತಿ ಉಪಯೋಗಿಸಲ್ಪಡುತ್ತದೆ. ಅದಲ್ಲದೆ ಸಾಬೂನು ತಯಾರಿಕೆಯಲ್ಲಿ ಹಾಗೂ ಕೀಟನಾಶಕ ಮತ್ತು ಕೀಟನಿವಾರಕ ಆಗಿ, ಪೂತಿನಾಶಕವಾಗಿ ಉಪಯೋಗಿಸುವುದುಂಟು. ಬೀಜಗಳಿಂದ ತಯಾರಿಸಿದ ಎಣ್ಣೆಗೂ ಈ ಮೇಲಿನ ಔಷಧೀಯ ಗುಣಗಳಿವೆ. ಸಸ್ಯದಿಂದ ತಯಾರಿಸಿದ ಎಣ್ಣೆಯನ್ನು ಹೊಟ್ಟೆನೋವಿನ ನಿವಾರಣೆಗೆ, ಜ್ವರಶಮನಕ್ಕಾಗಿ ಜಂತು ನಿವಾರಣೆಗೆ, ವಾತಹರಣಕ್ಕೆ ಮತ್ತು ಹೆಚ್ಚಿನ ಚೈತನ್ಯಕ್ಕೆ ಉಪಯೋಗಿಸುತ್ತಾರೆ. ನಿದ್ರೆ ಬರಿಸುವ ಗುಣವೂ ಇದಕ್ಕೆ ಇದೆ. ಎಲೆಯ ರಸ ಮತ್ತು ಬೀಜಗಳಿಗೆ ಕಿವಿನೋವನ್ನು ತಡೆಯುವ, ಬಲಾದ ಉಸಿರಾಟಕ್ರಿಯೆಯನ್ನು ಸರಿಯಾಗಿಸುವ, ಗಂಟಲು ತುರಿಕೆಯನ್ನು ನಿಲ್ಲಿಸುವ, ಮಲಬದ್ಧತೆಯನ್ನು ನಿವಾರಿಸುವ ತಂಪುಗೊಸಿಸುವ ಶಕ್ತಿಯೂ ಇದೆ. ಮಿಕ್ಕಂತೆ ಇದರ ಎಲೆ ಕುಡಿಗಳನ್ನು ಹೂವಿನೊಂದಿಗೆ ಕಟ್ಟಿ ಮುಡಿಯುವ ಪದ್ಧತಿ ಭಾರತದಲ್ಲಿ ಬಳಕೆಯಲ್ಲಿದೆ.

(ಎ.ಕೆ.ಕೆ.)