ಪುಟ:Mysore-University-Encyclopaedia-Vol-1-Part-1.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಸ್ತಿಕ್ಯವನ್ನು ಪ್ರತಿಪಾದಿಸುವುದಿಲ್ಲ. ಅದು ನಮಗೆ ತಿಳಿದ ಅಥವಾ ತಿಳಿಯುವಂಥ ವಿಷಯವಲ್ಲ. ಅಲ್ಲದೆ ನಮಗೆ ಈಗ ತಿಳಿದಿಲ್ಲ ಎಂದು ಮಾತ್ರ ಹೇಳುವುದಲ್ಲ, ನಮಗೆ ಎಂದೂ ತಿಳಿಯಲು ಶಕ್ಯವಲ್ಲದ್ದು-ಎಂಬುದೇ ಈ ವಾದದ ತಿರುಳು. ಸಾಧಾರಣವಾಗಿ, ವಿಜ್ಞಾನ ಪರಿಣಿತರು ಈ ವಾದವನ್ನು ಮುಂದಿಡುತ್ತಾರೆ. ಅವರವರ ವಿಜ್ಞಾನದ ಪರಿಮಿತಿಯ ದೃಷ್ಟಿಯಿಂದ ಈಶ್ವರನ ಅಸ್ತಿತ್ವದಂಥ ವಿಷಯವನ್ನು ಕುರಿತು ವಿಜ್ಞಾನವೇನನ್ನೂ ಹೇಳಲಾರದೆಂದು ಇವರ ಅಭಿಮತ. ಅಗ್ನಾಸ್ಟಿಸಿಸಮ್ ಅನ್ನುವ ಶಬ್ದವನ್ನು ಮೊದಲು ಸೃಷ್ಟಿಸಿದವನು ಪ್ರಸಿದ್ಧ ಆಂಗ್ಲ ವೈಜ್ಞಾನಿಕ ಟಿ. ಎಚ್. ಹಕ್ಸ್ಲೆ ಎನ್ನುವವನು. ಹೊಸದಾದರೂ ಈ ಭಾವ ಬಹಳ ಹಳೆಯದು ಎನ್ನುವುದರಲ್ಲಿ ಸಂಶಯವಿಲ್ಲ. ಪಾಶ್ಚಾತ್ಯ ತತ್ತ್ವಜ್ಞಾನದಲ್ಲಿ ಪಾರಮಾರ್ಥಿಕ ತತ್ತ್ವಗಳು ನಮ್ಮ ಪ್ರತ್ಯಕ್ಷ ಅನುಮಾನ ಪ್ರಮಾಣಗಳಿಗೆ ಗೋಚರವಾಗುವುದಿಲ್ಲವೆಂದೂ ಕೇವಲ ತರ್ಕದಿಂದ, ಯುಕ್ತಿಯಿಂದ, ಆತ್ಮ, ಪರಮಾತ್ಮ, ಮೋಕ್ಷ ಇವುಗಳ ಸ್ವರೂಪವನ್ನು ನಿರ್ಣಯಿಸಲು ಸಾಧ್ಯವಿಲ್ಲವೆಂದೂ ವಾದ ಹೂಡಿದವ ಇಮ್ಯಾನ್ಯುಯಲ್ ಕ್ಯಾಂಟ್ ಎಂಬ ಜರ್ಮನಿಯ ತತ್ತ್ವಶಾಸ್ತ್ರಜ್ಞ. ಹರ್ಬಟ್ ಸ್ಪೆನ್ಸರ್, ಅಗಸ್ಟ ಕ್ಯಾಂಟ್ ಮೊದಲಾದವರು ಈ ವಾದವನ್ನು ಪುಷ್ಟವಾದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ವೇದಾಂತದಲ್ಲಿಯೂ ಈ ವಾದದ ಛಾಯೆ ಇಲ್ಲದಿಲ್ಲ. (ಎಂ.ವೈ.) ಅಜ್ಮಲ್‍ಖಾನ್, ಹಕೀಂ : ೧೮೬೫-೧೯೨೮. ಪ್ರಸಿದ್ಧ ಹಕೀಂ ಮನೆತನವೊಂದರಲ್ಲಿ ಜನಿಸಿ, ವೈದ್ಯದಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿ, ಹಿಂದುಳಿದ ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ, ಉಜ್ಜ್ವಲ ರಾಷ್ಟ್ರಭಕ್ತರಾಗಿ ನಾಡಿನ ಸೇವೆ ಮಾಡಿದ ಮುಸ್ಲಿಂ ನಾಯಕರಲ್ಲಿ ಒಬ್ಬರು. ಇವರು ಯುನಾನಿ ವೈದ್ಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ದೆಹಲಿ ವೈದ್ಯ ಮನೆತನವೊಂದಕ್ಕೆ ಸೇರಿದವರು. ಈ ಮನೆತನದವರೇ ಸ್ಥಾಪಿಸಿ, ಬೆಳೆಸಿಕೊಂಡು ಬಂದಿದ್ದ ತಿಬಿಯಾ ಯುನಾನಿ ವೈದ್ಯ ಶಿಕ್ಷಣಶಾಲೆ ಅಜ್ಮಲ್ ಖಾನರ ಶ್ರಮದ ಫಲವಾಗಿ ಪ್ರೌಢ ವಿದ್ಯಾಸಂಸ್ಥೆಯಾಯಿತು. ಇವರ ಶಿಕ್ಷಣ ನಡೆದದ್ದು ಮನೆಯಲ್ಲಿಯೇ; ಚಿಕ್ಕ ವಯಸ್ಸಿನಲ್ಲಿಯೇ ಅಸಾಧಾರಣ ಪಾಂಡಿತ್ಯ ಗಳಿಸಿದರು. ೧೯೦೪ರಲ್ಲಿ ಪಶ್ಚಿಮ ಏಷ್ಯ ಪ್ರವಾಸಮಾಡಿ, ಎರಡು ಸಲ ಯುರೋಪು ದೇಶಗಳಲ್ಲೂ ಸಂಚರಿಸಿ, ಅಲ್ಲಿನ ವೈದ್ಯಕೀಯ ವಿಧಾನಗಳನ್ನೂ ಅಭ್ಯಾಸಮಾಡಿದರು. ವೈದ್ಯಶಾಸ್ತ್ರದ ಮೇಲೆ ಇವರು ಬರೆದಿರುವ ಗ್ರಂಥಗಳು ಪ್ರಮಾಣ ಗ್ರಂಥಗಳಾಗಿವೆ. ಅಲಿಘರ್‍ನ ಮುಸ್ಲಿಂ ಪ್ರೌಢವಿದ್ಯಾಶಾಲೆಯನ್ನು ಬೆಳೆಸಿ, ಅದು ವಿಶ್ವವಿದ್ಯಾನಿಲಯವಾಗಲು ಶ್ರಮಿಸಿದವರಲ್ಲಿ ಅಜ್ಮಲ್ ಖಾನರೂ ಒಬ್ಬರು. ೧೯೧೮ರ ದೆಹಲಿ ಕಾಂಗ್ರೆಸ್ಸಿನ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಇವರು ಮರು ವರ್ಷವೇ ರಾಜಕೀಯದಕ್ಕೆ ಧುಮುಕಬೇಕಾಯಿತು. ೧೯೧೯ರ ರೌಲತ್ ಕಾನೂನು, ಜಲಿಯನ್‍ವಾಲಾ ಬಾಗ್ ಕಗ್ಗೊಲೆ, ಖಿಲಾಫತ್ ವಿಷಯದಲ್ಲಿ ಬ್ರಿಟಿಷರು ಮುಸ್ಲಿಮರಿಗೆ ಮಾಡಿದ ಅನ್ಯಾಯ-ಇವೆಲ್ಲ ಅವರನ್ನು ರಾಜಕೀಯಕ್ಕೆ ಸೆಳೆದುವು. ೧೯೧೯ರಲ್ಲಿ ಬ್ರಿಟಿಷರು ನಡೆಸಿದ ಅತ್ಯಾಚಾರಗಳಿಂದ ತಮ್ಮ ರಾಜಕೀಯ ಅಭಿಪ್ರಾಯಗಳು ಒಮ್ಮೆಲೇ ಬದಲಾಯಿಸಿದವು ಎಂದು ಮಿತ್ರರೊಬ್ಬರಿಗೆ ಬರೆದ ಪತ್ರದಲ್ಲಿ ಅವರು ಹೇಳಿದ್ದಾರೆ. ೧೯೨೧ರಲ್ಲಿ ನಡೆದ ಅಹಮದಾಬಾದ್ ಕಾಂಗ್ರೆಸ್ಸಿಗೆ ಇವರು ಅಧ್ಯಕ್ಷರಾಗಿ ಆರಿಸಲ್ಪಟ್ಟು ಅಧ್ಯಕ್ಷಪೀಠದಿಂದ, ಸ್ವಾತಂತ್ರ್ಯದ ಹಾಗೂ ಹಿಂದೂ ಮುಸ್ಲಿಮ್ ಐಕ್ಯದ ಬಗ್ಗೆ ಭಾವೋದ್ರೇಕದಿಂದ ಜನತೆಗೆ ಕರೆಕೊಟ್ಟರು. ಮಹಾತ್ಮಾ ಗಾಂಧೀಜಿಯವರೊಂದಿಗೆ ಇವರ ಗೆಳೆತನ ಬೆಳೆಯಿತು. ಸೆರೆಮನೆಯಲ್ಲೇ ನಡೆದ ಗಾಂಧೀಜಿಯವರ ಶಸ್ತ್ರಚಿಕಿತ್ಸೆ, ದೆಹಲಿಯಲ್ಲಿ ಗಾಂಧೀಜಿಯವರು ಮಾಡಿದ ಮೂರು ವಾರಗಳ ಉಪವಾಸ (೧೯೨೪)-ಇಂಥ ಸಂದರ್ಭಗಳಲ್ಲಿ ಅಜ್ಮಲ್‍ಖಾನರು ತೋರಿಸಿದ ಕಾಳಜಿ, ಆಸಕ್ತಿಗಳು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದಲ್ಲಿ ಹೃದಯಸ್ಪರ್ಶಿ ಯಾದ ಪ್ರಸಂಗಗಳು. (ಎ.ಎಂ.) ಅಜ್ಮೀರ್ : ರಾಜಸ್ತಾನದಲ್ಲಿನ ಈ ನಗರ ೧೧ನೆಯ ಶತಮಾನದ ಕೊನೆಯಲ್ಲಿ ಚೌಹಾನ್ ವಂಶದ ರಾಜ ಅಜಯದೇವನಿಂದ ನಿರ್ಮಿತವಾಯಿತು. ಊರು ಅರಾವಳಿ ಬೆಟ್ಟಗಳ ಉತ್ತರದ ತುದಿಯ ಇಳಿಜಾರಿನಲ್ಲಿದೆ. (೨೬೦, ೨೮’ ಉ. ಅ-೭೪೦,೪೧’ ಪೂ.ರೇ). ಇದರ ಉತ್ತರಕ್ಕೆ ಆನಾಸಾಗರ, ಮೇಲುಭಾಗದಲ್ಲಿ ಫಾಯ್ ಸಾಗರ. ಎರಡನೆಯ ಸರೋವರ ಅಜ್ಮೀರ್ ಪಟ್ಟಣಕ್ಕೆ ನೀರನ್ನು ಸರಬರಾಜು ಮಾಡುತ್ತದೆ. ಈ ಪಟ್ಟಣದಲ್ಲಿ ಖ್ಯಾತ ಮಹಮದೀಯ ಸಂತ ಮುಯಿನ್-ಉದ್-ದೀನ್ ಚಿಸ್ಥಿ ಸಮಾಧಿಯಿದೆ. ಇಲ್ಲಿ ಬಿಳಿ ಅಮೃತಶಿಲೆಯ ಕಟ್ಟಡಗಳುಂಟು. ಅಕ್ಬರ್ ದೊರೆ ತನ್ನ ರಾಣಿಯ ಸಂಗಡ ಆಗ್ರಾದಿಂದ ಇಲ್ಲಿಗೆ ನಡೆದುಬಂದು ಮಗನನ್ನು ಪಡೆಯುವುದಕ್ಕಾಗಿ ಪ್ರಾರ್ಥಿಸಿದನೆಂದು ಪ್ರತೀತಿ. ೧೨೦೦ರಲ್ಲಿ ಇಲ್ಲಿದ್ದ ಒಂದು ಜೈನ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಯಿತೆಂದು ತಿಳಿದುಬರುತ್ತದೆ. ಇದು ತಾರಗರ್ ಬೆಟ್ಟದ ಇಳಿಜಾರಿನಲ್ಲಿದೆ. ಇದರ ಕಲೆಯ ಸೌಂದರ್ಯ ಇಂದಿಗೂ ಅಲ್ಪಸ್ವಲ್ಪ ಉಳಿದಿದೆ. ಇಲ್ಲಿರುವ ಒಂದು ದೊಡ್ಡ ಛಾವಣಿಗೆ ೪೦ ಆಧಾರಸ್ತಂಭಗಳಿವೆ. ಬೆಟ್ಟದ ತುದಿಯಲ್ಲಿರುವ ಕೋಟೆಯ ಗೋಡೆ ಸು. ೩ಕಿಮೀಗಳಷ್ಟಿದೆ. ಈ ಕೋಟೆಗೆ ಕಾಲುದಾರಿ ಮಾತ್ರವುಂಟು. ಅಜ್ಮೀರ್ ನಗರ ಒಂದು ಮುಖ್ಯ ಆಡಳಿತ ಕೇಂದ್ರ ಮತ್ತು ರೈಲ್ವೆನಿಲ್ದಾಣ. ಜನಸಂಖ್ಯೆ: ೪,೮೫,೧೯೭ (೨೦೦೧) ನಗರ ನಿರ್ಮಾಣ ಉತ್ತಮ ಯೋಜನೆಯಿಂದ ಕೂಡಿದ್ದು ಅದಕ್ಕೆ ಸೌಂದರ್ಯವನ್ನಿತ್ತಿದೆ. ಸಾಂಬಾರ್ ಸರೋವರ ಹಾಗೂ ರಾಮ್‍ಸುರ್‍ನಿಂದ ಬರುವ ಉಪ್ಪು ಇಲ್ಲಿ ವ್ಯಾಪಾರವಾಗುತ್ತದೆ. ಈ ನಗರ ಎಣ್ಣೆ ತಯಾರಿಕೆಗೆ, ಹತ್ತಿ ಬಟ್ಟೆಗಳಿಗೆ ಬಣ್ಣಹಾಕುವ ಕೈಗಾರಿಕೆಗೆ ಹೆಸರುವಾಸಿಯಾಗಿದೆ. ೧೮೭೫ರಲ್ಲಿ ವೇಯೋ ರಾಜಕುಮಾರ ಕಾಲೇಜನ್ನು ಸ್ಥಾಪಿಸಲಾಯಿತು. ಮೊದಲು ಇದು ರಾಜಪುತ್ರಸ್ಥಾನದ ಶ್ರೀಮಂತ ವರ್ಗದ ಮಕ್ಕಳಿಗೆ ಮೀಸಲಾಗಿತ್ತು. ಆಗ್ರಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜುಗಳು ಈ ನಗರದಲ್ಲಿವೆ. ಭಾರತದಲ್ಲಿ ಕಂಡುಬರುವ ಏಕಮಾತ್ರ ಬ್ರಹ್ಮ ದೇವಸ್ಥಾನ ಅಜ್ಮೀರ್‍ನಿಂದ ೧೧ಕಿಮೀ ದೂರದಲ್ಲಿನ ಪುಷ್ಕರ್ ಸರೋವರದ ಹತ್ತಿರ ಇದೆ. ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿ ದೊರಕುವ ನೀರು ಬಹು ಶ್ರೇಷ್ಠ ಹಾಗೂ ಪಾವನವಾದುದೆಂಬ ಭಾವನೆಯಿದೆ. (ಎಂ.ಎಸ್.) ಅಟಕಾಮ : ಚಿಲಿ ದೇಶದ ಉತ್ತರ ಮಧ್ಯ ಭಾಗದಲ್ಲಿ ೩೦º ದ.ಅ.ದಿಂದ ಉತ್ತರಕ್ಕೆ ಸು. ೯೬೦ಕಿಮೀಗಳವರೆಗೆ ಹಬ್ಬಿರುವ ಮರುಭೂಮಿ. ಕೋಪಿಯಾಪೊ ನಗರದಿಂದ ಉತ್ತರಕ್ಕೆ ಈ ಮರುಭೂಮಿ ವಿಸ್ತರಿಸುತ್ತ ದಕ್ಷಿಣೋತ್ತರವಾಗಿ ೧,೦೦೦ ದಿಂದ ೧,೧೦೦ಕಿಮೀ ಉದ್ದವಾಗಿದೆ. ಆಂಟೊಪಾಗಸ್ಟದ ಬಹಳಷ್ಟು ಪ್ರದೇಶವನ್ನಾವರಿಸಿದೆ. ಜನಸಂಖ್ಯೆ ಸು. ೧೦೦೦ (೨೦೦೫) ಇಲ್ಲಿಯ ನಿವಾಸಿಗಳು ಅಮೆರಿಕನ್ ಇಂಡಿಯನ್ನರು ಮತ್ತು ಯುರೋಪಿ ಯನ್ನರು. ಯುರೋಪಿಯನ್ನರು ಇಲ್ಲಿ ಸಿಕ್ಕುವ ಪೆಟ್ಲುಪ್ಪು (ಯವಕ್ಷಾರ) ಮತ್ತು ಖನಿಜ ಸಂಪತ್ತಿನಿಂದ ಆಕರ್ಷಿತರಾಗಿ ಇಲ್ಲಿ ಬಂದು ನೆಲಸಿದರು. ಮೊದಲು ಇದರ ಒಡೆತನಕ್ಕಾಗಿ ಚಿಲಿ, ಬೊಲಿವಿಯ ಮತ್ತು ಪೆರು ದೇಶಗಳ ನಡುವೆ ಯುದ್ಧಗಳಾದುವು. ಕೊನೆಗೆ ಚಿಲಿ ದೇಶ ಜಯಶಾಲಿಯಾಯಿತು. ಇದಕ್ಕೆ ಇಕ್ಕಟ್ಟಾದ ಸಮುದ್ರತೀರವಿದೆ. ಉಳಿದ ಭಾಗ ಎತ್ತರವಾದ ಪ್ರಸ್ಥಭೂಮಿ. ಬೇಸಗೆಯ ಸರಾಸರಿ ಉಷ್ಣಾಂಶ ೧೮ ೦ ಸೆ. ಸಾಕಷ್ಟು ಮಂಜು ವೃಷ್ಟಿಯಿದ್ದರೂ ಮರುಭೂಮಿಯ ಪ್ರಪಂಚದಲ್ಲೇ ಅತಿ ಶುಷ್ಕ ಹವಾಮಾನವುಳ್ಳದ್ದು. ಅನೇಕ ವರ್ಷಗಳವರೆಗೆ ಮಳೆಯೇ ಆಗುವುದಿಲ್ಲ ; ಐದು ಆರು ವರ್ಷಗಳಿಗೊಮ್ಮೆ ಮಳೆಯಾಗುತ್ತದೆ. ಅದೂ ಒಂದು ಅಂಗುಲದಷ್ಟು ಮಾತ್ರ. ಆದ್ದರಿಂದ ಭೂಮಿ ಪೂರ್ತ ಶುಷ್ಕವಾಗಿದೆ. ಕೇವಲ ಒಂದು ನದಿ ಹರಿಯುತ್ತದೆ. ಇಕ್ವಿಕ್ ಮತ್ತು ಆಂಟೊಫಗಸ್ಟ ಇಲ್ಲಿಯ ಬಂದರುಗಳು. ಇಲ್ಲಿಂದ ಪೆಟ್ಲುಪ್ಪು ಮತ್ತು ಬೊಲಿವಿಯದ ಖನಿಜ ರಫ್ತಾಗುತ್ತವೆ. ಪೆಟ್ಲುಪ್ಪು ಯುರೋಪು, ಅಮೆರಿಕದ ಸಂಯುಕ್ತಸಂಸ್ಥಾನಗಳಿಗೆ ರಫ್ತಾಗುತ್ತದೆ. ನೈಟ್ರೇಟ್ ತೆಗೆಯುವ ಯಾಂತ್ರಿಕ ವಿಧಾನವನ್ನು ಕಂಡುಹಿಡಿದಾಗಿನಿಂದ ಇದರ ಪ್ರಾಮುಖ್ಯ ಕಡಿಮೆಯಾಗಿದೆ ; ಈ ವಿಧಾನದಿಂದ ಅಯೊಡಿನ್ ಎಂಬ ಉಪವಸ್ತು ಸಿಗುತ್ತದೆ. ಅಮೆರಿಕದ ಸಂಯುಕ್ತಸಂಸ್ಥಾನದ ಶೇ.೩೦ ಆವಶ್ಯಕತೆಯನ್ನು ಚಿಲಿ ಒದಗಿಸುತ್ತದೆ. ಇದಲ್ಲದೆ ಅದರ ಮಧ್ಯಭಾಗಗಳಲ್ಲಿ ಬೆಳ್ಳಿ ಮತ್ತು ತಾಮ್ರ ದೊರೆಯುತ್ತವೆ;ಆದರೆ ಅವುಗಳ ನಿಕ್ಷೇಪ ಈಗ ಕಡಿಮೆಯಾಗಿದೆ. ಇಲ್ಲಿಯ ಇಂಡಿಯನ್ ಜನರು ಮೊದಲು ಉತ್ತರದಿಂದ ದಕ್ಷಿಣಕ್ಕೆ ರಸ್ತೆ ನಿರ್ಮಾಣ ಮಾಡಿದ್ದರು. ಸ್ಪೇನಿನ ಜನರು ಪೂರ್ವ-ಪಶ್ಚಿಮ ಮಾರ್ಗವಾಗಿ ರಸ್ತೆ ನಿರ್ಮಿಸಿದ್ದಾರೆ. ತೀರಪ್ರದೇಶದಲ್ಲಿ ಸ್ವಲ್ಪ ಮಳೆ ಬೀಳುತ್ತದೆ. ಹವಾಮಾನ ಹಿತಕರ. ಓಯಸಿಸ್‍ಗಳಲ್ಲಿ ಕುರಿ, ಲಾಮಾ ಮತ್ತು ಮೇಕೆಗಳನ್ನು ಸಾಕುತ್ತಾರೆ. ಆಲ್ಫಾಲ್ಫಾ ಹುಲ್ಲು ಬೆಳೆಯುತ್ತಾರೆ. ಇವರ ಆಹಾರ ಮೆಕ್ಕೆಜೋಳ, ಕುರಿಯ ಮಾಂಸ, ಹಾಲು, ಬೆಣ್ಣೆ, ಗಿಣ್ಣು ಮುಂತಾದವು. ಹೆಣ್ಣುಮಕ್ಕಳು ಉಣ್ಣೆಬಟ್ಟೆ ಮತ್ತು ಮಣ್ಣಿನ ಮಡಕೆಗಳನ್ನು ತಯಾರಿಸುತ್ತಾರೆ. (ಬಿ.ಒ.) ಅಟಪ್ ಪ್ಯುರುಕ್ : ಸ್ಪೇನ್ ದೇಶದ ಉತ್ತರದಲ್ಲಿರುವ ಪುರಾತತ್ತ್ವ ನೆಲೆ. ಈ ಸ್ಥಳದಲ್ಲಿ ಪುರಾತತ್ತ್ವಜ್ಞರು ಸು.೧೩ ಲಕ್ಷ ವರ್ಷ ಹಿಂದಿನ ಮಾನವನ ಕೆಳದವಡೆಯ ಪಳೆಯುಳಿಕೆಯನ್ನು ಶೋಧಿಸಿದ್ದಾರೆ (೨೦೦೭). ಇದರೊಡನೆ ಪ್ರಾಣಿಗಳ ಎಲುಬು ಮತ್ತು ಕಲ್ಲಿನ ಉಪಕರಣಗಳೂ ದೊರೆತಿವೆ. ಇದು ನಿಯಾಂಡರ್‍ತಾಲ್ ಮಾನವ ಮತ್ತು ಆಧುನಿಕ ಮಾನವನ ಮೂಲದ ಹಂತಕ್ಕೆ ಸೇರಿದ್ದಿರಬಹುದೆಂದು ಶೆಟಲ್ ಇನ್‍ಸ್ಟಿಟ್ಯೂಟ್ ಆಫ್ ಹ್ಯೂಮನ್ ಪೇಲಿಯೊ ಇಕಾಲಾಜಿ ಅಂಡ್ ಸೋಷಿಯಲ್ ಎವಲ್ಯೂಷನ್ ನಿರ್ದೇಶಕರಾದ ಯು. ಡರಡ್ ಕಾರ್ಬೊವೆಲ್ ಆ ಸಂಸ್ಥೆಯ ನಿಯತಕಾಲಿಕ ನೇಚರ್‍ನಲಿ