ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನ್ದ್ರಿಯೋ ಎಫ್ ಲಿಯೊನಿಡ್

ವಿಕಿಸೋರ್ಸ್ದಿಂದ

ಅನ್‍ದ್ರಿಯೋ ಎಫ್ ಲಿಯೊನಿಡ್ (1871-1919) ರಷ್ಯದ ಕಥೆಗಾರ ಮತ್ತು ನಾಟಕಕಾರ. ಬೋಲ್ಷೆವಿಸಮನ್ನು 1917ರಲ್ಲಿ ವಿರೋಧಿಸಿದ ಕ್ರಾಂತಿಕಾರಿ. ಯೌವನದಲ್ಲಿ ಭಯಂಕರ ಪ್ರಸಂಗಗಳನ್ನು ಅರಸುತ್ತಿದ್ದ ಇವನು ಇ.ಎ.ಫೋನ ಪ್ರಭಾವಕ್ಕೆ ಒಳಗಾದ. ಅತೃಪ್ತಿ ಜೀವಮಾನವೆಲ್ಲ ಇವನನ್ನು ಕಾಡಿತು. ಇವನ ಬರಹಗಳಲ್ಲಿ ಫೋ, ಗಾರ್ಕಿ ಮತ್ತು ಟಾಲ್ಸ್‍ಟಾಯ್ ಇವರ ಪ್ರಭಾವ ಕಂಡುಬರುತ್ತದೆ. ಇವನ ಕೃತಿಗಳಲ್ಲಿ ಎರಡು ಬಗೆಯ ಶೈಲಿಗಳನ್ನು ಕಾಣಬಹುದು. ಎಲ್ಲ ಕೃತಿಗಳಲ್ಲಿಯೂ ಸರ್ವಶೂನ್ಯವಾದ ನಿರೂಪಿತವಾಗಿದೆ. ಮಾನವನ ಬಾಳು, ಸಮಾಜ, ನೀತಿ ಎಲ್ಲ ಮಿಥ್ಯ, ಸಾವು ಒಂದೇ ಸತ್ಯ ಎನ್ನುವ ದೃಷ್ಟಿ ಇವನ ಸಾಹಿತ್ಯಕ್ಕೆ ಆಧಾರ. 1906ರ ಕ್ರಾಂತಿ ವಿಫಲಗೊಂಡ ಮೇಲೆ ಬುದ್ಧಿಜೀವಿಗಳು ಅನುಭವಿಸಿದ ಶೂನ್ಯಭಾವನೆ ಇವನ ಕೃತಿಗಳಲ್ಲಿ ಪ್ರತಿಬಿಂಬಿತವಾಗಿದೆ. ಇವನ ಎರಡು ಶೈಲಿಗಳಲ್ಲಿ ಒಂದು ಸಂಯಮ, ವಿವೇಚನೆಗಳಿಂದ ಕೂಡಿದ್ದು, ಇದರಲ್ಲಿ ರಚಿತವಾದ 'ಒಂದಾನೊಂದು ಕಾಲದಲ್ಲಿ, 'ಮಂಜಿನಲ್ಲಿ ಮತ್ತು 'ಗವರ್ನಕ್ ಎಂಬ ಕಥೆಗಳೇ ಇವನಿಗೆ ಸಾಹಿತ್ಯ ಪ್ರಪಂಚದಲ್ಲಿ ಸ್ಥಾನವನ್ನು ಗಳಿಸಿಕೊಟ್ಟುವು. ಮೂರರಲ್ಲಿಯೂ ಸಾವೇ ಮುಖ್ಯವಸ್ತು. ಆಧುನಿಕತೆಯ ಪ್ರಭಾವಕ್ಕೊಳಗಾಗಿ ಎರಡನೆಯ ಶೈಲಿಯಲ್ಲಿ ಬರೆದ ಕೃತಿಗಳಲ್ಲಿ 'ಕತ್ತಲೆ ಮತ್ತು 'ಗಲ್ಲಿಗೇರಿದ ಏಳು ಮಂದಿ ಎಂಬವು ಗಣನೀಯವಾದುವು. ಕೊನೆಯದರಲ್ಲಿ ಸಾವು ತೋರಬಹುದಾದ ಹಿರಿಮೆಯನ್ನು ಗುರುತಿಸಿರುವುದರಿಂದ ಇವನ ಕೃತಿಗಳಲ್ಲಿ ಇದಕ್ಕೊಂದು ವಿಶಿಷ್ಟಸ್ಥಾನವುಂಟು.

(ಎಲ್.ಎಸ್.ಎಸ್.)