ಪುಟ:Rangammana Vathara.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

40

ಸೇತುವೆ

"ಸತ್ತರು. ಅದು ಬೇರೆ ವಿಷಯ. ಆದರೆ ಸತ್ತದ್ದಕ್ಕೆ ಖಾಲಿ ಆಯ್ತೂಂತ
ಅನ್ಬೇಕೆ?"
"ಅದರಲ್ಲಿ ಏನೀಗ ತಪ್ಪು? ಹುಟ್ಟೋದು ಎಷ್ಟು ಸ್ವಾಭಾವಿಕವೋ ಸಾಯೋದು
ಅಷ್ಟೆ ಸ್ವಾಭಾವಿಕ. ಪಟ್ಟಣವಾಸದಲ್ಲಿ ಅದಕ್ಕೆಲ್ಲ ಮಹತ್ವ ಕೊಡೋಕಾಗುತ್ಯೆ?
ಈಗ ಆತ್ಮಹತ್ಯೇನೆ ಮಾಡ್ಕೊಂಡ್ರೂಂತ ಇಟ್ಕೊಳ್ಳಿ. ಆ ಮನೇನ ಬಿಟ್ಟಿಡೋಕೆ
ಆಗುತ್ಯೆ?"
"ಅದು ನಿಜ, ನಿಮಗೆ ತಿಳಿವಳಿಕೆ ಇರೋದ್ರಿಂದ ಹೀಗೆ ಹೇಳ್ತೀರಾ. ಆದರೆ
ಬೇರೆಯವರು___"
"ಅದೆಲ್ಲಾ ದೊಡ್ಡದಲ್ಲಾಂದ್ರೆ!"
"ಹೆಂಗಸರು ಮಕ್ಕಳು ಸಾವುಗೀವು ಅಂದ್ರೆ ಸ್ವಲ್ಪ ಹೆದರ್ಕೋತಾರೆ."
"ನಮ್ಮ ಚಂಪಾ ವಿಷಯದಲ್ಲಿ ಅಂಥ ಯೋಚನೆ ಮಾಡ್ಬೇಕಾದ್ದೇ ಇಲ್ಲ.
ಇಂಥಾಂದು ಆಕೆ ಎಷ್ಟೋ ನೋಡಿದಾಳೆ."
ಸಾವಿನ ಮನೆ ಬೇಡವೆಂದು ಆತ ಹೇಳಲಿಲ್ಲವಲ್ಲಾ ಎಂದು ರಂಗಮ್ಮನ ಕಣ್ಣು
ಗಳು ಕೃತಜ್ಞತೆಯಿಂದ ತುಂಬಿದವು.
"ಅಂದ ಹಾಗೆ, ಆ ಮನೆಗೆ ಒಂದಿಷ್ಟು ಸುಣ್ಣ ಸಾರಿಸಿ ಸ್ವಚ್ಛ ಮಾಡಿಸಿ ಇಟ್ಟಿರಿ!"
"ಆಗಲಿ ಮಾಡಿಸ್ತೀನಿ."
ವಠಾರದ ಬೇರೆ ಮನೆ ಖಾಲಿಯಾಗಿದ್ದಿದ್ದರೆ ರಂಗಮ್ಮ ಒಪ್ಪುತ್ತಿರಲಿಲ್ಲ.
ಬೀದಿಗೆ ಇಳಿಯುತ್ತಿದ್ದ ಆತನ ದೃಷ್ಟಿ ಗೋಡೆಯ ಮೇಲಿದ್ದ 'ಮನೆ ಬಾಡಿಗೆಗೆ
ಇದೆ' ಬೋರ್ಡಿನತ್ತ ಹೋಯಿತು.
"ಇದೇನು ಸುಣ್ಣದ ಕಡ್ಡೀಲಿ ಬರೆಸಿದೀರಲ್ಲಾ. ನಾನು ಬಂದ್ಮೇಲೆ ಮರದ
ಹಲಿಗೇಲಿ ಬರ್ಕೊಡ್ತೀನಿ, ಸೊಗಸಾಗಿ. ಭದ್ರವಾಗಿ. ಖಾಯಂ ಆಗಿ ಇರುತ್ತೆ. ಒಳಗೆ
ಇಟ್ಕೊಂಡ್ರೆ ಯಾವತ್ತು ಬೇಕಾದ್ರೂ ಉಪಯೋಗಿಸ್ಬಹುದು."
ರಂಗಮ್ಮ ನಕ್ಕರು.
"ಆಗಲೀಪ್ಪಾ. ನಿಮ್ಮದೇ ವಠಾರ. ಅದೇನು ಮಾಡ್ತಿರೋ ಮಾಡಿ."