ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ಸಿಕ

ವಿಕಿಸೋರ್ಸ್ದಿಂದ

ಕಾರ್ಸಿಕ

ಪಶ್ಚಿಮ ಮೆಡಿಟರೇನಿಯನ್ ಸಮುದ್ರದ ಒಂದು ದ್ವೀಪ. ಫ್ರಾನ್ಸಿಗೆ ಸೇರಿದೆ. ಫ್ರಾನ್ಸಿನ ಮುಖ್ಯ ಭೂಪ್ರದೇಶದಿಂದ ಇಲ್ಲಿಗೆ 105 ಮೈ. ದೂರ. ಇಟಲಿಗೆ ಇದು 50 ಮೈ. ದೂರದಲ್ಲಿದೆ. ದಕ್ಷಿಣದಲ್ಲಿರುವ ಸಾರ್ಡಿನಿಯ ದ್ವೀಪಕ್ಕೂ ಕಾರ್ಸಿಕಕ್ಕೂ ನಡುವೆ ಬೊನಿಫಾಚೊ ಜಲಸಂಧಿಯಿದೆ. ಇದು ಮೆಡಿಟರೇನಿಯನ್ ಸಮುದ್ರದ ದೊಡ್ಡ ದ್ವೀಪಗಳಲ್ಲಿ ಮೂರನೆಯದು. ಉ.ಅ.41ಲಿ 31'-ಉ.ಅ. 400 ಮತ್ತು ಪೂ.ರೇ. 80ಲಿ 30'-ಪೂ.ರೇ. 90ಲಿ 30' ನಡುವೆ, ಸ್ಧೂಲವಾಗಿ ಅಂಡಾಕೃತಿಯಲ್ಲಿರುವ ಕಾರ್ಸಿಕ ದ್ವೀಪದ ವಿಸ್ತೀರ್ಣ 3,367 ಚ. ಮ್ಯೆ. ಜನಸಂಖ್ಯೆ 3,22,900.

ಇಲ್ಲಿಯ ಜನರ ಭಾಷೆ ಇಟಾಲಿಯನ್; ಇಟಲಿಯೊಂದಿಗೆ ಅವರ ಸಾಂಸ್ಕತಿಕ ಸಂಬಂಧವೂ ಇದೆ. ಅವರು ಸಂಪ್ರದಾಯಪ್ರಿಯರು.  ದ್ವೀಪವಾಸಿಗಳಾದರೂ ನುರಿತ ನಾವಿಕರಲ್ಲ; ಅರಣ್ಯಗಳಲ್ಲೇ ಮುಖ್ಯವಾಗಿ ಅವರ ವಾಸ.

ಕಾರ್ಸಿಕ ಗುಡ್ಡಗಾಡುಪ್ರದೇಶ. ಹೆಚ್ಚಾಗಿ ಗ್ರಾನುಲೈಟ್‍ನಂಥ ಸ್ಛಟಿಕ ಶಿಲೆಗಳನ್ನು ಒಳಗೊಂಡಿದೆ. ಸಿಂಟೊ (8,898') ಮತ್ತು ರೊಟಾಂಡೊ (8,607') ಇವು ಅತ್ಯಂತ ಎತ್ತರದ ಶಿಖರಗಳು. ನದೀ ಕಣಿವೆಗಳು ಇಕ್ಕಟ್ಟಾಗಿಯೂ ಆಳವಾಗಿಯೂ ಇವೆ. ಪಶ್ಜಿಮ ಕರಾವಳಿಗಿಂತ ಪೂರ್ವ ಕರಾವಳಿ ಹೆಚ್ಚು ಇಕ್ಕಟ್ಟು. ವಾಯುಗುಣ ಮೆಡಿಟರೇನಿಯನ್ ಮಾದರಿ. ಸಮುದ್ರಮಟ್ಟ ಪ್ರದೇಶದಲ್ಲಿ ಬೇಸಗೆಯ ಸರಾಸರಿ ಉಷ್ಣತೆ 70ಲಿ-75ಲಿ ಫ್ಯಾ. ಚಳಿಗಾಲವೂ ತಕ್ಕಮಟ್ಟಿಗೆ ಬೆಚ್ಚಗಿರುತ್ತದೆ. (45ಲಿ-50ಲಿ ಫ್ಯಾ) ಕಣಿವೆಗಳು ಮುಳ್ಳು ಪೊದೆಗಳಿಂದ ತುಂಬಿವೆ. ಅರಣ್ಯಗಳಲ್ಲಿ ಚೆಸ್ನಟ್ ಮರ ಹೇರಳ. ನೆಲ ಹೆಚ್ಚು ಫಲವತ್ತಾಗಿಲ್ಲ.

ಇಕ್ಕಟ್ಟಾದ ಕರಾವಳಿಬಯಲಿಗೆ ಮಾತ್ರ ಕೃಷಿ ಸೀಮಿತವಾಗಿದೆ. ಸೇ. 2ರಷ್ಟು ಭೂಮಿಯಲ್ಲಿ ಮಾತ್ರ ಸಾಗುವಳಿ ನಡೆದಿದೆ. ಇಲ್ಲಿಯ ಕಾಲುಭಾಗ ನೆಲ ದನಕರುಗಳ ಮೇವಿಗೆ ಅನುಕೂಲಕರ. ಗೋದಿ. ಜೋಳ, ದ್ರಾಕ್ಷಿ ಮತ್ತು ಆಲಿವ್ ಮುಖ್ಯ ಬೆಳೆಗಳು. ಇಲ್ಲಿ ಸುಮಾರು 2,500 ಮೈ. ಉದ್ದದ ರಸ್ತೆಗಳಿವೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ 1,260 ಮೈ. ಪ್ರವಾಸೋದ್ಯಮ ಬೆಳೆಯುತ್ತಿದೆ. ಆಲಿವ್ ಮದ್ಯ ಮತ್ತು ಮರಮಟ್ಟು ಮುಖ್ಯ ನಿರ್ಯಾತ ವಸ್ರುಗಳು.

ಅಜಾಕಿಯೋ (37,000) ರಾಜಧಾನಿ. ಬಸ್ತಿಯಾ (49,000) ಮುಖ್ಯ ಬಂದರು. ಇದು ಕಾರ್ಸಿಕದ ಅತ್ಯಂತ ದೊಡ್ಡ ನಗರ.       (ಎನ್.ಬಿ.ಕೆ.ಆರ್.)

ಇತಿಹಾಸ : ನೂತನ ಶಿಲಾಯುಗದ ವರೆಗೂ ಕಾರ್ಸಿಕದಲ್ಲಿ ಮನುಷ್ಯ ವಾಸ ಮಾಡುತ್ತಿರಲಿಲ್ಲ. ಕ್ರಿ. ಪೂ. 564ರಲ್ಲಿ ಅಯಾನಿಯದ ಫೋಪೀಯನರು ಇಲ್ಲಿ ಬೀಡು ಬಿಟ್ಟದ್ದರು.  ಕಾರ್ಥೇಜಿನಿಯನ್ ಮತ್ತು ಎಟ್ರುಸ್ಕನ್ ನೌಕಾಪಡೆಗಳಿಂದ ಇವರು ಕ್ರಿ. ಪೂ. 353ರಲ್ಲಿ ಪರಾಜಿತರಾಗಿ ಇಲ್ಲಿಂದ ಕಾಲ್ತೆಗೆದರು. ಅನಂತರ ಇದು ಕ್ರಮವಾಗಿ ಎಟ್ರುಸ್ಕನ್ ಮತ್ತು ಕಾರ್ಥೇಜಿನಿಯನ್ ಆಕ್ರಮಣಕ್ಕೆ ಒಳಪಟ್ಟಿತ್ತು. ಕಾರ್ಸಿಕ ದ್ವೀಪವನ್ನು ಕ್ರಿ. ಪೂ. 259ರಲ್ಲಿ ಕಾರ್ನಿಲಿಯನ್ ಸ್ಕಿಪಿಯೋ ಗೆದ್ದ. ಆದರೆ ರೋಮನರು ಇದನ್ನು ವಾಸ್ತವವಾಗಿ ಆಕ್ರಮಿಸಿಕೂಂಡಿದ್ದು ಪ್ಯೂನಿಕ್ ಯುದ್ಧದ ಅನಂತರವೇ. ಕ್ರಿ. ಪೂ. 231ರಲ್ಲಿ ಕಾರ್ಸಿಕದ ನಿವಾಸಿಗಳು ಪರಾಕ್ರಮಣದ ವಿರುದ್ಧ ದಂಗೆಯೆದ್ದರು. ಅದನ್ನು ಅಡಗಿಸಲಾಯಿತು. ರೋಮನ್ ಚಕ್ರಾಧಿಪತ್ಯದಲ್ಲಿ ಗಡಿಪಾರು. ಶಿಕ್ಷೆಗೆ ಒಳಗಾದವರನ್ನು ಇಲ್ಲಿಗೆ ಕಳುಹಿಸಲಾಗುತ್ತಿತ್ತು. ಕ್ರಿ. ಪೂ. ಸು. 4ರಿಂದ ಕ್ರಿ. ಶ. 65ರ ವರೆಗೆ ಬದುಕಿದ್ದ ರೋಮನ್ ದಾರ್ಶನಿಕ ಸೈನಿಕ ದೇಶಭ್ರಷ್ಟನಾದಾಗ ಇಲ್ಲಿದ್ದ. ಕ್ರಿ. ಶ. 5ನೆಯ ಶತಮಾನದಲ್ಲಿ ವ್ಯಾಂಡಲರೂ ಗೋಥರೂ ಕಾರ್ಸಿಕ ದ್ವೀಪಕ್ಕಾಗಿ ಬಡಿದಾಡಿದರು. ಅಂತಿಮವಾಗಿ ಇದು ವ್ಯಾಂಡಲರ ವಶಕ್ಕೆ ಬಂತು. ಆದರೆ ಬಿಜಾóಂಟಿನರು 533ರಲ್ಲಿ ಇದನ್ನು ಆಕ್ರಮಿಸಿಕೂಂಡರು.

ಸಾರಸೆನರು ಕಾರ್ಸಿಕದ ಮೇಲೆ 713ರಲ್ಲಿ ಏರಿಬಂದು ಇದರ ಒಂದು ಭಾಗವನ್ನು 10ನೆಯ ಶತಮಾನದ ವರೆಗೂ ಆಳಿದರು. ಟಸ್ಕನಿಯ ಕಾಂಟ್ ಬೋನಿಫೇಸ್ ಇದನ್ನು ಪಶ್ಚಿಮ ರೋಮನ್ ಸಾಮ್ರಾಜ್ಯಕ್ಕೆ ಮಾತ್ರ ಗೆದ್ದುಕೂಳ್ಳಲು 9ನೆಯ ಶತಮಾನದಲ್ಲಿ ಪ್ರಯತ್ನಿಸಿ, ಇಲ್ಲೊಂದು ಕೋಟೆ ಕಟ್ಟಿದ. ಬೊನಿಫಾಚೊ ನಗರ ಇಲ್ಲಿ ಸ್ಧಾಪಿತವಾಯಿತು. ಈ ಕಾಲದಲ್ಲಿ ದ್ವೀಪದ ಆಂತರಿಕ ಅಧಿಕಾರ ಇದ್ದದ್ದು ಸ್ಥಳೀಯ ಪ್ರಭುಗಳ ಕೈಯಲ್ಲಿ. ಪೋಪ್ ಇದರ ಮೇಲೆ ಹಕ್ಕು ಸ್ಧಾಪಿಸಿದ್ದು 1077ರಲ್ಲಿ.  1453ಲ್ಲಿ ಇದು ಜೆನೊವದ ಅಧಿಕಾರಕ್ಕೆ ಒಳಪಟ್ಟಿತು. ಫ್ರಾನ್ಸಿನ 2ನೆಯ ಹೆನ್ರಿ 1553ರಲ್ಲಿ ಕಾರ್ಸಿಕವನ್ನು ಗೆದ್ದ.  1558ರಲ್ಲಿ ಮತ್ತೆ ಇದನ್ನು ಜೆನೊವಕ್ಕೆ ವರ್ಗಾಯಿಸಲಾಯಿತು. ಫ್ರೆಂಚರ ಅಧೀನದಲ್ಲಿ ಕಾರ್ಸಿಕನರಿಗೆ ಲಭ್ಯ ವಾಗಿದ್ದ ಸ್ವಯಾಮಾಡಳಿತ ನಷ್ಟವಾಯಿತು. ಈನೊವದ ನೀತಿಗೆಟ್ಟ ದಬ್ಬಾಳಿಕೆ ಯಿಂದ ಕಾರ್ಸಿಕನರು ರೊಚ್ಚಿಗೆದ್ದರು. 1729ರಲ್ಲಿ ಎದ್ದ ದಂಗೆಯನ್ನು ಜೆನೊವರು ಆಸ್ಟ್ರಿಯನ್ ನೆರವಿನಿಂದ ಹತ್ತಿಕ್ಕಿದರು. ಜೆನೂವ 1768ರಲ್ಲಿ ಕಾರ್ಸಿಕವನ್ನು ಫ್ರಾನ್ಸಿಗೆ ಮಾರಿತು. ಫ್ರೆಂಚರ ಗವರ್ನರಾಗಿದ್ದ ಪವೂಲಿ ಇದನ್ನು ಇಂಗ್ಲೆಂಡಿಗೆ ಒಪ್ಪಿಸಿದ (1794-96). ಫ್ರೆಂಚ್ ಚಕ್ರವರ್ತಿ 1ನೆಯ ನೆಪೋಲಿಯನ್ ಬೊನ ಪಾರ್ಟೆ ಕಾರ್ಸಿಕದಲ್ಲಿ ಹುಟ್ಟಿದವ. ನೆಪೋಲಿಯನ್ ಕಾರ್ಸಿಕವನ್ನು ಇಂಗ್ಲೆಂಡಿನಿಂದ ಗೆದ್ದುಕೊಂಡ. ಕಾರ್ಸಿಕದ ಮೇಲೆ ಫ್ರೆಂಚ್ ಆಡಳಿತ 1815ರಲ್ಲಿ ಸ್ಧಿರವಾಯಿತು. ಕಾರ್ಸಿಕನ್-ಫ್ರೆಂಚ್ ಸಂಬಂಧ ಬಿಗಿಯಾಗಲು ಬೊನಪಾರ್ಟೆ ವಂಶ ಕಾರಣ. ಕಾರ್ಸಿಕವನ್ನು ತನ್ನದನ್ನಾಗಿ ಮಾಡಿಕೊಳ್ಳಲು ಫ್ಯಾಸಿಸ್ಟ್ ಇಟಲಿ ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ಎರಡನೆಯ ಮಹಾಯುದ್ದ ಕಾಲದಲ್ಲಿ ಸ್ವಲ್ಪಕಾಲ ಇದು ಜರ್ಮನ್-ಇಟಾಲಿಯನ್ ಪಡೆಯ ವಶದಲ್ಲಿತ್ತು.