ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಂದ್ರೀಯ ಆಹಾರ ಸಂಶೋಧನಾಲಯ

ವಿಕಿಸೋರ್ಸ್ದಿಂದ

ಆಹಾರವಿಜ್ಞಾನ ವಿವಿಧ ಶಾಖೆಗಳ ವಿಚಾರ ಅಭ್ಯಸಿಸುವುದಕ್ಕೆ ಪ್ರಯೋಗ ಮತ್ತು ಸಂಶೋಧನೆಗಳನ್ನು ನಡೆಸುವುದಕ್ಕೆ ಮೀಸಲಾಗಿ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಸ್ಥಾಪಿತವಾಗಿರುವ ಸಂಸ್ಥೆ (ಸೆಂಟ್ರಲ್ ಫುಡ್ ಟೆಕ್ನಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್). ಆಹಾರದ ಗುಣ ಪ್ರಮಾಣಗಳೆರಡರಲ್ಲಿಯೂ ಸ್ವಯಂಪೂರ್ಣತೆಯನ್ನು ಸ್ಥಾಪಿಸಿ, ಒಳ್ಳೆಯ ಪೌಷ್ಟಿಕ ಮಟ್ಟವನ್ನು ಸಾಧಿಸುವಂತೆ ದೇಶದ ಎಲ್ಲ ಆಹಾರ ಸಾಧನಗಳನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು, ಆಧುನಿಕ ಆಹಾರ ತಂತ್ರ ಪ್ರಯೋಗದಿಂದ ದೇಶದ ಆರ್ಥಿಕಾಭಿವೃದ್ಧಿಗೆ ನೆರವಾಗುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಈ ಸಂಶೋಧನಾಲಯದಲ್ಲಿ ಸ್ಥಾಪಿತವಾಗಿರುವ ಆಹಾರ ಕೃಷಿ ಸಂಸ್ಥೆಯ ಅಂತಾರಾಷ್ಟ್ರೀಯ ಆಹಾರ ತಂತ್ರಶಾಸ್ತ್ರ ತರಬೇತಿ ಕೇಂದ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹಾರ ತಂತ್ರಶಾಸ್ತ್ರದ ಎಂ.ಎಸ್ಸಿ. ಪದವಿಗಾಗಿ ಭಾರತ ಹಾಗೂ ದೂರ ಪ್ರಾಚ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ಸಂಶೋಧನಾಲಯದ 15 ವಿಭಾಗಗಳಲ್ಲಿ ಧಾನ್ಯಾಹಾರಗಳು, ಹಣ್ಣು ತರಕಾರಿಗಳು, ಮಾಂಸಾಹಾರಗಳು, ಸಂಬಾರಜಿನಸಿಗಳು ಹಾಲಿನ ಉತ್ಪನ್ನಗಳು, ಇವೇ ಮೊದಲಾದ ವಿಚಾರಗಳಿಗೆ ಅನೇಕ ಬಗೆಯ ಪ್ರಯೋಗಗಳೂ ಸಂಶೋಧನೆಗಳೂ ಸತತವಾಗಿ ನಡೆಯುತ್ತಿವೆ. ಈ ಕೆಲಸಗಳಿಂದ ನಮ್ಮ ದೇಶದಲ್ಲಿ ಹಲವಾರು ಹೊಸ ಆಹಾರ ಕೈಗಾರಿಕೆಗಳು ಹುಟ್ಟುಕೊಂಡಿರುವುದಲ್ಲದೆ, ಇರುವ ಕೈಗಾರಿಕೆಗಳವರಿಗೆ ಬಹು ಹೆಚ್ಚಿನ ಸಹಾಯವಾಗುತ್ತದೆ.