ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಣ್ಣಪ್ಪ

ವಿಕಿಸೋರ್ಸ್ದಿಂದ

ಕಣ್ಣಪ್ಪ : ವೀರಶೈವರು ಆರಾಧಿಸುವ 63 ಪುರಾತನರಲ್ಲಿ ಪ್ರಸಿದ್ಧನಾದವ. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಶರಣ. ತಮಿಳಿನ ಪೆರಿಯಪುರಾಣದಲ್ಲೂ ಕನ್ನಡದಲ್ಲಿ ಹರಿಹರನ ರಗಳೆಗಳಲ್ಲೂ ಷಡಕ್ಷರಿಯ ವೃಷಭೇಂದ್ರ ವಿಜಯದಲ್ಲೂ ಈತನ ಕಥೆ ಬರುತ್ತದೆ. ಈ ಕಥೆಯನ್ನು ಆದರಿಸಿ ಚಲನಚಿತ್ರವೂ ಸಿದ್ಧವಾಗಿದೆ. ಕಣ್ಣಪ್ಪ ಬೇಡರ ಜಾತಿಯವನಾದುದರಿಂದ ಬೇಡರ ಕಣ್ಣಪ್ಪನೆಂದು ಪ್ರಸಿದ್ಧನಾಗಿದ್ದಾನೆ. ಜನಜನಿತವಾದ ಈತನ ಕಥೆ ಹೀಗಿದೆ:

ಚೋಳಮಂಡಲದ ತಿರುಕಾಲತ್ತಿ (ಶ್ರೀಕಾಳಹಸ್ತಿ) ಒಂದು ಶೈವಕ್ಷೇತ್ರ. ಆ ಬೆಟ್ಟದ ತಪ್ಪಲಲ್ಲಿ ಕಿರಾತರ ಗುಂಪೊಂದಿತ್ತು. ಅದರ ಒಡೆಯ ಕಣ್ಣಪ್ಪ. ಒಂದು ಸಂಜೆ ಮರದಡಿಯಲ್ಲಿ ಮಲಗಿದ್ದಾಗ ಕಣ್ಣಪ್ಪನ ಕನಸಿನಲ್ಲಿ ಶಿವ ಬಂದು ಆ ಕಾಡಿನಲ್ಲಿ ಶಿವಲಿಂಗವಿರುವುದನ್ನು ತಿಳಿಸಿ ಅದನ್ನು ಅನುನಯದಿಂದ ಪುಜಿಸಬೇಕೆಂದು ಹೇಳುತ್ತಾನೆ. ಕನಸು ನಿಜವೆನ್ನುವಂತೆ ದೂರದಲ್ಲಿ ಶಿವಲಿಂಗ ಕಾಣುತ್ತದೆ. ಅದನ್ನು ನೋಡಿದ ಕಣ್ಣಪ್ಪ ಆನಂದಭರಿತನಾಗಿ ಮುಗ್ಧಮನಸ್ಸಿನಿಂದ ಶಿವಲಿಂಗವನ್ನು ಅಪ್ಪಿ ಎಳೆಯ ಮಕ್ಕಳನ್ನು ಲಾಲಿಸುವಂತೆ ಮಾತನಾಡಿಸಿ ಪುಜಾಕೈಂಕರ್ಯವನ್ನರ್ಪಿಸುತ್ತಾನೆ. ಶಿವನಿಗೆ ಆಹಾರವಾಗಿ ಜಿಂಕೆಯ ಮಾಂಸವನ್ನು ಬೇಯಿಸಿ ತಂದು, ನೆಕ್ಕಿ, ನೋಡಿ, ರುಚಿಯಾದ ಭಾಗವನ್ನು ಶಿವನ ಪಾದದಡಿಯಿಟ್ಟು ತಾನು ಮುಡಿದಿದ್ದ ಕಕ್ಕೆ ಮೊದಲಾದ ಹೂಗಳಿಂದಲೇ ಪುಜಿಸಲು ಉದ್ಯುಕ್ತನಾಗುತ್ತಾನೆ. ಆ ಮೊದಲೇ ವಿಧ್ಯುಕ್ತವಾಗಿ ಪುಜೆಗೊಂಡಿದ್ದ ಲಿಂಗದ ತಲೆಯ ಮೇಲಿದ್ದ ಹೂವುಗಳನ್ನು ತನ್ನ ಕೆರದ ಕಾಲಿನಿಂದ ಅತ್ತ ನೂಕಿ ತನ್ನ ಬಾಯಲ್ಲಿ ನೀರನ್ನು ತುಂಬಿ ತಂದು ಲಿಂಗಕ್ಕೆ ಅಭಿಷೇಕ ಮಾಡಿ ತಾನು ಮುಡಿದಿದ್ದ ಹೂಗಳನ್ನೇ ಸೂಡಿ ಮಾಂಸವನ್ನು ನೈವೇದ್ಯ ಮಾಡುತ್ತಾನೆ. ಅಕಳಂಕ ನಿಸ್ಸ್ವಾರ್ಥ ಭಕ್ತಿಯಿಂದ ಮಾಡಿದ ಈ ಪುಜೆಯಿಂದ ಶಿವ ಸಂಪ್ರೀತನಾಗುತ್ತಾನೆ.

ಹೀಗೆ ಪುಜಾವಿಧಾನ ನಿತ್ಯವೂ ನಡೆಯುತ್ತಿರುತ್ತದೆ. ಶಿವದೇವಾಲಯದಲ್ಲಿ ನಿತ್ಯವೂ ಮಾಂಸ ಮೂಳೆಗಳಿರುವುದನ್ನು ಕಂಡು ಪುಜಾರಿ ಭಯಗೊಂಡು ಪಾತಕಿಯನ್ನು ಪತ್ತೆಹಚ್ಚಲು ಒಂದು ದಿನ ಲಿಂಗದ ಹಿಂದೆ ಅವಿತು ಕುಳಿತು ಕಣ್ಣಪ್ಪ ಮಾಡುವ ವಿಚಿತ್ರ ಲಿಂಗಪುಜೆಯನ್ನು ಕಂಡು ಕೆಂಡವಾಗುತ್ತಾನೆ. ಕಣ್ಣಪ್ಪನ ಪುಜಾನಿಷ್ಠೆಯನ್ನು ಪುಜಾರಿಗೂ ಆ ಮೂಲಕ ಲೋಕಕ್ಕೂ ಪ್ರಕಟಗೊಳಿಸಬೇಕೆಂದು ಬಗೆದ ಶಿವ ತನ್ನ ಕಣ್ಣಿನಿಂದ ನೀರು (ಬೇರೆ ಕಥೆಯಂತೆ ರಕ್ತ) ಹರಿಸುತ್ತಾನೆ. ಶಿವನ ದುಃಖಕ್ಕೆ ಕಾರಣವನ್ನು ತಿಳಿಯದ ಕಣ್ಣಪ್ಪ ಬಹಳವಾಗಿ ಪೇಚಾಡಿ ಇದು ಏನೋ ಕಣ್ಣಿನ ರೋಗವಿರಬೇಕೆಂದು ಬಗೆದು ತನ್ನ ನಿರ್ಮಲವಾದ ಕಣ್ಣನ್ನು ಬಾಣದ ಕೊನೆಯಿಂದ ಕಿತ್ತು ನೀರೊಸರುತ್ತಿದ್ದ ಶಿವನ ಕಣ್ಣಿದ್ದ ಕಡೆ ಇಡುತ್ತಾನೆ. ಕ್ಷಣದಲ್ಲಿ ಕಣ್ಣು ಒಸರುವುದು ನಿಲ್ಲುತ್ತದೆ. ಆದರೆ ಶಿವನ ಇನ್ನೊಂದು ಕಣ್ಣು ಜಿನುಗಲು ಪ್ರಾರಂಭವಾಗುತ್ತದೆ. ಆಗ ಕಣ್ಣಪ್ಪ ತನ್ನ ಕಾಲಿನ ಉಂಗುಷ್ಠವನ್ನು ಗುರುತಿಗಾಗಿ ಶಿವನ ಕಣ್ಣಿನ ಬಳಿಯಿಟ್ಟುಕೊಂಡು ತನ್ನ ಇನ್ನೊಂದು ಕಣ್ಣನ್ನೂ ಕೀಳಲು ಉದ್ಯುಕ್ತನಾಗುತ್ತಾನೆ. ಮುಗ್ಧ ಭಕ್ತನ ಅದ್ವಿತೀಯ ತ್ಯಾಗಕ್ಕೆ ಶಿವ ಪ್ರಸನ್ನನಾಗುತ್ತಾನೆ. ಕಣ್ಣಪ್ಪ ಕಳೆದುಕೊಂಡಿದ್ದ ಕಣ್ಣುಗಳನ್ನು ಪಡೆಯುತ್ತಾನೆ. ಲಿಂಗದ ಹಿಂದೆ ಅವಿತು ನಿಂತಿದ್ದ ಪುಜಾರಿ ಪಶ್ಚಾತ್ತಾಪ ಪಟ್ಟು ಮುಂದೆ ಬಂದು ಕಣ್ಣಪ್ಪನನ್ನು ಹೃದಯ ತುಂಬಿ ಪ್ರೀತಿಸುತ್ತಾನೆ. ಅಂದಿನಿಂದ ಕಣ್ಣಪ್ಪನ ಕಥೆ ಲೋಕಪ್ರಸಿದ್ಧವಾಗುತ್ತದೆ. (ಎನ್.ಎಸ್.ಆರ್.ಬಿ.)