ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆಪ್ಪಿ

ವಿಕಿಸೋರ್ಸ್ದಿಂದ


ಭಾರತದ ಕೇರಳ ರಾಜ್ಯದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಜಿಲ್ಲೆ ಮತ್ತು ವ್ಯಾಪಾರ ಕೇಂದ್ರ. ಅಲಪುಲೈ, ಔಲಪುಲೈ ಎಂದೂ ಕರೆಯುತ್ತಾರೆ. 1958ರಲ್ಲಿ ಕ್ವಿಲಾನಿನ ಆರು ತಾಲ್ಲೂಕುಗಳ ಜೊತೆ ಕೊಟ್ಟಾಯಮ್‌ನ ಒಂದು ತಾಲ್ಲೂಕನ್ನು ಸೇರಿಸಿ ಈ ಜಿಲ್ಲೆಯನ್ನು ನಿರ್ಮಿಸಲಾಯಿತು. ವಿಸ್ತೀರ್ಣ ಸುಮಾರು 1841 ಚ.ಕಿಮೀ ಅಲೆಪ್ಪಿ ಪಟ್ಟಣ ಕೇರಳ ರಾಜ್ಯದ ಒಂದು ಸುರಕ್ಷಿತವಾದ ಪ್ರಮುಖ ರೇವುಪಟ್ಟಣಗಳಲ್ಲೊಂದು. ಕೊಚ್ಚಿನ್ ಪಟ್ಟಣದಿಂದ 40 ಕಿಮೀ ದೂರದಲ್ಲಿದೆ. ವಿಸ್ತೀರ್ಣ 32.4 ಚ.ಕಿಮೀ ಮತ್ತು ಜನಸಂಖ್ಯೆ 567850 (2001). 18ನೆಯ ಶತಮಾನದಿಂದಲೂ ಪ್ರಸಿದ್ಧಿ ಪಡೆದಿದೆ; ಇಂಗ್ಲಿಷರು 18ನೆಯ ಶತಮಾನದ ಕೊನೆಯವರೆಗೂ ಈ ರೇವಿನ ಮೂಲಕ ವ್ಯಾಪಾರ ನಡೆಸುತ್ತಿದ್ದರು. ರೈಲು ಅಥವಾ ಒಳ್ಳೆಯ ರಸ್ತೆ ಮಾರ್ಗಗಳಿಲ್ಲ. ಒಳನಾಡಿನ ಹೆಚ್ಚು ಸಂಚಾರಸೌಕರ್ಯ ಮತ್ತು ಸರಕುಗಳ ಸಾಗಾಣಿಕೆ ಕಾಲುವೆಗಳ ಮೂಲಕವೇ. ಜಿಲ್ಲೆಯ ಮುಖ್ಯ ಬೆಳೆ ತೆಂಗು. ಜನರ ಮುಖ್ಯ ಕಸುಬು ತೆಂಗಿನ ಎಣ್ಣೆ ತೆಗೆಯುವುದು. ತೆಂಗಿನ ನಾರು ಬಿಡಿಸುವುದು. ಚಾಪೆ ನೇಯುವುದು ಇತ್ಯಾದಿ; ರೇವುಪಟ್ಟಣದಿಂದ ಮುಖ್ಯವಾಗಿ ತೆಂಗು, ಜಮಖಾನಗಳು, ಏಲಕ್ಕಿ, ಮೆಣಸು ರಫ್ತಾಗುವುವು. ಇಲ್ಲಿ ಸನಾತನಧರ್ಮದ ಕಾಲೇಜಿದೆ; ಇದು ತಿರುವಾಂಕೂರು ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಸೇರಿದೆ.